ನಿನ್ನ ಸಹಕಾರದಿಂದಲೇ ಮತ್ತೆ ಸಿನಿಮಾ ಮಾಡ್ತಾ ಇರೋದು, ನೀನೇ ಈ ಸಿನಿಮಾ ಕಥೆ- ಟೈಟಲ್ ಬಹಳ ಮೆಚ್ಚಿದ್ದು, ಈಗ ನೀನೇ ಹೇಳದೇ ಕೇಳದೇ ನಮ್ಮನ್ನ ಬಿಟ್ಟುಹೋಗಿರೋದು. ಈ ಸಿನಿಮಾ ನಿನಗೆ ಅರ್ಪಣೆ ಎಂದು ಫೇಸ್‌ಬುಕ್ ಖಾತೆಯಲ್ಲಿ ರಾಘವೇಂದ್ರ ರಾಜ್‍ಕುಮಾರ್ ಪೋಸ್ಟ್ ಮಾಡಿದ್ದಾರೆ.
ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar) ಅಗಲಿ ದಿನಗಳೇ ಕಳೆದರೂ ಅಭಿಮಾನಿಗಳಿಗೆ ಇಂದಿಗೂ ಪುನೀತ್ ಇಲ್ಲ ಎಂಬುವುದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಇನ್ನೂ ಅಪ್ಪು ಕುಟುಂಬದವರ ದುಃಖ ಹೇಳತೀರದ್ದಾಗಿದೆ. ಮುಖ್ಯವಾಗಿ ಪುನೀತ್ ನಿಧನ ಹೊಂದಿದಾಗಲಿಂದಲೂ ತಮ್ಮನನ್ನು ಅಗಲಿಕೆಯ ದುಃಖದಲ್ಲಿರುವ ನಟ ರಾಘವೇಂದ್ರ ರಾಜ್‍ಕುಮಾರ್ (Raghavendra Rajkumar) ಅವರು ತಮ್ಮ ಸಾಮಾಜಿಕ ಖಾತೆಯಲ್ಲಿ ಅಪ್ಪುವಿನ ಹಲವಾರು ಫೋಟೋಗಳನ್ನು ಪ್ರತಿನಿತ್ಯ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಇದೀಗ ರಾಘವೇಂದ್ರ ರಾಜ್‍ಕುಮಾರ್ ಅವರು ತಮ್ಮ ಫೇಸ್‌ಬುಕ್ (FaceBook) ಖಾತೆಯಲ್ಲಿ ಅಪ್ಪು ಫೋಟೋ ಜೊತೆಗೆ ತಾವು ನಟಿಸುತ್ತಿರುವ 'ಕರ್ನಾಟಕದ ಅಳಿಯ' (Karnatakada Aliya) ಚಿತ್ರದ ಬಗ್ಗೆ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.
ಹೌದು! ರಾಘವೇಂದ್ರ ರಾಜ್‍ಕುಮಾರ್ 'ಕರ್ನಾಟಕದ ಅಳಿಯ' ಎಂಬ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿದ್ದು, ನಿನ್ನಿಂದಲೇ ನಾನು ಹುಷಾರಾಗಿದ್ದು, ನಿನ್ನ ಆರೈಕೆಯಿಂದಲೇ ಹೊಸಚೈತನ್ಯ ಸಿಕ್ಕಿದ್ದು, ನಿನ್ನ ಸಹಕಾರದಿಂದಲೇ ಮತ್ತೆ ಸಿನಿಮಾ ಮಾಡ್ತಾ ಇರೋದು, ನೀನೇ ಈ ಸಿನಿಮಾ ಕಥೆ- ಟೈಟಲ್ ಬಹಳ ಮೆಚ್ಚಿದ್ದು, ಈಗ ನೀನೇ ಹೇಳದೇ ಕೇಳದೇ ನಮ್ಮನ್ನ ಬಿಟ್ಟು ಹೋಗಿರೋದು. ಈ ಸಿನಿಮಾ ನಿನಗೆ ಅರ್ಪಣೆ ಎಂದು ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಚಿತ್ರವನ್ನು ಪ್ರಥಮ್ (Pratham) ನಿರ್ದೇಶಿಸುತ್ತಿದ್ದು, ಪ್ರದ್ಯೊತನ್ ಸಂಗೀತ ಸಂಯೋಜನೆ, ಅಣಜಿ ನಾಗರಾಜ್ ಕ್ಯಾಮೆರಾ ಕೈಚಳಕ ಚಿತ್ರಕ್ಕಿದೆ.
ಪುನೀತ್ ಜೊತೆಗೆ ಕೊನೆಯ ಸೆಲ್ಫಿ, ಮಾತು ಹಂಚಿಕೊಂಡ ರಾಘವೇಂದ್ರ ರಾಜ್‌ಕುಮಾರ್!
ವಿಶೇಷವಾಗಿ ಈ ಪೋಸ್ಟ್‌ಗೆ 'ಕರ್ನಾಟಕದ ಅಳಿಯ' ಚಿತ್ರದ ನಿರ್ದೇಶಕ ಪ್ರಥಮ್, 'ಈ ಸಿನಿಮಾದಲ್ಲಿನ ನಿಮ್ಮ ಲುಕ್, ಸ್ಟೈಲ್ ಮೆಚ್ಚಿದ್ದೇ ಅಪ್ಪು ಸರ್! ನನಗೆ ಅಣ್ಣಾವ್ರು ಹೇಗಿದ್ರು ಅಂತ ತೋರಿಸಿಕೊಟ್ಟಿದ್ದೇ ನೀವು ಸರ್! ದುಃಖದ ಸಮಯದಲ್ಲಿ ಇಡೀ ಕರುನಾಡೇ ನಿಮ್ಮ ಜೊತೆಗಿದೆ! ಈ ನೋವಿನ ಸಂದರ್ಭದಲ್ಲಿ ಶೂಟಿಂಗ್ ಸಂಭ್ರಮ ಮಾಡಲು ನಮಗೂ ಮನಸ್ಸಿಲ್ಲ! ಕೆಲವು ದಿನಗಳ ಮಟ್ಟಿಗೆ 'ಕರ್ನಾಟಕದ ಅಳಿಯ' ಸಿನಿಮಾದ ಎಲ್ಲಾ ಕೆಲಸಗಳನ್ನ ಮುಂದೂಡಿದ್ದೇವೆ! ದಯವಿಟ್ಟು ರಾಘಣ್ಣರಿಗೆ ನೈತಿಕ ಶಕ್ತಿಯಾಗಿ ನಿಲ್ಲಬೇಕೆಂದು ಎಲ್ಲಾ ಕನ್ನಡಿಗರಲ್ಲೂ ವಿನಯಪೂರ್ವಕ ಪ್ರಾರ್ಥನೆ! ಎಂದು ಪ್ರತಿಕ್ರಿಯಿಸಿದ್ದಾರೆ.
'ಪುನೀತ್ ಅವರು ಸದಾ ಕಾಲ ನಿಮ್ಮ ಜೊತೆಯಲ್ಲಿ ಇದ್ದೆ ಇರ್ತಾರೆ ಅಣ್ಣ. ಇಡೀ ಕರ್ನಾಟಕ ನಿಮ್ಮ ಜೊತೆಗಿದೆ. ನಿಮಗೆ ಈ ದುಃಖ ಭರಿಸಲು, ಇನ್ನಷ್ಟು ಧೈರ್ಯ ದೇವರು ನೀಡಲಿ.' 'ರಾಘಣ್ಣ ನಿಮಗೆ ಒಳ್ಳೆಯದಾಗಲಿ ಅಪ್ಪು ಬಾಸ್ ನಿಮ್ಮ ಮಗನಲ್ಲಿ ನೋಡಬೇಕು ಅಂತ ಕಾತರದಿಂದ ಕಾಯುತ್ತಿದ್ದೇವೆ ಯಾವುದೇ ಕಾರಣಕ್ಕೂ ರಾಘವೇಂದ್ರ ಸ್ವಾಮಿಗಳು ಕರ್ನಾಟಕದ ಜನತೆ ಅಭಿಮಾನಿ ದೇವರುಗಳು ನಿಮ್ಮ ಜೊತೆ ಇದ್ದೇ ಇರುತ್ತಾರೆ.' ಹಾಗೂ 'ಮೊದಲಿಂದಲೂ ನಿಮ್ಮ ಕುಟುಂಬ ಅಂದರೆ ನಮಗೆ ತುಂಬಾ ತುಂಬಾ ಇಷ್ಟ. ಇವಾಗಲು ನಿಮ್ಮ ಜೊತೇನೆ ಇದ್ದೇವೆ. ಆದಷ್ಟು ಬೇಗ ಅಪ್ಪು ಅಣ್ಣನನ್ನು ನಿಮ್ಮ ಮೊಮ್ಮಗನಾಗಿ ನಿಮ್ಮ ಮಗನ ವಂಶದ ಕುಡಿಯಾಗಿ ನೋಡಲು ತುಂಬಾ ಆಸೆ ಇದೆ' ಎಂದೆಲ್ಲಾ ತರೇಹವಾರಿ ಪ್ರತಿಕ್ರಿಯೆಯನ್ನು ನೆಟ್ಟಿಗರು ಕಾಮೆಂಟಿಸಿದ್ದಾರೆ.
Puneeth Rajkumar Death: ಆತ್ಮಹತ್ಯೆ ಮಾಡಿದ ಅಪ್ಪು ಅಭಿಮಾನಿ ಮನೆಗೆ ರಾಘವೇಂದ್ರ ರಾಜಕುಮಾರ್ ಭೇಟಿ
ಈ ಹಿಂದೆ ರಾಘವೇಂದ್ರ ರಾಜ್‍ಕುಮಾರ್ ತಮ್ಮ ಟ್ಟಿಟರ್ (Twitter) ಖಾತೆಯಲ್ಲಿ ಪುನೀತ್ ಜೊತೆ ಆಡಿದ ಕೊನೆಯ ಮಾತು ಹಾಗೂ ಕ್ಲಿಕ್ ಮಾಡಿಕೊಂಡ ಕೊನೆಯ ಫೋಟೋ ಹಂಚಿಕೊಂಡಿದ್ದರು. 'ಇತ್ತೀಚಿಗೆ ನನಗೆ ದಾದಾ ಸಾಹೇಬ್ ಫಾಲ್ಕೆ ಘೋಷಣೆಯಾಗಿತ್ತು. MSK ಟ್ರಸ್ಟ್ ವತಿಯಿಂದ 'ಜೀವಮಾನ ಸಾಧನೆ ಪ್ರಶಸ್ತಿ' ಬಂದ ಸಂದರ್ಭದಲ್ಲಿ ಅಪ್ಪುವಿಗೆ ಎಲ್ಲಿಲ್ಲದ ಸಂತೋಷ. ನನ್ನನ್ನು ತಕ್ಷಣ ಭೇಟಿ ಮಾಡಿ, ಈ ಸೆಲ್ಫಿ ತೆಗೆದು 'ರಾಘಣ್ಣ ನಾವು ಸಹ ಈ ಮೂರ್ತಿಯ ರೂಪದ ಹಾಗೆ ಅಪ್ಪಾಜಿಯವರ ಮೂರ್ತಿಯನ್ನು ಮಾಡೋಣ. ಎಂದಿನಂತೆ ಡಾ.ರಾಜ್ ಕುಮಾರ್ ಟ್ರಸ್ಟ್‌ನಿಂದ (Dr. Rajkumar trust) ನೀಡುವ ಪ್ರಶಸ್ತಿಯನ್ನು ಇದೇ ರೂಪದಲ್ಲಿ ಕೊಡೋಣ,' ಎಂದು ಹೇಳಿದ್ದ. ಅಪ್ಪು ನಿನ್ನ ಈ ಆಲೋಚನೆಗೆ ನನ್ನದೊಂದು ನಮನ. ಲವ್ ಯು ಮಗನೇ,' ಎಂದು ರಾಘವೇಂದ್ರ ರಾಜ್‌ಕುಮಾರ್ ಟ್ಟೀಟ್ ಮಾಡಿದ್ದಾರೆ. ರಾಘಣ್ಣ ಈ ಪ್ರಶಸ್ತಿಯನ್ನು ಹಿಡಿದುಕೊಂಡು ಅಪ್ಪು ಜೊತೆ ಸೆಲ್ಫಿಗೆ ಸ್ಮೈಲ್ ಮಾಡಿದ್ದಾರೆ.