
ಪುದುಚೇರಿ (ಏಪ್ರಿಲ್ 12, 2023): ವೀಕೆಂಡ್‌ನಲ್ಲಿ ಪಾಂಡಿಚೆರ್ರಿಗೆ ಟ್ರಿಪ್ ಹೋಗೋಕೆ ಪ್ಲ್ಯಾನ್ ಮಾಡಿದ್ದೀರಾ..? ಅದರಲ್ಲೂ, ಮದ್ಯ ಸೇವನೆ ಮಾಡೋ ಆಸೆ ಇದ್ಯಾ..? ನಿಮ್ಮ ಉತ್ತರ ಹೌದಾದರೆ ನಿಮಗಿದೋ ಭರ್ಜರಿ ಆಫರ್. ಕೇಂದ್ರಾಡಳಿತ ಪ್ರದೇಶ ಪುದುಚೆರ್ರಿಯಲ್ಲಿ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ, ವಿಶೇಷವಾಗಿ ಮದ್ಯ ಸೇವನೆಯಲ್ಲಿ ಆಸಕ್ತಿ ಹೊಂದಿರುವವರನ್ನು ಕರೆತರಲು ಬಿಯರ್ ಬಸ್ ಅನ್ನು ಪರಿಚಯಿಸಲು ಸಿದ್ಧವಾಗಿದೆ.
ಹೌದು, ಪುದುಚೇರಿಯು ಹಾಪ್ ಆನ್ ಬ್ರೀವರಿ ಟೂರ್ ಬಸ್ ಅರ್ಥಾತ್ ಬಿಯರ್ ಬಸ್ ಅನ್ನು ಪರಿಚಯಿಸಲು ಸಿದ್ಧವಾಗಿದೆ. ಇದು ವಾರಾಂತ್ಯದಲ್ಲಿ ಚೆನ್ನೈನಿಂದ ಪುದುಚೆರ್ರಿಗೆ ಒಂದು ದಿನದ ಪ್ಯಾಕೇಜ್ ರೌಂಡ್ ಟ್ರಿಪ್ ಆಗಿದೆ. ಆದರೆ, ಈ ಸೇವೆ ಸದ್ಯ ಬೆಂಗಳೂರಿನಿಂದ ಇಲ್ಲ ಎಂದು ತಿಳಿದುಬಂದಿದೆ. ವಾರಾಂತ್ಯದಲ್ಲಿ ಚೆನ್ನೈನಿಂದ ಪುದುಚೇರಿಗೆ ಒಂದು ದಿನದ ಪ್ಯಾಕೇಜ್ ರೌಂಡ್ ಟ್ರಿಪ್ ಆಗಿದೆ. ಕ್ಯಾಟಮಾರನ್ ಬ್ರೀವಿಂಗ್ ಕಂಪನಿಯು ಪ್ರಾರಂಭಿಸಿದ ಈ ಪ್ರವಾಸವು ಏಪ್ರಿಲ್ 22, ಶನಿವಾರದಂದು ಚಾಲನೆ ನೀಡಿದೆ.
ಇದನ್ನು ಓದಿ: ಇನ್ಮುಂದೆ ಚೆನ್ನೈ - ಬೆಂಗಳೂರು ರೈಲು ಪ್ರಯಾಣ ಸಲೀಸು: ಸಮಯದಲ್ಲೂ ಭಾರಿ ಉಳಿತಾಯ
ನೀವು ಈ ಬಸ್‌ಗೆ ಹತ್ತಿದ್ರೆ ಸಾಕು. ಕಂಪನಿಯೇ ತಮ್ಮ ಮೈಕ್ರೋ ಬಿಯರ್ ರುಚಿಯೊಂದಿಗೆ ಮಾರ್ಗದರ್ಶಿ ಪ್ರವಾಸವನ್ನು ಒದಗಿಸುತ್ತದೆ. ಅಲ್ಲದೆ, 120 ನಿಮಿಷಗಳ ಕಾಲ ಅನ್‌ಲಿಮಿಟೆಡ್ ಬಿಯರ್ ಮತ್ತು ಟೇಸ್ಟಿ 3-ಕೋರ್ಸ್ ಊಟದ ಸೇವೆಯನ್ನು ಒದಗಿಸುತ್ತದೆ ಎಂದು ಕಂಪನಿಯ ಪಾಲುದಾರ ರಂಗರಾಜು ನಾರಾಯಣಸ್ವಾಮಿ ಹೇಳಿದರು. ಪ್ರವಾಸಿಗರನ್ನು ಅವರ ಆಯ್ಕೆಯ ಆಧಾರದ ಮೇಲೆ ಕೇಂದ್ರಾಡಳಿತ ಪ್ರದೇಶದ ಒಂದು ಅಥವಾ ಎರಡು ಜನಪ್ರಿಯ ಸ್ಥಳಗಳಿಗೆ ಕರೆದೊಯ್ಯಲಾಗುತ್ತದೆ ಎಂದೂ ತಿಳಿದುಬಂದಿದೆ.
ಇನ್ನು, ಈ ಬಸ್ ಶನಿವಾರ ಮತ್ತು ಭಾನುವಾರದಂದು ಕಾರ್ಯನಿರ್ವಹಿಸಲಿದೆ. ಗುಂಪನ್ನು ಚೆನ್ನೈನ ಒಂದು ಪಾಯಿಂಟ್‌ನಿಂದ ಬೆಳಗ್ಗೆ 10.30 ಗಂಟೆಗೆ ಪಿಕಪ್ ಮಾಡಲಾಗುವುದು ಮತ್ತು ರಾತ್ರಿ 9 ಗಂಟೆಗೆ ವಾಪಸ್ ಚೆನ್ನೈಗೆ ಬಿಡಲಾಗುತ್ತದೆ ಎಂದು ತಿಳಿದುಬಂದಿದೆ. ಸರ್ಕಾರಿ ನಿಯಮಗಳು ಅನುಮತಿಸದ ಕಾರಣ ಬಸ್‌ನಲ್ಲಿ ಯಾವುದೇ ಬಿಯರ್ ನೀಡಲಾಗುವುದಿಲ್ಲ. ಪುದುಚೆರಿಯಲ್ಲಿರುವ ಬ್ರೀವರಿಯಲ್ಲಿ ಇದನ್ನು ನೀಡಲಾಗುವುದು ಎಂದು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಬಿಯರ್ ಬಸ್ ಉಪಕ್ರಮದ ಕುರಿತು ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ತಿರುಪತಿಗೆ ಇನ್ನು ವಂದೇ ಭಾರತ್ ರೈಲು: ಇಂದು ಪ್ರಧಾನಿ ಮೋದಿ ಚಾಲನೆ
ಹವಾನಿಯಂತ್ರಿತ ವೋಲ್ವೋ ಬಸ್‌ನಲ್ಲಿ 35-40 ಪ್ರವಾಸಿಗರನ್ನು ಗುಂಪಾಗಿ ಸಾಗಿಸಲು ಕಂಪನಿಯು ಐಷಾರಾಮಿ ಬಸ್ ನಿರ್ವಾಹಕರೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದೂ ತಿಳಿದುಬಂದಿದೆ. ಐಟಿ ವೃತ್ತಿಪರರು ಮತ್ತು ಎಂಎನ್‌ಸಿ ಉದ್ಯೋಗಿಗಳು ಇವರ ಪ್ರಮುಖ ಟಾರ್ಗೆಟ್ ಆಗಿದೆ. ಇನ್ನು, ಬಿಯರ್ ಪ್ರೇಮಿಗಳು, ಕುಡಿಯದವರು ಹಾಗೂ ಮಕ್ಕಳೊಂದಿಗೆ ಹೋಗುವ ವಯಸ್ಕರಿಗೆ ಪ್ರತ್ಯೇಕ ದರಗಳನ್ನು ನಿಗದಿಪಡಿಸಿದೆ.ಅಲ್ಲದೆ, ಪ್ರತಿಕ್ರಿಯೆಯ ಆಧಾರದ ಮೇಲೆ, ರಜಾ ದಿನಗಳು ಹಾಗೂ ವಾರದ ಮಧ್ಯದ ದಿನಗಳಲ್ಲಿ ವಿಸ್ತರಿಸಬಹುದು. ಅಲ್ಲದೆ, ಬೆಂಗಳೂರಿನಂತಹ ಇತರ ನಗರಗಳಿಂದ ಓಡಿಸುವ ಬಗ್ಗೆಯೂ ಪರಿಗಣನೆಯಲ್ಲಿದೆ ಎಂದೂ ಹೇಳಿದರು.
ಬಿಯರ್ ಅಗ್ಗವಾಗಿರುವ ಪುದುಚೇರಿಗೆ ಚೆನ್ನೈನಿಂದ ತೆರಳುವ ಪ್ರಯಾಣಿಕರಿಗೆ ತಮಾಷೆಯಾಗಿ ಸಾರಿಗೆ ಸೇವೆಯನ್ನು ಕೇಳಿದಾಗ ಈ ಬಸ್‌ನ ಕಲ್ಪನೆ ಬಂದಿದೆ ಎಂದೂ ಅವರು ಹೇಳಿದ್ದಾರೆ. ಇನ್ನು, ಸಾಮಾಜಿಕ ಜಾಲತಾಣಗಳಲ್ಲಿ ಅವರ ಪೋಸ್ಟ್ ಸಿಕ್ಕಾಫಟ್ಟೆ ವೈರಲ್ ಆಗಿದೆ.
ಇದನ್ನೂ ಓದಿ: 100 ಕಿ.ಮೀ. ದೂರದ ನಗರಗಳ ಮಧ್ಯೆ ವಂದೇ ಮೆಟ್ರೋ ರೈಲು: ಬೆಂಗಳೂರು, ತುಮಕೂರು, ರಾಮನಗರಕ್ಕೆ ಲಭ್ಯ..?
ರಾಧಾಕೃಷ್ಣನ್ ಮತ್ತು ಅವರ ವ್ಯಾಪಾರ ಪಾಲುದಾರರಾದ ರಂಗರಾಜು ನಾರಾಯಣಸ್ವಾಮಿ ಅವರು 2017 ರಲ್ಲಿ ಕ್ಯಾಟಮಾರನ್ ಬ್ರೀವಿಂಗ್ ಕಂಪನಿ ಯೋಜನೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಇಬ್ಬರೂ ಬ್ರೀವರೀಸ್, ಸ್ಕೌಟಿಂಗ್ ಮತ್ತು ಬ್ರೀವರಿ ಲೈಸೆನ್ಸ್‌ನಲ್ಲಿ ಕೆಲಸ, ಸ್ನೇಹಿತರು ಮತ್ತು ಕುಟುಂಬದಿಂದ ಹಣಕ್ಕಾಗಿ ವ್ಯವಸ್ಥೆ ಮಾಡುವ ಕುರಿತು ಸಾಕಷ್ಟು ಸಂಶೋಧನೆ ನಡೆಸಿದರು. ಅವರು 2019 ರಲ್ಲಿ ಪರವಾನಗಿ ಪಡೆದರು, ಮತ್ತು ಪ್ರಾರಂಭವಾಗುವ ಸಮಯದಲ್ಲಿ, ಕೋವಿಡ್ -19 ಸಾಂಕ್ರಾಮಿಕ ರೋಗ ವಕ್ಕರಿಸಿದೆ. ಈ ಹಿನ್ನೆಲೆ, ಕ್ಯಾಟಮರನ್ ಬ್ರೂಯಿಂಗ್ ಕಂಪನಿ ಅಂತಿಮವಾಗಿ, ಅಧಿಕೃತವಾಗಿ ಸೆಪ್ಟೆಂಬರ್ 2021 ರಲ್ಲಿ ಪ್ರಾರಂಭವಾಯಿತು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.