ಸತ್ತು ವರ್ಷಗಳಾದ ಮೇಲೆ ಇಲ್ಲಿ ಶವಗಳು ಮಾರ್ನಿಂಗ್ ವಾಕ್ ಹೊರಡುತ್ತವೆ!

By Suvarna NewsFirst Published Dec 10, 2019, 3:54 PM IST
Highlights

ಹೌದು ಸ್ವಾಮಿ, ಇಲ್ಲಿ ಶವಗಳು ಮೂರು ವರ್ಷಕ್ಕೊಮ್ಮೆ ಸಮಾಧಿಯಿಂದೆದ್ದು ಬಂದು ಹೊಸ ಬಟ್ಟೆ ತೊಟ್ಟು ಸಿಂಗರಿಸಿಕೊಂಡು ಊರೆಲ್ಲ ವಾಕ್ ಮಾಡುತ್ತವೆ. ಅವುಗಳ ಸಂಬಂಧಿಕರು ಹೆದರಿ ಓಡದೆ ಆ ಸ್ಪಿರಿಟ್ಟನ್ನು ತುಂಬು ಮನಸ್ಸಿನಿಂದ ಆಹ್ವಾನಿಸುತ್ತಾರೆ. 

ಯಾರಾದರೂ ಸತ್ತರೆ ಮತ್ತೆ ಬರುವುದಿಲ್ಲ. ಒಮ್ಮೆ ಹೋದವರು ಮತ್ತೆಂದೂ ಮರಳಲಾರರು. ಪ್ರೀತಿಪಾತ್ರರು ದೂರಾದಾಗ ನಾವು ಅವರನ್ನು ನೆನೆಸಿಕೊಂಡು ಅಳುತ್ತೇವೆ. ಅವರು ಬಳಸುತ್ತಿದ್ದ ವಸ್ತುಗಳಲ್ಲಿ ಅವರನ್ನು ಕಾಣುತ್ತೇವೆ. ಅವರ ಫೋಟೋ ನೋಡಿ ನೆನೆಸಿಕೊಳ್ಳುತ್ತೇವೆ. ಇನ್ನೂ ಹೆಚ್ಚೆಂದರೆ ಅವರ ಸಮಾಧಿಯ ಬಳಿ ಹೋಗಿ ಸ್ವಲ್ಪ ಹೊತ್ತು ಕುಳಿತೆದ್ದು ಬರುತ್ತೇವೆ.

ವರ್ಷಕ್ಕೊಮ್ಮೆ ಕರೆದು ಅವರ ಹೆಸರೇಳಿ ಕಾಗೆಗೆ ಊಟ ಹಾಕುತ್ತೇವೆ. ಅವರ ನೆನಪಿನಲ್ಲಿ ದಾನಧರ್ಮ ಮಾಡುತ್ತೇವೆ  ಅಲ್ಲವೇ? ಆದರೆ, ಈ ಜನರು ಹಾಗಲ್ಲ. ಅವರ ಊರಿನಲ್ಲಿ ಸತ್ತವರು ಎದ್ದು ಬರುತ್ತಾರೆ. ಇವರೊಂದಿಗೆ ಊರೆಲ್ಲ ವಾಕ್ ಮಾಡುತ್ತಾರೆ! ಅರೆ, ಇದೆಲ್ಲ ಹೆೇಗೆ ಸಾಧ್ಯ, ಯಾರಪ್ಪಾ ಇವರು ಎಂದು ನೀವು ಆಶ್ಚರ್ಯಪಡುತ್ತಿದ್ದೀರಾ? 

ಈಜಿಪ್ಟಿನ ಮಮ್ಮಿಯ ಕತೆಯನ್ನೋ, ಪ್ರಯೋಗಕ್ಕಾಗಿ ಶವವನ್ನು ಕಾಪಿಟ್ಟುಕೊಳ್ಳುವ ವಿಜ್ಞಾನಿಗಳ ಸುದ್ದಿಯನ್ನೋ ನಾನಿಲ್ಲಿ ಹೇಳುತ್ತಿಲ್ಲ. ನಾನು ಹೇಳುತ್ತಿರುವುದು ಇಂಡೋನೇಶ್ಯಾದ ದಕ್ಷಿಣ ಸುಲವೇಸಿಯ ತೋರಜಾ ಸಮುದಾಯದ ಬಗ್ಗೆ. 

ಆಚರಣೆ

ಈ ಸಮುದಾಯದವರಿಗೆ ಸತ್ತವರ ಆತ್ಮವನ್ನು ಈ ಲೋಕಕ್ಕೆ, ಅವರು ಬದುಕಿದ್ದ ಜಾಗಕ್ಕೆ ಮತ್ತೆ ತರುವುದರಲ್ಲಿ ನಂಬಿಕೆ. ಅದೂ ಅವರದೇ ಹೂತ ದೇಹದ ಮೂಲಕ! ನಾವು ನೀವಾದರೆ ಹೀಗೆ ಬಂದ ಆತ್ಮ ನೋಡಿ ದೆವ್ವ ಎಂದು ಕಿರುಚಿಕೊಂಡು ಓಡಿ ಹೋಗುತ್ತಿದ್ದೆವೇನೋ, ಆದರೆ ಇವರು ಸಂತೋಷದಿಂದ ಅವನ್ನು ಬರ ಮಾಡಿಕೊಳ್ಳುತ್ತಾರೆ. ಇದೊಂತರಾ ಧೈರ್ಯಕ್ಕೆ ಸವಾಲೆಸೆವಂಥ ಆಟದಂತೆ ನಮಗೆ ಕಾಣಬಹುದು. ಅವರಿಗಿದು ಆಚರಣೆ.

ಯಾರಪ್ಪಾ ತೋರಜಾ?

ಇಂಡೋನೇಶ್ಯಾದ ಸುಲವೆಸಿ ದ್ವೀಪದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬದುಕಿರುವ ಸಮುದಾಯವೇ ತೋರಜ. ಪರ್ವತ ಹಾಗೂ ಸಮುದ್ರ ಪ್ರದೇಶದಿಂದ ಕೂಡಿರುವ ಈ ಸ್ಥಳದಲ್ಲಿ ಪ್ರತಿದಿನ ಅತಿಯಾದ  ಬಿಸಿಲು ಹಾಗೂ ಮಳೆ ಕಾಮನ್. 1906ರಲ್ಲಿ ಡಚ್ಚರು ತಮ್ಮ ನೆಲವನ್ನು ಆಕ್ರಮಿಸುವವರೆಗೂ ಈ ತೋರಜನ್ನರಿಗೆ ಹೊರಪ್ರಪಂಚದ ಜೊತೆ ಸಂಪರ್ಕವೇ ಇರಲಿಲ್ಲ. ತಮ್ಮ ಪೂರ್ವಜರು ಸ್ವರ್ಗವಾಸಿಗಳಾಗಿದ್ದು, ದೇವರ ಮೆಟ್ಟಿಲುಗಳನ್ನು ಬಳಸಿ ಭೂಮಿಗಿಳಿದು ಬಂದಿದ್ದಾರೆ ಎಂಬುದು ಇವರ ನಂಬಿಕೆ. ಇವರು ಸತ್ತವರನ್ನು ನೋಡುವ ಬಗೆಯೇ ವಿಶಿಷ್ಠವಾದುದು. 

ಏರ್‌ಲೈನ್ಸ್‌ನಲ್ಲಿ ಬಿಕಿನಿ ಬೆಡಗಿಯರು; ನಗ್ನರಾಗೋಕೆ ಇಲ್ಲಿದೆ ಸ್ವಾತಂತ್ರ್ಯ!

ಹಾಗಾದರೆ ಅವರೇನು ಮಾಡುತ್ತಾರೆ? 

ಪ್ರೀತಿಪಾತ್ರರು ಮೃತ ಪಟ್ಟಾಗ ನಮ್ಮೆಲ್ಲರಂತೆ ಅವರೂ ಕೂಡಾ ಶವವನ್ನು ಹೂಳುತ್ತಾರೆ. ಆದರೆ ತಕ್ಷಣಕ್ಕಲ್ಲ. ಸಾಮಾನ್ಯರು ಆ ಶವವನ್ನು ವಾರಗಟ್ಟಲೆ, ತಿಂಗಳುಗಟ್ಟಲೆ ಮನೆಯಲ್ಲಿಟ್ಟುಕೊಂಡು ಅದು ಬದುಕಿರುವಂತೆಯೇ ನಡೆಸಿಕೊಳ್ಳುತ್ತಾರೆ. ಶ್ರೀಮಂತರೆನಿಸಿಕೊಂಡವರು ವರ್ಷಗಟ್ಟಲೆ ಆ ಶವದೊಂದಿಗೆ ಬಾಳಿ ಕಡೆಗದನ್ನು ಹೂಳುತ್ತಾರೆ. ಅಲ್ಲಿಯವರೆಗೂ ಅವಕ್ಕೆ ಪ್ರತಿದಿನ ಊಟ ಕೊಡುತ್ತಾರೆ, ಬಟ್ಟೆ ಬದಲಿಸುತ್ತಾರೆ. ನೊಣಗಳು ಹತ್ತಿರ ಬಂದರೆ ಅವನ್ನು ಓಡಿಸುತ್ತಾರೆ. ಹೂಳಿದ ನಂತರದಲ್ಲಿ ಪ್ರತಿ ಮೂರು ವರ್ಷಗಳಿಗೊಮ್ಮೆ ತಮ್ಮ ಪ್ರೀತಿಪಾತ್ರರ ಶವವನ್ನು ಬಗೆದು ತೆಗೆದು ಊರ ತುಂಬಾ ಮೆರವಣಿಗೆ ನಡೆಸುತ್ತಾರೆ. ಶವವನ್ನು ನಿಲ್ಲಿಸುತ್ತಾರೆ. ಅದರೊಂದಿಗೆ ನಿಂತು ಮಾತನಾಡುತ್ತಾರೆ. ಬಹಳ ಪ್ರೀತಿಯಿಂದ ನಡೆಸಿಕೊಳ್ಳುತ್ತಾರೆ. 
ಯಬ್ಬೋ!

ಇದೆಂಥ ಸಾಮಿ, ಎಂದೋ ಮಲಗಿದ ಶವ ಬೆಳ್ಳಂಬೆಳಗ್ಗೆ ಎದ್ದು ಊರೆಲ್ಲ ಮಾರ್ನಿಂಗ್ ವಾಕ್ ಮಾಡುತ್ತದಾ, ಕೊಳೆತು ನಾರುವುದಿಲ್ಲವಾ ಎಂದೆಲ್ಲ ನಿಮಗೆ ಡೌಟ್ ಬಂದಿರಬೇಕು. 
ಇವರು ಶವವನ್ನು ಮನೆಯಲ್ಲಿಟ್ಟುಕೊಂಡಾಗ ಹಾಗೂ ಮತ್ತೆ ಹೊರ ತೆಗೆದಾಗ ಅದಕ್ಕೆ ಫಾರ್ಮಾಲ್‌ಡಿಹೈಡ್ ಹಾಗೂ ನೀರು ಹಾಕಿ ಮಮ್ಮಿಯಂತೆ ಕಾಪಿಟ್ಟುಕಳ್ಳುತ್ತಾರೆ. ಸಮಾಧಿಯಿಂದ ತೆಗೆದ ಮೇಲೆ ಅದನ್ನು ಸ್ವಚ್ಛಗೊಳಿಸುತ್ತಾರೆ. ಹುಳುವಾಗಿದ್ದರೆ ಅವನ್ನೆಲ್ಲ ತೆಗೆದು ಮಣ್ಣನ್ನು ತೊಳೆಯುತ್ತಾರೆ. ಮೇಲಿನಿಂದ ಹೊಸ ಬಟ್ಟೆ ತೊಡಿಸುತ್ತಾರೆ. ನಂತರ ಅವರನ್ನು ಮಲಗಿಸಿದ ಕೊಫಿನ್‌ಗಳನ್ನೂ ಅಷ್ಟೇ ಮುತುವರ್ಜಿಯಿಂದ ಸ್ವಚ್ಛ ಮಾಡುತ್ತಾರೆ. ಅದೆಲ್ಲಾದರೂ ಹಾನಿಗೊಳಗಾಗಿದ್ದರೆ ಸರಿಪಡಿಸುತ್ತಾರೆ. ಈ ಆಚರಣೆಗೆ ಮಾಯೆನ್ ಎಂದು ಹೆಸರು. 

'ಕನ್ಯತ್ವ ಪರೀಕ್ಷೆ'ಎಂಬ ದುಷ್ಟಪದ್ಧತಿ ಎಷ್ಟೆಲ್ಲ ವಿಕೃತಿ ಹೊಂದಿದೆ ಕೇಳಿದ್ರೆ ಶಾಕ್ ಆಗ್ತೀರಾ!

ಕಾಸ್ಟ್ಲಿ ಅಂತ್ಯಕ್ರಿಯೆ

ಇವರಿಗೆ ಸಾವೆಂಬುದು ಭಯವಲ್ಲ, ತಮ್ಮ ಜೀವಿತದ ಭಾಗ, ಸತ್ತವರನ್ನು ಗೌರವಿಸಿ, ಆಧರಿಸಿ ಮುಂದಿನ ಜನ್ಮಕ್ಕೆ ಅಣಿಗೊಳಿಸುವ ನಂಬಿಕೆ. ಸತ್ತಿರುವುದು ಮಗುವೇ ಆಗಲಿ, ಮುದಿಜೀವವೇ ಆಗಲಿ, ಶವಸಂಸ್ಕಾರ ಇವರಲ್ಲಿ ಸ್ಟೇಟಸ್‌ನ ವಿಚಾರ. ಸಾಲ ಮಾಡಿಯಾದರೂ ಸರಿ, ಎಲ್ಲ ಬಂಧುಬಾಂಧವರನ್ನೂ ಕರೆದು ಊಟ ಹಾಕಿಸುತ್ತಾರೆ. ಕೋಣ ಬಲಿ ಕೊಡುತ್ತಾರೆ. ಕೋಣವು ಇವರನ್ನು ಮುಂದಿನ ಜೀವನಕ್ಕೆ ಕರೆದುಕೊಂಡು ಹೋಗುವ ಮಾಧ್ಯಮ ಎಂಬುದು ಇವರ ನಂಬಿಕೆ. ಬಡ ತೋರಜರು ಅಂತ್ಯಸಂಸ್ಕಾರವೊಂದಕ್ಕೆ 50,000 ಡಾಲರ್‌ನಷ್ಟು ಖರ್ಚು ಮಾಡಿದರೆ, ಶ್ರೀಮಂತರು ಬರೋಬ್ಬರಿ 500,000 ಡಾಲರ್‍‌ನಷ್ಟು ಖರ್ಚು ಮಾಡುತ್ತಾರೆ. ಹೀಗೆ ಮಣ್ಣು ಮಾಡುವ ಕ್ರಿಯೆಗಳು ಸತ್ತ ವ್ಯಕ್ತಿಯ ಪ್ರಾಮುಖ್ಯತೆಗೆ ಅನುಗುಣವಾಗಿ ಕೆಲ ದಿನಗಳಿಂದ ಹಿಡಿದು ಕೆಲ ವಾರಗಳವರೆಗೆ ಮುಂದುವರಿಯಬಹುದು. 

ಈ ಸಂದರ್ಭದಲ್ಲಿ ಸಾಮೂಹಿಕ ಪ್ರಾರ್ಥನೆ,  ಹಾಡು, ನೃತ್ಯಗಳು, ದುಃಖ ವ್ಯಕ್ತಪಡಿಸುವುದು, ಕೋಣ ಬಲಿ, ಕೋಳಿಪಡೆಗಳು ನಡೆಯುತ್ತವೆ. ಹೆಚ್ಚು ಕೋಣಗಳ ಬಲಿ ಕೊಟ್ಟಷ್ಟೂ ಹೆಚ್ಚು ಬೇಗ ಸತ್ತ ವ್ಯಕ್ತಿಗೆ ಮುಕ್ತಿ ಸಿಗುತ್ತದೆ ಎಂಬುದು ಇವರ ನಂಬಿಕೆ. ಇನ್ನು ಕಡೆಯ ದಿನ ಹೆಣವನ್ನು ಹೂಳಲು ಪರ್ವತದ ಬದಿಯನ್ನು ಆಯ್ದುಕೊಳ್ಳಲಾಗುತ್ತದೆ. ನೆಲಮಟ್ಟದಿಂದ 100 ಅಡಿಗೂ ಹೆಚ್ಚು ಎತ್ತರದ ಸಮಾಧಿಯಂಥ ರಚನೆಯೊಳಗೆ ಮಲಗಿಸಲಾಗುತ್ತದೆ. ಇದರ ಎತ್ತರ ಕೂಡಾ ಸ್ಟೇಟಸ್ ಪ್ರಶ್ನೆ. ಹೆಚ್ಚು ಎತ್ತರವಿದ್ದಷ್ಟೂ ಹೆಚ್ಚು ವಿಜೃಂಭಣೆಯಿಂದ ಅಂತ್ಯಸಂಸ್ಕಾರ ನಡೆಸಿದಂತೆ. 

ಶಿಶು ಸತ್ತರೆ ಮರದಲ್ಲಿ ಬಂಧಿ

ಮಕ್ಕಳು ಹಲ್ಲು ಬರುವ ಮುನ್ನವೇ ಸಾವನ್ನಪ್ಪಿದರೆ ಅವನ್ನು ಮರದೊಳಗಿನ ಪೊಟರೆಯೊಳಗೆ ಸಂಸ್ಕಾರ ಮಾಡಲಾಗುತ್ತದೆ. ಮರದೊಂದಿಗೆ  ಅವೂ ಮತ್ತೆ ಬೆಳೆಯುತ್ತವೆ ಎಂಬ ನಂಬಿಕೆ ಇವರದು. 

ಅಲ್ಲಿಗೆ ಮುಗಿಯಲಿಲ್ಲ

ಒಂದು ಶವಸಂಸ್ಕಾರಕ್ಕೆ ವರ್ಷಗಟ್ಟಲೆ ಹಿಡಿಯುತ್ತದೆಂಬುದನ್ನು ಕೇಳಿದರೆ ಉಸ್ಸಪ್ಪಾ ಎನಿಸುತ್ತದೆ. ಆದರೆ, ಅಲ್ಲಿಗೆ ಎಲ್ಲವೂ ಮುಗಿಯುವುದಿಲ್ಲವಲ್ಲ... ಮುಂಚೆಯೇ ಹೇಳಿದಂತೆ ಮತ್ತೆ ಮೂರು ವರ್ಷದ ನಂತರ ಅವನ್ನು ಹೊರತೆಗೆಯುತ್ತಾರೆ. ಸ್ನಾನ ಮಾಡಿಸಿ ಹೊಸ ಬಟ್ಟೆ ಕೊಡಲಾಗುತ್ತದೆ. ನಂತರ ಉದ್ದನೆಯ ನೇರವಾದ ಲೈನ್‌ನಲ್ಲಿ ಅವರನ್ನು ನಡೆಸಿಕೊಂಡು ಹಳ್ಳಿಯುದ್ದಕ್ಕೂ ತಿರುಗಿಸಲಾಗುತ್ತದೆ. ತಮ್ಮ ಪೂರ್ವಜರನ್ನು ಪ್ರೀತಿಯಿಂದ ಕಾಣುವ ಪರಿಯಾಗಿ ಅವರಿದನ್ನು ಮಾಡುತ್ತಾರೆ. ವಾರಗಳ ಕಾಲ ಶವಕ್ಕೆ ಉಪಚಾರ ಮಾಡಿದ ಬಳಿಕ ಮತ್ತೆ ಮಣ್ಣು ಮಾಡುತ್ತಾರೆ. ತದನಂತರದಲ್ಲಿ ಈ ಶವ ವಾಕಿಂಗ್ ಮಾಡಬೇಕೆಂದರೆ ಮತ್ತೆ 3 ವರ್ಷ ಕಾಯಲೇಬೇಕು!

ಹೀಗೆ ಪೂರ್ವಜರನ್ನು ಮಮ್ಮಿಯಾಗಿಟ್ಟು ಕಾಪಾಡುವುದರಿಂದ ತಮ್ಮ ಮುಂದಿನ ತಲೆಮಾರಿನ ಮಕ್ಕಳು ಕೂಡಾ ಮುತ್ತಜ್ಜ, ಮುತ್ತಜ್ಜಿ, ಅವರಿಗಿಂತ ಹಿಂದಿದ್ದವರನ್ನು ನೋಡಲು ಸಾಧ್ಯವಾಗುತ್ತದೆ. ಈ ಮಕ್ಕಳು ತಮ್ಮ ನಾಲ್ಕೈದು ತಲೆಮಾರು ಹಿಂದಿನ ಪೂರ್ವಜರ ಮಮ್ಮಿಯು ಹೊರಬಂದಾಗ ಅವರೊಂದಿಗೆ ಸಿಗರೇಟ್ ಸೇದುತ್ತವೆ, ಸೆಲ್ಫಿ ತೆಗೆದುಕೊಳ್ಳುತ್ತವೆ! ಈ ಮಮ್ಮಿಗಳು ಹೆಚ್ಚು ಸುಸ್ತಿಯಲ್ಲಿದ್ದಷ್ಟೂ ತಮಗೆ  ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇವರದು. 

click me!