ಒಂದು ದಿನ ವ್ಯತ್ಯಯವಾದರೂ ವಿದ್ಯುತ್ ಘಟಕಗಳು ಸ್ಥಗಿತಗೊಳ್ಳುವ ಭೀತಿ

By Web DeskFirst Published Oct 18, 2018, 7:54 AM IST
Highlights

ರಾಜ್ಯದಲ್ಲಿ ಉಷ್ಣ ವಿದ್ಯುತ್‌ ಉತ್ಪಾದನಾ ಘಟಕಗಳಿಗೆ ಕಲ್ಲಿದ್ದಲಿನ ತೀವ್ರ ಕೊರತೆ ಉಂಟಾಗಿದೆ. ಕೇಂದ್ರ ಸರ್ಕಾರದಿಂದ ಒಂದು ದಿನ ಕಲ್ಲಿದ್ದಲು ಪೂರೈಕೆಯಲ್ಲಿ ವ್ಯತ್ಯಾಸವಾದರೂ ಉಷ್ಣ ವಿದ್ಯುತ್‌ ಘಟಕಗಳು ಸ್ಥಗಿತಗೊಳ್ಳುವ ಭೀತಿ ನಿರ್ಮಾಣವಾಗಿದೆ

ಬೆಂಗಳೂರು :  ರಾಜ್ಯದಲ್ಲಿ ಉಷ್ಣ ವಿದ್ಯುತ್‌ ಉತ್ಪಾದನಾ ಘಟಕಗಳಿಗೆ ಕಲ್ಲಿದ್ದಲಿನ ತೀವ್ರ ಕೊರತೆ ಉಂಟಾಗಿದೆ. ಕೇಂದ್ರ ಸರ್ಕಾರದಿಂದ ಒಂದು ದಿನ ಕಲ್ಲಿದ್ದಲು ಪೂರೈಕೆಯಲ್ಲಿ ವ್ಯತ್ಯಾಸವಾದರೂ ಉಷ್ಣ ವಿದ್ಯುತ್‌ ಘಟಕಗಳು ಸ್ಥಗಿತಗೊಳ್ಳುವ ಭೀತಿ ನಿರ್ಮಾಣವಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ರಾಜ್ಯದ ಮೂರು ಉಷ್ಣ ವಿದ್ಯುತ್‌ ಸ್ಥಾವರಗಳಿಗೆ ಅಗತ್ಯವಿರುವ ಅರ್ಧದಷ್ಟುಕಲ್ಲಿದ್ದಲ್ಲನ್ನೂ ಕೇಂದ್ರ ಸರ್ಕಾರ ಪೂರೈಸುತ್ತಿಲ್ಲ. ಜತೆಗೆ ಪ್ರತಿ ಘಟಕದಲ್ಲೂ 15 ದಿನಗಳಿಗೆ ಅಗತ್ಯವಾದ ಕಲ್ಲಿದ್ದಲು ಶೇಖರಣೆ ಇರಬೇಕು ಎಂಬ ನಿಯಮವಿದ್ದರೂ ಆಯಾ ದಿನಕ್ಕೆ ಅಗತ್ಯವಿರುವಷ್ಟುಕಲ್ಲಿದ್ದಲು ಸಹ ಘಟಕಗಳ ಬಳಿ ಶೇಖರಣೆ ಇಲ್ಲ ಎಂದು ರಾಜ್ಯ ಸರ್ಕಾರ ಹೇಳಿಕೊಂಡಿದೆ.

ಈ ಬಗ್ಗೆ ರಾಜ್ಯ ಸರ್ಕಾರವು ಕೇಂದ್ರ ಕಲ್ಲಿದ್ದಲು ಸಚಿವ ಪೀಯೂಷ್‌ ಗೋಯೆಲ್‌ ಹಾಗೂ ಕೇಂದ್ರ ಸರ್ಕಾರಕ್ಕೆ ಸತತವಾಗಿ ಮನವಿ ಮಾಡುತ್ತಿದ್ದರೂ ಕಲ್ಲಿದ್ದಲು ಪೂರೈಕೆ ಮಾಡುತ್ತಿಲ್ಲ ಎಂದು ಬುಧವಾರ ಅಸಮಾಧಾನ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು, ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಯಾವುದೇ ಕ್ಷಣದಲ್ಲೂ ವಿದ್ಯುತ್‌ ಪೂರೈಕೆ ಸ್ಥಗಿತಗೊಳ್ಳಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕಲ್ಲಿದ್ದಲಿನ ತೀವ್ರ ಕೊರತೆ:

ಈ ಬಗ್ಗೆ ಕನ್ನಡಪ್ರಭಕ್ಕೆ ಮಾಹಿತಿ ನೀಡಿದ ಇಂಧನ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ರವಿಕುಮಾರ್‌, ರಾಜ್ಯದಲ್ಲಿ 5,020 ಮೆ.ವ್ಯಾ. ವಿದ್ಯುತ್‌ ಉತ್ಪಾದನೆ ಸಾಮರ್ಥ್ಯದ ಮೂರು ಉಷ್ಣ ವಿದ್ಯುತ್‌ ಘಟಕಗಳಿವೆ. ರಾಯಚೂರು ಆರ್‌ಟಿಪಿಎಸ್‌ ಶಾಖೋತ್ಪನ್ನ ಘಟಕದ 8 ಘಟಕಗಳಿಂದ 1,720 ಮೆ.ವ್ಯಾ, ಬಳ್ಳಾರಿಯ ಬಿಟಿಪಿಎಸ್‌ನ ಮೂರು ಘಟಕಗಳಿಂದ 1,700 ಮೆ.ವ್ಯಾ., ರಾಯಚೂರಿನ ಯರಮರಸ್‌ ಘಟಕದಿಂದ 1,600 ಮೆ.ವ್ಯಾ. ಉತ್ಪಾದನೆ ಮಾಡಬಹುದು. ಆದರೆ, ಆರ್‌ಟಿಪಿಎಸ್‌ ಘಟಕಕ್ಕೆ ಅಗತ್ಯ ಕಲ್ಲಿದ್ದಲು ಪೂರೈಕೆ ಆಗುತ್ತಿಲ್ಲ. ಹೀಗಾಗಿ 1,720 ಮೆ.ವ್ಯಾ. ಸಾಮರ್ಥ್ಯದ ಒಟ್ಟು ಎಂಟು ಘಟಕಗಳನ್ನು ಹೊಂದಿರುವ ಆರ್‌ಟಿಪಿಎಸ್‌ನಲ್ಲಿ ನಾಲ್ಕು ಘಟಕಗಳು ಈಗಾಗಲೇ ಬಂದ್‌ ಆಗಿವೆ. ಉಳಿದ ನಾಲ್ಕು ಘಟಕಗಳಿಂದ 590 ಮೆ.ವ್ಯಾ. ವಿದ್ಯುತ್‌ ಮಾತ್ರ ಉತ್ಪಾದನೆಯಾಗುತ್ತಿದೆ. ಒಂದು ದಿನ ವ್ಯತ್ಯಯವಾದರೂ ಸಮಸ್ಯೆ ಉಂಟಾಗುತ್ತದೆ ಎಂದು ಹೇಳಿದರು.

ಉಳಿದಂತೆ ಬಳ್ಳಾರಿಯ ಕುಡುತನಿ ಬಳಿಯ ಬಿಟಿಪಿಎಸ್‌ನ 3 ಘಟಕಗಳಿಂದ 1,700 ಮೆ.ವ್ಯಾ. ವಿದ್ಯುತ್‌ ಉತ್ಪಾದನೆಯಾಗಬೇಕಿತ್ತು. ಆದರೆ, ಅಲ್ಲೂ ಕಲ್ಲಿದ್ದಲಿನ ತೀವ್ರ ಅಭಾವ ಕಾಡುತ್ತಿದೆ. ರಾಯಚೂರಿನ ಯರಮರಸ್‌ ಶಾಖೋತ್ಪನ್ನ ಘಟಕ 1,600 ಮೆ.ವ್ಯಾ. ವಿದ್ಯುತ್‌ ಉತ್ಪಾದನೆ ಸಾಮರ್ಥ್ಯ ಹೊಂದಿದ್ದು, ಅಲ್ಲಿಯೂ ಅಗತ್ಯದ ಅರ್ಧದಷ್ಟುಕಲ್ಲಿದ್ದಲೂ ಸಹ ದಾಸ್ತಾನಿಲ್ಲ. ನಿತ್ಯ 23 ಸಾವಿರ ಮೆಟ್ರಿಕ್‌ ಟನ್‌ ಕಲ್ಲಿದ್ದಲು ಅಗತ್ಯವಿದ್ದರೂ, 14 ಸಾವಿರ ಮೆಟ್ರಿಕ್‌ ಟನ್‌ ಮಾತ್ರ ಪೂರೈಕೆಯಾಗುತ್ತಿದೆ. ಆಯಾ ದಿನದ ಕಲ್ಲಿದ್ದಲಿಗೆ ಕಾದುಕೊಂಡಿದ್ದು ಬಳಸಿಕೊಳ್ಳುವಂತಾಗಿದೆ ಎಂದು ತಿಳಿಸಿದರು.

ಜಲವಿದ್ಯುತ್‌ನಿಂದ ನಿರ್ವಹಣೆ

ಉತ್ತಮ ಮಳೆಯಿಂದಾಗಿ ಜಲವಿದ್ಯುತ್‌ ಘಟಕಗಳಲ್ಲಿ ವಿದ್ಯುತ್‌ ಉತ್ಪಾದನೆಯಾಗುತ್ತಿದೆ. ಜತೆಗೆ ಸೌರ ವಿದ್ಯುತ್‌ ಕೂಡ ಲಭ್ಯವಾಗುತ್ತಿದೆ. ಹೀಗಾಗಿ ಸಮಸ್ಯೆಯಾಗದಂತೆ ನಿರ್ವಹಣೆ ಮಾಡಲಾಗುತ್ತಿದೆ ಇಲ್ಲದಿದ್ದರೆ ವಿದ್ಯುತ್‌ ಅಭಾವ ತೀವ್ರವಾಗಿ ಕಾಡುತ್ತಿತ್ತು ಎಂದು ಮಾಹಿತಿ ನೀಡಿದರು.

ಕೇಂದ್ರದ ಗಣಿಗಳಲ್ಲಿ ಸಮಸ್ಯೆ:

ರಾಜ್ಯಕ್ಕೆ ಕೇಂದ್ರ ಸರ್ಕಾರದೊಂದಿಗಿನ ಒಪ್ಪಂದದ ಪ್ರಕಾರ ವೆಸ್ಟರ್ನ್‌ ಕೋಲ್‌ ಫೀಲ್ಡ್‌ -ನಾಗಪುರ ಹಾಗೂ ಮಹಾನದಿ ಕೋಲ್‌ಫೀಲ್ಡ್‌ನಿಂದ ಕಲ್ಲಿದ್ದಲು ಪೂರೈಕೆಯಾಗಬೇಕು. ನಾಗಪುರದಿಂದ ಶೇ.50ರಷ್ಟುಬರುತ್ತಿತ್ತು. ಈ ತಿಂಗಳಿಂದ ಅದೂ ಬಂದಿಲ್ಲ. ಮಹಾನದಿ ಕೋಲ್‌ ಫೀಲ್ಡ್‌ನಿಂದ ಬರಬೇಕಿದ್ದ ಕಲ್ಲಿದ್ದಲು ಕಳೆದ ಒಂದು ವಾರದಿಂದ ಚಂಡಮಾರುತ ಸಮಸ್ಯೆಯಿಂದ ಬರುತ್ತಿಲ್ಲ. ಹೀಗಾಗಿ ಸಮಸ್ಯೆಯಾಗಿದೆ. ನಮ್ಮ ಘಟಕಗಳಿಗೆ ಮಾತ್ರವಲ್ಲದೆ ವಿಜಯಪುರದ ಕೂಡಿಗಿ ಎನ್‌ಟಿಪಿಸಿ ಘಟಕದಲ್ಲೂ ಶೇ.50ರಷ್ಟುಮಾತ್ರ ವಿದ್ಯುತ್‌ ಉತ್ಪಾದನೆಯಾಗುತ್ತಿದೆ ಎಂದು ತಿಳಿಸಿದರು.

ಹಲವು ಬಾರಿ ಕೇಂದ್ರಕ್ಕೆ ಮನವಿ:

ಕಳೆದ ಸರ್ಕಾರದ ಅವಧಿಯಲ್ಲಿ ಇಂಧನ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್‌, ಹಾಲಿ ಅವಧಿಯಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಮುಖ್ಯಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರವಿಕುಮಾರ್‌ ಅವರು ಹಲವು ಬಾರಿ ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದಾರೆ. ಆದರೂ, ಕೇಂದ್ರ ಸರ್ಕಾರದ ಕಡೆಯಿಂದ ಸೂಕ್ತ ಪ್ರತಿಕ್ರಿಯೆ ದೊರೆತಿಲ್ಲ. ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ರಾಜ್ಯ ಸರ್ಕಾರ ಹೇಳಿಕೊಂಡಿದೆ.

ರಾಜ್ಯದಲ್ಲಿನ ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿನ ಕಲ್ಲಿದ್ದಲು ಶೇಖರಣೆ ಶೂನ್ಯಕ್ಕೆ ಇಳಿದಿದೆ. 23 ಸಾವಿರ ಟನ್‌ ಅಗತ್ಯವಿರುವ ಕಡೆ 14 ಸಾವಿರ ಟನ್‌ ಪೂರೈಕೆಯಾಗುತ್ತಿದೆ. ಹೀಗಾಗಿ ರಾಯಚೂರು ಉಷ್ಣ ವಿದ್ಯುತ್‌ ಸ್ಥಾವರದ ಸಾಮರ್ಥ್ಯ 1720 ಮೆ.ವ್ಯಾ. ಇದ್ದರೂ 590 ಮೆ.ವ್ಯಾ. ಅಷ್ಟೇ ವಿದ್ಯುತ್‌ ಉತ್ಪಾದನೆ ಮಾಡಲಾಗುತ್ತಿದೆ. ಉಳಿದ ಘಟಕಗಳಲ್ಲೂ ಶೇ.50ರಷ್ಟುಉತ್ಪಾದನೆ ಕುಸಿದಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಹಲವು ಬಾರಿ ಗಮನ ಸೆಳೆದಿದ್ದೇವೆ.

- ರವಿಕುಮಾರ್‌, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಇಂಧನ ಇಲಾಖೆ

click me!