
ನವದೆಹಲಿ: ವಿಮಾನದಲ್ಲಿ ಪ್ರಯಾಣ ಮಾಡುವವರಿಗೆ ಈ ಅನುಭವವಾಗಿರಬಹುದು. ಕೆಲವೊಮ್ಮೆ ವಿಮಾನ ಇಳಿದು ಗಂಟೆಗಳೇ ಕಳೆದರು ನಿಮ್ಮ ಲಗೇಜ್ ನಿಮ್ಮ ಕೈ ಸೇರುವುದಿಲ್ಲ, ಇದರಿಂದ ಬೇಗ ಹೋಗಬೇಕೆಂದು ವಿಮಾನದಲ್ಲಿ ಹೋದರೂ ನಿಮ್ಮ ಪ್ರಯಾಣ ತೀರಾ ವಿಳಂಬವಾಗುತ್ತದೆ. ಆದರೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಾಗರಿಕ ವಿಮಾನಯಾನ ಭದ್ರತಾ ವಿಭಾಗ ಮುಂದಾಗಿದ್ದು, ಪ್ರಯಾಣಿಕರುವ ವಿಮಾನ ಇಳಿದ ಅರ್ಧಗಂಟೆಯೊಳಗೆ ವಿಮಾನ ಪ್ರಯಾಣಿಕರಿಗೆ ಅವರ ಲಗೇಜುಗಳನ್ನು ಹಸ್ತಾಂತರಿಸಬೇಕು ಎಂದು ಸೂಚಿಸಿದೆ. ಇದರಿಂದ ವಿಮಾನ ಪ್ರಯಾಣಿಕರು ವಿಮಾನ ಇಳಿದ ನಂತರವೂ ಲಗೇಜ್‌ಗಾಗಿ ಗಂಟೆಗಳ ಕಾಲ ಕಾಯುವ ತೊಂದರೆ ತಪ್ಪಲಿದೆ.
ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯೂರಿಟಿ ವಿಭಾಗವೂ ಈ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕೃತ ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದು, ಅದರಂತೆ, ಪ್ರಯಾಣಿಕರಿಗೆ ಸಮಯಕ್ಕೆ ಸರಿಯಾಗಿ ಅವರ ಲಗೇಜುಗಳನ್ನು ವಿತರಿಸುವುದು ಅಗತ್ಯವಾಗಿದೆ. ಸಮಯಕ್ಕೆ ಸರಿಯಾಗಿ ಪ್ರಯಾಣಿಕರಿಗೆ ಅವರ ಲಗೇಜುಗಳನ್ನು ಹಸ್ತಾಂತರಿಸುವುದಕ್ಕಾಗಿ ಫೆಬ್ರವರಿ 26 ರೊಳಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ವಿಮಾನಯಾನ ಸಂಸ್ಥೆಗಳಿಗೆ ಬಿಸಿಎಎಸ್ ಒತ್ತಾಯಿಸಿದೆ. ಈ ನಿರ್ದೇಶನವೂ ವಿಶೇಷವಾಗಿ 7 ಪ್ರಮುಖ ಏರ್‌ಲೈನ್ಸ್‌ಗಳಾದ ಏರ್ ಇಂಡಿಯಾ, ಇಂಡಿಗೋ, ಆಕಾಸ ಏರ್, ಸ್ಪೈಸ್ ಜೆಟ್, ವಿಸ್ತಾರ, ಎಐಎಕ್ಸ್ ಕನೆಕ್ಟ್ ಹಾಗೂ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ಗೆ ಅಗತ್ಯವಾಗಿ ಅನ್ವಯವಾಗುತ್ತದೆ.
ವಿಮಾನ ಪ್ರಯಾಣಿಕರ ಗಮನಕ್ಕೆ, ಬೆಂಗಳೂರು ಏರ್‌ಪೋರ್ಟ್‌ನಲ್ಲಿ 100 ಗ್ರಾಮ್ ಎಕ್ಸ್ಟ್ರಾ ಬ್ಯಾಗೇಜ್ ಇದ್ರೂ ರಿಜೆಕ್ಟ್!
ಬಿಸಿಎಎಸ್ ಈ ವಿಚಾರಕ್ಕೆ ಸಂಬಂಧಿಸಿದಂತೆ ಜನವರಿಯಲ್ಲಿ ನಿರಂತರ ಮೇಲ್ವಿಚಾರಣೆ ಆರಂಭಿಸಿತ್ತು. ದೇಶದ ಆರು ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಬ್ಯಾಗೇಜ್ ಬೆಲ್ಟ್‌ಗಳಿಗೆ ಪ್ರಯಾಣಿಕರ ಲಗೇಜ್‌ಗಳು ತಲುಪಲು ತೆಗೆದುಕೊಳ್ಳುವ ಸಮಯದ ಬಗ್ಗೆ ಅಧ್ಯಯನ ಮಾಡಿತ್ತು. ಈ ಪ್ರಕ್ರಿಯೆಯ ಆರಂಭದಿಂದಲೂ ಎಲ್ಲಾ ವಿಮಾನಯಾನ ಸಂಸ್ಥೆಗಳ ಕಾರ್ಯಕ್ಷಮತೆಯನ್ನು ವಾರಕ್ಕೊಮ್ಮೆ ಮೇಲ್ವಿಚಾರಣೆ ಮಾಡಲಾಗುತ್ತಿತ್ತು. ಕೆಲವು ಏರ್‌ಲೈನ್ಸ್‌ಗಳ ಸೇವೆಯಲ್ಲಿ ಸುಧಾರಣೆಯಾಗಿದ್ದರೂ ಸಹ ಅದು ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ವಿಮಾನದ ಎಂಜಿನ್ ಆಫ್ ಆದ 10 ನಿಮಿಷಗಳಲ್ಲಿ ಲಗೇಜ್‌ನ ಮೊದಲ ಭಾಗವೂ ಬ್ಯಾಗೇಜ್ ಬೆಲ್ಟ್‌ಗೆ ತಲುಪಬೇಕು ಹಾಗೂ ಕೊನೆಯ ಬ್ಯಾಗ್ 30 ನಿಮಿಷಗಳ ಒಳಗೆ ತಲುಪಬೇಕು ಎಂದು ಈಗ ಹೊಸ ಆದೇಶ ನೀಡಲಾಗಿದೆ.
ಆಕ್ಸಿಡೆಂಟ್ ಫೋಟೋ ಅಲ್ಲ... ಇದು ವಿಮಾನ ಪ್ರಯಾಣಿಕರ ಲಗೇಜ್
ಜನವರಿ 2024 ರಿಂದಲೂ ದೇಶದ ಆರು ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಸಾಮಾನು ಸರಂಜಾಮು ಆಗಮನದ ಸಮಯದ ಬಗ್ಗೆ ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದ್ದರೂ, ಈ ಕಡ್ಡಾಯ ಮಾನದಂಡಗಳನ್ನು ಸಂಪೂರ್ಣವಾಗಿ ಏರ್‌ಲೈನ್ ಕಾರ್ಯಕ್ಷಮತೆಯ ಸುಧಾರಣೆಗಳು ಅಳವಡಿಸಿಕೊಂಡಿಲ್ಲ ಎಂಬುದು ಸ್ಪಷ್ಟವಾಗಿದೆ. ಪ್ರಸ್ತುತ ಬಿಸಿಎಎಸ್ ಮೇಲ್ವಿಚಾರಣೆ ಮಾಡಲಾದ ವಿಮಾನ ನಿಲ್ದಾಣಗಳಲ್ಲಿ ಮಾತ್ರವಲ್ಲದೆ ಈ ವಿಮಾನಯಾನ ಸಂಸ್ಥೆಗಳು ಸೇವೆ ಸಲ್ಲಿಸುವ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಈ ಮಾನದಂಡಗಳನ್ನು ಕಾರ್ಯಗತಗೊಳಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ವಿಮಾನಯಾನ ಸಂಸ್ಥೆಗಳಿಗೆ ಬಿಸಿಎಎಸ್ ಸೂಚಿಸಿದೆ.
ತೀರ್ಥಯಾತ್ರೆ ಮುಗಿಸಿ ಸೌದಿಯಿಂದ ಬೆಂಗಳೂರಿಗೆ ಬಂದ ತುಮಕೂರು ವ್ಯಕ್ತಿಯ ಲಗೇಜ್ ಮಿಸ್ಸಿಂಗ್, 3 ತಿಂಗಳಾದ್ರೂ ಸುಳಿವಿಲ್ಲ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.