ಅತಿದೊಡ್ಡ ಮುಸ್ಲಿಂ ರಾಷ್ಟ್ರ ಎನಿಸಿರುವ ಇಂಡೋನೇಷಿಯಾದಲ್ಲಿ ಗಣಪ ವಿರಾಜಮಾನವಾಗಿದ್ದಾನೆ. ಕೊತ ಕೊತ ಕುದಿಯುವ ಜ್ವಾಲಾಮುಖಿ ಸಮೀಪವಿರುವ ಗಣಪನ ಹಿಂದಿದೆ ರೋಚಕ ಸ್ಟೋರಿ...
ನಮಸ್ಕಾರ ದೇವ್ರು ಎಂದ್ರೆ ಸಾಕು, ಎಲ್ಲರ ಕಣ್ಣೆದುರಿಗೆ ಬರುವುದು ಡಾ.ಬ್ರೋ ಅರ್ಥಾತ್ ಗಗನ್. ಇದಾಗಲೇ ಹತ್ತು ಹಲವು ದೇಶಗಳನ್ನು ಸುತ್ತಿ, ಅತ್ಯಂತ ಸಾಹಸ ಕಾರ್ಯಕ್ಕೂ ಕೈಹಾಕಿ ಭೇಷ್ ಎನ್ನಿಸಿಕೊಂಡವರು ಈ ಕನ್ನಡದ ಕುವರ. ಅತ್ಯಂತ ಭಯಾನಕ ಪ್ರದೇಶಗಳಿಗೂ ಭೇಟಿ ಕೊಟ್ಟು, ಅಲ್ಲಿ ನಟಭಯಂಕರರು ಎನಿಸಿಕೊಂಡಿರುವ ಜನರ ಜೊತೆ ಮಾತನಾಡಿ ಮನೆಮಾತಾಗಿರೋ ಡಾ.ಬ್ರೋ ಇದೀಗ ಜಗತ್ತಿನ ಅತ್ಯಂತ ದೊಡ್ಡ ಮುಸ್ಲಿಂ ರಾಷ್ಟ್ರ ಎನಿಸಿಕೊಂಡಿರುವ ಇಂಡೋನೇಷಿಯಾದಲ್ಲಿನ ಗಣಪನ ಕೌತುಕದ ಕಥೆಯನ್ನು ಬಿಚ್ಚಿಟ್ಟಿದ್ದಾರೆ. ಶೇಕಡಾ 86ರಷ್ಟು ಮಂದಿ ಮುಸ್ಲಿಮರೇ ಇರುವ ಈ ದೇಶದಲ್ಲಿ ವಿಘ್ನವಿನಾಶಕನಿಗೆ ವಿಶೇಷ ಗೌರವ. ಅದಕ್ಕೆ ಕಾರಣ ಆತ ಇಲ್ಲಿಯ ಜನರನ್ನು ಕಾಯುತ್ತಿದ್ದಾನೆ ಎನ್ನುವ ಭಾವ.
ಹೌದು. ಈ ಗಣಪ ಇರುವುದು ಕೊತ ಕೊತ ಕುದಿಯೋ ಜ್ವಾಲಾಮುಖಿಯ ಸಮೀಪ. ಬ್ರಹ್ಮನ ಹೆಸರಿನಲ್ಲಿ ಇರುವ ಮೌಂಟ್ ಬ್ರೋಮೋ ಎಂಬ ಪರ್ವತದ ಬಳಿ ಈ ಗಣಪ ವಿರಾಜಮಾನವಾಗಿದ್ದಾನೆ. ಅದಕ್ಕೆ ಏಳು ಶತಮಾನಗಳ ಅಂದರೆ 700 ವರ್ಷಗಳಿಗೂ ಅಧಿಕ ಇತಿಹಾಸವಿದೆ. ಇಂಡೋನೇಷ್ಯಾದ ಮೌಂಟ್ ಬ್ರೋಮೋ ಎಂಬ ಜ್ವಾಲಾಮುಖಿಯ ಮೇಲ್ಭಾಗದಲ್ಲಿ ಇರುವ ಈ ಗಣೇಶನ ಚಿಕ್ಕದಾದ ಮತ್ತು ಅದ್ಭುತವಾದ ಗಣೇಶನ ವಿಗ್ರಹ ನೋಡುವುದೇ ಸೊಗಸು. ಇದರ ಸಂಪೂರ್ಣ ಪರಿಚಯ ಮಾಡಿಸಿದ್ದಾರೆ ಡಾ.ಬ್ರೋ. ಮೌಂಟ್ ಬ್ರೋಮೋ ಇಂಡೋನೇಷ್ಯಾದ ಪೂರ್ವ ಜಾವಾದಲ್ಲಿ 7,641 ಅಡಿ ಎತ್ತರದಲ್ಲಿರುವ ಟೆಂಗರ್ ಮಾಸಿಫ್‌ನ ಒಂದು ಭಾಗವಾಗಿದೆ. ಈ ಪ್ರದೇಶವು ಇಂಡೋನೇಷ್ಯಾದ ಪೂರ್ವ ಜಾವಾದಲ್ಲಿ ಹೆಚ್ಚು ಭೇಟಿ ನೀಡುವ ಪ್ರವಾಸಿ ಆಸಕ್ತಿಗಳಲ್ಲಿ ಒಂದಾಗಿದೆ ಎಂದು ಅವರು ವಿವರಣೆ ನೀಡಿದ್ದಾರೆ.
ಇಂಡೋನೇಷಿಯಾದಲ್ಲಿ 'ಎಂಚ ಉಲ್ಲರ್… ಎಂಚ ಉಲ್ಲರ್' ಎಂದು ಹೇಳುತ್ತಲೇ ಹವಾ ಸೃಷ್ಟಿಸಿದ ಡಾ.ಬ್ರೋ
ಅಷ್ಟಕ್ಕೂ ಈ ಗಣಪ ಇಲ್ಲಿ ವಿರಾಜಮಾನವಾಗಿರುವ ಹಿಂದೆ ಕುತೂಹಲದ ಕಥೆಯಿದೆ. ಸುಮಾರು 8,500 ವರ್ಷಗಳ ಹಿಂದೆ ಇಲ್ಲಿಯ ಜ್ವಾಲಾಮುಖಿ ಭೂಮಿಯಿಂದ ಕುದಿಯುತ್ತಾ ಹೊರಕ್ಕೆ ಬಂದು ಸಹಸ್ರಾರು ಜನರ ಜೀವವನ್ನು ಬಲಿ ತೆಗೆದುಕೊಂಡಿತ್ತು. ಅದಾದ ಬಳಿಕವೂ ಆಗೀಗ ಇದರ ಅಪಾಯ ಕಾದೇ ಇತ್ತು. ಇದು ಯಾವತ್ತಿಗೂ ಅಪಾಯವೇ ಎನ್ನುವುದನ್ನು ಅರಿತಿರುವ ಇಲ್ಲಿಯ ಜನರು ಏಳುನೂರು ವರ್ಷಗಳ ಹಿಂದೆ ಸರ್ವವಿಘ್ನವಿನಾಶಕ ಗಣಪನ ಮೊರೆ ಹೋಗಿ ಅಲ್ಲಿ ಅದರ ಮೂರ್ತಿ ಸ್ಥಾಪನೆ ಮಾಡಿದ್ದಾರೆ. ಇಲ್ಲಿಯ ಜ್ವಾಲಾಮುಖಿಯು ಮೇಲಕ್ಕೆ ಬಂದು ಜನರಿಗೆ ತೊಂದರೆ ಕೊಡುವುದಿಲ್ಲ ಎನ್ನುವುದು ಇವರ ನಂಬಿಕೆ. ಅದೇ ರೀತಿ ಗಣಪ ಇಲ್ಲಿಯ ಜನರನ್ನು ಕಾಯುತ್ತಿದ್ದಾನೆ ಎಂಬುದು ಇಲ್ಲಿ ಮುಸ್ಲಿಂ ಜನರ ನಂಬಿಕೆ. 2012 ರವರೆಗಿನ ದಾಖಲೆಗಳ ಪ್ರಕಾರ, ಇಂಡೋನೇಷ್ಯಾದ ಸಂಪೂರ್ಣ ಪ್ರದೇಶವು 127 ಸಕ್ರಿಯ ಜ್ವಾಲಾಮುಖಿಗಳನ್ನು ಹೊಂದಿದೆ ಮತ್ತು ಸುಮಾರು 5 ಮಿಲಿಯನ್ ಜನರು ಅಪಾಯಕಾರಿ ವಲಯಗಳಲ್ಲಿ ಸಕ್ರಿಯರಾಗಿದ್ದಾರೆ. ಮೌಂಟ್ ಬ್ರೋಮೋ ಜ್ವಾಲಾಮುಖಿಯ ಮೇಲೆ ಅವಲಂಬಿತವಾಗಿರುವ ಗಣೇಶನ ವಿಗ್ರಹವು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ.
ತೆಂಗರ್ ಮಾಸಿಫ್ ಬುಡಕಟ್ಟಿನ ದಂತಕಥೆಗಳು ಗಣೇಶನ ವಿಗ್ರಹವನ್ನು ಸುಮಾರು 700 ವರ್ಷಗಳ ಹಿಂದೆ ಅವರ ಪೂರ್ವಜರಿಂದ ಸ್ಥಾಪಿಸಲಾಗಿದೆ ಎಂದು ಹೇಳಲಾಗುತ್ತದೆ. ತೆಂಗರು ಕೂಡ ಗಣೇಶನಿಗೆ ಹಲವಾರು ನೈವೇದ್ಯಗಳನ್ನು ಅರ್ಪಿಸುತ್ತಾರೆ. ಇದೇ ವೇಳೆ ಇಂಡೋನೇಷಿಯಾದಲ್ಲಿರುವ ಅತಿದೊಡ್ಡ ಆ್ಯಸಿಡ್ ಕೆರೆಯ ದರ್ಶನವನ್ನೂ ಡಾ.ಬ್ರೋ ಮಾಡಿಸಿದ್ದಾರೆ. ಇದು ಎಷ್ಟೊಂದು ಅಪಾಯಕಾರಿ ಎಂಬ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ. ಇದೇ ವೇಳೆ ಸಲ್ಫ್ಯೂರಿಕ್ ಆ್ಯಸಿಡ್ ಹೇಗೆ ತಯಾರಾಗುತ್ತದೆ ಎನ್ನುವ ಮಾಹಿತಿಯ ಜೊತೆ ಇನ್ನೂ ಹತ್ತು ಹಲವು ವಿಶೇಷತೆಗಳನ್ನು ಡಾ. ಬ್ರೋ ತೋರಿಸಿಕೊಟ್ಟಿದ್ದಾರೆ.
ಚೀನಾದಲ್ಲಿ ರೋಬೋಗಳು ಏನೆಲ್ಲಾ ಮಾಡ್ತಿವೆ ಗೊತ್ತಾ? ಇಂಟರೆಸ್ಟಿಂಗ್ ಮಾಹಿತಿ ಹೇಳಿದ ಡಾ.ಬ್ರೋ