
ಬೆಂಗಳೂರು (ಆ.09): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್ ಮುಕ್ತ ಸಂಚಾರಕ್ಕೆ ಅನುಕೂಲ ಆಗಿರುವ ಮೆಟ್ರೋ ನೇರಳೆ ಮಾರ್ಗದಲ್ಲಿ ಆಗಸ್ಟ್ 15ರವರೆಗೂ ಬೆಳಗ್ಗೆ 5 ರಿಂದ 7ಗಂಟೆವರೆಗೆ ಮೆಟ್ರೋ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ ನಿ. (ಬಿಎಂಆರ್‌ಸಿಎಲ್) ವತಿಯಿಂದ ಬೈಯಪ್ಪನಹಳ್ಳಿಯಿಂದ ಕೃಷ್ಣರಾಜಪುರ ಮೆಟ್ರೋ ನಿಲ್ದಾಣದದವರೆಗೆ ಮೆಟ್ರೋ ಸೇವೆ ವಿಸ್ತರಣೆ ಕಾರ್ಯ ಭರದಿಂದ ಸಾಗಿದೆ. ಮೆಟ್ರೋ ರೈಲು ಮಾರ್ಗದ ಸಿಗ್ನಲಿಂಗ್ ಮತ್ತು ಇತರ ಸಂಬಂಧಿತ ಕಾಮಗಾರಿಗಳನ್ನು ನಡೆಸುವ ಹಿನ್ನೆಲೆಯಲ್ಲಿ ಬೈಯಪ್ಪನಹಳ್ಳಿ ಟರ್ಮಿನಲ್‌ನಿಂದ ಸ್ವಾಮಿ ವಿವೇಕಾನಂದ ರಸ್ತೆ ಮೆಟ್ರೋ ನಿಲ್ದಾಣ ಹಾಗೂ ಕೃಷ್ಣರಾಜಪುರ ಮತ್ತು ವೈಟ್‌ಫೀಲ್ಡ್ (ಕಾಡುಗೋಡಿ) ನಿಲ್ದಾಣಗಳ ನಡುವಿನ ಬೆಳಿಗ್ಗೆ 5.00 ಗಂಟೆಯಿಂದ 7.00 ಗಂಟೆಯವರೆಗಿನ ಮೆಟ್ರೋ ರೈಲು ಸೇವೆಯನ್ನು ಆ.9ರವರೆಗೆ ಸ್ಥಗಿತಗೊಳಿಸಲಾಗಿತ್ತು. ಸದರಿ ಕಾಮಗಾರಿಯನ್ನು ಪೂರ್ಣಗೊಳಿಸಲು ಇನ್ನೂ ಕೆಲವು ದಿನಗಳು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಆ.10 ಮತ್ತು 11ರವರೆಗೆ ಬೆಳಗ್ಗಿನ ಜಾವದ ಮೆಟ್ರೋ ರೈಲು ಸಂಚಾರವನ್ನು ಸ್ಥಗಿತ ಮಾಡಲಾಗುತ್ತಿದೆ ಎಂದು ಬಿಎಂಆರ್‌ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
Bengaluru Metro:ಆಗಸ್ಟ್‌ನಿಂದ 2 ಹೊಸ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭ
ನೇರಳೆ ಮಾರ್ಗದಲ್ಲಿ ಬೆಳಗ್ಗೆ 2 ಗಂಟೆ ಸಂಚಾರ ಸಮಸ್ಯೆ: ನೇರಳೆ ಮಾರ್ಗದ ಸ್ವಾಮಿ ವಿವೇಕಾನಂದ ರಸ್ತೆ ಮೆಟ್ರೋ ನಿಲ್ದಾಣದಿಂದ ಕೆಂಗೇರಿ ನಿಲ್ದಾಣದವರೆಗೆ ಬೆಳಗ್ಗೆ 5.00 ಗಂಟೆಯಿಂದ 7.00 ಗಂಟೆಯವರೆಗೆ ಎಂದಿನಂತೆ ಮೆಟ್ರೋ ರೈಲು ಸೇವೆಗಳು ಲಭ್ಯವಿರುತ್ತದೆ. ಇದಾದ ನಂತರ ಬೆಳಗ್ಗೆ 7 ಗಂಟೆಯಿಂದ ರಾತ್ರಿ 11 ಗಂಟೆವರೆಗೆ ಬೈಯಪ್ಪನಹಳ್ಳಿ ಟರ್ಮಿನಲ್‌ನಿಂದ ಸ್ವಾಮಿ ವಿವೇಕಾನಂದ ರಸ್ತೆ ಮೆಟ್ರೋ ನಿಲ್ದಾಣ ಹಾಗೂ ಕೃಷ್ಣರಾಜಪುರ ಮತ್ತು ವೈಟ್‌ಫೀಲ್ಡ್ (ಕಾಡುಗೋಡಿ) ನಿಲ್ದಾಣದ ನಡುವೆ ಮೆಟ್ರೋ ಸಂಚಾರ ಸಹಜ ಸ್ಥಿತಿಯಲ್ಲಿರುತ್ತದೆ.
ಕೆಂಗೇರಿ- ವಿಜಯನಗರ ನಡುವೆ ಮೆಟ್ರೋ ಸಂಚಾರ ಇಲ್ಲ: ಮತ್ತೊಂದೆಡೆ ನೇರಳೆ ಮಾರ್ಗದ ದಕ್ಷಿಣ ತುದಿಯಾದ ಕೆಂಗೇರಿ ನಿಲ್ದಾಣದಿಂದ ರೈಲು ಸೇವೆಯನ್ನು ಚಲ್ಲಘಟ್ಟ ನಿಲ್ದಾಣದವರೆಗೆ ಮಾರ್ಗವನ್ನು ವಿಸ್ತರಿಸಲು ರೈಲ್ವೆ ಸಿಗ್ನಲಿಂಗ್ ಮತ್ತು ಇತರ ಸಂಬಂಧಿತ ಕಾಮಗಾರಿಗಳಿಗಾಗಿ ಆ.14ರಂದು ಬೆಳಗ್ಗೆ 5 ಗಂಟೆಯಿಂದ ಬೆಳಗ್ಗೆ 7 ಗಂಟೆವರೆಗೆ ಕೆಂಗೇರಿಯಿಂದ ಮತ್ತು ವಿಜಯನಗರ ಮೆಟ್ರೋ ನಿಲ್ದಾಣಗಳ ನಡುವೆ ಮೆಟ್ರೋ ಸೇವೆಗಳು ಇರುವುದಿಲ್ಲ. ಈ ಸಮಯದಲ್ಲಿ ಬೈಯಪ್ಪನಹಳ್ಳಿ ಮತ್ತು ವಿಜಯನಗರ ಮೆಟ್ರೋ ನಿಲ್ದಾಣಗಳ ನಡುವೆ ರೈಲು ಸೇವೆ ಇರುತ್ತದೆ.
Bengaluru : ಮೆಟ್ರೋ ಪ್ರಯಾಣಿಕರಿಗೆ ಶಾಕ್, ಒಂದು ತಿಂಗಳು ಸಂಚಾರ ಸ್ಥಗಿತ
ಹಸಿರು ಮಾರ್ಗದಲ್ಲಿ ಯಾವುದೇ ಸಂಚಾರ ವ್ಯತ್ಯಯ ಇಲ್ಲ: ಇನ್ನು ಬೆಳಗ್ಗೆ 7.00 ಗಂಟೆಯ ನಂತರ, ಬೈಯಪ್ಪನಹಳ್ಳಿ ಮತ್ತು ಕೆಂಗೇರಿ ಮೆಟ್ರೋ ನಿಲ್ದಾಣಗಳ ನಡುವೆ ಹಾಗೂ ಕೃಷ್ಣರಾಜಪುರ ಮತ್ತು ವೈಟ್‌ಫೀಲ್ಡ್ (ಕಾಡುಗೋಡಿ) ಮೆಟ್ರೋ ನಿಲ್ದಾಣಗಳ ನಡುವೆ ಎಂದಿನಂತೆ ಮೆಟ್ರೋ ರೈಲು ಸೇವೆಗಳು ಸೇವೆಗಳು ರಾತ್ರಿ 11.00 ರವರೆಗೆ ಲಭ್ಯವಿರುತ್ತದೆ. ಹಸಿರು ಮಾರ್ಗದ ರೈಲು ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ನಮ್ಮ ಮೆಟ್ರೋ ಪ್ರಯಾಣಿಕರು ಸದರಿ ಬದಲಾವಣೆಯನ್ನು ಗಮನಿಸಿ ಬಿಎಂಆರ್‌ಸಿಎಲ್‌ನೊಂದಿಗೆ ಸಹಕರಿಸುವಂತೆ ಕೋರಲಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.