ವಿಶ್ವ ಪರಂಪರೆ ತಾಣ ಹಂಪಿಯಲ್ಲಿ ಅಂಬಾರಿ ವಿಹಾರ

By Suvarna News  |  First Published Jul 1, 2022, 11:11 AM IST

ಐತಿಹಾಸಿಕ ಹಂಪಿ (Hampi) ಅಂದ್ರೇ ಯಾರಿಗೆ ತಾನೇ ಇಷ್ಟವಿಲ್ಲ. ಹಂಪಿಯ ಸ್ಮಾರಕದ ಸೌಂದರ್ಯ (Beauty) ವಿಜಯನಗರದ (Vijayanagara) ಇತಿಹಾಸ ಕೇಳಲು ಮತ್ತು ನೋಡಲು ಎಲ್ಲರಿಗೂ ಬಲು ಇಷ್ಟ. ಸದ್ಯ ಈ ಹಂಪಿ ಮತ್ತಷ್ಟು ಆಕರ್ಷಣೆಯನ್ನು ಪಡೆದುಕೊಂಡಿದೆ. ಯಾಕಂದ್ರೆ ಇನ್ಮುಂದೆ ಹಂಪಿಯಲ್ಲಿ ಅಂಬಾರಿ (Ambari) ವಿಹಾರ ಕೂಡಾ ಲಭ್ಯವಿರಲಿದೆ. 


ವಿಶ್ವ ಪರಂಪರೆ ತಾಣ ಹಂಪಿಯ (Hampi)  ಸ್ಮಾರಕಗಳ ವೀಕ್ಷಣೆಗೆ ಈಗ ಪ್ರವಾಸಿಗರು ಅಂಬಾರಿ (Ambari)ಯಲ್ಲಿ‌ ಕುಳಿತು ವೀಕ್ಷಿಸಬಹುದು. ಹೌದು, ಇದು ಮೈಸೂರಿನ ಅಂಬಾರಿಯಲ್ಲ. ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಈಗ ಅಂಬಾರಿ ಬಸ್ ಅನ್ನು ಹಂಪಿಯಲ್ಲಿ ಪರಿಚಯಿಸುತ್ತಿದೆ. ತುಂಗಭದ್ರಾ ಜಲಾಶಯ, ಅಟಲ್ ಬಿಹಾರಿ ವಾಜಪೇಯಿ ಜೂಲಾಜಿಕಲ್ ಪಾರ್ಕ್ ಸೇರಿದಂತೆ ಹಂಪಿ ಸ್ಮಾರಕಗಳ ವೀಕ್ಷಣೆಗೆ ಯೋಜನೆ ರೂಪಿಸಲಾಗುತ್ತಿದೆ.

ಹಂಪಿ ಅಭಿವೃದ್ಧಿ ಪ್ರಾಧಿಕಾರದ ಜತೆಗೂಡಿ  ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಅಂಬಾರಿ ಬಸ್ ಪರಿಚಯಿಸುತ್ತಿದೆ. ಹಂಪಿಯಲ್ಲಿ ಈ ಬಸ್ ಸಂಚರಿಸುವಾಗ ವಿದ್ಯುತ್ ತಂತಿ ಹಾಗು ಮರಗಿಡಗಳು ಅಡ್ಡಿಯಾಗಲಿವೆಯೇ ಎಂಬುದನ್ನು ಪ್ರಾಯೋಗಿಕವಾಗಿ ನಿನ್ನೆ ಅಂಬಾರಿ ಬಸ್ ಓಡಿಸಲಾಯಿತು. ಈ ಬಸ್ ನಲ್ಲಿ ಪ್ರಾಧಿಕಾರದ ಆಯುಕ್ತ ಸಿದ್ದರಾಮೇಶ್ವರ, ಆರ್ ಎಫ್ ಒ ವಿನಯ್, ಜೆಸ್ಕಾಂ ಅಧಿಕಾರಿ ಉಮೇಶ್, ಆರ್ ಟಿಒ ಇನ್ಸ್ ಪೆಕ್ಟರ್ ಸಂದೀಪ್ ಮತ್ತಿತರರು ಸಂಚರಿಸಿದರು.

Latest Videos

undefined

ಹಂಪೀಲಿ ಕುಡಿವ ನೀರಿಗೆ ಬರ: ಪ್ರವಾಸಿಗರ ಪರದಾಟ..!

ಬಳ್ಳಾರಿ ಜಿಲ್ಲೆಯ ಹಂಪೆಯನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣ ಎಂದು ಗುರುತಿಸಿದೆ, ವಿಶ್ವದ ಪ್ರಮುಖ ಪರಂಪರೆಯ ತಾಣಗಳಲ್ಲಿ ಹಂಪಿಗೆ ಸ್ಥಾನವನ್ನು ನೀಡಿದ್ದು ಕನ್ನಡಿಗರ ಹೆಮ್ಮೆ. ಹಂಪಿಯ ಗತವೈಭವದ ಅದ್ಭುತವಾಗಿದೆ.  ಹಂಪೆ ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಬಳಿ ಇರುವ ಈ ಊರು, 1336ರಿಂದ 1565ರವರೆಗೆ ಇದು ವಿಜಯನಗರ ಸಾಮ್ರಾಜ್ಯದ ರಾಜಧಾನಿ ಆಗಿತ್ತು. ಹಂಪೆಯ ಮೊದಲನೆ ಹೆಸರು ‘ಪಂಪ’ ಎಂದಿತ್ತು, ಅಂದರೆ ತುಂಗಭದ್ರ ನದಿ ಎಂದರ್ಥ. ವರ್ಷಗಳು ಕಳೆದಂತೆ ಇದು ‘ವಿಜಯನಗರ’ ಮತ್ತು ‘ವಿರುಪಾಕ್ಷಪುರ’ ಎಂಬ ಹೆಸರಿನಿಂದ ಕರೆಯಲ್ಪಟ್ಟಿತು. 

ವಿಜಯನಗರ ಸಾಮ್ರಾಜ್ಯದ  ಯಶಸ್ವಿ ಒಡೆಯನಾದ ಕೃಷ್ಣದೇವರಾಯನ ಕಾಲದಲ್ಲಿ ಹಂಪೆ ಬಜಾರ್ ಎಂದೆನ್ನಿಸಿ ಕೊಂಡ ಬೀದಿಯಲ್ಲಿ ವಜ್ರಾಭರಣಗಳನ್ನು ತೂಕದ ಮಾದರಿಯಲ್ಲಿ ಮಾರಲ್ಪಡುತ್ತಿದ್ದರಂತೆ. ಕೃಷ್ಣದೇವರಾಯನ ರಾಜ್ಯಭಾರ ಮುಗಿದ ನಂತರ ವಿಜಯನಗರ ಸಾಮ್ರಾಜ್ಯ ತನ್ನ ಪ್ರಾಬಲ್ಯವನ್ನು ನಿಧಾನವಾಗಿ ಕಳೆದು ಕೊಳ್ಳುತ್ತಾ ಬಂತು ಎಂದು ಇತಿಹಾಸದಲ್ಲಿ ಹೇಳಲಾಗಿದೆ. ಕೊನೆಗೆ ತಾಳೀಕೋಟೆಯ ಯುದ್ಧದಲ್ಲಿ ಮುಸ್ಲಿಂ ಸಾಮ್ರಾಜ್ಯದಿಂದ ಬಂದ ಆಕ್ರಮಣವನ್ನು ತಡೆಯದೆ ಅಂತ್ಯಗೊಂಡಿತು. ಹಂಪೆಯಲ್ಲಿದ್ದ ಅನೇಕ ಸ್ಮಾರಕಗಳು ನಾಶವಾದವು.

ಇಂದು ವಿರೂಪಾಕ್ಷ ದೇವಾಲಯ, ಹಜಾರ ರಾಮ ದೇವಸ್ಥಾನ, ಸಪ್ತಸ್ವರ ಸಂಗೀತ ಹೊರಹೊಮ್ಮಿಸುವ ಕಲ್ಲಿನ ಕಂಭಗಳು, ವಿಶ್ವವಿಖ್ಯಾತ ಕಲ್ಲಿನ ರಥ,ಮಹಾನವಮಿ ದಿಬ್ಬ, ಸಾಸಿವೆ ಕಾಳು ಗಣಪತಿ, ಉಗ್ರ ನರಸಿಂಹ, ಕಮಲ ಮಹಲ್ , ಬಡವಿ ಲಿಂಗ, ಅನೆ ಲಾಯ ಹೀಗೆ ಹಲವಾರು ಪ್ರೇಕ್ಷಣಿಯ ಸ್ಥಳಗಳನ್ನು ಹಂಪಿಯಲ್ಲಿ ನೋಡಬಹುದಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿ ಹಂಪಿಯನ್ನು ಕಣ್ತುಂಬಿಕೊಳ್ಳುತ್ತಾರೆ. 

click me!