
Rocking Star Yash Personal and Career Successful Journey A to Z Information is here to Know. ರಾಕಿಂಗ್ ಸ್ಟಾರ್ ಯಶ್ ಅವರ ವೈಯಕ್ತಿಕ ಮತ್ತು ವೃತ್ತಿಜೀವನದ ಯಶಸ್ವಿ ಪಯಣದ ಎ ಟು ಝಡ್ (A to Z) ಮಾಹಿತಿ ಇಲ್ಲಿದೆ.
ಯಶ್ ಮೊದಲ ಹೆಸರು ನವೀನ್ ಕುಮಾರ್ ಗೌಡ. (ಯಶ್ ಅಮ್ಮ ಹೇಳಿದಂತೆ, ಮೊಟ್ಟಮೊದಲ ಹೆಸರು ಯಶವಂತ್). ಯಶ್ ಅವರ ತಂದೆ ಕರ್ನಾಟಕದಲ್ಲಿ ಬಸ್ ಡ್ರೈವರ್ ಅಗಿ ಕೆಲಸ ಮಾಡುತ್ತಿದ್ದಾರೆ. ಹಾಸನದಲ್ಲಿ ಹುಟ್ಟಿ, ಮೈಸೂರಿನಲ್ಲಿ ಬೆಳೆದು, ಬಾಲ್ಯದಲ್ಲೇ ಮಂಡ್ಯದ ಟಚ್ ಕೂಡ ಹೊಂದಿದ್ದರು ಯಶ್. ಮಂಡ್ಯದ 'ಅಣ್ತಮ್ಮ' ಎಂಬ ಯಶ್ ಡೈಲಾಗ್ ಈಗಲೂ ಸಖತ್ ಫೇಮಸ್. ಬಳಿಕ ಯಶ್ ಅವರು ನಟರಾಗಲು, ಮೈಸೂರಿನಿಂದ ಕೇವಲ 300 ರೂಪಾಯಿ ಜೊತೆಗೆ ಬೆಂಗಳೂರಿಗೆ ಬಂದರು. ಸಿನಿಮಾರಂಗದಲ್ಲಿ ಹೀರೋ ಆಗಿ ಮಿಂಚಬೇಕೆಂಬ ಏಕೈಕ ಆಸೆಯಿಂದ ಬಂದ ನವೀನ್ ಕುಮಾರ್‌ಗೆ ಯಾವುದೇ ಸೂಕ್ತ ಆಸರೆ ಇರಲಿಲ್ಲ.
ಸಿನಿಮಾರಂಗದಲ್ಲಿ ಯಾವುದೇ ಗಾಡ್ ಫಾದರ್ ಹೊಂದಿರದಿದ್ದ ನವೀನ್ ಆಗ 'ಬೆನಕ' ನಾಟಕ ತಂಡ ಸೇರಿಕೊಂಡರು. ಶುರುವಿನಲ್ಲಿ ನಟನೆಗೆ ಯಾವುದೇ ಅವಕಾಶ ಸಿಕ್ಕಿರಲಿಲ್ಲ. ಬೆನಕ ತಂಡದಲ್ಲಿ ಬ್ಯಾಕ್‌ಸ್ಟೇಜ್ ಕೆಲಸ ಕಲಿಯುತ್ತ ಅದರಲ್ಲೇ ತಮ್ಮ ಹೊಟ್ಟೆಪಾಡು ಕಂಡುಕೊಂಡರು. ಥಿಯೇಟರ್ ಕಸ ಗುಡಿಸುವುದು, ಬೆನಕ ತಂಡದ ಸದಸ್ಯರಿಗೆ, ನಟ-ನಟಿಯರಿಗೆ ಟೀ-ಕಾಫಿ ತರುವುದು, ಸಾಮಾನುಗಳನ್ನು ಹೊತ್ತುಕೊಂಡು ಹೋಗುವುದು, ಫ್ರೀ ಟೈಂನಲ್ಲಿ ಸಿನಿಮಾ ಸೆಟ್‌ಗೆ ಹೋಗಿ ಕೆಲಸ ಮಾಡುವುದು ಹೀಗೆ ಎಲ್ಲಾ ಕೆಲಸಗಳನ್ನು ಮಾಡಿದ್ದಾರೆ. ರಾತ್ರಿ ಬೇರೆ ಕಡೆ ಮಲಗಲು ಜಾಗವಿಲ್ಲದೇ ಅದೇ ಬೆನಕ ರಂಗಮಂದಿರದ ಮೂಲೆಯಲ್ಲೆಲ್ಲೋ ನಿದ್ದೆ ಮಾಡುತ್ತಿದ್ದರು. ಒಂದು ಹೊತ್ತಿನ ಊಟದ ಗ್ಯಾರಂಟಿ ಕೂಡ ಅಂದು ನವೀನ್‌ಗೆ ಇರಲಿಲ್ಲ.
ರಂಗಭೂಮಿ, ನಾಟಕಗಳಲ್ಲಿ ಬಳಿಕ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡ ನಟ ನವೀನ್ ಕುಮಾರ್, ಮೊಟ್ಟಮೊದಲ ಬಾರಿಗೆ 'ಉತ್ತರಾಯಣ' ಹೆಸರಿನ ಧಾರಾವಾಹಿಯಲ್ಲಿ ಒಂದು ಪಾತ್ರದ ಮೂಲಕ ಸೀರಿಯಲ್ ಲೋಕಕ್ಕೆ (2007) ಕಾಲಿಟ್ಟರು. ಬಳಿಕ 'ನಂದ ಗೋಕುಲ' ಧಾರಾವಾಹಿಯಲ್ಲಿ ಕಾಣಿಸಿಕೊಂಡರು. ಅಲ್ಲಿಯೇ ಅವರಿಗೆ ನಟಿ ರಾಧಿಕಾ ಪಂಡಿತ್ (ಈಗ ಯಶ್ ಪತ್ನಿ) ಸಹನಟಿಯಾಗಿ ಪರಿಚಯ ಆದರು. ಶುರುವಿನಲ್ಲಿ ನವೀನ್-ರಾಧಿಕಾ ಇಬ್ಬರೂ ಜಸ್ಟ್ ಸ್ನೇಹಿತರಷ್ಟೇ ಆಗಿದ್ದರು. ಅವರಿಬ್ಬರೂ ಜೊತೆಯಾಗಿ ನಟಿಸುತ್ತಿದ್ದರು, ಜಸ್ಟ್ ಫ್ರೆಂಡ್ಸ್ ಎಂಬಂತಿದ್ದರು. ಇದೇ ವೇಳೆಯಲ್ಲಿ ನಟ ನವೀನ್ ಕುಮಾರ್ ಅವರು 'ಜಂಭದ ಹುಡುಗಿ' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು.
ಆದರೆ, ಯಶ್ ಅಸಲಿ ಆಟ ಶುರುವಾಗಿದ್ದೇ 2008ರಲ್ಲಿ. ರಾಧಿಕಾ ಪಂಡಿತ್-ಶುಭಾ ಪೂಂಜಾ ನಟನೆಯ 'ಮೊಗ್ಗಿನ ಮನಸ್ಸು' ಚಿತ್ರದಲ್ಲಿ ನಟ ನವೀನ್ ಕುಮಾರ್ ನಟಿಸಿದರು. ಈ ಸಿನಿಮಾದಲ್ಲಿ ಅವರ ಹೆಸರು 'ಯಶ್' ಎಂದು ಬದಲಾಯಿತು. 'ಮೊಗ್ಗಿನ ಮನಸ್ಸು' ಚಿತ್ರದಲ್ಲಿ ನಟಿ ರಾಧಿಕಾ ಪಂಡಿತ್ ಗೆಳೆಯನಾಗಿ ಕಾಣಿಸಿಕೊಂಡ ನಟ ಯಶ್ ಅದರಲ್ಲಿನ ನಟನೆ ಹಾಗೂ ಸೂಪರ್ ಡಾನ್ಸ್ ಮೂಲಕ ಕನ್ನಡ ಸಿನಿಪ್ರೇಕ್ಷಕರ ಗಮನಸೆಳೆದರು. ಜೊತೆಗೆ, ಈ ಸಿನಿಮಾ ಸೂಪರ್ ಹಿಟ್ ಆಗುವ ಮೂಲಕ ನಟ ಯಶ್ ಅವರು ಕರ್ನಾಟಕದ ಮನೆಮಾತಾದರು.
ಆ ಬಳಿಕ ನಟ ಯಶ್ ಅವರು ಬಹಳಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ರಾಜಧಾನಿ, ಗೂಗ್ಲಿ, ಕಿರಾತಕ, ಮೊದಲಾ ಸಲ, ರಾಜಾಹುಲಿ, ಮಿಸ್ಟರ್ & ಮಿಸಸ್ ರಾಮಾಚಾರಿ, ಡ್ರಾಮಾ ಹೀಗೆ ಸಾಲುಸಾಲು ಸಿನಿಮಾಗಳಲ್ಲಿ ನಟಿಸುತ್ತ ಒಂದೊಂದೇ ಹೆಜ್ಜೆ ಮೇಲೇರುತ್ತ ಬಂದರು, ನಟನಿಂದ, ನಾಯಕ, ನಾಯಕನಿಂದ ಸ್ಟಾರ್ ನಟ ಪಟ್ಟಕ್ಕೇರಿದರು ಯಶ್. ಅಷ್ಟರಲ್ಲಿ ಸ್ನೇಹಕ್ಕೇ ಮೀರಿ ಪ್ರೀತಿಯಲ್ಲಿ ಬಿದ್ದಿದ್ದ ಯಶ್-ರಾಧಿಕಾ ಜೋಡಿ, 2016ರಲ್ಲಿ ಅಧಿಕೃತವಾಗಿ ಮದುವೆಯಾದರು.
20 ಡಿಸೆಂಬರ್ 2018 ರಲ್ಲಿ ಪ್ರಶಾಂತ್ ನೀಲ್ ನಿರ್ದೇಶನದ 'ಕೆಜಿಎಫ್-1' ಸಿನಿಮಾ ಮೂಲಕ ನಟ ಯಶ್ ಅವರು ಪ್ಯಾನ್ ಇಂಡಿಯಾ ನಟರಾಗಿ ಗುರುತಿಸಿಕೊಂಡರು. ಬಳಿಕ ಏಪ್ರಿಲ್ 14ರಂದು 2022 ಬಿಡುಗಡೆಯಾದ 'ಕೆಜಿಎಫ್-2' ಸಿನಿಮಾ ಮೂಲಕ ನಟ ಯಶ್ ಅವರು ಪ್ಯಾನ್ ಇಂಡಿಯ್ ಟಾಪ್ ಸ್ಟಾರ್ ಆಗಿ ಜಾಗತಿಕವಾಗಿ ಗುರುತಿಸಿಕೊಂಡರು. ಕೆಜಿಎಫ್-1 ಹಾಗೂ ಕೆಜಿಎಫ್-2 ಸಿನಿಮಾಗಳು ಸೂಪರ್ ಹಿಟ್ ಆದ ಬಳಿಕ ನಟ ಯಶ್ ಅವರು ಕನ್ನಡ ಚಿತ್ರರಂಗವನ್ನು ಜಾಗತ್ತಿಗೆ ಪರಿಚಿಯಸಿದ ಕೀರ್ತಿಗೆ ಪಾತ್ರರಾದರು. ಇಲ್ಲಿಂದ ಶುರುವಾಗಿದ್ದೇ 'ಪ್ಯಾನ್ ವರ್ಲ್ಡ್ ಸಿನಿಮಾ' ಆಟ.
ಹೌದು, ನಟ ಯಶ್ ಅವರು ಕೆಜಿಎಫ್ 'ರಾಕಿ ಭಾಯ್' ಮೂಲಕ ಕನ್ನಡ ಚಿತ್ರವನ್ನು ಭಾರತೀಯ ಚಿತ್ರರಂಗಕ್ಕೆ ಕೊಂಡೊಯ್ದ ಬಳಿಕ, ಇನ್ನೂ ಹೆಚ್ಚಿನ ಕನಸು ಕಾಣತೊಡಗಿದರು. ಅದು ಕನ್ನಡ ಸಿನಿಮಾವನ್ನು ಜಾಗತಿಕ ಮಟ್ಟಕ್ಕೆ ಅಂದರೆ, ಹಾಲಿವುಡ್ ಸಿನಿಮಾದ ಮಟ್ಟಕ್ಕೆ ಕೊಂಡೊಯ್ಯುವುದು. ಮಲಯಾಳಂ ನಿರ್ದೇಶಕಿ ಗೀತೂ ಮೋಹನ್‌ದಾಸ್ ಹೇಳಿದ ಕಥೆ ಒಪ್ಪಿ, ಅವರೊಂದಿಗೆ ನಟ ಯಶ್ ಅವರು ಚಿತ್ರಕಥೆ-ಸಂಭಾಷಣೆಯಲ್ಲಿ ತೊಡಗಿಸಿಕೊಂಡು 'ಟಾಕ್ಸಿಕ್' ಎಂಬ ಬಿಗ್ ಬಜೆಟ್ ಹಾಗೂ ತಾರಾಗಣದ 'ಪ್ಯಾನ್ ವರ್ಲ್ಡ್' ಸಿನಿಮಾ ಘೋಷಿಸಿದರು. ಜೊತೆಗೆ ಈ ಸಿನಿಮಾದ ನಿರ್ಮಾಣದಲ್ಲಿ ಕೆವಿಎನ್ ಸಂಸ್ಥೆಯ ವೆಂಕಟ್ ಕೆ ನಾರಾಯಣ ಅವರೊಂದಿಗೆ ಕೂಡ ಕೈಜೋಡಿಸಿದರು.
ಇದೀಗ, ಕನ್ನಡದ ನಟ ರಾಕಿಂಗ್ ಸ್ಟಾರ್ ಯಶ್ ಅವರು ಜಾಗತಿಕ ಮಟ್ಟದ 'ಟಾಕ್ಸಿಕ್' ಸಿನಿಮಾ ಮೂಲಕ ಕನ್ನಡ ಚಿತ್ರರಂಗವನ್ನು ವಿಶ್ವದ ಮಟ್ಟದಲ್ಲಿ ಮೆರೆಸಲು ಸಜ್ಜಾಗಿದ್ದಾರೆ. ಬಹುತಾರಾಗಣ, ಬಿಗ್ ಬಜೆಟ್ ಹೊಂದಿರುವ ಪ್ಯಾನ್ ವರ್ಲ್ಡ್ ಸಿನಿಮಾ ಟಾಕ್ಸಿಕ್ ಮೂಲಕ ಕನ್ನಡಿಗ ನಟ ಯಶ್ ಅವರು 'ಪ್ಯಾನ್ ವರ್ಲ್ಡ್' ಸ್ಟಾರ್ ಆಗುವ ಕ್ಷಣ ಸಮೀಪಿಸಿದೆ. ಇದೇ ತಿಂಗಳು, ಅಂದರೆ 26 ಆಗಸ್ಟ್ 2026ರಂದು ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಜಗತ್ತಿನಾದ್ಯಂತ ಬಿಡುಗಡೆ ಆಗಲಿದೆ. ಈಗಾಗಲೇ ಸಾಂಗ್ಸ್, ಟ್ರೇಲರ್ ಮೂಲಕ ಹೊಸ ದಾಖಲೆ ಬರೆದಿರುವ ನಟ ಯಶ್ ಟಾಕ್ಸಿಕ್ ಸಿನಿಮಾ, ಬಿಡುಗಡೆಗೂ ಮೊದಲೇ ಬಹಳಷ್ಟು ದಾಖಲೆ ಬರೆದು ಆರ್ಭಟ ಶುರುಮಾಡಿದೆ. ಮುಂಗಡ ಟಿಕೆಟ್ ಕೂಡ ದಾಖಲೆ ಮಟ್ಟದಲ್ಲಿ ಮಾರಾಟ ಅಗಿವೆ.
ಸಿನಿಮಾ ಪಂಡಿತರ ಲೆಕ್ಕಾಚಾರದ ಪ್ರಕಾರ, ಯಶ್ ನಟನೆಯ ಟಾಕ್ಸಿಕ್ ಸಿನಿಮಾ, ಬಿಡುಗಡೆಯ ಮೊಟ್ಟಮೊದಲ ದಿನವೇ ಭಾರತೀಯ ಚಿತ್ರರಂಗದಲ್ಲಿ ಹಳೆಯ ಎಲ್ಲಾ ದಾಖಲೆಗಳನ್ನೂ ಮುರಿದು ಹೊಸ ದಾಖಲೆ ಬರೆಯವುದು ನಿಶ್ಚಿತ. ಬಳಿಕ, ಭಾರತದ ನಂಬರ್ ಒನ್ ಸಿನಿಮಾ ಆಗಿ ಹೊರಹಮ್ಮಲಿರುವುದೂ ನಿಶ್ಚಿತ. ಇನ್ನೇನು ಟಾಕ್ಸಿಕ್ ಬಿಡುಗಡೆಗೆ 02 ದಿನವಷ್ಟೇ ಬಾಕಿ! ಜೊತೆಗೆ, ಮುಂದೆ ಯಶ್ ನಟನೆ-ನಿರ್ಮಾಣದ 'ರಾಮಾಯಣ' ಸಿನಿಮಾ ಕೂಡ ಜಾಗತಿಕ ಮಟ್ಟದಲ್ಲಿ ಬಿಡುಗಡೆ ಕಾಣಲಿದೆ. ಈಗಾಗಲೇ ಬಿಡುಗಡೆ ಆಗಿರುವ 'ರಾಮಾಯಣ' ಸಿನಿಮಾದ ಯಶ್ 'ರಾವಣ'ನ ಪಾತ್ರ ಇಡೀ ಜಗತ್ತಿನ ಗಮನಸೆಳೆದಿದೆ. ಆ ಸಿನಿಮಾ ಕೂಡ ಇದೇ ವರ್ಷ ದೀಪಾವಳಿಗೆ ಬಿಡುಗಡೆ ಆಗಲಿದೆ. ಅಷ್ಟರಲ್ಲಾಗಲೇ ಯಶ್ 'ಟಾಕ್ಸಿಕ್' ಸಿನಿಮಾ ಮೂಲಕ ಅಧಿಕೃತವಾಗಿ 'ಪ್ಯಾನ್ ವರ್ಲ್ಡ್ ಸ್ಟಾರ್' ಆಗಿರುತ್ತಾರೆ. ಆದರೂ 'ರಾಮಾಯಣ' ಸಿನಿಮಾ ಯಶ್ ಅವರಿಗೆ ದೊಡ್ಡ ಬೋನಸ್ ಆಗುವುದಂತೂ ಖಂಡಿತ.
ಇದು, ಕರ್ನಾಟಕದಲ್ಲಿ ಹುಟ್ಟಿ-ಬೆಳದು ಇಂದು ಭಾರತೀಯ ಚಿತ್ರರಂಗದ ಟಾಪ್ ಸ್ಟಾರ್ ಆಗಿದ್ದು, ಸದ್ಯವೇ ಅಧಿಕೃತವಾಗಿ 'ಪ್ಯಾನ್ ವರ್ಲ್ಡ್' ಸ್ಟಾರ್ ಆಗಲಿರುವ ನಟ ಯಶ್ ಅವರ ಯಶೋಗಾಥೆ. ಇದು ಅಂತಿಂಥ ಸ್ಟೋರಿ ಅಲ್ಲ, ಚಿತ್ರರಂಗದಲ್ಲಿ ಸಾಧನೆ ಮಾಡಬೇಕು, ಜಗತ್ತೇ ತಿರುಗಿ ನೋಡುವಂತೆ ಬೆಳೆಯಬೇಕು ಎಂಬಂಥವರಿಗೆ ಸ್ಪೂರ್ತಿಯ ಸೆಲೆ, ಸಾಧನೆಯ ಕಲೆ. ಇನ್ನು ಯಶ್ ಕೇವಲ ನಟರಲ್ಲ, ಅವರು ಕನ್ನಡದ ಬ್ರಾಂಡ್..!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.