ವಿಶ್ವದಲ್ಲಿ ಚಿತ್ರವಿಚಿತ್ರ ಕೆಲಸಗಳಿವೆ. ಕೆಲವೊಂದು ಕೆಲಸ ಕಮ್ಮಿ, ಅಪಾಯ ಜಾಸ್ತಿ. ಮತ್ತೆ ಕೆಲವೊಂದು ಕೆಲಸದಲ್ಲಿ ಸಂಬಳ ಕಡಿಮೆ ಇರುತ್ತದೆ. ಹೆಚ್ಚು ಸಂಬಳ, ಕಡಿಮೆ ಕೆಲಸ, ಐಷಾರಾಮಿ ಜೀವನ ಬೇಕು ಎನ್ನುವವರು ನೀವಾಗಿದ್ರೆ ಇದಕ್ಕೆ ಅಪ್ಲಿಕೇಷನ್ ಹಾಕಿ.
ಒಳ್ಳೆಯ ಕೆಲಸ, ಹೆಚ್ಚಿನ ಸಂಬಳ ಬೇಕು ಎನ್ನುವ ಜನರು ವಿದೇಶಕ್ಕೆ ಹೋಗ್ತಾರೆ. ವಿದೇಶದಲ್ಲಿ ಖರ್ಚು ಹೆಚ್ಚಿರುತ್ತೆ ಎನ್ನುವ ಕಾರಣಕ್ಕೆ ತಮ್ಮ ಸಂಗಾತಿಯನ್ನು ತಮ್ಮ ದೇಶದಲ್ಲೇ ಬಿಟ್ಟು ಹೋಗುವ ಜನರು ಸಾಕಷ್ಟು ಮಂದಿ ಇದ್ದಾರೆ. ಪತಿ ಒಂದು ದೇಶದಲ್ಲಿ ಕೆಲಸ ಮಾಡ್ತಿದ್ದರೆ ಪತ್ನಿ ಇನ್ನೊಂದು ಕಡೆ ಕೆಲಸ, ಮನೆ, ಮಕ್ಕಳನ್ನು ನೋಡಿಕೊಂಡು ಜೀವನ ನಡೆಸ್ತಿರುತ್ತಾಳೆ. ಇಬ್ಬರು ಒಟ್ಟಿಗೆ ಇರುವಂತಹ, ಆರಾಮವಾಗಿ ಜೀವನ ನಡೆಸುವಂತಹ ಕೆಲಸ ಸಿಕ್ಕಿದ್ರೆ ಎಷ್ಟು ಒಳ್ಳೆಯದು ಎಂದುಕೊಳ್ಳುವ ಜನರು, ಪ್ರವಾಸಕ್ಕೆ ಒಟ್ಟಿಗೆ ಹೋದಾಗ ವಾಪಸ್ ಬರುವ ಮನಸ್ಸು ಮಾಡೋದಿಲ್ಲ. ಸಮುದ್ರ, ದ್ವೀಪ ಪ್ರದೇಶ ಅಥವಾ ಶಾಂತ ವಾತಾವರಣವಿರುವ ಜಾಗಕ್ಕೆ ಹೋದಾಗ ಇಬ್ಬರೂ ಒಟ್ಟಿಗೆ ಸಮಯಕಳೆಯಲು ಇಚ್ಛಿಸುತ್ತಾರೆ. ಕೈನಲ್ಲಿ ಹಣ ಖಾಲಿಯಾದ್ಮೇಲೆ ವಾಪಸ್ ಬರೋದು ಅನಿವಾರ್ಯವಾಗುತ್ತದೆ. ಆದ್ರೆ ಸಂಗಾತಿ ಜೊತೆ ಸುಂದರ ಪರಿಸರದಲ್ಲಿ ಕಾಲ ಕಳೆಯುವ ಬಯಕೆ ನಿಮಗಿದ್ದರೆ ಒಳ್ಳೆ ಅವಕಾಶವೊಂದಿದೆ. ನೀವು ಹಣ ನೀಡ್ಬೇಕಾಗಿಲ್ಲ. ನಿಮಗೆ ಅವರು ಹಣ ನೀಡ್ತಾರೆ. ದ್ವೀಪ ಪ್ರದೇಶದಲ್ಲಿ ಸಂಗಾತಿ ಜೊತೆ ನೀವು ವಾಸಮಾಡ್ಬೇಕು. ಆ ಉದ್ಯೋಗದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ನ್ಯೂಯಾರ್ಕ್ (NewYork) ಪೋಸ್ಟ್‌ನ ವರದಿಯ ಪ್ರಕಾರ, ಫೇರ್‌ಫ್ಯಾಕ್ಸ್ ಮತ್ತು ಕೆನ್ಸಿಂಗ್ಟನ್ ಹೆಸರಿನ ನೇಮಕಾತಿ ಸಂಸ್ಥೆ ಈ ಉದ್ಯೋಗ (Employment)ದ ಬಗ್ಗೆ ಮಾಹಿತಿ ನೀಡಿದೆ. ಇದು ಪೂರ್ಣ ಅವಧಿಯ ಕೆಲಸವಾಗಿದೆ. ನೀವು ನಿಮ್ಮ ಸಂಗಾತಿ ಜೊತೆ ಕೆಲಸ ಮಾಡಬೇಕಾಗುತ್ತದೆ. ಈ ಕೆಲಸಕ್ಕೆ ಪ್ರತಿಯಾಗಿ ನಿಮಗೆ ಹೆಚ್ಚಿನ ಸಂಬಳದ ಜೊತೆ ಒಳ್ಳೆ ಸೌಲಭ್ಯಗಳು ಕೂಡ ಸಿಗುತ್ತವೆ. ನೀವು ಖಾಸಗಿ ದ್ವೀಪ (Island) ದಲ್ಲಿ ಕೆಲಸ ಮಾಡಬೇಕು.
ಖಾಸಗಿ ದ್ವೀಪದಲ್ಲಿ ಕೆಲಸ ಮಾಡಲು ಸಿಗ್ತಿದೆ ಇಷ್ಟೊಂದು ಸಂಬಳ : ದಂಪತಿ, ಆ ದ್ವೀಪದಲ್ಲಿ ಕಳೆಯುವ ಸಮಯವನ್ನು ಡಾಕ್ಯುಮೆಂಟರಿ ಮಾಡಬೇಕಾಗುತ್ತದೆ. ಈ ಸ್ಥಳದ ಸೌಂದರ್ಯವನ್ನು ಜಗತ್ತಿಗೆ ತೋರಿಸುವ ಉದ್ದೇಶದಿಂದ ಈ ನೇಮಕಾತಿ ನಡೆಯುತ್ತಿದೆ. ದಂಪತಿ ಬ್ರಿಟಿಷ್ ವರ್ಜಿನ್ ದ್ವೀಪಗಳಲ್ಲಿ ವಾಸಿಸಬೇಕಾಗುತ್ತದೆ. ಆ ಸ್ಥಳದಲ್ಲಿ ಅವರು ವಾಸವಾಗಲು ಯಾವುದೇ ಹಣ ನೀಡ್ಬೇಕಾಗಿಲ್ಲ. ದಂಪತಿಗೆ 185,000 ಡಾಲರ್ ಅಂದರೆ 1,54,03,729 ರೂಪಾಯಿ ಸಂಬಳ ನೀಡಲಾಗುತ್ತದೆ.
ಪ್ರಕೃತಿ ಮಡಿಲಲ್ಲಿ ಕಳೆದು ಹೋದ ವಿಕ್ರಮ್ ವೇದಾ! ಯಾವುದೀ ಅದ್ಭುತ ತಾಣ?
ದಂಪತಿಗೆ ಸಿಗಲಿದೆ ರಜೆ ಹಾಗೂ ಸೌಲಭ್ಯ : ಈ ದ್ವೀಪದಲ್ಲಿ ವಾಸಿಸುವ ದಂಪತಿಗೆ ಎಲ್ಲ ರೀತಿಯ ಸೌಲಭ್ಯ ಸಿಗಲಿದೆ. ಅವರು ವರ್ಷದಲ್ಲಿ ಒಮ್ಮೆ ತಮ್ಮ ತವರಿಗೆ ಬರುವ ಅವಕಾಶವಿದೆ. ದಂಪತಿ ವಾರದಲ್ಲಿ 6 ದಿನ ಕೆಲಸ ಮಾಡಬೇಕಾಗುತ್ತದೆ. ಅವರಿಗೆ 25 ದಿನಗಳ ರಜೆ ಕೂಡ ಸಿಗುತ್ತದೆ.
ಕನ್ನಡ ಮಾತನಾಡದ ಬೆಂಗಳೂರಿಗರ ಬಗ್ಗೆ ಈ ಚೀನಿ ಯುವತಿಗೆ ಬೇಸರ, ಕನ್ನಡ ಮಾತನಾಡಿ ಅಂತಾಳೆ ಕೇಳಿ!
ಇನ್ನೂ ಬಹಿರಂಗಗೊಂಡಿಲ್ಲ ಕೆಲ ಮಾಹಿತಿ : ಬ್ರಿಟಿಷ್ ವರ್ಜಿನ್ ದ್ವೀಪಗಳಲ್ಲಿ (Virging Island) ವಾಸಿಸಬೇಕು ಎನ್ನಲಾಗಿದೆಯೇ ವಿನಃ ಯಾವ ದ್ವೀಪ ಎನ್ನುವ ಬಗ್ಗೆ ಮಾಹಿತಿ ನೀಡಲಾಗಿಲ್ಲ. ಹಾಗೆಯೇ ನೌಕರಿ ನೀಡುವ ವ್ಯಕ್ತಿ ಬಗ್ಗೆಯೂ ಮಾಹಿತಿಯನ್ನು ಗುಪ್ತವಾಗಿ ಇಡಲಾಗಿದೆ. ಕೆಲಸ ಮಾಡುವ ದಂಪತಿ ಸಾಮಾಜಿಕ ಜಾಲತಾಣ, ತಂತ್ರಜ್ಞಾನದ ಬಗ್ಗೆ ಜ್ಞಾನ ಹೊಂದಿರಬೇಕು. ವಿಹಾರ ನೌಕೆಗಳು ಅಥವಾ ದೊಡ್ಡ ಮನೆಗಳಲ್ಲಿ ಕೆಲಸ ಮಾಡಿದ ಅನುಭವ ಇರಬೇಕು. ಜನವರಿಯಿಂದ ಅವರ ಕೆಲಸ ಶುರುವಾಗಲಿದೆ ಎಂದು ವರದಿ ಮಾಡಲಾಗಿದೆ. ದಂಪತಿ ಅಪ್ಲಿಕೇಷನ್ ಜೊತೆ ತಮ್ಮ ಟಿಕ್ ಟಾಕ್ ವಿಡಿಯೋವನ್ನು (Tik Tok Video) ಹಂಚಿಕೊಳ್ಳಬೇಕು. ನೌಕರಿ ನೀಡುವವರು ಅವರ ವಿಡಿಯೋವನ್ನು ಪರಿಶೀಲನೆ ನಡೆಸ್ತಾರೆ. ಈ ಸುದ್ದಿಯನ್ನು ಕೇಳಿದ ಜನರು ಅಚ್ಚರಿಗೊಂಡಿದ್ದಾರೆ. ಇಂಥ ನೌಕರಿಯೂ ಇದ್ಯಾ ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೆ ಕೆಲವರು ಇದು ವದಂತಿ ಎನ್ನುತ್ತಿದ್ದಾರೆ.