ಲವ್ ಮಾಕ್ಟೇಲ್ 2 ಪ್ರೀ-ರಿಲೀಸ್ ಇವೆಂಟ್‌ನಲ್ಲಿ ಭಾವುಕರಾದ ಡಾರ್ಲಿಂಗ್ ಕೃಷ್ಣ. ಪದೇ ಪದೇ ಮಿಲನಾ ಮುಖ ನೆನಪಾಗುತ್ತಿತ್ತಂತೆ.
ಫೆಬ್ರವರಿ 11ರಂದು ರಾಜ್ಯಾದ್ಯಾಂತ ಲವ್ ಮಾಕ್ಟೇಲ್ 2 ಸಿನಿಮಾ ಬಿಡುಗಡೆಯಾಗುತ್ತಿದೆ. ಸಿನಿಮಾದ ಪ್ರೀಮಿಯರ್ ಶೋ ಟಿಕೆಟ್ ಬುಕ್ಕಿಂಗ್ ಆರಂಭವಾಗಿದ್ದು, ಪ್ರೀ-ರಿಲೀಸ್ ಕಾರ್ಯಕ್ರವನ್ನು ಅದ್ಧೂರಿಯಾಗಿ ಮಾಡಲಾಗಿತ್ತು. ಕ್ರೇಜಿ ಸ್ಟಾರ್ ರವಿಚಂದ್ರನ್ ಆಗಮಿಸಿ ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ. ಈ ವೇಳೆ ವೇದಿಕೆ ಮೇಲೆ ನಟ ಕಮ್ ನಿರ್ದೇಶಕ ಡಾರ್ಲಿಂಗ್ ಕೃಷ್ಣ ಭಾವುಕರಾಗಿದ್ದಾರೆ.
'ಸಾಮಾನ್ಯವಾಗಿ ನಾನು ಸಿನಿಮಾದಲ್ಲಿ ಆಳುವುದನ್ನು ಇಷ್ಟ ಪಡುವುದಿಲ್ಲ. ನಿಧಿಮಾ ಸತ್ತಾಗ ಕಣ್ಣಲ್ಲಿ ನೀರಿತ್ತು. ಆದರೆ ಅತ್ತಿರಲಿಲ್ಲ. ಈ ಲವ್ ಮಾಕ್ಟೆಲ್ ಸಿನಿಮಾ ಯಾಕೆ ಶುರು ಮಾಡಿದ್ದು, ಏನು ಸ್ಪೂರ್ತಿಯಾಗಿದ್ದು ಅಂದ್ರೆ ಮಿಲನಾ. ನಾವಿಬ್ರೂ 6-7 ವರ್ಷದಿಂದ ಲವ್ ಮಾಡ್ತಿದ್ವಿ. ತುಂಬಾ ಟ್ಯಾಲೆಂಟ್ ಇರುವ ಹುಡುಗಿಯನ್ನು ನಾನು ಮದುವೆ ಆಗ್ತಿದ್ದೀನಿ ಅಂತ ಗೊತ್ತಾಗುತ್ತಿದ್ದಂತೆ, ನನ್ನ ವೃತ್ತಿ ಜೀವನ ಹೇಗಿದೆ ಎಂದು ನೋಡಿದಾಗ ನಾನು ರೆಡ್ ಲೈಟ್‌ನಲ್ಲಿ ನಿಂತಿರುವುದು ಗೊತ್ತಾಗಿತ್ತು. ಮಿಲನಾಗೆ ಇರುವುದು ಒಂದೇ ethics. ಸಿನಿಮಾ ಇರಲಿ, ಜೀವನ ಇರಲಿ ಒಬ್ಬ ವ್ಯಕ್ತಿ ಸೋಲಲಿ, ಗೆಲ್ಲಲಿ ಒಂದು ಸಲ ಲವ್ ಮಾಡಿದ ಮೇಲೆ ಲೈಫ್ ಲಾಂಗ್ ಅವರ ಜೊತೆಯೇ ಇರ್ತೀನಿ ಅನ್ನೋದು. ಇದಕ್ಕೆ ನನ್ನ ಕಂಫರ್ಟ್ ಝೋನ್‌ನಿಂದ ಹೊರ ಬಂದು, ಅವಳಿಗೊಸ್ಕರ ಏನ್ ಆದ್ರೂ ಮಾಡಬೇಕು ಅಂತ ಲವ್ ಮಾಕ್ಟೇಲ್ ಶುರು ಮಾಡಿದ್ದು,' ಎಂದು ಕೃಷ್ಣ ಮಾತನಾಡಿದ್ದಾರೆ.
'ಸಿನಿಮಾ ಶುರು ಮಾಡಿದಾಗ ನಮ್ಮ ಬಳಿ ಹಣ ಇರಲಿಲ್ಲ. ನಮ್ಮ ತಂದೆಯಿಂದ 4-5 ಲಕ್ಷ ರೂ. ಸಾಲ ತೆಗೆದುಕೊಂಡೆ, ಮಿಲನಾ ಅವ್ರು ಸಣ್ಣ ಪುಟ್ಟ ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಳ್ಳುತ್ತಿದ್ದರು. ಅಂದ್ರೆ ಅದರಿಂದ 10-15 ಸಾವಿರ ಬರುತ್ತಿತ್ತು. ಅವನ್ನು ಕೂಡಿಸಿ ಸಿನಿಮಾ ಮಾಡಿದ್ದು. ನಾವು ಒಂದು ದಿನ ಚಿತ್ರೀಕರಣಕ್ಕೆ 20-30 ಸಾವಿರ ಖರ್ಚು ಮಾಡುತ್ತಿದ್ವಿ. ಅದಕ್ಕೆ ಯಾವ ಅಸಿಸ್ಟೆಂಟ್ ಡೈರೆಕ್ಟರ್ ಇರಲಿಲ್ಲ. ಯಾವ ಮೇಕಪ್ ಆರ್ಟಿಸ್ಟ್ ಸಹ ಇರಲಿಲ್ಲ. ನಾವೇ ಎಲ್ಲಾ ಮಾಡಿಕೊಂಡಿರುವುದು. ಫೈಟ್ ಮಾಸ್ಟರ್‌ಗೆ ಸಂಭಾವನೆ ಕೊಡುವ ಪರಿಸ್ಥಿತಿಯಲ್ಲಿ ಇರಲಿಲ್ಲ ನಾನೇ ಕಲಿತಿದ್ದ ಫೈಟ್‌ನ ಬಳಸಿಕೊಂಡು ಮಾಡಿದ್ದು. ಸಿನಿಮಾ ಚೆನ್ನಾಗಿ ಆಗಿತ್ತು. ಖಂಡಿತಾ ಗೆಲ್ಲುತ್ತೆ ಅಂತ ನಂಬಿಕೆ ಇತ್ತು ಆದರೆ...'ಎಂದು ಕೆಲವು ನಿಮಿಷಗಳ ಕಾಲ ಕೃಷ್ಣ ಮೌನವಾಗಿಬಿಟ್ಟರು.
Love Mocktail 2: ಜನರ ನಿರೀಕ್ಷೆ ತಲುಪೋದೇ ಸವಾಲು: ಡಾರ್ಲಿಂಗ್ ಕೃಷ್ಣ'ಮೊದಲ ವಾರ ಕಲೆಕ್ಷನ್ ಸರಿಯಾಗಿ ಆಗಲಿಲ್ಲ. ಕಾರಣ ನಮಗೆ ಸಿಕ್ಕ ಸ್ಕ್ರೀನ್ ಲೆಕ್ಕ. ಎರಡನೇ ವಾರಕ್ಕೆ ಸ್ಕ್ರೀನ್ ಉಳಿಸಿಕೊಳ್ಳಲು ಆಗಲಿಲ್ಲ. ಆಗ ನಾನು 40 ಲಕ್ಷ ರೂ. ಸಾಲ ಮಾಡಿದ್ವಿ. ಮನೆಯಲ್ಲಿ ನಾನು ಒಬ್ಬನೇ ಇದ್ದೆ. ಮಿಲನಾ ಎಲ್ಲಿಯೋ ಹೋಗಿದ್ದರು. ಆಗ ನಾನು ಕನ್ನಡಿ ಮುಂದೆ ನಿಂತು ಅಳುತ್ತಿದ್ದೆ. ನಾನು ದೇವರನ್ನೇ ಪ್ರಶ್ನಿಸುತ್ತಿದ್ದೆ. ಇದಕ್ಕಿಂತ ಏನ್ ಮಾಡ್ಲಿ ನಾನು? 2013ರಿಂದ ಸಿನಿಮಾ ಮಾಡ್ತೀನಿ. ಏನೂ ಆಗುತ್ತಿಲ್ಲ, ಅಂತ ಬೇಸರವಿತ್ತು. ಒಂದೆ ಕಡೆ ಲೈಫ್ ಮುಗಿಯಿತು ಬಿಡಪ್ಪ ಸಾಕು, ಸಿನಿಮಾ ಮಾಡೋದು ಬೇಡ ಅಂತ ಸೂಸೈಡ್ ಮಾಡಿಕೊಳ್ಳೋಣ ಅನ್ನೋ ತರ ಯೋಚನೆ ಬರುತ್ತಿತ್ತು. ಮತ್ತೊಂದು ಕಡೆ ಮಿಲನಾ ಮುಖ ನೆನಪು ಆಗುತ್ತಿತ್ತು. ಆ ಟೈಮಲ್ಲಿ ನಾನು ದೇವರಿಗೆ ಚಾಲೆಂಜ್ ಮಾಡಿದ್ದೆ, ಯಾರ್ ಗೆಲ್ತಾರೆ ನೋಡೋಣ. ಈ ಸಿನಿಮಾ ಗೆಲ್ಲಲಿಲ್ಲ ಅಂದ್ರೆ ನಾನು ಸಿನಿಮಾ ಮಾಡೋದೇ ಇಲ್ಲ. ಯಾರು ಕೆಲಸ ಕೊಡುವುದಿಲ್ಲ, ಎಂದು ತಲೆಗೆ ಬಂದಿತ್ತು. ಹಠ ಮಾಡಿ ಪ್ರತಿಯೊಂದೂ ಥಿಯೇಟರ್‌ಗೂ ಹೋಗಿ ಕೈ ಮುಗಿಯುತ್ತಿದ್ದೆ. ನಾನು ಆಗಲೇ ಫಸ್ಟ್ ಟೈಂ ಹೌಸ್ ಫುಲ್ ನೋಡಿದ್ದು,' ಎಂದು ಕೃಷ್ಣ ಮಾತನಾಡಿದ್ದಾರೆ.
ಲವ್ ಮಾಕ್ಟೇಲ್ 2 ಚಿತ್ರದಲ್ಲಿ ಇಬ್ಬರೂ ಹೊಸ ಕಲಾವಿದರನ್ನು ಕೃಷ್ಣ ಪರಿಚಯಿಸಿಕೊಟ್ಟಿದ್ದಾರೆ. ಸಿನಿಮಾದ ಹಾಡುಗಳು ಸೂಪರ್ ಹಿಟ್ ಆಗಿದ್ದು ವೀಕ್ಷಕರಲ್ಲಿ ನಿರೀಕ್ಷೆ ಹೆಚ್ಚಿಸಿದೆ.