ಹೈದರಾಬಾದ್‌ನಲ್ಲಿ Toxic ಹವಾ: ಸಕ್ಸಸ್‌ಫುಲ್ ತೆಲುಗು ಸಿನಿಮಾ ಎತ್ತಂಗಡಿ 'ಇದು ಕನ್ನಡಿಗರ ತಾಕತ್ತು' ಎಂದ ಯಶ್‌ ಫ್ಯಾನ್ಸ್‌!

Published : Aug 24, 2026, 06:26 PM IST
Toxic

ಸಾರಾಂಶ

ಹೈದರಾಬಾದ್‌ನಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದ ತೆಲುಗಿನ 'ಇರುಮುಡಿ' ಚಿತ್ರವನ್ನು ತೆಗೆದುಹಾಕಿ, ಯಶ್ ಅಭಿನಯದ 'ಟಾಕ್ಸಿಕ್' ಚಿತ್ರಕ್ಕೆ ಜಾಗ ನೀಡಲಾಗಿದೆ. ಈ ಬೆಳವಣಿಗೆಯು ತೆಲುಗು ಮತ್ತು ಕನ್ನಡ ಸಿನಿಪ್ರೇಮಿಗಳ ನಡುವೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಬೆಂಗಳೂರು (ಆ.24): ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವ ತೆಲುಗಿನ 'ಇರುಮುಡಿ' (Irumudi) ಸಿನಿಮಾವನ್ನು ತೆಗೆದು, ಆ ಚಿತ್ರಮಂದಿರಗಳಲ್ಲಿ ರಾಕಿ ಭಾಯ್ ಯಶ್ ಅಭಿನಯದ 'ಟಾಕ್ಸಿಕ್' (Toxic) ಸಿನಿಮಾವನ್ನು ಪ್ರದರ್ಶಿಸಲು Asian/SVC ಚಿತ್ರಮಂದಿರಗಳು ಮುಂದಾಗಿವೆ. ಹೈದರಾಬಾದ್ ಸೇರಿದಂತೆ ಪ್ರಮುಖ ಕೇಂದ್ರಗಳಲ್ಲಿ 2 ಸ್ಕ್ರೀನ್‌ಗಳಿರುವ ಥಿಯೇಟರ್‌ಗಳಲ್ಲೂ ಎರಡಕ್ಕೂ 'ಟಾಕ್ಸಿಕ್' ಅನ್ನೇ ಚಾರ್ಟ್ ಮಾಡಲಾಗಿದೆ. ಇದಕ್ಕೆ ತೆಲುಗು ಚಿತ್ರರಂಗದ ಅಭಿಮಾನಿಗಳಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ದಿಲ್ ರಾಜು ಅವರಂತಹ ಪ್ರಮುಖ ವಿತರಕರು ಈ ಸಿನಿಮಾದ ಹಕ್ಕುಗಳನ್ನು ಭಾರಿ ಮೊತ್ತಕ್ಕೆ ಖರೀದಿಸಿರುವುದರಿಂದ ಸಿನಿಮಾವನ್ನು ದೊಡ್ಡ ರಿಲೀಸ್ ಮಾಡುವುದು ಸಹಜ. ಆದರೆ, ಯಶಸ್ವಿಯಾಗಿ ಓಡುತ್ತಿರುವ ಸಿನಿಮಾವನ್ನೇ ತೆರವುಗೊಳಿಸಿ ಕನ್ನಡದ ಸಿನಿಮಾವೊಂದಕ್ಕೆ ಹೈದರಾಬಾದ್‌ನಲ್ಲೇ ಇಷ್ಟೊಂದು ದೊಡ್ಡ ಮಟ್ಟದ ಬೇಡಿಕೆ ಸೃಷ್ಟಿಯಾಗಿರುವುದು ಚಿತ್ರರಂಗದ ಇತಿಹಾಸದಲ್ಲೇ ಅಭೂತಪೂರ್ವ ಘಟನೆ ಎನಿಸಿದೆ.

ಸಾಮಾಜಿಕ ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆ

ಈ ಬೆಳವಣಿಗೆಯಿಂದಾಗಿ ಎಕ್ಸ್ (Twitter) ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರು ಮತ್ತು ತೆಲುಗು ಸಿನಿಪ್ರೇಮಿಗಳ ನಡುವೆ ದೊಡ್ಡ ಮಟ್ಟದ ಚರ್ಚೆ ಪ್ರಾರಂಭವಾಗಿದೆ.

'ವರ್ಷಗಳಿಂದ ಕರ್ನಾಟಕದ ಸಿಂಗಲ್ ಸ್ಕ್ರೀನ್ ಹಾಗೂ ಪಿವಿಆರ್‌ಗಳಲ್ಲಿ (PVR) ಕನ್ನಡಿಗರು ಇದೇ ಅನುಭವ ಎದುರಿಸುತ್ತಿದ್ದರು. ಹೈಪ್ ಇರುವ ತೆಲುಗು ಅಥವಾ ತಮಿಳು ಸಿನಿಮಾಗಳು ಬಂದಾಗ, ಚೆನ್ನಾಗಿ ಓಡುತ್ತಿದ್ದ ಕನ್ನಡ ಸಿನಿಮಾಗಳನ್ನೇ ತೆಗೆದು ಪರಭಾಷಾ ಚಿತ್ರಗಳಿಗೆ ಜಾಗ ಕೊಡಲಾಗುತ್ತಿತ್ತು. ಈಗ ನಿಮ್ಮ ರಾಜ್ಯದಲ್ಲಿ ಒಂದು ಬಾರಿ ಹೀಗಾದ ತಕ್ಷಣವೇ ಇಷ್ಟೊಂದು ಕೂಗಾಡುವುದೇಕೆ?' ಎಂದು ಕನ್ನಡಿಗರು ಪ್ರಶ್ನಿಸಿದ್ದಾರೆ.

'ಒಂದು ಕಾಲದಲ್ಲಿ ಬೇರೆ ಭಾಷೆಯ ಸಿನಿಮಾಗಳಿಗಾಗಿ ಕನ್ನಡ ಸಿನಿಮಾಗಳನ್ನೇ ಥಿಯೇಟರ್‌ನಿಂದ ಹೊರಹಾಕಲಾಗುತ್ತಿತ್ತು. ಆದರೆ ಕಾಲ ಹೇಗೆ ಬದಲಾಗಿದೆ ನೋಡಿ! ಈಗ ಸಕ್ಸಸ್‌ಫುಲ್ ಆಗಿ ಓಡುತ್ತಿರುವ ತೆಲುಗು ಸಿನಿಮಾವನ್ನೇ ತೆಗೆದು ಕನ್ನಡ ಸಿನಿಮಾ ಅಲ್ಲಿ ಜಾಗ ಪಡೆಯುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಊಹಿಸಲೂ ಸಾಧ್ಯವಾಗದ ಸಾಧನೆ ಮಾಡಿದ್ದಾರೆ..' ಎಂದು ಸಿನಿಪ್ರೇಮಿಗಳು ಕಾಮೆಂಟ್ ಮಾಡುತ್ತಿದ್ದಾರೆ.

ಕರ್ನಾಟಕದಲ್ಲಿ ಎದುರಾಗುತ್ತಿದ್ದ ಅದೇ ನೋವು!

ತೆಲುಗು ನಟರ ಟ್ವೀರ್ 2 ಮತ್ತು ಟೈಯರ್ 3 ಸಿನಿಮಾಗಳಿಗೂ ಕರ್ನಾಟಕದಲ್ಲಿ ಭಾರಿ ಸಂಖ್ಯೆಯ ಚಿತ್ರಮಂದಿರಗಳು ಸಿಗುತ್ತವೆ. ಪ್ರಮುಖ ನಟರ ಬಿಗ್ ಬಜೆಟ್ ಸಿನಿಮಾಗಳು ಬಂದಾಗಲಂತೂ ಉತ್ತಮವಾಗಿ ಪ್ರದರ್ಶನ ಕಾಣುತ್ತಿರುವ ಕನ್ನಡ ಸಿನಿಮಾಗಳನ್ನೇ ತೆಗೆದು ಹಾಕಿ ಪ್ರದರ್ಶನ ನೀಡಲಾಗುತ್ತಿತ್ತು.

'ನಾವು ವರ್ಷಗಳಿಂದ ಅನುಭವಿಸಿದ ನೋವು ಏನೆಂಬುದು ಈಗ ನಿಮಗೂ ಅರ್ಥವಾಗಿರಬಹುದು. ಇದರಲ್ಲಿ 'ಟಾಕ್ಸಿಕ್' ತಂಡದ ತಪ್ಪೇನೂ ಇಲ್ಲ, ಸಿನಿಮಾ ರಿಲೀಸ್ ದಿನಾಂಕವನ್ನು ಮುಂಚಿತವಾಗಿಯೇ ಘೋಷಿಸಲಾಗಿತ್ತು. ಆದರೂ ನಾವೆಲ್ಲರೂ ಭಾರತೀಯರು, ಈ ರೀತಿಯ ದ್ವಿಮುಖ ನೀತಿಯನ್ನು ಬಿಟ್ಟು ಉತ್ತಮ ಸಿನಿಮಾಗಳನ್ನು ಬೆಂಬಲಿಸೋಣ' ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

ಒಟ್ಟಿನಲ್ಲಿ, 'ಕೆಜಿಎಫ್' ಸರಣಿಯ ಬಳಿಕ ಯಶ್ ಅವರ 'ಟಾಕ್ಸಿಕ್' ಸಿನಿಮಾ ತೆಲುಗು ಮಾರುಕಟ್ಟೆಯಲ್ಲಿ ಯಾವ ಮಟ್ಟದ ಕ್ರೇಜ್ ಸೃಷ್ಟಿಸಿದೆ ಎಂಬುದಕ್ಕೆ ಹೈದರಾಬಾದ್‌ನ ಈ ಚಿತ್ರಮಂದಿರಗಳ ಬೆಳವಣಿಗೆಯೇ ಪ್ರತ್ಯಕ್ಷ ಸಾಕ್ಷಿಯಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ದರ್ಶನ್​ಗೆ ಈ ಬಾರಿ ರಾಖಿ ಕಟ್ತಾರಾ ಸೋನಲ್​ ಮೊಂಥೆರೋ? ಎರಡೆರಡು ಗುಡ್​ನ್ಯೂಸ್​ ಕೊಟ್ಟ ನಟಿ ಹೇಳಿದ್ದೇನು
55 ವರ್ಷಕ್ಕೆ ಆಟ ನಿಲ್ಲಿಸಿದ ಡಾ.ರಾಜ್ ಕುಮಾರ್ ಉದ್ಘಾಟಿಸಿದ್ದ ಊರ್ವಶಿ ಚಿತ್ರಮಂದಿರ! ಗಟ್ಟಿಮುಟ್ಟಾಗಿದ್ದರೂ ನೆಲಸಮ!