‘ಒಂದೇ ಸಿನಿಮಾದಲ್ಲಿ ನಾಲ್ಕೈದು ಸ್ಟಾರ್ಸ್‌ ನಟಿಸಿದ್ರೆ ಸ್ಯಾಂಡಲ್‌ವುಡ್‌ಗೆ ಒಳ್ಳೆಯದು’: ನಟ ಕೋಮಲ್

Published : Aug 24, 2026, 05:03 PM IST
Komal Kumar Sonal Monteiro

ಸಾರಾಂಶ

‘ಕೋಣ’ ಚಿತ್ರದ ಬಳಿಕ ನಟ ಕೋಮಲ್ ಕುಮಾರ್ ಮತ್ತೊಮ್ಮೆ ವಿಭಿನ್ನ ಕಥೆ ಮತ್ತು ಪಾತ್ರದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಕೋಮಲ್ ಕುಮಾರ್, ಸೋನಲ್‌ ಮೊಂಥೆರೋ ಹಾಗೂ ವಿನೋದ್ ಪ್ರಭಾಕರ್..

‘ಕೋಣ’ ಚಿತ್ರದ ಬಳಿಕ ನಟ ಕೋಮಲ್ ಕುಮಾರ್ ಮತ್ತೊಮ್ಮೆ ವಿಭಿನ್ನ ಕಥೆ ಮತ್ತು ಪಾತ್ರದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಕೋಮಲ್ ಕುಮಾರ್, ಸೋನಲ್‌ ಮೊಂಥೆರೋ ಹಾಗೂ ವಿನೋದ್ ಪ್ರಭಾಕರ್ ಅಭಿನಯದ ಬಹುತಾರಾಗಣದ ‘ರೋಲೆಕ್ಸ್’ ಚಿತ್ರದ ಟೀಸರ್ ಇದೀಗ ಬಿಡುಗಡೆಯಾಗಿದ್ದು, ಸಿನಿಮಾ ಬಗ್ಗೆ ಕುತೂಹಲ ಹೆಚ್ಚಿಸಿದೆ. ಚಿತ್ರದ ಟೈಟಲ್ ಹಾಗೂ ತಾರಾಗಣದ ಕಾರಣದಿಂದಲೇ ಆರಂಭದಿಂದಲೂ ಗಮನ ಸೆಳೆದಿದ್ದ ‘ರೋಲೆಕ್ಸ್’, ಟೀಸರ್ ಮೂಲಕ ತನ್ನದೇ ಆದ ನಿರೀಕ್ಷೆ ಮೂಡಿಸಿದೆ. ಇತ್ತೀಚೆಗೆ ನಡೆದ ಅದ್ದೂರಿ ಸಮಾರಂಭದಲ್ಲಿ ಚಿತ್ರದ ನಿರ್ಮಾಪಕ ಅಂಬಟಿ ಮಧು ಮೋಹನ್ ಕೃಷ್ಣ ಟೀಸರ್ ಅನಾವರಣಗೊಳಿಸಿದರು.

ಕೋಮಲ್‌ಗೆ ಜೋಡಿಯಾದ ಸೋನಲ್‌ ಮೊಂಥೆರೋ

‘ರೋಲೆಕ್ಸ್’ ಚಿತ್ರದಲ್ಲಿ ಕೋಮಲ್ ಕುಮಾರ್‌ಗೆ ನಾಯಕಿಯಾಗಿ ಸೋನಲ್‌ ಮೊಂಥೆರೋ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಕೋಮಲ್ ಜೊತೆ ತೆರೆ ಹಂಚಿಕೊಂಡಿರುವ ಸೋನಲ್, ತಮ್ಮ ಪಾತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಚಿತ್ರದಲ್ಲಿ ಹಿರಿಯ ಕಲಾವಿದರಾದ ಅಚ್ಯುತ್ ಕುಮಾರ್, ಅರುಣಾ ಬಾಲರಾಜ್, ನವೀನ್ ಪಡೀಲ್, ರಾಣಾ ಸೇರಿದಂತೆ ದೊಡ್ಡ ತಾರಾಬಳಗವೇ ಕಾಣಿಸಿಕೊಂಡಿದೆ. ಇದರ ಜೊತೆಗೆ ವಿನೋದ್ ಪ್ರಭಾಕರ್ ವಿಶೇಷ ಪಾತ್ರದಲ್ಲಿ ನಟಿಸಿದ್ದು, ಚಿತ್ರಕ್ಕೆ ಮತ್ತಷ್ಟು ಕುತೂಹಲ ಮೂಡಿಸಿದೆ.

ವಿಭಿನ್ನ ಕಥೆಗಾಗಿ ಹುಡುಕಾಟದಲ್ಲಿದ್ದ ಕೋಮಲ್

ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಕೋಮಲ್ ಕುಮಾರ್, ಬಹಳ ದಿನಗಳಿಂದ ವಿಭಿನ್ನ ಕಥೆಯೊಂದರ ಹುಡುಕಾಟದಲ್ಲಿದ್ದೆ ಎಂದು ಹೇಳಿದ್ದಾರೆ. “ಮಿಸ್ಟರ್ ಗರಗಸ ಚಿತ್ರದ ನಂತರ ಇಂತಹ ಕಥೆಗಾಗಿ ಹುಡುಕಾಟ ನಡೆಸುತ್ತಿದ್ದೆ. ನಿರ್ದೇಶಕ ಶ್ರೀನಿವಾಸ್ ಕಥೆಗೆ ಏನು ಬೇಕೋ ಅದನ್ನು ಮಾಡಿದ್ದಾರೆ” ಎಂದು ತಮ್ಮ ಪಾತ್ರ ಹಾಗೂ ಚಿತ್ರದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು. ವಿನೋದ್ ಪ್ರಭಾಕರ್ ಅವರೊಂದಿಗೆ ನಟಿಸಿರುವುದಕ್ಕೂ ಸಂತಸ ವ್ಯಕ್ತಪಡಿಸಿದ ಕೋಮಲ್, ಹಲವು ನಟರು ಪ್ರತ್ಯೇಕ ಸಿನಿಮಾಗಳನ್ನು ಮಾಡುವ ಬದಲು ಒಂದೇ ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಿದರೆ ಚಿತ್ರರಂಗಕ್ಕೆ ಇನ್ನಷ್ಟು ಒಳ್ಳೆಯದಾಗಲಿದೆ ಎಂಬ ಅಭಿಪ್ರಾಯವನ್ನೂ ಹಂಚಿಕೊಂಡರು.

‘ರೋಲೆಕ್ಸ್’ ತಂಡವೇ ಒಂದು ಕುಟುಂಬ ಎಂದ ಸೋನಲ್

ಚಿತ್ರದ ಅನುಭವ ಹಂಚಿಕೊಂಡ ಸೋನಲ್‌ ಮೊಂಥೆರೋ, ‘ರೋಲೆಕ್ಸ್’ ತಂಡದ ಜೊತೆಗಿನ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ. ನಿರ್ಮಾಪಕರು ತಮ್ಮನ್ನು ಚಿತ್ರೀಕರಣದ ಅವಧಿಯುದ್ದಕ್ಕೂ ಮಗಳಂತೆ ನೋಡಿಕೊಂಡರು. ಇಡೀ ಚಿತ್ರತಂಡ ಕುಟುಂಬದಂತೆ ಇದ್ದಿತು ಎಂದು ಹೇಳಿದ ಅವರು, ಕೋಮಲ್ ಕುಮಾರ್ ಅವರೊಂದಿಗೆ ಕೆಲಸ ಮಾಡಿದ್ದು ಹೊಸ ಅನುಭವ ಮತ್ತು ಕಲಿಕೆಗೆ ಸಹಕಾರಿಯಾಯಿತು ಎಂದಿದ್ದಾರೆ. ಇನ್ನು ಮುಂದೆ ಮತ್ತೊಮ್ಮೆ ಕೋಮಲ್ ಜೊತೆ ಕೆಲಸ ಮಾಡುವ ಆಸೆಯನ್ನೂ ಸೋನಲ್ ವ್ಯಕ್ತಪಡಿಸಿದ್ದಾರೆ. ತಮ್ಮ ಆಪ್ತ ಸ್ನೇಹಿತ ವಿನೋದ್ ಪ್ರಭಾಕರ್ ಅವರ ಪಾತ್ರವೂ ಚೆನ್ನಾಗಿ ಮೂಡಿಬಂದಿದ್ದು, ಈವರೆಗೆ ತಾವು ಮಾಡಿರದ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಾಗಿ ಅವರು ಕುತೂಹಲ ಹೆಚ್ಚಿಸಿದ್ದಾರೆ.

‘ಎಲ್ಲರನ್ನೂ ನಗಿಸಿಕೊಂಡು ಹೋಗುವ ಸಿನಿಮಾ’ ಎಂದ ವಿನೋದ್

‘ರೋಲೆಕ್ಸ್’ನಲ್ಲಿ ವಿನೋದ್ ಪ್ರಭಾಕರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಮೂಲಕ ಸೋನಲ್‌ ಮೊಂಥೆರೋ ಜೊತೆ ಮತ್ತೊಮ್ಮೆ ನಟಿಸಿರುವುದಾಗಿ ಅವರು ಹೇಳಿದ್ದಾರೆ. ತಮಗೆ ಈ ಸಿನಿಮಾದಲ್ಲಿ ಅವಕಾಶ ಸಿಗಲು ಸೋನಲ್ ಕೂಡ ಕಾರಣರಾಗಿದ್ದಾರೆ ಎಂದು ಹೇಳಿದ ವಿನೋದ್, ‘ರೋಲೆಕ್ಸ್’ ಪ್ರೇಕ್ಷಕರನ್ನು ನಗಿಸಿಕೊಂಡು ಹೋಗುವ ಸಿನಿಮಾ ಎಂಬ ಭರವಸೆ ನೀಡಿದ್ದಾರೆ. ಕೋಮಲ್ ಕುಮಾರ್ ಅವರ ವಿಭಿನ್ನ ಪಾತ್ರ, ಸೋನಲ್‌ ಮೊಂಥೆರೋ ಅವರ ಹೊಸ ರೀತಿಯ ಅಭಿನಯ, ವಿನೋದ್ ಪ್ರಭಾಕರ್ ಅವರ ವಿಶೇಷ ಪಾತ್ರ ಹಾಗೂ ದೊಡ್ಡ ತಾರಾಬಳಗದ ಕಾರಣದಿಂದ ‘ರೋಲೆಕ್ಸ್’ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಸದ್ಯ ಬಿಡುಗಡೆಯಾಗಿರುವ ಟೀಸರ್ ಯೂಟ್ಯೂಬ್‌ನಲ್ಲಿ ಗಮನ ಸೆಳೆಯುತ್ತಿದ್ದು, ಸಿನಿಮಾ ಯಾವ ರೀತಿಯ ಮನರಂಜನೆ ನೀಡಲಿದೆ ಎಂಬ ಕುತೂಹಲ ಮೂಡಿಸಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಲಕ್ಷಗಟ್ಟಲೆ ಜನರ ಮುಂದೆ ಕನ್ನಡ ನಟ 'ಯಶ್ ಸಿನಿಮಾ ಮಾಡೋದು ಫಿಕ್ಸ್‌' ಎಂದು ಘೋಷಿಸಿದ ತೆಲುಗು ನಿರ್ಮಾಪಕ ದಿಲ್‌ ರಾಜು!
Bigg Boss Kannada ವೀಕ್ಷಕರಿಗೆ ಬಿಗ್ ಬಾಸ್ ಮನೆಗೆ ಹೋಗುವ ಅವಕಾಶ ! ಬಂಪರ್ ಆಫರ್ ನೀಡಿದ ಜಿಯೋ ಹಾಟ್‌ ಸ್ಟಾರ್‌