
ಜಗತ್ತಿನಲ್ಲಿ ಅನೇಕ ರೀತಿಯ ಅದ್ಭುತಗಳಿವೆ. ಪ್ರಕೃತಿ ತನ್ನಲ್ಲಿ ಅನೇಕ ರೀತಿಯ ವೈಚಿತ್ರ್ಯಗಳನ್ನು ಹೊಂದಿದೆ. ಹಾಗೇ ಮನುಷ್ಯ ಕೂಡ ತನ್ನ ಬುದ್ಧಿಶಕ್ತಿ ಹಾಗೂ ಬಲದಿಂದ ಅನೇಕ ಕಟ್ಟಡ, ದೇಗುಲಗಳ ನಿರ್ಮಾಣಗಳನ್ನು ಮಾಡಿದ್ದಾನೆ. ಹಾಗಾಗಿ ಕೆಲವು ಸೃಷ್ಟಿಯ ಅದ್ಭುತವಾಗಿದ್ದರೆ ಇನ್ಕೆಲವು ಮಾನವ ನಿರ್ಮಿತ ಅದ್ಭುತಗಳಾಗಿವೆ.
ಅಂಕೋರ್ ವಾಟ್ (Angkor Wat) ಎಂಬ ಅದ್ಭುತ : ಪ್ರಪಂಚದ ಅದ್ಭುತ (Wonderful) ಗಳ ತಾಣಗಳ ಪಟ್ಟಿಯಲ್ಲಿ ಈಗಾಗಲೇ 7 ಹೆಸರುಗಳು ಸೇರಿವೆ. ಈಗ ಕಾಂಬೋಡಿಯಾದ ಅಂಕೋರ್ ವಾಟ್ ಹಿಂದೂ ದೇಗುಲ ವಿಶ್ವದ ಎಂಟನೇ ಅದ್ಭುತವೆಂದು ಗುರುತಿಸಿಕೊಂಡಿದೆ. ಅಂಕೋರ್ ವಾಟ್ ದೇಗುಲ 12ನೇ ಶತಮಾನದಲ್ಲೇ ನಿರ್ಮಿತವಾದ ಸುಂದರ ಹಿಂದೂ ದೇವಾಲಯವಾಗಿದೆ. ಈ ದೇಗುಲದ ವಾಸ್ತುಶಿಲ್ಪ, ಸೌಂದರ್ಯ ಹಾಗೂ ಕಲೆಗಾಗಿ ಇದನ್ನು ಪ್ರಪಂಚದ ಎಂಟನೇ ಅದ್ಭುತವೆಂದು ಗುರುತಿಸಲಾಗಿದೆ. ಚಕ್ರವರ್ತಿ ಎರಡನೇ ಸೂರ್ಯವರ್ಮನ್ ಈ ದೇವಾಲಯವನ್ನು ನಿರ್ಮಿಸಿದ. ಮೂಲತಃ ಇದು ವಿಷ್ಣುವಿನ ದೇವಾಲಯವಾಗಿದ್ದು, ನಂತರದಲ್ಲಿ ಬೌದ್ಧ ದೇವಾಲಯವಾಗಿ ರೂಪಾಂತರಗೊಂಡಿತು. ಹಿಂದೆ ಇಲ್ಲಿ ವಿಷ್ಣುವಿನ ಜೊತೆಗೆ ಬ್ರಹ್ಮ ಹಾಗೂ ಮಹೇಶ್ವರನ ಪೂಜೆಯೂ ನಡೆಯುತ್ತಿತ್ತು ಎನ್ನಲಾಗುತ್ತದೆ. ದೇವಾಲಯದ ಅನೇಕ ಕಡೆಗಳಲ್ಲಿ ತ್ರಿಮೂರ್ತಿಗಳ ಮೂರ್ತಿಗಳನ್ನು ಕೂಡ ಕಾಣಬಹುದು. ಇದರ ಜೊತೆಗೆ ಸಮುದ್ರ ಮಂಥನ, ಅಪ್ಸರೆಯರು ಮುಂತಾದ ಅನೇಕ ಪುರಾಣ ಸಂಬಂಧಿ ಕೆತ್ತನೆಗನ್ನು ಅಂಕೋರ್ ವಾಟ್ ನಲ್ಲಿ ನೋಡಬಹುದಾಗಿದೆ.
ಹೊಟೇಲ್ ಕೊಂಡಷ್ಟೇ ಇಲ್ಲಿಯ ಫುಡ್ ಬೆಲೆ! ಮತ್ತೊಂದು ದೇಶದಲ್ಲಿ ಪ್ರಯಾಣಿಸುವುದು ದುಬಾರಿ!
ಕಾಂಬೋಡಿಯಾ (Combodia) ದೇಶದ ಹೃದಯಭಾಗದಲ್ಲಿರುವ ಅಂಕೋರ್ ವಾಟ್ ಇದೀಗ ಇಟಲಿಯ ಪೊಂಪೈ ಅನ್ನು ಹಿಂದಿಕ್ಕಿ ವಿಶ್ವದ ಎಂಟನೇ ಅದ್ಭುತವಾಗಿ ಹೊರಹೊಮ್ಮಿದೆ. ಈ ದೇವಾಲಯದ ಗೋಡೆಗಳ ಮೇಲೆ ಹಿಂದೂ ಮತ್ತು ಬೌದ್ಧ ಧರ್ಮಗ್ರಂಥಗಳನ್ನು ಕೆತ್ತಲಾಗಿದೆ. ವಿಶ್ವದ ಅತಿದೊಡ್ಡ ಧಾರ್ಮಿಕ ಸ್ಮಾರಕ ಎನಿಸಿಕೊಂಡಿರುವ ಅಂಕೋರ್ ವಾಟ್ ಅನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಘೋಷಿಸಿದೆ. ಇದು ತನ್ನ ಸುಂದರ ವಾಸ್ತುಶಿಲ್ಪದಿಂದ ವರ್ಷಕ್ಕೆ ಲಕ್ಷಾಂತರ ಪ್ರವಾಸಿಗರನ್ನು ಸೆಳೆಯುತ್ತಿದೆ.
ಕೂತ್ರೂ ನಿಂತ್ರೂ ಗೋಡೆ ಮೇಲೆ ಜೇಡ ಕಂಡ್ರೂ ಇಲ್ಲಿ ದಂಡ ವಿಧಿಸ್ಬೇಕು, ಹೇಗೆ ಬದುಕ್ತಾರೆ ಮಂದಿ ಇಲ್ಲಿ?
ಅಂಕೋರ್ ವಾಟ್ ವಾಸ್ತುಶಿಲ್ಪ (Architecture) : ಅಂಕೋರ್ ವಾಟ್ ತನ್ನ ವಾಸ್ತುಶಿಲ್ಪದಿಂದಲೇ ಹೆಸರುವಾಸಿಯಾಗಿದೆ. ಈ ಬೃಹತ್ ದೇವಾಲಯ ಸುಮಾರು 500 ಎಕರೆಗಳಷ್ಟು ವಿಸ್ತೀರ್ಣವನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ ಇದರ ಹೊರಗಿನ ಗೋಡೆಗಳ ಸುತ್ತಲೂ ದೊಡ್ಡ ಕಂದಕಗಳನ್ನು ನಿರ್ಮಿಸಿದ್ದಾರೆ. ಅಂಕೋರ್ ವಾಟ್ ಮೇರು ಪರ್ವತವನ್ನು ಪ್ರತಿನಿಧಿಸುವ ಐದು ಕಮಲದ ಆಕಾರದ ಗೋಪುರಗಳನ್ನು ಕೂಡ ಹೊಂದಿದೆ. ಅಲ್ಲಿನ ಗೋಡೆಗಳ ಮೇಲೆ ಬಾಸ್ – ರಿಲೀಫ್ ಗಳು ಪ್ರಾಚೀನ ವಿಶ್ವಕೋಶದಂತೆ ಇದ್ದು ಅದು ಹಿಂದೂ ಮಹಾಕಾವ್ಯ, ಐತಿಹಾಸಿಕ ಘಟನೆ ಹಾಗೂ ಖಮೇರ್ ಜನರ ದೈನಂದಿನ ಜೀವನವನ್ನು ಕಣ್ಣೆದುರು ತಂದಿಡುತ್ತದೆ. ಇಲ್ಲಿನ ಇಂತಹ ಅದ್ಭುತವಾದ ಕೆತ್ತನೆಗಳು ಅಲ್ಲಿನ ಕುಶಲಕರ್ಮಿಗಳ ಕೌಶಲ್ಯ ಮತ್ತು ಕರಕುಶಲತೆಯನ್ನು ಪ್ರದರ್ಶಿಸುತ್ತದೆ.
ಅಂಕೋರ್ ವಾಟ್ ವಾಸ್ತುಶಿಲ್ಪ ಪ್ರಿಯರಿಗಷ್ಟೇ ಅಲ್ಲ ಪ್ರಕೃತಿ ಸೌಂದರ್ಯವನ್ನು ವೀಕ್ಷಿಸುವವರಿಗೂ ಹೇಳಿ ಮಾಡಿಸಿದ ತಾಣವಾಗಿದೆ. ಏಕೆಂದರೆ ಇಲ್ಲಿ ಮುಂಜಾನೆಯ ಸೂರ್ಯೋದಯ ಹಾಗೂ ಸಂಜೆಯ ಸೂರ್ಯಾಸ್ತಗಳು ಸ್ವರ್ಗಕ್ಕೆ ಕಿಚ್ಚು ಹಚ್ಚಿದಂತಿರುತ್ತದೆ. ಮುಂಜಾನೆ ಮೂಡಿ ಬರುವ ಸೂರ್ಯನ ಕಿರಣಗಳಿಂದ ದೇವಾಲಯ ಗುಲಾಬಿ, ಕಿತ್ತಳೆ ಮತ್ತು ಚಿನ್ನದ ಬಣ್ಣದಲ್ಲಿ ಕಂಗೊಳಿಸಿ ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಇದಲ್ಲದೇ ಅಂಕೋರ್ ವಾಟ್ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನೂ ಹೊಂದಿದೆ. ಅಷ್ಟೇ ಅಲ್ಲದೇ ಈ ದೇವಾಲಯದಲ್ಲಿ ಧಾರ್ಮಿಕ ಚಟುವಟಿಕೆಗಳು ಕೂಡ ಸಕ್ರಿಯವಾಗಿ ನಡೆಯುತ್ತವೆ. ಬೌದ್ಧ ಸನ್ಯಾಸಿಗಳು ಮತ್ತು ವಿಷ್ಣು ಭಕ್ತರು ನಿರಂತರವಾಗಿ ಇಲ್ಲಿ ಧ್ಯಾನ, ಪ್ರಾರ್ಥನೆ ಮುಂತಾದವುಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಅಂಕೋರ್ ವಾಟ್ ದೇವಾಲಯದ ಅದೆಷ್ಟೋ ಅದ್ಭುತಗಳು, ರಹಸ್ಯಗಳು ಇಂದಿಗೂ ಎಲೆಮರೆಯ ಕಾಯಿಯಾಗೇ ಉಳಿದಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.