
ಸಮುದ್ರ ತೀರದಲ್ಲಿರುವ ಸುಂದರ ನಗರ ಇದು. ದೊಡ್ಡ ಕಟ್ಟಡಗಳು, ಗಾಲ್ಫ್ ಕೋರ್ಸ್‌ಗಳು, ವಾಟರ್ ಪಾರ್ಕ್‌ಗಳು, ಕಚೇರಿಗಳು, ಬಾರ್ ಮತ್ತು ರೆಸ್ಟೋರೆಂಟ್‌ಗಳು ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಇಲ್ಲಿ ಅಭಿವೃದ್ಧಿಪಡಿಸಲಾಗಿದೆ. 1370 ಹೆಕ್ಟೇರ್ ಪ್ರದೇಶದಲ್ಲಿ ಹಸಿರಿನ ನಡುವೆ ಐಷಾರಾಮಿ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಇಲ್ಲಿ 10 ಲಕ್ಷ ಜನರಿಗೆ ತಂಗಲು ವ್ಯವಸ್ಥೆ ಮಾಡಲಾಗಿದೆ. ಇಂಥ ನಗರದಲ್ಲಿ ನಮ್ಮದೊಂದು ಮನೆ ಇದ್ರೆ ಏನು ಚೆಂದ ಅಂತಾ ನೀವು ಕಲ್ಪಿಸಿಕೊಳ್ತಿರಬಹುದು. ಅಲ್ಲಿ ವಾಸವಾಗಿರುವವರು ಪುಣ್ಯವಂತರು ಅಂತಾ ಅಂದ್ಕೊಳ್ತಿರಬಹುದು. ಆದ್ರೆ ವಾಸ್ತವ ಬೇರೆನೇ ಇದೆ. ಇಲ್ಲಿ ಎಲ್ಲ ಸೌಲಭ್ಯವನ್ನು ಅಭಿವೃದ್ಧಿಪಡಿಸುವ ಪ್ಲಾನ್ ಇತ್ತೇ ವಿನಃ ಸಂಪೂರ್ಣ ಅಭಿವೃದ್ಧಿಯಾಗಿಲ್ಲ.
ಇದಕ್ಕೆ ಫಾರೆಸ್ಟ್ ಸಿಟಿ (Forest City) ಎಂದು ಹೆಸರಿಡಲಾಗಿದೆ. ಸದ್ಯ ಅಭಿವೃದ್ಧಿಯಾಗಿರುವ ಎಲ್ಲ ಪಾರ್ಕ್, ಬಾರ್, ಮಾಲ್ ಗಳು ಖಾಲಿ ಹೊಡೆಯುತ್ತಿವೆ. ಜನರು ಈ ಪ್ರದೇಶಕ್ಕೆ ಬಂದು ನೆಲೆಸಲು ಮನಸ್ಸು ಮಾಡ್ತಿಲ್ಲ. ಹಾಗಾಗಿಯೇ ಈ ನಗರವನ್ನು ಸದ್ಯ ಗೋಸ್ಟ್ ಟೌನ್ (Ghost Town) ಎಂದು ಕರೆಯಲಾಗುತ್ತಿದೆ.
ಸಿಗರೇಟ್ ಇಲ್ಲ ಅಂದ್ರೆ ವಧು ಇಲ್ಲ… ಚೀನಾದಲ್ಲಿ ಹಳೆ ಸಂಪ್ರದಾಯಕ್ಕೆ ಹೊಸ ಟಚ್
ಗೋಸ್ಟ್ ಟೌನ್ (Ghost Town) ಇರೋದು ಎಲ್ಲಿ? : ಫಾರೆಸ್ಟ್ ಸಿಟಿ ಥೀಮ್ ನಲ್ಲಿ ನಿರ್ಮಾಣವಾದ ಈ ಗೋಸ್ಟ್ ಟೌನ್ ಇರೋದು ಮಲೇಷ್ಯಾದಲ್ಲಿ. ಚೀನಾ ಕಾರಣಕ್ಕೆ ಮಲೇಷ್ಯಾದಲ್ಲಿರುವ ಈ ನಗರ ಖಾಲಿ ಬಿದ್ದಿದೆ. ಸುಂದರ ನಗರ ನಿರ್ಮಾಣ ಮಾಡೋದಾಗಿ ಮಲೇಷ್ಯಾಕ್ಕೆ ಚೀನಾ ಹೇಳಿತ್ತು. ಭರವಸೆ ನೀಡಿ ಎಂಟು ವರ್ಷವಾದ್ರೂ ಇದು ನಿರ್ಜನವಾಗಿದೆ. ಬೆಲ್ಟ್ ಅಂಡ್ ರೋಡ್ ಇನಿಶಿಯೇಟಿವ್ ಅಡಿಯಲ್ಲಿ ಚೀನಾ 2016 ರಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿತ್ತು. ಈ ಕೆಲಸವನ್ನು ದೇಶದ ಅತಿದೊಡ್ಡ ಕಂಪನಿಯಾದ ಕಂಟ್ರಿ ಗಾರ್ಡನ್‌ಗೆ ನೀಡಲಾಗಿತ್ತು. ಕಂಪನಿಗೆ 8 ಲಕ್ಷ ಕೋಟಿಗಿಂತಲೂ ಹೆಚ್ಚು ಮೌಲ್ಯದ ಕೆಲಸ ಸಿಕ್ಕಿತ್ತು. 2016 ರಲ್ಲಿಯೇ ಕ್ಲುವಾಂಗ್ ಜೋಹಾನ್‌ನಲ್ಲಿ ಇದರ ಕೆಲಸ ಪ್ರಾರಂಭವಾಯಿತು. ಕೆಲಸ ಆರಂಭವಾಗಿ ಮೂರೇ ವರ್ಷಕ್ಕೆ ಕೊರೊನಾ ಒಕ್ಕರಿಸಿಕೊಂಡಿತು. ಇದರಿಂದ ಕೆಲಸ ಸಂಪೂರ್ಣವಾಗಿ ನಿಂತಿತ್ತು.
ವಿಶ್ವದ ಅತಿ ಸುದೀರ್ಘ 8 ದಿನಗಳ ರೈಲು ಪ್ರಯಾಣವಿದು, ಆದ್ರೂ ಮೂರು ದೇಶ ನೋಡ್ಬೋದು ಗೊತ್ತಾ?
ಕೊರೊನಾದಿಂದ ವಿಶ್ವ ಚೇತರಿಸಿಕೊಳ್ಳುವ ಸಮಯಕ್ಕೆ ಕಂಪನಿ ಸ್ಥಿತಿ ಚಿಂತಾಜನಕವಾಗಿತ್ತು. ಕಂಪನಿ 16 ಲಕ್ಷ ಕೋಟಿ ಸಾಲದ ಹೊರೆಯಲ್ಲಿ ಮುಳುಗಿತ್ತು. ಕೆಲಸ ಶುರುವಾಗಿ ಇಂದಿಗೆ ಎಂಟು ವರ್ಷಕ್ಕಿಂತ ಹೆಚ್ಚಾಗಿದೆ. ಆದ್ರೆ ಅಲ್ಲಿ ಶೇಕಡಾ 15ರಷ್ಟು ಕೆಲಸ ಮಾತ್ರ ಪೂರ್ಣಗೊಂಡಿದೆ. 10 ಲಕ್ಷ ಜನರು ನೆಲೆಸಬೇಕಾಗಿದ್ದ ಜಾಗದಲ್ಲಿ ಕೇವಲ ಒಂದು ಪರ್ಸೆಂಟ್ ಜನ ಕೂಡ ವಾಸವಾಗಿಲ್ಲ. ಇಲ್ಲಿನ ಎಲ್ಲ ಮನೆಗಳು ಖಾಲಿ ಬಿದ್ದಿವೆ. ಮಾಲ್, ಪಾರ್ಕ್, ರೆಸ್ಟೋರೆಂಟ್ ಸೇರಿದಂತೆ ಎಲ್ಲ ಸಾರ್ವಜನಿಕ ಜಾಗ ಬಿಕೋ ಎನ್ನುತ್ತಿದ್ದು, ಒಬ್ಬರ ಸುಳಿವಿಲ್ಲದಂತಾಗಿದೆ.
ಚೀನಾ ಯೋಜನೆ ಉಲ್ಟಾ ಹೊಡಿತು : ಈ ಪ್ರದೇಶದಲ್ಲಿ ಯಾರು ಬೇಕಾದ್ರೂ ಮನೆ ಖರೀದಿ ಮಾಡಬಹುದು ಎಂದು ಚೀನಾ ಅಧಿಕಾರಿಗಳು ಹೇಳ್ತಾನೆ ಬಂದಿದ್ದಾರೆ. ಚೀನಾದ ಶ್ರೀಮಂತ ವ್ಯಕ್ತಿಗಳು ಅಲ್ಲಿ ಮನೆ ಖರೀದಿ ಮಾಡಿ ಹಣ ಹೂಡಿಕೆ ಮಾಡ್ತಾರೆ ಎನ್ನುವುದು ಚೀನಾ ಸರ್ಕಾರದ ಪ್ಲಾನ್ ಆಗಿತ್ತು. ಚೀನಾ ಶ್ರೀಮಂತರನ್ನು ಸೆಳೆಯುವುದು ಅದರ ಮುಖ್ಯ ಉದ್ದೇಶವಾಗಿತ್ತು. ಆದ್ರೆ ಚೀನಾ ಜನರು ಇಲ್ಲಿ ಮನೆ ಖರೀದಿ ಮಾಡಲು ಹೆಚ್ಚು ಆಸಕ್ತಿ ತೋರುತ್ತಿಲ್ಲ. ಇನ್ನು ಮಲೇಷ್ಯಾದ ಜನರು ಈ ನಗರಕ್ಕೆ ಬಂದು ನೆಲೆಸಲು ಮನಸ್ಸು ಮಾಡ್ತಿಲ್ಲ. ಈ ನಗರ ನಿರ್ಜನವಾಗಿದೆ. ಇದ್ರಿಂದಾಗಿ ಈ ನಗರದಲ್ಲಿ ನಕಾರಾತ್ಮಕತೆಯ ಅನುಭವವಾಗುತ್ತದೆ ಎನ್ನುತ್ತಿದ್ದಾರೆ. ಇದೇ ಕಾರಣಕ್ಕೆ ಈ ನಗರವನ್ನು ಗೋಸ್ಟ್ ಟೌನ್ ಎಂದೂ ಕರೆಯಲಾಗ್ತಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.