ರಾಜಸ್ಥಾನದಲ್ಲೊಂದು ನಿಗೂಢ ತಾಣ; ರಾತ್ರೋರಾತ್ರಿ ಊರಿಗೂರೇ ಖಾಲಿ!

By Suvarna NewsFirst Published Apr 19, 2022, 3:58 PM IST
Highlights

ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಕುಲ್ಧಾರಾದಲ್ಲಿ ರಹಸ್ಯವೊಂದು ಅಡಗಿದೆ. ಆ ರಹಸ್ಯವೇ ಯಾತ್ರಿಗಳನ್ನು ಅಲ್ಲಿಗೆ ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. 

ರಾಜಸ್ಥಾನ(Rajasthan)ದಲ್ಲೊಂದು ನಿಗೂಢ ಊರಿದೆ. 13ನೇ ಶತಮಾನದಿಂದಲೂ ಅಲ್ಲಿ ಜನರು ವಾಸವಿದ್ದರು. ಆದರೆ 19ನೇ ಶತಮಾನದ ಒಂದು ರಾತ್ರಿ ಇದ್ದಕ್ಕಿದ್ದಂತೆ ಊರಿಗೂರೇ ಖಾಲಿಯಾಯಿತು. ಅಂದಿನಿಂದಲೂ ಈ ಊರು ಖಾಲಿಯಾಗಿಯೇ ಇದೆ. ಆದರೆ ಏಕೆ ಹೀಗಾಯ್ತು? ರಾತ್ರೋ ರಾತ್ರಿ ಊರಿಗೂರೇ ವಲಸೆ ಹೋಗಲು ಕಾರಣವೇನು? ಅವರೆಲ್ಲ ಎಲ್ಲಿಗೆ ಹೋದರು? ನಂತರದಲ್ಲಿ ಏನಾದರು? ಊಹೂಂ.. ಮುರಿದು ಬಿದ್ದ ಕಿಟಕಿಗಳು, ಅಗಲವಾದ ಅಂಗಳ, ತೆರೆದ ಮಹಡಿಗಳು.. ತಾವು ಸಾಕ್ಷಿಯಾದ ಕತೆಯನ್ನು ಯಾರಿಗೂ ಹೇಳುವುದಿಲ್ಲವೆಂದು ಬಾಯ್ಬಿಗಿದು ಕುಳಿತಿವೆ. ಈಗೇನಿದ್ದರೂ ಈ ಊರನ್ನ ರಕ್ಷಣಾ ವಲಯದ ಹಾಗೆ ನೋಡಿಬರುವುದಷ್ಟೇ ನಮ್ಮ ಪಾಲಿಗೆ ಉಳಿದಿರುವುದು. 

ಹೌದು, ರಾಜಸ್ಥಾನದ ಜೈಸಲ್ಮೇರ್‌ ಜಿಲ್ಲೆಯಲ್ಲಿರುವ ಕುಲ್ಧಾರಾ(Kuldhara) ಎಂಬ ಊರು ಇಂಥ ನಿಗೂಢವನ್ನು ತನ್ನೊಡಲಲ್ಲಿ ಕಾಪಾಡಿಕೊಂಡು ಬರುತ್ತಿದೆ. ಸದ್ಯ ಈ ನಿಗೂಢತೆ(Mystery)ಯ ಕಾರಣಕ್ಕೇ ಪ್ರವಾಸಿಗರನ್ನು ಸೆಳೆಯುತ್ತಿರುವುದರಿಂದ ಊರಿಗೆ ತನ್ನ ಕತೆ ಹೇಳುವ ಮನಸ್ಸಿಲ್ಲದೆ ಇರಬಹುದು. 

1291ರಲ್ಲಿ ಮೂಲತಃ ಈ ಹಳ್ಳಿಯನ್ನು ಸ್ಥಾಪಿಸಿದ್ದು ಪಲಿವಾಲ ಬ್ರಾಹ್ಮಣರು. ಕೃಷಿಯಲ್ಲಿ ವಿಪರೀತ ಜ್ಞಾನ ಹೊಂದಿದ್ದ ಈ ಬ್ರಾಹ್ಮಣರು ಮರಭೂಮಿಯಲ್ಲೂ ಹೆಚ್ಚಿನ ಫಸಲು ತೆಗೆಯುತ್ತಿದ್ದರು. ಆದರೆ, 19ನೇ ಶತಮಾನದ ಒಂದು ರಾತ್ರಿ ಇವರೆಲ್ಲರೂ ಮನೆ ಮಠ, ಹೊಲಗದ್ದೆಗಳನ್ನು ಬಿಟ್ಟು ಹೇಳಕೇಳದೆ ಮಾಯವಾದರು. ಅವರು ತೊರೆದ ನಂತರ ಕಳೆದ 170 ವರ್ಷಗಳಿಂದ ಪೂರ್ತಿಯಾಗಿ ಖಾಲಿಯಾಗಿರುವ ಕುಲ್ದಾರಾ ಶಾಪಗ್ರಸ್ಥ ಊರು ಎಂಬ ಕಳಂಕವನ್ನು ಹೊತ್ತುಕೊಂಡಿದೆ. 

World Heritage Day 2022: ಭಾರತದ ಐದು ಪ್ರಮುಖ ವಿಶ್ವ ಪಾರಂಪರಿಕ ತಾಣ ಯಾವುದು ತಿಳ್ಕೊಳ್ಳಿ

ಅಂತೆಕಂತೆಗಳು
ಕೆಲವರಂತಾರೆ, ಇಲ್ಲಿ ಕೆಟ್ಟ ಶಕ್ತಿ ಅಡಗಿದೆ. ಭೂತಪ್ರೇತದ ಕಾಟ ತಾಳಲಾಗದೆ ಊರಿನ ಜನರು ಮನೆ ಬಿಟ್ಟು ಹೋದರೆಂದು. ಮತ್ತೆ ಕೆಲ ಊಹಾಪೋಹಾಗಳ ಪ್ರಕಾರ, ಭೂಕಂಪನದಂಥ ಯಾವುದೋ ಪ್ರಾಕೃತಿಕ ವಿಕೋಪಕ್ಕೆ ಹೆದರಿ ಜನ ಊರು ಬಿಟ್ಟಿದ್ದಾರೆ ಎಂದು. ಇನ್ನೊಂದು ಕತೆಯ ಪ್ರಕಾರ, 1825ರ ಕಾಲದಲ್ಲಿ ದಿವಾನ್ ಸಲೀಂ ಸಿಂಗ್ ಎಂಬಾತ ಇಲ್ಲಿ ತೆರಿಗೆ ಸಂಗ್ರಹಕ್ಕೆ ಬರುತ್ತಿದ್ದನಂತೆ.  ಇವನಿಗೆ ಈ ಗ್ರಾಮದ ಮುಖಂಡನ ಸ್ಫುರದ್ರೂಪಿ ಮಗಳ ಮೇಲೆ ಪ್ರೀತಿ ಹುಟ್ಟಿತ್ತಂತೆ. ಒತ್ತಾಯಪೂರ್ವಕವಾಗಿ ಆಕೆಯನ್ನು ವಿವಾಹವಾಗಲು ಬಯಸಿದ್ದ ಸಿಂಗ್‌ನಿಂದ ತಪ್ಪಿಸಿಕೊಳ್ಳಲು ಊರಿನ ಮುಖಂಡನು ತನ್ನಿಡೀ ಸಮುದಾಯವನ್ನು, ಸುತ್ತಣ 86 ಹಳ್ಳಿಗರನ್ನು ಕರೆದುಕೊಂಡು ರಾತ್ರೋರಾತ್ರಿ ಊರು ಬಿಟ್ಟ. ಇದಂತೂ ಬಹಳ ಫಿಲ್ಮೀ ಎನಿಸುತ್ತದಲ್ಲವೇ?

ಇನ್ನೂ ಒಂದು ಕತೆಯಿದೆ.. ಅದರಂತೆ ಇದೇ ಸಲೀಂ ಸಿಂಗ್ ಬ್ರಾಹ್ಮಣರ ಸಮುದಾಯ ಮುಖಂಡನ ಮಗಳನ್ನು ವಿವಾಹ ಮಾಡಿಕೊಳ್ಳಲು ಬಯಸಿದನಂತೆ. ಇದಕ್ಕೆ ಯಾರೂ ಒಪ್ಪದಿದ್ದಾಗ ಕುಲ್ದಾರಾ ಸೇರಿದಂತೆ ಸುತ್ತಣ ಊರುಗಳ ಜನರಿಗೆ ವಿವಿಧ ರೀತಿಯ ಕಾಟ ಕೊಟ್ಟಿದ್ದಲ್ಲದೆ ತೆರಿಗೆಯನ್ನು ಕಟ್ಟಲಾಗದಷ್ಟು ಏರಿಸಿದನಂತೆ. ಅಷ್ಟೊಂದು ತೆರಿಗೆ ಕಟ್ಟಲಾಗದ ಜನರು ಸಭೆ ಸೇರಿ ಗ್ರಾಮ ತೊರೆಯುವ ಯೋಚನೆ ಮಾಡಿ,  ರಾತ್ರೋರಾತ್ರಿ ಇದಕ್ಕಿದ್ದಂತೆ ಹಳ್ಳಿ ತೊರೆದರು. ಅಲ್ಲದೇ ಇಲ್ಲಿ ಯಾರೇ ಬಂದು ನೆಲೆಸಿದರೂ ಸಾವು ಬರಲೆಂದು ಶಪಿಸಿದರಂತೆ. ಹೀಗಾಗಿ ಇದುವರೆಗೂ ಇಲ್ಲಿ ಯಾರೂ ವಾಸಿಸುವ ಬಗ್ಗೆ ಯೋಚಿಸಿಲ್ಲ ಎನ್ನಲಾಗಿದೆ.
ಆದರೆ ಈವರೆಗೂ ಪಲಿವಾಲ ಬ್ರಾಹ್ಮಣರು ಎಲ್ಲಿ ಹೋಗಿ ನೆಲೆಸಿದರು ಎಂಬ ಬಗ್ಗೆ ಮಾಹಿತಿಯೂ ಇಲ್ಲ ಎಂಬುದು ಕೊಂಚ ಅಚ್ಚರಿಗೆ ಕಾರಣವಾಗುತ್ತದೆ. 

ಪುರುಷರ ಬಗ್ಗೆ ಮಹಿಳೆಯರು ಅಂದುಕೊಂಡಿರುವ ಈ ವಿಚಾರಗಳು ನಿಜವಲ್ಲ !

ಮತ್ತೂ ಒಂದು ಕತೆ ಪ್ರಕಾರ, ಪ್ಲೇಗ್ ಮಹಾಮಾರಿಗೆ ಹೆದರಿ ಜನರು ಊರು ತೊರೆದರು.  ಈಗ ಅಲ್ಲಿ ಉಳಿದಿರುವುದು ಕಟ್ಟಡ, ಮನೆಗಳ ಅವಶೇಷಗಳು ಮಾತ್ರ. ಇಲ್ಲಿ ಯಾರೂ ವಾಸಿಸದ ಕಾರಣ ಈ ಸ್ಥಳವನ್ನು ರಾಜಸ್ಥಾನ ಸರಕಾರ ಪಾರಂಪರಿಕ ತಾಣವನ್ನಾಗಿ ಘೋಷಿಸಿದೆ. ಈ ರಹಸ್ಯ ತಾಣವನ್ನು ನೋಡಲು ದೇಶ ವಿದೇಶದಿಂದ ಪ್ರವಾಸಿಗರು ಬರುತ್ತಾರೆ.

click me!