
ಶುಕ್ರವಾರ ಬೆಳಗಾಗ್ತಿದ್ದಂತೆ ಶನಿವಾರ ನೆನೆದು ಅದೇನೋ ಖುಷಿ ಆಗಿರುತ್ತೆ. ಸೋಮವಾರದಿಂದ ಶುಕ್ರವಾರದವರೆಗೆ ಒಂದೇ ಸಮನೆ ಕೆಲಸ ಮಾಡಿದ ದೊಡ್ಡವರಿರಬಹುದು ಇಲ್ಲ ಶಾಲೆಗೆ ಹೋಗಿ ಸುಸ್ತಾದ ಮಕ್ಕಳಿರಬಹುದು, ಶನಿವಾರ, ಭಾನುವಾರವೆಂದ್ರೆ ಅವರೆಲ್ಲರಿಗೂ ಹಬ್ಬ.
ಮನುಷ್ಯರಿಗೆ ವಾರದಲ್ಲಿ ಒಂದೋ ಎರಡೋ ದಿನ ರಜೆ (Vacation) ಏನೋ ಸಿಗುತ್ತೆ. ಆದ್ರೆ ಪ್ರಾಣಿ (Animal) ಗಳಿಗೆ ಅದ್ರಲ್ಲೂ ಸಾಕು ಪ್ರಾಣಿಗಳಿಗೆ ರಜೆ ಸಿಗೋಲ್ಲ. ಅವು ಕೂಡ ವಾರಗಟ್ಟಲೆ ಅಥವಾ ವರ್ಷಗಟ್ಟಲೆ ಒಂದೇ ರೀತಿಯ ಕೆಲಸಗಳನ್ನು ಮಾಡುತ್ತಿರುತ್ತವೆ. ಇಂದಿನ ಸ್ಪರ್ಧಾ ಯುಗದಲ್ಲಿ ನಾಯಿ, ಹಸು, ಮೊಲ ಮುಂತಾದ ಅನೇಕ ಪ್ರಾಣಿಗಳ ಸಾಕಣೆ ಒಂದು ದೊಡ್ಡ ಬ್ಯುಸಿನೆಸ್ (Business) ಆಗಿ ಹೋಗಿದೆ. ಸಾಕುಪ್ರಾಣಿಗಳಿಂದಲೇ ಮನುಷ್ಯ ಲಕ್ಷಾಂತರ ಹಣ ಸಂಪಾದಿಸುತ್ತಾನೆ. ಹೊಲದಲ್ಲಿ ಕೆಲಸ ಮಾಡುವುದಕ್ಕಾಗಿ ಅಥವಾ ಇನ್ಯಾವುದೋ ಕೆಲಸಕ್ಕಾಗಿ ಮನುಷ್ಯ ಕೆಲವು ಪ್ರಾಣಿಗಳನ್ನು ಬಳಸಿಕೊಳ್ಳುತ್ತಾನೆ. ಪ್ರಾಣಿಗಳ ಶ್ರಮದ ಮೇಲೆಯೇ ಮನುಷ್ಯನ ದುಡಿಮೆ ಅವಲಂಬಿತವಾಗಿರುತ್ತದೆ. ಹೀಗೆ ವರ್ಷಪೂರ್ತಿ ನಿಯತ್ತಿನಿಂದ ಯಜಮಾನನಿಗಾಗಿ ದುಡಿಯುವ ಅಂತಹ ಪ್ರಾಣಿಗಳಿಗೂ ರಜೆ ಬೇಕಲ್ವಾ?. ಅವು ಕೂಡ ನಮ್ಮಂತೆಯೇ ವಿಶ್ರಾಂತಿ ಬಯಸುತ್ತವೆ ಎನ್ನುವುದನ್ನು ಅರ್ಥಮಾಡಿಕೊಂಡ ಹಳ್ಳಿಯೊಂದರಲ್ಲಿ ಸಾಕು ಪ್ರಾಣಿಗಳಿಗೂ ವಾರಕ್ಕೊಮ್ಮೆ ರಜೆ ನೀಡಲಾಗ್ತಿದೆ. ಅದ್ರ ವಿವರ ಇಲ್ಲಿದೆ.
ಚಾಮರಾಜನಗರ: ಬಂಡೀಪುರ ಸಫಾರಿಗೆ ಹೋಗುವ ಪ್ರವಾಸಿಗರಿಗೆ ಗುಡ್ ನ್ಯೂಸ್...!
ಈ ಹಳ್ಳಿಗಳಲ್ಲಿ ಪ್ರಾಣಿಗಳಿಗೂ ಸಿಗುತ್ತೆ ವಾರಾಂತ್ಯದ ರಜಾ : ಭಾರತದ ಈ ಹಳ್ಳಿಗಳಲ್ಲಿ ಮನುಷ್ಯರಂತೆಯೇ ಪ್ರಾಣಿಗಳಿಗೂ ಕೂಡ ರಜೆ ನೀಡಲಾಗುತ್ತೆ. ಆ ದಿನ ಪ್ರಾಣಿಗಳಿಂದ ಯಾವ ಕೆಲಸವನ್ನೂ ಮಾಡಿಸಲಾಗುವುದಿಲ್ಲ. ಜಾರ್ಖಂಡ್ ನ ಲಾತೆಹಾರ್ ನ ಪ್ರಾಣಿಗಳು ವಾರಾಂತ್ಯದ ರಜೆಯನ್ನು ಪಡೆಯುತ್ತವೆ. ಇಲ್ಲಿನ ಕೃಷಿಕರು ತಮ್ಮ ಹೊಲಗಳಲ್ಲಿ ಕೆಲಸ ಮಾಡಲು ಹಸು, ಎಮ್ಮೆ, ಗೂಳಿ ಮುಂತಾದ ಪ್ರಾಣಿಗಳನ್ನು ಬಳಸಿಕೊಳ್ಳುತ್ತಾರೆ. ಇವು ಕೂಡ ರೈತರ ಜೊತೆಗೆ ಹೊಲದಲ್ಲಿ ದುಡಿಯುತ್ತವೆ ಎಂಬ ಕಾರಣಕ್ಕೆ ಅವುಗಳಿಗೂ ಕೂಡ ವೀಕೆಂಡ್ ರಜಾ ನೀಡಲಾಗುತ್ತೆ. ಲಾತೇಹಾರ್ ಹೊರತಾಗಿ ಹರ್ಕಾ, ಮುಂಗರ್, ಲಾಲಘಡಿ ಮತ್ತು ಪಕರಾರ್ ಗಳಲ್ಲಿಯೂ ಹಸುಗಳಿಗೆ ಒಂದು ದಿನ ರಜೆ ನೀಡಲಾಗುತ್ತೆ.
ಹೇಗೆ ಶುರುವಾಯ್ತು ಈ ಪರಂಪರೆ? : ಕೆಲವು ದಶಕಗಳ ಹಿಂದೆ ಅಲ್ಲಿನ ಹೊಲದಲ್ಲಿ ಕೆಲಸ ಮಾಡುವ ಸಮಯದಲ್ಲಿ ಒಂದು ಗೂಳಿ ಸತ್ತುಹೋಯ್ತು. ಕೆಲಸ ಮಾಡುವ ಸಮಯದಲ್ಲೇ ಗೂಳಿ ಮೃತವಾಗಿದ್ದು ಅಲ್ಲಿನವರಿಗೆ ಅತ್ಯಂತ ಬೇಸರ ತಂದಿತು. ಹೆಚ್ಚಿನ ಕೆಲಸದಿಂದ ವಿಶ್ರಾಂತಿಯೇ ಇಲ್ಲದೇ ಅದು ಸತ್ತುಹೋಯಿತೇನೋ ಎನ್ನುವ ಅಪರಾಧಿ ಮನೋಭಾವ ಅಲ್ಲಿನ ಕೃಷಿಕರನ್ನು ಕಾಡಿತು. ಈ ಕಾರಣಕ್ಕಾಗಿ ಅಂದಿನಿಂದಲೂ ಜಾರ್ಖಂಡ್ ನಲ್ಲಿ ಪ್ರಾಣಿಗಳಿಗೆ ರಜೆ ನೀಡಲಾಗುತ್ತಿದೆ. ಇವರಿಂದ ಪ್ರೇರಿತರಾದ ಸುತ್ತ ಮುತ್ತಲ ಅನೇಕ ಹಳ್ಳಿಯವರು ಕೂಡ ತಮ್ಮ ಪ್ರಾಣಿಗಳಿಗೆ ವಾರದ ಒಂದು ದಿನ ವಿಶ್ರಾಂತಿ ನೀಡುತ್ತಿದ್ದಾರೆ. ಆ ದಿನ ಪ್ರಾಣಿಗಳು ಯಾವುದೇ ಕೆಲಸವಿಲ್ಲದೇ ಆರಾಮದಿಂದ ಇರಬಹುದಾಗಿದೆ.
ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್‌ನ ಮೇಲೆ ತುಳು ಧ್ವಜ ಹಾರಾಟ: ಇದು ಉಡುಪಿ ಯುವಕನ ಸಾಹಸಗಾಥೆ
ಈ ಪದ್ಧತಿ ಎಲ್ಲ ಕಡೆಯೂ ಅನ್ವಯವಾಗಲಿ : ಪ್ರಾಣಿಗಳು ಮೂಕ ಜೀವಿಗಳು. ಅವುಗಳಿಗೆ ಮನುಷ್ಯರಂತೆ ತಮ್ಮ ನೋವನ್ನು ವ್ಯಕ್ತಪಡಿಸೋದಿಲ್ಲ. ಇಂದು ಎಷ್ಟೋ ಕಡೆ ಪ್ರಾಣಿಗಳಿಗೆ ಹಿಂಸೆ ನೀಡಲಾಗುತ್ತಿದೆ. ಮನುಷ್ಯ ತನ್ನ ಲಾಭಕ್ಕಾಗಿ ಮೂಕ ಪ್ರಾಣಿಗಳನ್ನು ಬಲಿಕೊಡುತ್ತಿದ್ದಾನೆ. ಹಣದ ಆಮಿಷಕ್ಕಾಗಿ ಪ್ರಾಣಿಗಳನ್ನು ಬಳಸಿಕೊಳ್ಳುತ್ತಿದ್ದಾನೆಯೇ ಹೊರತು ಅದರ ಯೋಗಕ್ಷೇಮದ ಕಡೆ ಗಮನ ಹರಿಸುತ್ತಿಲ್ಲ. ಇಂತಹ ಮನಸ್ಥಿತಿ ಹೊಂದಿರುವವರಿಗೆ ಲಾತೇಹಾರ್ ಹಳ್ಳಿಯ ಕೃಷಿಕರು ಮಾದರಿಯಾಗಿದ್ದಾರೆ. ಈ ಹಳ್ಳಿ ಜನರು ರೂಢಿಸಿಕೊಂಡು ಬಂದ ಈ ಸಂಪ್ರದಾಯ ಮನುಷ್ಯ ಮತ್ತು ಪ್ರಾಣಿಗಳ ಸಹಜೀವನಕ್ಕೆ ಉತ್ತಮ ಉದಾಹರಣೆಯಾಗಿದೆ. ಇದು ಜಗತ್ತಿನಲ್ಲಿರುವ ಪ್ರತಿಯೊಂದು ಜೀವಿಗಳಿಗೂ ಸಮಾನ ಹಕ್ಕು ಸಿಗಬೇಕೆನ್ನುವುದನ್ನು ಸಾರಿ ಹೇಳುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.