ಹಿರಿಯ ನಟ ಬ್ಯಾಂಕ್ ಜನಾರ್ಧನ್ ಅವರ ಅಂತಿಮ ದರ್ಶನದಲ್ಲಿ ಮಾತನಾಡಿದ ಟೆನ್ನಿಸ್ ಕೃಷ್ಣ, ಹಿರಿಯ ಕಲಾವಿದರಿಗೆ ಅವಕಾಶ ನೀಡುವಂತೆ ಮನವಿ ಮಾಡಿದರು. ಬ್ಯಾಂಕ್ ಜನಾರ್ಧನ್ ಅವರ ನಿಧನಕ್ಕೆ ಅನೇಕ ಕಲಾವಿದರು ಸಂತಾಪ ಸೂಚಿಸಿದರು.
ಬೆಂಗಳೂರು (ಏ.14): ಕನ್ನಡ ಚಿತ್ರರಂಗದಲ್ಲಿ ನಟನೆಯನ್ನೇ ನಂಬಿಕೊಂಡು ಸಾವಿರಾರು ಕಲಾವಿದರು ಜೀವನ ಕಟ್ಟಿಕೊಂಡಿದ್ದೇವೆ. ನಮಗೆ ಈಗಾಗಲೇ ವಯಸ್ಸಾಗಿದೆ. ನಟನೆ ಬಿಟ್ಟು ಜೀವನಕ್ಕಾಗಿ ಬೇರೆನೂ ಆಧಾರವಿಲ್ಲ. ಹಿರಿಯ ಕಲಾವಿದರಿಗೆ ಸಿನಿಮಾದಲ್ಲಿ ಅವಕಾಶ ಕಡಿಮೆಯಾಗಿದೆ. ಧಾರಾವಾಹಿಯಲ್ಲಾದರೂ ಅವಕಾಶ ಸಿಗಬೇಕು ಎಂದು ಹಿರಿಯ ಹಾಸ್ಯನಟ ಟೆನ್ನಿಸ್ ಕೃಷ್ಣ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮೃತ ಹಾಸ್ಯ ನಟ ಬ್ಯಾಂಕ್ ಜನಾರ್ಧನ್ ಅಂತಿಮ ದರ್ಶನಕ್ಕೆ ಆಗಮಿಸಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬ್ಯಾಂಕ್ ಜನಾರ್ಧನ್ ಅವರ ಆತ್ಮಕ್ಕೆ ಶಾಂತಿ ಕೊಡಲಿ. ಒಳ್ಳೆ ಹಾಸ್ಯ ನಟರಾಗಿದ್ದವರು. ಕನ್ನಡ ಚಿತ್ರರಂಗಕ್ಕೆ ಬಂದು 45 ವರ್ಷ ಆಗಿದೆ. ನಾವು ಕಲೆಯನ್ನೇ ನಂಬಿಕೆಕೊಂಡಿದ್ದೇವೆ. ನಮಗೆ ಮಾತನಾಡಿದ ಮೇಲೆ ಅವಕಾಶ ಸಿಕ್ಕಿವೆ. ನಾವೆಲ್ಲರೂ ನಟನೆಯಿಂದಲೇ ಜೀವನ ಸಾಗಿಸುತ್ತೇದ್ದೇವೆ. ಹಿರಿಯ ಕಲಾವಿಧರಿಗೆ ಸಿರಿಯಲ್‌ಗಳಲ್ಲಿ ಅವಕಾಶ ಸಿಗಬೇಕು. ನಮ್ಮದು ಒಂದು ಟ್ರೋಪ್ ಮಾಡಿಕೊಂಡಿದ್ದೇವೆ. ನನಗೆ ಹಾಗೂ ಜನಾರ್ಧನ್ ಅವರ ಒಡನಾಟ ತುಂಬಾ ಚೆನ್ನಾಗಿ ಇತ್ತು. ಉತ್ತರ ಕರ್ನಾಟಕದ ಕಡೆ ಹೋಗಿ ಕೆಲಸ ಮಾಡುತ್ತಿದ್ದೆವು ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಅವರು ಬ್ಯಾಂಕ್ ಜನಾರ್ಧನ್ ಅಂತಿಮ ದರ್ಶನ ಪಡೆದು ಮಾತನಾಡಿ, ಕನ್ನಡ ಚಿತ್ರರಂಗದಲ್ಲಿ ದೊಡ್ಡ ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ. ಬಡ ಕುಟುಂಬದಿಂದ ಬಂದು ಓದಿದ್ದರು. ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಬಳಿಕ ನಟನೆಯಲ್ಲಿ ತೊಡಗಿಸಿಕೊಂಡಿದ್ದರು. ಬಡತನ ಇದ್ದರೂ ಹೇಳಿಕೊಳ್ಳುತ್ತಿರಲಿಲ್ಲ. ಅವರ ಕುಟುಂಬದವರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಹಿರಿಯ ನಟ ಬ್ಯಾಂಕ್ ಜನಾರ್ಧನ್ ಇನ್ನಿಲ್ಲ
ಬ್ಯಾಂಕ್ ಜನಾರ್ಧನ್ ಅವರ ಮೃತ ದೇಹದ ಅಂತಿಮ ದರ್ಶನಕ್ಕೆ ಮನೆಯಲ್ಲಿ ಹಾಗೂ ರವೀಂದ್ರ ಕಲಾಕ್ಷೇತ್ರದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಪೀಣ್ಯ ಎಸ್ ಆರ್ ಎಸ್ ವಿದ್ಯುತ್ ಚಿತಾಗಾರದಲ್ಲಿ ಬ್ಯಾಂಕ್ ಜನಾರ್ದನ್ ಅಂತ್ಯಕ್ರಿಯೆ ನೆರವೇರಿಸಲಾಯಿತು. ಅಂತ್ಯಕ್ರಿಯೆಯಲ್ಲಿ ಟೆನ್ನಿಸ್ ಕೃಷ್ಣ, ಗಣೇಶ್, ಡಿಂಗ್ರಿ ನಾಗರಾಜ್ ಸೇರಿ ಅನೇಕ ನಟರು ಭಾಗಿಯಾಗಿದ್ದರು. ಮರಾಠಾ ಕ್ಷತ್ರೀಯ ಸಂಪ್ರದಾಯದಂತೆ ಅಂತ್ಯಕ್ರಿಯೆಯನ್ನು ಅವರ ಪುತ್ರ ಗುರುಪ್ರಸಾದ್ ನೆರವೇರಿಸಿದರು.
ಬ್ಯಾಂಕ್ ಜನಾರ್ದನ ಪುತ್ರ ಗುರುಪ್ರಸಾದ್ ಮಾತನಾಡಿ, ಇವತ್ತು ನಮ್ಮ ತಂದೆ ಅಂತ್ಯಕ್ರಿಯೆ ಮುಗಿದಿದೆ. ಬೆಳಗ್ಗೆಯಿಂದ ಎಲ್ಲರು ಬಂದು ಅಂತಿಮ ದರ್ಶನ ಪಡೆದಿದ್ದಾರೆ. ಮಾಧ್ಯಮದವರು ತುಂಬಾ ಸಹಕರಿಸಿದ್ದಾರೆ ನಿಮಗೆ ಧನ್ಯವಾದ. ಕರ್ನಾಟಕ ಜನತೆಗೆ ಧನ್ಯವಾದ. ಇಷ್ಟು ವರ್ಷ ನಮ್ಮ ತಂದೆಯನ್ನು ಹಾರೈಸಿ ಪ್ರೋತ್ಸಾಹಿಸಿದ್ದಾರೆ. ತಂದೆ ಮುಂದೆ ಕರ್ನಾಟಕದಲ್ಲೇ ಹುಟ್ಟಬೇಕು. ಇಲ್ಲೇ ಕಲಾವಿದನಾಗಿ ಸೇವೆ ಸಲ್ಲಿಸಬೇಕು ಅನ್ನೋದು ನನ್ನಾಸೆ. ಇಟ್ಟು ದಿನದ ಅವರ ಸಿನಿ ಮತ್ತು ಜೀವನದ ಜರ್ನಿಯಲ್ಲಿ ತುಂಬಾ ಜನ ಸಹಾಯ ಮಾಡಿದ್ದಾರೆ. ಕಲಾವಿದರ ಸಂಘದ ಸದಸ್ಯರು ಸಹಾಯ ಮಾಡಿದ್ದಾರೆ. ನಮ್ಮ ತಂದೆ ಸ್ನೇಹಿತರಿಗೆ ಧನ್ಯವಾದ. ಮೂರನೇ ದಿನ ಕಾರ್ಯ ಬುಧವಾರ ಬೆಳಗ್ಗೆ 8 ಗಂಟೆಗೆ ನಡೆಯುತ್ತದೆ. ಬಳಿಕ ಅಸ್ಥಿ ವಿಸರ್ಜನೆಗೆ ಶ್ರೀರಂಗಪಟ್ಟಣಕ್ಕೆ ಹೋಗ್ತೇವೆ. 11 ದಿನದ ಕಾರ್ಯ ಮನೆಯಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.
ನಾನು ಬ್ಯಾಂಕ್ ಜನಾರ್ಧನ್ ಜೊತೆ 110 ಸಿನಿಮಾದಲ್ಲಿ ನಟನೆ ಮಾಡಿದ್ದೇನೆ. 1997ರಲ್ಲಿ ಹೆಂಡ್ತಿ ಕಳೆದುಕೊಂಡು, ತುಂಬಾ ನೋವಲ್ಲಿದ್ದ. ತುಂಬಾ ಒಳ್ಳೆಯ ವ್ಯಕ್ತಿತ್ವ. ಬ್ಯಾಂಕ್‌ಮಲ್ಲಿ ಕೆಲಸ ಮಾಡ್ಕೊಂಡೆ, 900ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದನು. ಓಂ ಸಾಯಿ ಪ್ರಕಾಶ್ ಬಹುತೇಕ ಸಿನಿಮಾಗಳಲ್ಲಿ ಜನಾರ್ಧನ್ ನಟಿಸಿದ್ದರು.
- ದೊಡ್ಡಣ್ಣ, ಹಿರಿಯ ನಟ
ಬ್ಯಾಂಕ್ ಜನಾರ್ಧನ್ ಒಳ್ಳೆ ಮನುಷ್ಯ, ಒಳ್ಳೆ ನಟ. 900 ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದಾನೆ. ಒಳ್ಳೆ ಚಿತ್ರಗಳಲ್ಲಿ ಒಳ್ಳೆ ಪಾತ್ರ ಸಿಕ್ತು. ಯಾವುದೇ ಪಾತ್ರಕ್ಕೂ ನ್ಯಾಯ ಒದಗಿಸುತ್ತಿದ್ದನು. ಈತನದೇ ವಿಶೇಷತೆ ಇತ್ತು. ತನ್ನ ಜೀವವನ್ನೇ ಕಲೆಗಾಗಿ ಸಮರ್ಪಿಸಿದ್ದಾನೆ. ಅವನ ಆತ್ಮಕ್ಕೆ ಶಾಂತಿ ಸಿಗಲಿ.
- ಉಮೇಶ್, ಹಿರಿಯ ಹಾಸ್ಯನಟ