ಪ್ಯಾರಾ ಏಷ್ಯನ್ ಗೇಮ್ಸ್: ಭಾರತದ ಭರ್ಜರಿ ಪದಕ ಬೇಟೆ-6ನೇ ಚಿನ್ನ ಸಂಭ್ರಮ!

By Web DeskFirst Published Oct 10, 2018, 10:10 AM IST
Highlights

ಇಂಡೋನೇಷಿಯಾದ ಜಕರ್ತಾದಲ್ಲಿ ನಡೆಯುತ್ತಿರುವ ಪ್ಯಾರಾ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತೀಯ ಅಥ್ಲೀಟ್‌ಗಳ  ಪದಕ ಬೇಟೆ ಮುಂದುವರಿದಿದೆ. 28 ಪದಕ ಗೆಲ್ಲೋ ಮೂಲಕ ಭಾರತ 9ನೇ ಸ್ಥಾನ ಪಡೆದುಕೊಂಡಿದೆ. 

ಜಕಾರ್ತ(ಅ.10): ಇಲ್ಲಿ ನಡೆಯುತ್ತಿರುವ 3ನೇ ಪ್ಯಾರಾ ಏಷ್ಯಾಡ್‌ನಲ್ಲಿ ಭಾರತದ ಸ್ಪರ್ಧಿಗಳು ಚಿನ್ನದಂತ ಸಾಧನೆ ಮಾಡಿದ್ದಾರೆ. ಕೂಟದ 3ನೇ ದಿನವಾದ ಮಂಗಳವಾರ ಮತ್ತೆ 3 ಚಿನ್ನಗಳು ಸೇರಿದಂತೆ 6 ಚಿನ್ನ, 9ಬೆಳ್ಳಿ, 13 ಕಂಚಿನೊಂದಿಗೆ 28 ಪದಕಗಳನ್ನು ಗೆದ್ದ ಭಾರತ ತಂಡ ಪಟ್ಟಿಯಲ್ಲಿ9 ನೇ ಸ್ಥಾನ ಪಡೆದಿದೆ. ಮಹಿಳೆಯರ ಕ್ಲಬ್ ಥ್ರೋ ಎಫ್ 32/51 ಕೆಟಗರಿಯ ಸ್ಪರ್ಧೆಯಲ್ಲಿ ಏಕ್ತಾ ಬೈನ್, ಪುರುಷರ 100 ಮೀ. ಟಿ-35 ಕೆಟಗರಿಯಲ್ಲಿ ನಾರಾಯಣ್ ಠಾಕೂರ್ ಮತ್ತು ಪುರುಷರ 10 ಮೀ. ಏರ್ ಪಿಸ್ತೂಲ್ ಎಸ್‌ಎಚ್-1 ಕೆಟಗರಿಯಲ್ಲಿ ಮನೀಶ್ ನರ್ವಾಲ್ ಚಿನ್ನ ಪಡೆದರು.

ಮಹಿಳೆಯರ ಕ್ಲಬ್ ಥ್ರೋ ಸ್ಪರ್ಧೆಯ 4ನೇ ಪ್ರಯತ್ನದಲ್ಲಿ ಏಕ್ತಾ, 16.02 ಮೀ. ದೂರ ಎಸೆಯುವ ಮೂಲಕ ಚಿನ್ನಕ್ಕೆ ಮುತ್ತಿಟ್ಟರು. ಇದೇ ಸ್ಪರ್ಧೆಯಲ್ಲಿ ಯುಎಇನ ಅಲ್ಕಾಬಿ ತೆಕ್ರಾ ಬೆಳ್ಳಿ ಜಯಿಸಿದರು. ಪುರುಷರ 100 ಮೀ. ಓಟದ ಸ್ಪರ್ದೆಯಲ್ಲಿ ನಾರಾಯಣ್ ಠಾಕೂರ್ 14.02 ಸೆ.ಗಳಲ್ಲಿ ಗುರಿ ತಲುಪುವ ಮೂಲಕ ಚಿನ್ನ ಗೆದ್ದರು. ಮನೀಶ್‌ಗೆ ಉತ್ತಮ ಪೈಪೋಟಿ ನೀಡಿದ ಸೌದಿ ಅರೇಬಿಯಾದ ಅದಾವಿ ಅಹ್ಮದ್ 14.40 ಸೆ.ಗಳಲ್ಲಿ ಗುರಿ ತಲುಪಿ ಬೆಳ್ಳಿಗೆ ತೃಪ್ತಿಪಟ್ಟರು. 

ಪುರುಷರ ಶೂಟಿಂಗ್ ಸ್ಪರ್ಧೆಯಲ್ಲಿ 16 ವರ್ಷ ವಯಸ್ಸಿನ ಮನೀಶ್ ನರ್ವಾಲ್, 235.9 ಅಂಕಗಳಿಸುವ ಮೂಲಕ ಚಿನ್ನ ಜಯಿಸಿದರು. ಇದು ಪ್ಯಾರಾ ಏಷ್ಯಾಡ್‌ನ ಈ ಭಾಗದಲ್ಲಿ ದಾಖಲೆಯ ಅಂಕವಾಗಿದೆ. ಉಳಿದಂತೆ ಪುರುಷರ ಎತ್ತರ ಜಿಗಿತ ಟಿ45/46/47 ಕೆಟಗರಿಯ ಸ್ಪರ್ಧೆಯಲ್ಲಿ ರಾಮ್ ಪಾಲ್ 1.94 ಮೀ. ಎತ್ತರ ಜಿಗಿಯುವ ಮೂಲಕ ಬೆಳ್ಳಿ ಗೆದ್ದರು. 

ಪುರುಷರ ಡಿಸ್ಕಸ್ ಥ್ರೋ ಎಫ್‌43/44, ಎಫ್ 62/64 ಸ್ಪರ್ಧೆಯಲ್ಲಿ ಸುರೇಂದ್ರನ್ ಪಿಳ್ಳೆ ಬೆಳ್ಳಿ ಹಾಗೂ ಪ್ರದೀಪ್ ಕಂಚು ಗೆದ್ದರು. ಪುರುಷರ 200 ಮೀ. ಓಟದ  ಟಿ44/ಟಿ62/64 ಕೆಟಗರಿ ಸ್ಪರ್ಧೆಯಲ್ಲಿ ಆನಂದನ್ ಗುಣೇಶೇಖರನ್ 24.45 ಸೆ.ಗಳಲ್ಲಿ ಗುರಿ ತಲುಪಿ ಕಂಚು ಗೆದ್ದರು. 

ಪುರುಷರ ಶಾಟ್‌ಪುಟ್ ಎಫ್-11 ಕೆಟಗರಿಯ ಸ್ಪರ್ಧೆಯಲ್ಲಿ ಮೊನು ಗಂಗಾಸ್ 11.38 ಮೀ. ದೂರ ಎಸೆಯುವ ಮೂಲಕ ಕಂಚು ಗೆದ್ದರು. ಪುರುಷರ ಡಿಸ್ಕಸ್ ಥ್ರೋ ಎಫ್-46 ಕೆಟಗರಿಯ ಸ್ಪರ್ಧೆಯಲ್ಲಿ ಸುಂದರ್ ಗುರ್ಜರ್ 47.10 ಮೀ. ದೂರ ಎಸೆದು ಕಂಚು ಗೆದ್ದರು. ಮಹಿಳೆಯರ 200 ಮೀ. ಓಟದ ಟಿ45/46/47 ಸ್ಪರ್ಧೆಯಲ್ಲಿ ಜಯಂತಿ ಬೆಹ್ರಾ 27.45 ಸೆ.ಗಳಲ್ಲಿ ಗುರಿ ಪೂರ್ಣಗೊಳಿಸಿ ಕಂಚು ಜಯಸಿದರು.

click me!