
ವಿಮಾನದಲ್ಲಿ ಪ್ರಯಾಣ ಬೆಳೆಸುವುದು ಆರಾಮದಾಯಕ. ಇದ್ರಿಂದ ಸಮಯ ಕೂಡ ಉಳಿಯುತ್ತೆ. ಆದ್ರೆ ಎಲ್ಲರಿಗೂ ವಿಮಾನ ಪ್ರಯಾಣ ಸಾಧ್ಯವಿಲ್ಲ. ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ ಎನ್ನುವ ಕಾರಣಕ್ಕೆ ವಿಮಾನ ಪ್ರಯಾಣ ಬೆಳೆಸಲು ಕೆಲವರು ಹಿಂದೇಟು ಹಾಕಿದ್ರೆ ಮತ್ತೆ ಕೆಲವರಿಗೆ ವಿಮಾನ ಪ್ರಯಾಣ ಭಯ ಹುಟ್ಟಿಸುತ್ತದೆ. ಹೌದು, ಇದು ನೂರಕ್ಕೆ ನೂರು ಸತ್ಯ. ಇದೊಂದು ಮಾನಸಿಕ ಖಾಯಿಲೆ. ವಿಮಾನದ ಹೆಸರು ಕೇಳ್ತಿದ್ದಂತೆ ಜನರು ಬೆವರಲು ಶುರು ಮಾಡ್ತಾರೆ. ವಿಮಾನದ ಬದಲು ಬೇರೆ ಸಾರಿಗೆ ಮೂಲಕ ಪ್ರಯಾಣ ಬೆಳೆಸಲು ಮುಂದಾಗ್ತಾರೆ. ನೀವೂ ಇದ್ರಲ್ಲಿ ಒಬ್ಬರಾಗಿದ್ದರೆ ನಾವಿಂದು ನಿಮಗೆ ಕಾಡ್ತಿರೋ ಸಮಸ್ಯೆ ಏನು, ಅದ್ರಿಂದ ಹೊರಗೆ ಬರೋದು ಹೇಗೆ ಅನ್ನೋದನ್ನು ಹೇಳ್ತೇವೆ.
ವಿಮಾನ (Plane) ಪ್ರಯಾಣ ಎನ್ನುವಾಗ್ಲೇ ನೀವು ಬೆವರಲು (Sweat) ಶುರುವಾದ್ರೆ, ನಿಮಗೆ ಹೆದರಿಕೆ (Nervousness), ಚಡಪಡಿಕೆ ಆದ್ರೆ ಅದನ್ನು ಹೊಡೋಫೋಬಿಯಾ (Hodophobia) ಎಂದು ಕರೆಯುತ್ತಾರೆ. ಈ ಹೊಡೋಫೋಬಿಯಾಕ್ಕೆ ಕಾರಣ ಭಿನ್ನವಾಗಿರುತ್ತದೆ. ಅಂದ್ರೆ ಜನರು ಬೇರೆ ಬೇರೆ ರೀತಿಯ ಭಯವನ್ನು ಅನುಭವಿಸುತ್ತಾರೆ. ಕೆಲವರಿಗೆ ವಿಮಾನ ಅಪಘಾತವಾದ್ರೆ ಎಂಬ ಆತಂಕವಿರುತ್ತದೆ. ಮತ್ತೆ ಕೆಲವರಿ ವಿಮಾನ ಟೇಕ್ ಅಪ್ ಆಗುವಾಗ ಭಯಕ್ಕೊಳಗಾಗ್ತಾರೆ. ಇನ್ನು ಕೆಲವರಿಗೆ ವಿಮಾನದಲ್ಲಿ ನೈಸರ್ಗಿಕ ಗಾಳಿ ಸಿಗುವುದಿಲ್ಲ ಎನ್ನುವ ಆತಂಕವಿರುತ್ತದೆ. ಈ ಹೊಡೋಫೋಬಿಯಾದಿಂದ ಬಳಲುವ ವ್ಯಕ್ತಿಗಳು ವಿಮಾನ ಏರಿದಾಗ ಮಾತ್ರ ಹೆದರಿಕೊಳ್ಳೋದಿಲ್ಲ. ಅವರಿಗೆ ವಿಮಾನದ ಸುದ್ದಿ ಕೇಳಿದ್ರೂ ಚಡಪಡಿಕೆಯಾಗುತ್ತದೆ. ಒಂದು ವಾರದ ನಂತ್ರ ವಿಮಾನ ಪ್ರಯಾಣ ಮಾಡಬೇಕೆಂದ್ರೂ ಈಗಿನಿಂದಲೇ ಅವರು ಆತಂಕದಲ್ಲಿರುತ್ತಾರೆ. ವಿಮಾನ ನಿಲ್ದಾಣಕ್ಕೆ ಬಂದಾಗ, ವಿಮಾನ ಹತ್ತುವ ಮೊದಲು ಅವರು ವಿಪರೀತ ಹೆದರಿಕೆಗೆ ಒಳಗಾಗ್ತಾರೆ. ಅಲ್ಲಿಂದ ಓಡಿ ಹೋಗುವ ಪ್ರಯತ್ನ ಮಾಡುವವರಿದ್ದಾರೆ.
ಕಿಡ್ನಿ ಕ್ಯಾನ್ಸರ್ ಆರಂಭಿಕ ಲಕ್ಷಣ ಕಡೆಗಣಿಸ್ಬೇಡಿ
ಹೊಡೋಫೋಬಿಯಾದ ಲಕ್ಷಣಗಳು : ಹೊಡೋಫೋಬಿಯಾಕ್ಕೆ ಒಳಗಾದ ವ್ಯಕ್ತಿಯಲ್ಲಿ ನೀವು ಅನೇಕ ಲಕ್ಷಣಗಳನ್ನು ಕಾಣಬಹುದು. ದೈಹಿಕ ಹಾಗೂ ಮಾನಸಿಕ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆತಂಕ, ಬೆವರು, ನಡುಕ, ತಲೆ ಸುತ್ತಿದ ಅನುಭವ, ಉಸಿರಾಟದಲ್ಲಿ ತೊಂದರೆ, ಹೆಚ್ಚಾಗುವ ಹೃದಯಬಡಿಯ, ವಾಕರಿಕೆ ಇವೆಲ್ಲವೂ ಹೊಡೋಫೋಬಿಯಾದ ಲಕ್ಷಣವಾಗಿದೆ.
ವಿಮಾನ ಏರಿದ ನಂತ್ರ ಅಲ್ಲಿ ಎಸಿ ಇರುವ ಕಾರಣ ಬೆವರು ಕಾಣಿಸಿಕೊಳ್ಳೋದಿಲ್ಲ ಎಂಬ ನಂಬಿಕೆಯಲ್ಲಿದ್ದರೆ ಅದು ತಪ್ಪು. ಹೊಡೋಫೋಬಿಯಾಕ್ಕೆ ಒಳಗಾದ ಜನರಿಗೆ ಎಸಿ ತಂಪು ಗಾಳಿ ಯಾವುದೇ ಪರಿಣಾಮ ಬೀರುವುದಿಲ್ಲ. ಅವರು ಒಂದೇ ಸಮನೆ ಬೆವರುತ್ತಿರುತ್ತಾರೆ. ವಿಮಾನ ಪ್ರಯಾಣದ ಆರಂಭದಲ್ಲೇ ವಾಂತಿ ಮಾಡುವವರಿದ್ದಾರೆ. ಇನ್ನು ಕೆಲವರಿಗೆ ವಿಪರೀತ ತಲೆನೋವು ಕಾಣಿಸಿಕೊಳ್ಳುತ್ತದೆ. ಅವರು ವಿಮಾನ ಪ್ರಯಾಣ ಮುಗಿಸುತ್ತಿದ್ದಂತೆ ತಲೆನೋವು ಮಾಯವಾಗಿರುತ್ತದೆ. ಯಾವುದೇ ದೈಹಿಕ ಹಾಗೂ ಮಾನಸಿಕ ಸಮಸ್ಯೆ ವಿಮಾನ ಇಳಿದ ಮೇಲೆ ಅವರನ್ನು ಕಾಡೋದಿಲ್ಲ.
ಹೊಡೋಫೋಬಿಯಾದಿಂದ ಹೊರ ಬರೋದು ಹೇಗೆ? : ವಿಮಾನ ಪ್ರಯಾಣ ಈಗಿನ ದಿನಗಳಲ್ಲಿ ಅನಿವಾರ್ಯ. ಅದನ್ನು ತಪ್ಪಿಸಿಕೊಂಡ್ರೆ ನಷ್ಟ ನಿಮಗೆ. ನೀವು ಎಲ್ಲರಂತೆ ವಿಮಾನ ಪ್ರಯಾಣ ಬೆಳೆಸಬೇಕು ಎಂದಾದ್ರೆ ಕೆಲ ವಿಷ್ಯಗಳನ್ನು ನೆನಪಿನಲ್ಲಿಟ್ಟುಕೊಳ್ಳಿ.
ವಿಮಾನ ಹತ್ತಿದ ನಂತ್ರ ಅಥವಾ ವಿಮಾನ ಹತ್ತಬೇಕು ಎಂಬ ಸುದ್ದಿ ಬಂದಾಗ ನಿಮಗೆ ಭಯವಾದ್ರೆ ಆಳವಾಗಿ ಉಸಿರಾಡಿ. ಇದು ನಿಮ್ಮ ಆತಂಕವನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.
ವಿಮಾನ ಪ್ರಯಾಣಕ್ಕಿಂತ ಮೊದಲು ಲಘು ಆಹಾರ ಸೇವನೆ ಮಾಡಿ, ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಕುಡಿಯುತ್ತಿರಿ. ನಿಮ್ಮ ಆಪ್ತರ ಜೊತೆ ಪ್ರಯಾಣ ಬೆಳೆಸಿ. ಆಗ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ನೀವು ಗಿಡಮೂಲಿಕೆ ಟೀ ಸೇವನೆ ಮಾಡಬಹುದು. ಅವು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ನಿಮ್ಮ ಮನಸ್ಸಿಗೆ ವಿಶ್ರಾಂತಿ ನೀಡುತ್ತದೆ.
ಸಫಾರಿ ಮಾಡುತ್ತಾ ಹುಲಿಗಳನ್ನು ನೋಡಬಹುದಾದ ಭಾರತದ ಪ್ರಮುಖ ತಾಣಗಳಿವು
ಭಯ ಮರೆಸುವ ಕೆಲಸವನ್ನು ನೀವು ಈ ಸಮಯದಲ್ಲಿ ಮಾಡಬೇಕು. ನಿಮ್ಮಿಷ್ಟದ ಹಾಡು ಕೇಳುವುದು, ಸಿನಿಮಾ ವೀಕ್ಷಣೆ ಅಥವಾ ಪುಸ್ತಕ ಓದಿ. ವಿಮಾನ ಹತ್ತುವ ಮೊದಲೇ ಇದಕ್ಕೆ ಸಿದ್ಧತೆ ಮಾಡಿಕೊಳ್ಳಿ. ಆಗ ನಿಮ್ಮ ಗಮನ ಬೇರೆ ಕಡೆ ಹೋಗುವ ಕಾರಣ ಭಯ ಕಾಡುವುದಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.