ಹಾಕಿ ವಿಶ್ವಕಪ್‌: ಭಾರತಕ್ಕೆ ಕ್ವಾರ್ಟರ್‌ ಫೈನಲ್‌ ಗುರಿ

By Web DeskFirst Published Dec 8, 2018, 3:55 PM IST
Highlights

ಮನ್‌ಪ್ರೀತ್‌ ಸಿಂಗ್‌ ಪಡೆ ನೇರವಾಗಿ ಕ್ವಾರ್ಟರ್‌ ಪ್ರವೇಶಿಸುವ ನೆಚ್ಚಿನ ತಂಡ ಎನಿಸಿಕೊಳ್ಳುತ್ತಿದ್ದರೂ, ಅಂತಿಮ ಪಂದ್ಯವನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಉತ್ತಮ ಅಂತರದಲ್ಲಿ ಗೆದ್ದು, ಗೋಲು ಅಂತರವನ್ನು ಕಾಯ್ದುಕೊಳ್ಳುವ ಜವಾಬ್ದಾರಿ ತಂಡದ ಮೇಲಿದೆ.

ಭುವನೇಶ್ವರ(ಡಿ.08): ಆತಿಥೇಯ ಭಾರತ ಪುರುಷರ ಹಾಕಿ ವಿಶ್ವಕಪ್‌ನ ಕ್ವಾರ್ಟರ್‌ ಫೈನಲ್‌ ಮೇಲೆ ಕಣ್ಣಿಟ್ಟಿದ್ದು, ಶನಿವಾರ ಇಲ್ಲಿ ನಡೆಯಲಿರುವ ‘ಸಿ’ ಗುಂಪಿನ ತನ್ನ ಅಂತಿಮ ಪಂದ್ಯದಲ್ಲಿ ಕೆನಡಾ ವಿರುದ್ಧ ಸೆಣಸಲಿದೆ. ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಭಾರತ, ಬಲಿಷ್ಠ ಬೆಲ್ಜಿಯಂ ವಿರುದ್ಧ 2-2 ಗೋಲುಗಳಲ್ಲಿ ಡ್ರಾ ಸಾಧಿಸಿತ್ತು. 2 ಪಂದ್ಯಗಳಲ್ಲಿ ಅಜೇಯವಾಗಿ ಉಳಿದಿರುವ ಭಾರತ, 4 ಅಂಕಗಳೊಂದಿಗೆ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿದೆ. ಒಲಿಂಪಿಕ್‌ ಬೆಳ್ಳಿ ಪದಕ ವಿಜೇತ ಬೆಲ್ಜಿಯಂ ಸಹ 4 ಅಂಕ ಪಡೆದಿದೆ. ಆದರೆ ಭಾರತ +5 ಗೋಲು ಅಂತರ ಹೊಂದಿದ್ದರೆ, ಬೆಲ್ಜಿಯಂ +1 ಗೋಲು ಅಂತರ ಹೊಂದಿದೆ. ಕೆನಡಾ ಹಾಗೂ ದಕ್ಷಿಣ ಆಫ್ರಿಕಾ 2 ಪಂದ್ಯಗಳಿಂದ ತಲಾ ಒಂದು ಅಂಕ ಪಡೆದಿವೆ.

ಮನ್‌ಪ್ರೀತ್‌ ಸಿಂಗ್‌ ಪಡೆ ನೇರವಾಗಿ ಕ್ವಾರ್ಟರ್‌ ಪ್ರವೇಶಿಸುವ ನೆಚ್ಚಿನ ತಂಡ ಎನಿಸಿಕೊಳ್ಳುತ್ತಿದ್ದರೂ, ಅಂತಿಮ ಪಂದ್ಯವನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಉತ್ತಮ ಅಂತರದಲ್ಲಿ ಗೆದ್ದು, ಗೋಲು ಅಂತರವನ್ನು ಕಾಯ್ದುಕೊಳ್ಳುವ ಜವಾಬ್ದಾರಿ ತಂಡದ ಮೇಲಿದೆ. ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡ ಮಾತ್ರ ನೇರವಾಗಿ ಕ್ವಾರ್ಟರ್‌ ಫೈನಲ್‌ಗೇರಲಿದೆ. 2 ಹಾಗೂ 3ನೇ ಸ್ಥಾನ ಪಡೆಯುವ ತಂಡಗಳು ಕ್ರಾಸ್‌ ಓವರ್‌ ಪಂದ್ಯಗಳನ್ನು ಆಡಿ, ಕ್ವಾರ್ಟರ್‌ಗೆ ಅರ್ಹತೆ ಗಿಟ್ಟಿಸಬೇಕು.

ಲಯದ ಆಧಾರದ ಮೇಲೆ ಭಾರತ, ಕೆನಡಾ ವಿರುದ್ಧ ಗೆಲ್ಲುವ ನೆಚ್ಚಿನ ತಂಡ ಎನಿಸಿದೆ. ಆದರೆ ಗುರುವಾರ ವಿಶ್ವ ನಂ.20 ತಂಡ, ಹಾಲಿ ಒಲಿಂಪಿಕ್‌ ಚಾಂಪಿಯನ್‌ ಅರ್ಜೆಂಟೀನಾವನ್ನು ಸೋಲಿಸಿದ್ದನ್ನು ನೋಡಿದ ಬಳಿಕ ಟೂರ್ನಿಯಲ್ಲಿ ಏನು ಬೇಕಿದ್ದರೂ ಸಾಧ್ಯ ಎನಿಸಿದೆ.

2013ರಿಂದ ಈ ವರೆಗೂ ಕೆನಡಾ ವಿರುದ್ಧ ಭಾರತ 5 ಪಂದ್ಯವನ್ನಾಡಿದ್ದು 3ರಲ್ಲಿ ಜಯ, 1 ಸೋಲು, 1 ಡ್ರಾ ಕಂಡಿದೆ. ಕೆನಡಾದ ರಕ್ಷಣಾ ಪಡೆ ಅತ್ಯುತ್ತಮವಾಗಿದ್ದು ಭಾರತದ ಸ್ಟೆ್ರೖಕರ್‌ಗಳು ಗೋಲು ಬಾರಿಸಲು ಹೆಚ್ಚುವರಿ ಶ್ರಮ ವಹಿಸಬೇಕಿದೆ. ಶನಿವಾರದ ಮೊದಲ ಪಂದ್ಯದಲ್ಲಿ ಬೆಲ್ಜಿಯಂ ಹಾಗೂ ದ.ಆಫ್ರಿಕಾ ಸೆಣಸಲಿವೆ.

ಪಂದ್ಯ ಆರಂಭ: ಸಂಜೆ 7.00ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ಸೆಲೆಕ್ಟ್ 1

click me!