Ek Love Ya: 'ಮೀಟ್​ ಮಾಡೋಣ, ಇಲ್ಲ ಡೇಟ್​ ಮಾಡೋಣಾ'  ಏಕ್ ಲವ್‌ಯಾ  ಸಾಂಗ್‌ ಹಿಂದಿನ ಪ್ರತಿಭೆ

By Contributor AsianetFirst Published Feb 9, 2022, 5:04 PM IST
Highlights

* ಸಾಹಿತ್ಯದ ಸಾಗರದಲ್ಲಿ ಮಿಂದೆದ್ದ ವಿಜಯ್ ಈಶ್ವರ್
* ಸೋಶಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದ ಹಾಡು
* ರಚಿತಾ ರಾಮ್ ಅಭಿನಯದ ಏಕ್ ಲವ್ ಯಾ
* ಮೀಟ್ ಮಾಡೋಣ.. ಇಲ್ಲಾ ಡೇಟ್ ಮಾಡೋಣ ಸಾಂಗ್ ಬರೆದ ಈಶ್ವರ್

ಸುಕನ್ಯಾ ಎನ್. ಆರ್, ಆಳ್ವಾಸ್ ಕಾಲೇಜು ಮೂಡುಬಿದಿರೆ

ಬೆಂಗಳೂರು(ಫೆ. 09)  ಕನ್ನಡ ಚಿತ್ರರಂಗ (Sandalwood) ಕುಟುಂಬಕ್ಕೆ ಸಾಹಿತ್ಯ ಬರಹಗಾರನಾಗಿ ಪದಗಳನ್ನು ಮುತ್ತಿನಂತೆ ಪೋಣಿಸಿ ಜೀವ ತುಂಬಿದವರು. ಪೋಣಿಸಿದ ಅಕ್ಷರಗಳನ್ನು ಸಾಹಿತ್ಯವನ್ನಾಗಿ ಬದಲಾಯಿಸಿ ಸವಿ ಜೇನನ್ನು ಸಂಗ್ರಹಿಸುವ ದುಂಬಿಯಾದವರು. ಪ್ರೇಕ್ಷಕರ ಕಿವಿ ಇಂಪಾಗಿಸುವ ಮೋಡಿ ಮಾಡಿ ಸಿನಿ ಕ್ಷೇತ್ರಕ್ಕೆ ಸೈಲೆಂಟ್ ಆಗಿ ಎಂಟ್ರಿ ಕೊಟ್ಟ ವ್ಯಕ್ತಿ ವಿಜಯ್ ಈಶ್ವರ್ .

Latest Videos

ಇವರು ಮೂಲತಃ ಬೆಂಗಳೂರಿನ ಆನೇಕಲ್ ತಾಲೂಕಿನ ಇಂಡ್ಲಿವಾಡಿ ಗ್ರಾಮದವರು. ಈಶ್ವರ್ ಮತ್ತು ಉಮಾದೇವಿ ದಂಪತಿಯ ಪುತ್ರ. ಇವರು ಬಿ.ಬಿ.ಎಂ ಶಿಕ್ಷಣವನ್ನು ಕೋರಮಂಗಲ ಆರ್.ಜೆ. ಎಸ್. ಐ.ಎಂ. ಎಸ್ ಸಂಸ್ಥೆಯಲ್ಲಿ ಕಲಿತು, ಎಂ.ಬಿ.ಎ ಶಿಕ್ಷಣವನ್ನು ಸಿಕಿಂ ಮಣಿಪಾಲ್ ಯುನಿವರ್ಸಿಟಿಯಲ್ಲಿ ಪೂರೈಸಿದರು.

ಕನ್ನಡ ಚಿತ್ರರಂಗದ ಶ್ರೇಷ್ಠ ನಿರ್ದೇಶಕರಾದ ಜೋಗಿ ಪ್ರೇಮ್ ನಿರ್ದೇಶನದಲ್ಲಿ 'ಏಕ್ ಲವ್ ಯಾ' 'ಸಿನಿಮಾದ ಮೀಟ್ ಮಾಡೋಣ ಇಲ್ಲ ಡೇಟ್ ಮಾಡೋಣ' ಎಂಬ ಹಾಡನ್ನು ಬರೆದು ಎಲ್ಲ ಯುವ ಮನಸ್ಸುಗಳಲ್ಲಿ ಜೋಶ್ ನೀಡಿ ಕರ್ನಾಟಕ ಜನರ ಮನದ ಕದವ ತಟ್ಟುತ್ತಿದ್ದಾರೆ.
 
ಸ್ಯಾಂಡಲ್ ವುಡ್ ನಲ್ಲಿ ಮಿಂಚುತ್ತಿರುವ ಇವರು ಸಿನಿ ಕ್ಷೇತ್ರದಲ್ಲಿ ಬಣ್ಣ ಹಚ್ಚುವ ಮೊದಲು, ಬರಹಗಾರನಾಗಿ ಕಲೆಯನ್ನು ತನ್ನಲ್ಲಿ ಕರಗತವಾಗಿಸಿಕೊಂಡಿದ್ದರು. ಚಿಕ್ಕದಿನಿಂದಲೂ ಕನ್ನಡ ಚಿತ್ರರಂಗದಲ್ಲಿ ಬರಹಗಾರನಾಗಿ ಬೆಳೆಯಬೇಕೆಂಬ ಕನಸು ಕಂಡಂಥ ವ್ಯಕ್ತಿ.

ಎಳೆಯ ವಯಸ್ಸಿನಿಂದಲೇ ಸಿನಿಮಾಗಳನ್ನು ನೋಡುತ್ತಾ ಹಾಡುಗಳನ್ನು ಕೇಳುವುದರ ಜೊತೆಗೆ ಬರೆಯುವ ಅಭ್ಯಾಸ ಬೆಳೆಸಿಕೊಂಡಿದ್ದರು. ಶಾಲೆಯಲ್ಲಿ ಅನೇಕ ಡ್ರಾಮಾ, ನೃತ್ಯ ಹಾಗೂ ಪ್ರತಿಭಾಕಾರಂಜಿ ಸ್ಪರ್ಧೆ ಗಳಲ್ಲಿ ಭಾಗವಹಿಸುವುದರ ಜೊತೆ ತಾವು ಭಾಗವಹಿಸಿದ ಕಾರ್ಯಕ್ರಮಕ್ಕೆ ತಮ್ಮದೇ ಶೈಲಿಯಲ್ಲಿ ಕಥೆ ರಚಿಸಿ ಪಾತ್ರಕ್ಕೆ ಜೀವ ತುಂಬಿ ಬಹುಮಾನಗಳನ್ನು ಪಡೆದುಕೊಳ್ಳುತ್ತಿದ್ದರು.

ಶಿಕ್ಷಣದ ನಂತರ ಇನ್ಫೋಸಿಸ್ ಸಂಸ್ಥೆಗೆ ಆಯ್ಕೆಯಾಗುತ್ತಾರೆ‌. ಎರಡು ತಿಂಗಳು ಎಲೆಕ್ಟ್ರಾನಿಕ್ ಸಿಟಿ ಇನ್ಫೋಸಿಸ್ (Infosys)ನಲ್ಲಿ ಕೆಲಸ ಮಾಡುತ್ತಾ, ಆಸಕ್ತಿ ಹೊಂದಿದಂತಹ  ಕ್ಷೇತ್ರಕ್ಕೂ ವೃತಿ ಜೀವನಕ್ಕೂ ಅಜಗಜಾಂತರ ವ್ಯತ್ಯಾಸವಿದ್ದರೂ ಕೆಲಸದ ಒತ್ತಡದ ನಡುವೆ, ಬಿಡುವಿನ ವೇಳೆಯಲ್ಲಿ ಬರೆಯುತ್ತಿದ್ದರು. ಬರಹವನ್ನು ಅವರು ಬಿಟ್ಟರು ಅವರನ್ನು ಬರಹ ತನ್ನ ಬಳಿ ಆಯಸ್ಕಾಂತದಂತೆ ಸೆಳೆಯುತ್ತಿತ್ತು.

Ek Love Ya: ಸಿಗರೇಟ್ ಸೀನ್‌ಗೆ ಸಂಬಂಧಪಟ್ಟಂತೆ ನೇರವಾಗಿ ಉತ್ತರಿಸಿದ ರಚಿತಾ ರಾಮ್

ಇನ್ಫೋಸಿಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾ, ಜೀವನ ಸೆಟಲ್ ಆಯಿತು. ಸಾಕಪ್ಪಾ ಎಂದು ಯೋಚಿಸುವ ಹಲವಾರು ಮಂದಿ ಆರಾಮವಾಗಿ ಇರಲು ಬಯಸುವ ಈ ಕಾಲದಲ್ಲಿ ವಿಜಯ್ ಅವರ ಅಭಿರುಚಿಯು ವಿಭಿನ್ನವಾಗಿರುವುದು ನಿಜಕೂ ಅಪರೂಪ.

ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಕೈ ತುಂಬ ಸಂಬಳವಿದ್ದರು ಇವರಿಗೆ ತೃಪ್ತಿ ಇರಲಿಲ್ಲ! ಕಾರಣ ಸಿನಿ ಕ್ಷೇತ್ರದಲ್ಲಿನ ಪ್ರೀತಿ ಎಡೆಬಿಡದೆ ಕಾಡುತ್ತಿದ್ದು, ನಾನು ಇನ್ನೇನೋ ಸಾಧನೆ ಮಾಡಬೇಕೆಂಬ ಬಯಕೆಯ ದಾಹ ಹೆಚ್ಚಾಗುತ್ತಿದ್ದಂತೆ  ಎಚ್ಚೇತುಕೊಂಡು ವೃತ್ತಿ ಜೀವನಕ್ಕೆ ಪೂರ್ಣ ವಿರಾಮ ಹಾಕಿ ಕಂಪನಿಯಿಂದ ಹೊರ ಬರುತ್ತಾರೆ .

ಪ್ರಯತ್ನದ ಪಯಣ: ಮೊದಲ ಬಾರಿ ಕಿರುಚಿತ್ರ ಮಾಡಬೇಕೆಂಬ ಯೋಜನೆ ಮಾಡಿ ಎಲ್ಲ ಸಿದ್ಧತೆಗಳಿಗೆ ತಯಾರಾಗುತ್ತಾರೆ.  ಮೊದಲ ಹೆಜ್ಜೆಯಲ್ಲಿಯೇ ಸೋಲು ಅನುಭವಿಸಿದ್ದರು ಧೈರ್ಯ ಕೆಡದೆ ಮರಳಿ ಪ್ರಯತ್ನದ ಬೆನ್ನೇರಿ ಹಿಂಜರಿಯದೆ ಮುನ್ನುಗುತ್ತಾರೆ.‌ ಸ್ನೇಹಿತರ ಜೊತೆಗೂಡಿ ತಮ್ಮದೇ ತಂಡವನ್ನು ರಚಿಸಿಕೊಂಡು ಸಿನಿಮಾಕ್ಕೆ ಸಂಬಂಧಪಟ್ಟ ವಿಷಯವನ್ನು ಚರ್ಚಿಸುತ್ತಾ ಹಂತ ಹಂತವಾಗಿ ತಯಾರಾಗುತ್ತಾರೆ .

Ek Love Ya Song: ಗಂಡ್ ಹೈಕ್ಳ ಎದೆಯಲ್ಲಿ ರಚ್ಚು , ಮೀಟ್ ಆ್ಯಂಡ್ ಡೇಟ್‌

ಆಸಕ್ತಿ ಚೆಲ್ಲಿದ ಬೆಳಕು: ಚಿತ್ರರಂಗವಾಗಲ್ಲಿ ಅಥವಾ ಮಾಧ್ಯಮ ಕ್ಷೇತ್ರಗಳಲ್ಲಿ ಬೆಳೆದು ನಿಲ್ಲುವುದು ನಾವು ಊಹೇ ಮಾಡಿಕೊಂಡಷ್ಟು ಸುಲಭದ ವಿಷಯವೆನಲ್ಲ. ಪ್ರತಿಯೊಬ್ಬ ವ್ಯಕ್ತಿಯ ಕಲೆಗೆ ಮಾಧ್ಯಮಗಳು ಬೆಲೆ ಕೊಟ್ಟು ಪ್ರಾಮುಖ್ಯ ನೀಡುವುದು. ಆಸಕ್ತಿಯೆಂಬ ಕಿಚ್ಚಿಗೆ ಅವಕಾಶಗಳ ಇಂಧನ ಪ್ರತಿಭೆಯನ್ನು ಪ್ರಕಾಶಮಾನವಾಗಿಸುತ್ತದೆ ಎಂಬ ಮಾತಿನಂತೆ ಸಾಗುತ್ತಾರೆ.

ಕೆಂಪೇಗೌಡ ಎಂಬ ಗೆಳೆಯ ಇವರ ಪ್ರತಿಭೆಯನ್ನು ಅರಿತು ಇವರನ್ನು ವಾಹಿನಿಯೊಂದಕ್ಕೆ ಕರೆದುಕೊಂಡು ಹೋಗಿ ಭುವನ್ ಶಾಸ್ತ್ರಿ ಎಂಬುವವರಿಗೆ ಪರಿಚಯಿಸಿ ಅಲ್ಲಿಯೇ ಕೆಲಸ ಆರಂಭಿಸುತ್ತಾರೆ. ತಮ್ಮ ಮಧುರವಾದ ಕಂಠದ ಮೂಲಕ ವೀಕ್ಷಕರನ್ನು ರಂಜಿಸಿ 'ಐತಾಲಕಡಿ' ಎಂಬ ಕಾರ್ಯಕ್ರಮವನ್ನು ಮಾಡುತ್ತಾ ಸುಮಾರು 350 ಎಪಿಸೋಡು ನೆರವೇರಿಸುತ್ತಾರೆ. ಸ್ಕ್ರಿಪ್ಟ್ ಬರೆದು ನಟನೆ ನಿರೂಪಣೆಯಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಳುತ್ತಾರೆ.

ಸಿನಿ ಕ್ಷೇತ್ರಕ್ಕೆ ಪದಾರ್ಪಣೆ: ಎರಡು ವರ್ಷ ವಾಹಿನಿಯಲ್ಲಿ ಕಾರ್ಯನಿರ್ವಹಿಸಿ 'ಧೈರ್ಯಂ' ಸಿನಿಮಾದಲ್ಲಿ ಅಜಯ್ ರಾವ್ ಅವರ ಸ್ನೇಹಿತನ ಪಾತ್ರದಲ್ಲಿ ಅಭಿನಯಿಸುವ ಮೂಲಕ ಬೆಳ್ಳಿ ಪರದೆಗೆ ಪ್ರವೇಶಿಸುತ್ತಾರೆ.

ನಂತರ ಡಾ.ರಾಜು ಕೃಷ್ಣ ಮೂರ್ತಿ  ಅವರ ನಿರ್ಮಾಣದಲ್ಲಿ 'ಲೌಡ್ ಸ್ಪೀಕರ್' ಎಂಬ ಪ್ರೊಜೆಕ್ಟ್ ಗೆ ಡೈಲಾಗ್ ರೈಟರ್ ಜೊತೆಗೆ ಸಹ ನಿರ್ದೇಶಕನಾಗಿ ಪರಿಚಯಗೊಂಡು ಆ ಸಿನಿಮಾದ ಚಿತ್ರೀಕರಣ ಮುಗಿದು ಟ್ರೈಲರ್ ಬಿಡುಗಡೆ ಆಗುವ ಸಂದರ್ಭದಲ್ಲಿ ಹಲವಾರು ಅನ್ಯ ಭಾಷೆಯ ಸಿನಿಮಾಗಳ ಹಾವಳಿಯಿಂದ  ತುಂಬ ಸೋಲು ನಷ್ಟಗಳನ್ನು ಅನುಭವಿಸುತ್ತಾರೆ.

ಆದರೂ ನಿರ್ಮಾಪಕ ರಾಜು ಧೈರ್ಯ ತುಂಬಿ ತಂಡವನ್ನು ಬೆಂಬಲಿಸಿ, ನೋವುಗಳ ನಡುವೆ ನಗುಮುಖದಿಂದ ಎಲ್ಲರನ್ನು ಹುರಿದುಂಬಿಸುತ್ತಾರೆ. ಅಭಿಷೇಕ್ ಜೈನ್ ನಿರ್ದೇಶನದ 'ಡಿಂಗ' ಸಿನಿಮಾದಲ್ಲಿ ಸಹ ನಿರ್ದೇಶಕನಾಗಿ, ಬರಹಗಾರನಾಗಿ ಕೆಲಸ ಮಾಡುತ್ತಾರೆ.

ಡಿಂಗ ಸಿನಿಮಾ ವಿಜಯ್  ಹೆಸರು ತಂದುಕೊಡುತ್ತದೆ. ಸಂಜಿತ್ ಹೆಗಡೆ ಮತ್ತು ಅನುರಾಧ ಭಟ್ ಹಾಡಿದ 'ಸುಮ್ ಸುಮ್ನೆ ನಗುತ್ತಾಳೆ'  ಸಾಂಗ್ ಗೆ ಇವರೇ ಸಾಹಿತ್ಯ ನೀಡಿದ್ದು ಸಿನಿ ಪ್ರಿಯರ ಬಾಯಿಯಲ್ಲಿ ಇವತ್ತಿಗೂ ಟ್ರೆಂಡಿಂಗ್ ನಲ್ಲಿದೆ.

ಕೈ ಹಿಡಿದ ಅದೃಷ್ಟ:  ಅನೇಕ ಸವಾಲುಗಳನ್ನು ದಾಟಿ ನಷ್ಟಗಳನ್ನು ಅನುಭವಿಸಿ ಚಿತ್ರರಂಗದಲ್ಲಿ ನೆಲೆಯೂರಲು, ಅಡಿಪಾಯ ಹಾಕುತ್ತಾರೆ. ಶ್ವೇತಾ  ಸಂಜಿವ್ ಎಂಬುವವರು ವಿಜಯ್ ಅವರ ಬರವಣಿಗೆಯ ಆಸಕ್ತಿಯನ್ನು ಜೋಗಿ ಪ್ರೇಮ್ ಅವರಲ್ಲಿ ವ್ಯಕ್ತಪಡಿಸಿ ಅವಕಾಶ ಕೊಡುವಂತೆ ಕೇಳುತ್ತಾರೆ.  ನಿರ್ದೇಶಕ ಪ್ರೇಮ್ (Jogi Prem) ಅವರು ಕರೆ ಮಾಡಿ ನಮ್ಮ ಆಫೀಸ್ ಗೆ ಬರುವಂತೆ ಹೇಳುತ್ತಾರೆ. ಆ ಕ್ಷಣಕೆ  ಭ್ರಮೆಯೋ ಅಥವಾ ನಿಜವೋ ಎಂದು ಅರಿಯಲು ಬಹಳ ಸಮಯ ತೆಗೆದುಕೊಂಡು ಮನಸಲ್ಲಿ ಸಾವಿರಾರು ಪ್ರಶ್ನೆ ಕುತೂಹಲ ಪ್ರೇಮ್ ಸರ್ ನನಗೆ ಫೋನ್ ಮಾಡಿದ್ದು ನಿಜಾನಾ ? ಎಂಬ ಆಚಾರ್ಯ ,ಆ ದಿನವಿಡೀ ಭ್ರಮೆಯ ಗುಂಗಿನಲ್ಲಿ ಇದೇನೋ ಅನ್ನುವಂತೆ ಮಾಡಿದೆ ಎಂದು ಹೇಳುತ್ತಾರೆ ವಿಜಯ್.

ಯುಗಾದಿ ಹಬ್ಬದ ದಿನ ಡೈರೆಕ್ಟರ್ ಪ್ರೇಮ್ ಇವರನ್ನು ಮನೆಗೆ ಕರೆದು ಕುಟುಂಬದ ಸದಸ್ಯ ಎಂಬ ಭಾವನೆ ಮೂಡುವಂತೆ ಮಾಡಿ ಹಬ್ಬದ ವಾತಾವರಣದಲ್ಲಿ 'ಏಕ್ ಲವ್ ಯಾ' ಸಿನಿಮಾದ ಕಥೆಯನ್ನು ವಿವರಿಸಿ ಈ ಸಿನಿಮಾಕ್ಕೆ ಡೈಲಾಗ್ ಬರೆಯುವ ಗೋಲ್ಡನ್ ಅವಕಾಶವನ್ನು ಕೊಡುತ್ತಾರೆ. ವಿಜಯ್ ಬರೆದ ಡೈಲಾಗ್ ಎಲ್ಲರಿಗೂ ಇಷ್ಟವಾಗುತ್ತದೆ. ಈ ಅವಕಾಶ ಇವರ ಜೀವನದ ದೊಡ್ಡ ತಿರುವು ಎಂದು ಹೇಳಿದರೆ ತಪ್ಪಾಗಲಾರದು.

'ಏಕ್ ಲವ್ ಯಾ' ತಂದ ಪ್ರಶಂಸೆ: ಏಕ್ ಲವ್ ಯಾ ಚಿತ್ರಕೆ ಡೈಲಾಗ್ ಬರೆಯುವುದರ ಜೊತೆಗೆ ಸಿನಿಮಾದ ಒಂದು ಹಾಡನ್ನು ಬರೆಯುವ ವಿಶೇಷ ಅವಕಾಶವನ್ನು ಕಲ್ಪಿಸಿ ಕೊಟ್ಟಿದಾರೆ ಜೋಗಿ ಪ್ರೇಮ್.

'ಮೀಟ್ ಮಾಡೋಣ ಅಥವಾ ಡೇಟ್ ಮಾಡೋಣ'  ಹಾಡನ್ನು ಬರೆದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಹಲವಾರು ಸಂಗೀತ ಪ್ರಿಯರು ಸಿನಿ ಪ್ರಿಯರು ಬರಹಗಾರಯಾರೆಂದು ಹುಡುಕಿ ಪ್ರಶಂಸೆಯ ಮಾತುಗಳನ್ನು ವ್ಯಕ್ತಪಡಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳುತ್ತಾರೆ.

ಮನದ ಮಾತು: ಕನ್ನಡ ಚಿತ್ರರಂಗದಲ್ಲಿ ನಾನು ಕೂಡ ಒಬ್ಬ ಕುಟುಂಬದ ಸದಸ್ಯನಾಗಿರುವುದಕ್ಕೆ ಕಾರಣ  ಪ್ರೇಮ್ ಸರ್ ಹಾಗೂ ರಕ್ಷಿತಾ ಮೇಡಂ ನನ್ನ ಜೀವನದ ಗುರುಗಳು ಅವತ್ತು ನನ್ನನ್ನು ಗುರುತಿಸಿ ಅವಕಾಶ ನೀಡಿದ್ದಕೆ ಇವತ್ತು ನಾನು ಎಲ್ಲರಿಗೂ ಪರಿಚಯವಾಗಿದ್ದೇನೆ. 'ಏಕ್ ಲವ್ ಯಾ' ಸಿನಿಮಾದಲ್ಲಿ ನನ್ನನ್ನು ಒಬ್ಬನಾಗಿ ಸೇರಿಸಿಕೊಂಡು ಬೆನ್ನುತಟ್ಟಿ  ಪ್ರೋತ್ಸಾಹಿಸಿದಕ್ಕೆ ಎಂದಿಗೂ ನಾನು ಆಭಾರಿಯಾಗಿರುತ್ತೇನೆ ಎನ್ನುತ್ತಾರೆ.

ಬರಹದ ಭರವಸೆಯ ಬೆಳಕು: ಫೆಬ್ರವರಿ 24 ರಂದು 'ಏಕ್ ಲವ್ ಯಾ' ಸಿನಿಮಾ ಬಿಡುಗಡೆ ಯಾವುದಕ್ಕೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಎಲ್ಲ ಹಾಡುಗಳು ಸೂಪರ್ ಹಿಟ್ ಆಗಿ ಪ್ರತಿದಿನ ಪ್ರೇಕ್ಷಕರು ಸಿನಿಮಾ ಬಿಡುಗಡೆಗೆ ದಿನ ಲೆಕ್ಕ ಹಾಕುವಂತೆ ಮಾಡುವುದರ ಜೊತೆಗೆ ಧ್ರುವ ಸರ್ಜಾ ಮತ್ತು ಜೋಗಿ ಪ್ರೇಮ್ ಅವರ ಕಾಂಬಿನೇಷನ್ ನಲ್ಲಿ ಕೆ.ವಿ.ಎನ್. ಪ್ರೊಡಕ್ಷನ್ ನಲ್ಲಿ ಮೂಡಿಬರುತ್ತಿರುವ ಹೊಸ ಸಿನಿಮಾಗೆ ವಿಜಯ್ ಅವರು ಬರಹಗಾರನಾಗಿ ಕೆಲಸ ಮಾಡುವ ಅವಕಾಶ ಕೈ ಹಿಡಿದಿದ್ದು ಅವರ  ಸಂತೋಷವನ್ನು ದುಪಟ್ಟು ಮಾಡಿದೆ.

ನಿರ್ದೇಶಕನಾಗಬೇಕೆಂಬ ತವಕ: ಸಾಹಿತ್ಯಗಾರನಾಗಿ ಪದಗಳ ಮೌಲ್ಯ ಅರಿತು, ಪ್ರಯತ್ನದ ದಾರಿಯಲ್ಲಿ ಅವಕಾಶಗಳ ಕೈ ಹಿಡಿದು  ಸಾಗುತ್ತಲೇ ತನ್ನದೇ ನಿರ್ದೇಶನದಲ್ಲಿ ಮುಂದೆ ಸಿನಿಮಾ ಮೂಡಿ ಬರುವಂತೆ ತಯಾರಿಗಳಿಗೆ ಸಜ್ಜಾಗುತ್ತಿದ್ದಾರೆ. ಇವರ ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರೆಯುವಲ್ಲಿ ಸಂಶಯವಿಲ್ಲ . ನಿರ್ದೇಶಕ ಪ್ರೇಮ್ ಅವರ ಮಾರ್ಗದರ್ಶನದ ದಾರಿಯಲಿ ಸಾಗುತ್ತಿರುವ ವಿಜಯ್ ಮುಂದೊಂದು ದಿನ ಕನ್ನಡ ಚಿತ್ರರಂಗಕ್ಕೆ ಉತ್ತಮ ನಿರ್ದೇಶಕರಾಗುವುದರಲ್ಲಿ ಅನುಮಾನವಿಲ್ಲ.

click me!