ಅಪ್ಪ ಪಶುವೈದ್ಯ, ಮಗ ಏಷ್ಯಾಡ್ ಕುದುರೆ ಸವಾರಿ ರಜತವೀರ..!

By Web DeskFirst Published Aug 29, 2018, 11:36 AM IST
Highlights

ಪ್ರಸ್ತುತ ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್‌ನ ಈಕ್ವೆಸ್ಟ್ರಿಯನ್ (ಕುದುರೆ ಸವಾರಿ) ಸ್ಪರ್ಧೆಯ ವೈಯಕ್ತಿಕ ವಿಭಾಗದಲ್ಲಿ ಬರೋಬ್ಬರಿ 36 ವರ್ಷಗಳ ಬಳಿಕ ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟಿದ್ದಾನೆ. ಜತೆಗೆ ತಂಡ ವಿಭಾಗದಲ್ಲೂ ರಜತ ಪದಕ ಗೆಲ್ಲುವಲ್ಲಿ ಶ್ರಮಿಸಿದ್ದಾನೆ.

ಬೆಂಗಳೂರು(ಆ.29): ತಂದೆ ಪಶು ವೈದ್ಯ, ಚಿಕ್ಕವಯಸ್ಸಿನಿಂದಲೂ ಅವರು ಕುದುರೆಗಳಿಗೆ ಚಿಕಿತ್ಸೆ ನೀಡಲೆಂದು ತೆರಳುತ್ತಿದ್ದಾಗ ಆ ಬಾಲಕ ಸಹ ಅವರೊಂದಿಗೆ ತೆರಳುತ್ತಿದ್ದ. ಹೀಗೆ ದಿನ ಕಳೆದಂತೆ ಆತನಿಗೆ ಕುದುರೆಗಳ ಮೇಲೆ ಆಸಕ್ತಿ ಕೆರಳಿತು. ಪರಿಣಾಮ 5ನೇ ವರ್ಷದಲ್ಲೇ ಕುದುರೆ ಸವಾರಿ ಆರಂಭಿಸಿದ ಆ ಬಾಲಕ, ಇಂದು ಇಡೀ ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾನೆ.

ಪ್ರಸ್ತುತ ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್‌ನ ಈಕ್ವೆಸ್ಟ್ರಿಯನ್ (ಕುದುರೆ ಸವಾರಿ) ಸ್ಪರ್ಧೆಯ ವೈಯಕ್ತಿಕ ವಿಭಾಗದಲ್ಲಿ ಬರೋಬ್ಬರಿ 36 ವರ್ಷಗಳ ಬಳಿಕ ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟಿದ್ದಾನೆ. ಜತೆಗೆ ತಂಡ ವಿಭಾಗದಲ್ಲೂ ರಜತ ಪದಕ ಗೆಲ್ಲುವಲ್ಲಿ ಶ್ರಮಿಸಿದ್ದಾನೆ. ಏಷ್ಯಾಡ್ ಈಕ್ವೆಸ್ಟ್ರಿಯನ್ ಸ್ಪರ್ಧೆಯಲ್ಲಿ ರಜತ ಪದಕ ಜಯಿಸಿದ ಫವಾದ್ ಮಿರ್ಜಾ ಅವರ ಯಶೋಗಾಥೆ ಇದು. ಅಪರೂಪದ ಈ ಆಟದಲ್ಲಿ ಪದಕ ಸಾಧನೆ ಮಾಡಿದ ಫವಾದ್ ತಾವು ನಡೆದು ಬಂದ ದಾರಿ, ಸಾಧನೆಯ ಕುರಿತು ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ್ದಾರೆ.

ಬೆಂಗಳೂರು ಮೂಲದ ಫವಾದ್ ಮಿರ್ಜಾ ಓದಿದ್ದು, ಬೆಳೆದಿದ್ದು ಸಿಲಿಕಾನ್ ಸಿಟಿಯಲ್ಲಿ. ತಂದೆ ಪಶುವೈದ್ಯರಾದರೆ, ತಾಯಿ ಪ್ರಾಥಮಿಕ ಶಾಲಾ ಶಿಕ್ಷಕಿ. ಅಣ್ಣ ಸಹ ತಂದೆಯಂತೆ ಪಶುವೈದ್ಯನಾದರೆ, ಮಿರ್ಜಾ ಮಾತ್ರ ಕುದುರೆಯನ್ನೇರಿದರು. ಏನಾದರೂ ಮಾಡಿ ಇದೇ ಆಟದಲ್ಲಿ ಸಾಧನೆ ಮಾಡಬೇಕೆಂಬ ಸತತ ಹಠದ ಪರಿಣಾಮ ಇಂದು, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ 31 ಚಿನ್ನ, 16 ಬೆಳ್ಳಿ, 22 ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಬೆಂಗಳೂರು ಇಂಟರ್ ನ್ಯಾಷನಲ್ ಶಾಲೆಯಲ್ಲಿ 12ನೇ ತರಗತಿ ವರೆಗೂ ಶಿಕ್ಷಣ ಪೂರೈಸಿದ ಫವಾದ್ ಬಳಿಕ ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಮುಖಮಾಡಿದ್ದು, ಇಂಗ್ಲೆಂಡ್‌ನತ್ತ. ಅಲ್ಲಿ ಲಂಡನ್‌ನ ನಾರ್ಥಾಂಪ್ಟನ್ ವಿವಿಯಲ್ಲಿ ಮಾನವ ಸಂಪನ್ಮೂಲ ಹಾಗೂ ಮನಃಶಾಸ್ತ್ರದಲ್ಲಿ ಪದವಿ ಪಡೆದರು. ಇಂತಿಪ್ಪ ಫವಾದ್ ಆಸೆಗೆ ಸಂಪೂರ್ಣ ಬೆಂಬಲ ನೀಡಿದ್ದು, ಬೆಂಗಳೂರಿನ ಎಂಬೆಸಿ ರೈಡಿಂಗ್ ಶಾಲೆ ಹಾಗೂ ಅದರ ಛೇರ್ಮನ್ ಜೀತು ವಿರ್ವಾನಿ. 

8ನೇ ವಯಸ್ಸಿನಲ್ಲೇ ಅಖಾಡಕ್ಕೆ: 5ನೇ ವಯಸ್ಸಿನಿಂದಲೇ ಅಭ್ಯಾಸ ಆರಂಭಿಸಿದ್ದ ಫವಾದ್ ತಮ್ಮ 2000ನೇ ಇಸವಿಯಲ್ಲಿ ನಡೆದ ಸ್ಥಳೀಯ ಸ್ಪರ್ಧೆಯೊಂದರಲ್ಲಿ ಮೊದಲ ಬಾರಿ ಸ್ಪರ್ಧಿಸಿದ್ದರು.
ಆಗ ಅವರ ವಯಸ್ಸು, 8ವರ್ಷ. ಇದಾಗ ಬಳಿಕ ತಿರುಗಿ ನೋಡದ ಫವಾದ್, 2002ರ ವೇಳೆಗೆ ರಾಷ್ಟ್ರ ಮಟ್ಟದ ಚಾಂಪಿಯನ್‌ಶಿಪ್‌ನಲ್ಲಿ ಕಾಣಿಸಿಕೊಂಡರು. ‘ಈ ವೇಳೆ ಎಲ್ ದೊರಾಡೊ ಹಾಗೂ ಪೊಲಿನಾ ಎಂಬ ಕುದುರೆಗಳ ಮೇಲೆ ಸವಾರಿ ನಡೆಸಿದ್ದೆ. ಅವುಗಳ ನೆನಪು ಇಂದಿಗೂ ಅಚ್ಚಳಿಯದೆ ಉಳಿದಿದೆ. ಅದರಲ್ಲೂ ಪೊಲಿನಾ ಮೇಲೆ ಕುಳಿತಾಗ ಸೋಲನ್ನೇ ಕಂಡಿರಲಿಲ್ಲ’ ಎಂದು ಫವಾದ್ ತಮ್ಮ ಆರಂಭದ ದಿನಗಳ ಅನುಭವ ಹಂಚಿಕೊಂಡಿದ್ದಾರೆ. ಹೀಗೆ ಸಾಧನೆಯ ಹಾದಿಯಲ್ಲಿ ಸಾಗಿದ ಫವಾದ್’ಗೆ ಬೆನ್ನೆಲುಬಾಗಿ ನಿಂತಿದ್ದು ಬೆಂಗಳೂರಿನ ಎಂಬೆಸಿ ರೈಡಿಂಗ್ ಸ್ಕೂಲ್. ಅದರಲ್ಲೂ ಇಲ್ಲಿನ ಕೋಚ್’ಗಳಾದ ‘ಅಜಯ್ ಅಪ್ಪಚ್ಚು ಹಾಗೂ ನಾದಿಯಾ ಹರಿದಾಸ್ ಹೇಳಿ ಕೊಟ್ಟ ಪಾಠದ ಫಲವೇ ನಾನು ಇಂದು ಈ ಮಟ್ಟಕ್ಕೇರಲು ಕಾರಣ’ ಎಂದು ತಮ್ಮ ಗುರುಗಳನ್ನು ನೆನೆಯುತ್ತಾರೆ ಫವಾದ್.

ಇಂಚಾನ್ ಏಷ್ಯಾಡ್‌ನಲ್ಲಿ 10ನೇ ಸ್ಥಾನ
2014ರಲ್ಲಿ ದಕ್ಷಿಣ ಕೊರಿಯಾದ ಇಂಚಾನ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಿದ್ದ ಫವಾದ್ 10ನೇ ಸ್ಥಾನ ಪಡೆದಿದ್ದರು. ಅಲ್ಲದೇ 2016ರಲ್ಲಿ ನಡೆದ ರಿಯೋ ಒಲಿಂಪಿಕ್ಸ್‌ನಲ್ಲಿ ಅರ್ಹತಾ ಸುತ್ತಿನಲ್ಲಿ ಪಾಲ್ಗೊಂಡಿದ್ದರು. ಆದರೆ, ಅರ್ಹತೆ ಗಿಟ್ಟಿಸುವಲ್ಲಿ ವಿಫಲರಾಗಿದ್ದರು. ಬಳಿಕ ಫವಾದ್, ತರಬೇತಿಗೆಂದು ತೆರಳಿದ್ದು ಜರ್ಮನಿಯ ಬೆಟಿನಾ ಹಾಯ್ ಬಳಿ. ಇಲ್ಲಿ ಕುದುರೆ ಸವಾರಿಯ ಮತ್ತಷ್ಟು ಪಟ್ಟುಗಳನ್ನು ಕಲಿತ ಫವಾದ್‌ರ ಪ್ರದರ್ಶನ ಮೊನಚುಗೊಂಡಿತು. ಇಟಲಿ, ಜರ್ಮನಿ ಹಾಗೂ ಹಾಲೆಂಡ್‌ನಲ್ಲಿ ನಡೆದ ಈಕ್ವೆಸ್ಟ್ರಿಯನ್‌ನಲ್ಲಿ ಪ್ರಥಮ ಸ್ಥಾನ ಗಳಿಸಿ ಗಮನ ಸೆಳೆದರು. 

ಟೋಕಿಯೋ ಒಲಿಂಪಿಕ್ಸ್ ಪದಕ ಗೆಲ್ಲುವ ಗುರಿ 
ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಗೆದ್ದದ್ದು ಖುಷಿ ನೀಡಿದೆ. 2020ರ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿ, ಅಲ್ಲಿ ಪದಕ ಸಾಧನೆ ಮಾಡಬೇಕೆಂಬುದು ನನ್ನ ಮುಂದಿರುವ ಗುರಿ. ಸರ್ಕಾರ ಟಾಪ್ (ಟಾರ್ಗೆಟ್ ಒಲಿಂಪಿಕ್ ಪೋಡಿಯಂ) ಯೋಜನೆಗೆ ಆಯ್ಕೆ ಮಾಡಿದರೆ, ಅಭ್ಯಾಸಕ್ಕೆ ಹೆಚ್ಚಿನ ನೆರವಾಗಲಿದೆ.
- ಫವಾದ್ ಮಿರ್ಜಾ, ಈಕ್ವೆಸ್ಟ್ರಿಯನ್ ಪಟು

ವರದಿ: ವಿನಯ್ ಕುಮಾರ್ ಡಿ.ಬಿ, ಕನ್ನಡಪ್ರಭ
 

click me!