
ಯಾವ್ದೇ ಒಂದು ಮನೆ ಎಷ್ಟು ನೀಟಾಗಿಟ್ಟಿದ್ದಾರೆ ಅಂತ ಗೊತ್ತಾಗೋಕೆ ಅವರ ಮನೆ ಶೌಚಾಲಯ ನೋಡಿದ್ರೆ ಸಾಕಂತೆ.. ಆ ಮನೆಯ ಹಣೆಬರಹ ಗೊತ್ತಾಗುತ್ತೆ. ಹಾಗೇ ಒಬ್ಬ ವ್ಯಕ್ತಿ ಜೀವನದಲ್ಲಿ ಏನಾಗ್ತಾನೆ ಅಂತ ಗೊತ್ತಾಗೋಕೆ ಅವನ ಫ್ರೆಂಡ್ಸ್ ನೋಡಿದ್ರೆ ಸಾಕಂತೆ. ಅವನ ಹಣೆಬರಹ ಗೊತ್ತಾಗಿಬಿಡುತ್ತೆ! ಹೌದು.. ನಿಮ್ಮ ಸ್ನೇಹ ನಿಮ್ಮ ಭವಿಷ್ಯ ಕಟ್ಟುತ್ತೆ. ನೀವ್ ಯಾರ ಫ್ರೆಂಡ್ ಅನ್ನೋದರ ಆಧಾರದ ಮೇಲೆ ನೀವು ಜೀವನದಲ್ಲಿ ಏನಾಗಬಹುದು ಅಂತ ಊಹಿಸಬಹುದಂತೆ! ಕೆಲವರು ಇದನ್ನು ಒಪ್ಪದೇ ಇರಬಹುದು.. ಆದ್ರೆ ಇದೇ ಸತ್ಯ...
ತುಂಬಾ ಮನೆಗಳಲ್ಲಿ ಅವನಿಗೆ ಒಳ್ಳೆಯವರ ಸಹವಾಸ ಇಲ್ಲ. ಸಹವಾಸ ದೋಷದಿಂದ ಹಾಳಾಗಿ ಹೋಗ್ತಿದ್ದಾನೆ ಅಂತೆಲ್ಲಾ ಹೇಳೋದು ಕೇಳಿರ್ತಿವಿ.. ಈ ಸಹವಾಸ ಅನ್ನೋದು ಕೆಟ್ಟವರ ಜೊತೆಗಿದ್ದಾಗ ಮಾತ್ರ ಈ ಮಾತು ಹೇಳ್ತಾರೆ. ಅದೇ ಒಳ್ಳೆಯ ಫ್ರೆಂಡ್ಸ್ (Friends) ನಿಮ್ಮ ಜೊತೆಗಿದ್ದಾರೆ ಅಂತ ನಿಮ್ಮ ಮನೆಯವರಿಗೆ ಅನ್ಸಿದ್ರೆ ಅವರೂ ಸಹ ನಿಮ್ಮ ಬಗ್ಗೆ ತುಂಬಾ ತಲೆ ಕೆಡಿಸಿಕೊಳ್ಳೋಕೆ ಹೋಗೋದಿಲ್ಲ.
ಮದುವೆಯಾದ್ಮೇಲೂ ಹಳೇ ಸ್ನೇಹ ಕಾಪಾಡಿಕೊಳ್ಳೋದು ಹೇಗೆ?
ಜಗತ್ತಿನಲ್ಲಿ ರಕ್ತಸಂಬಂಧಗಳನ್ನೂ (Blood Relatives) ಮೀರಿಸೋ ಬಂಧ ಯಾವ್ದಾದ್ರೂ ಇದ್ರೆ ಅದು ಸ್ನೇಹ (Freindship). ಒಂದು ಫ್ರೆಂಡ್ಶಿಪ್ ಏನು ಬೇಕಾದ್ರೂ ಮಾಡಿಸಬಲ್ಲದು. ಒಳ್ಳೆಯವ ಫ್ರೆಂಡ್ಶಿಪ್ ಒಳ್ಳೆಯದನ್ನು ಮಾಡಿಸುತ್ತೆ... ಕೆಟ್ಟವರ ಸಂಗ ಕೆಟ್ಟದ್ದನ್ನೇ ಪ್ರೇರೇಪಿಸುತ್ತೆ.. ಒಂದು ಎಕ್ಸಾಂಪಲ್ ಕೊಟ್ಟು ಹೇಳಿದ್ರೆ ಗೊತ್ತಾಗಬಹುದು..
ಸಕಲೇಶಪುರದಲ್ಲಿ ರೋಹನ್-ಪವನ್ ಅಂತ ಇಬ್ಬರು ಅಣ್ಣ ತಮ್ಮಂದಿರಿದ್ರು. ಇಬ್ಬರೂ ಪಿಯುಸಿಯಲ್ಲಿ ಒಳ್ಳೆ ಮಾರ್ಕ್ಸ್ ತೆಗೆದು ಇಂಜಿನಿಯರಿಂಗ್ ಸೇರೋ ಪ್ಲ್ಯಾನ್ ಮಾಡಿದ್ರು. ಆದ್ರೆ ರೋಹನ್‌ಗೆ ಮೈಸೂರಲ್ಲಿ, ಪವನ್‌ಹೆ ಬೆಂಗಳೂರಿನ ಕಾಲೇಜೊಂದರಲ್ಲಿ ಸೀಟ್ ಸಿಕ್ತು. ಇಬ್ಬರೂ ಒಂದೇ ಕಡೆ ಓದಬೇಕು ಅಂದುಕೊಂಡಿದ್ರು. ಆದ್ರೆ ಸಾಧ್ಯ ಆಗಲಿಲ್ಲ. ಸೋ ರೋಹನ್ ಮೈಸೂರಿಗೆ.. ಪವನ್ ಬೆಂಗಳೂರಿಗೆ.
ಕಾಲೇಜು ಸೇರಿದ ಮೇಲೆ ಹೊಸ ಹೊಸ ಪರಿಚಯ ಆಯ್ತು. ರೋಹನ್ ಸುತ್ತ ಒಂದೊಳ್ಳೆ ಗೆಳೆಯರ ತಂಡ ಕಟ್ಟಿಕೊಂಡ. ಒಟ್ಟಿಗೇ ಊಟ, ಹರಟೆ, ತಮಾಷೆ, ಕಾಲೆಳೆತ. ಜೊತೆಗೆ ಕಂಬೈಂಡ್ ಸ್ಟಡಿ ಹೆಸರಲ್ಲಿ ಗಂಟೆಗಟ್ಟಲೆ ಓದು. ಯಾವ ನೆಗೆಟಿವ್ ಮನಸ್ಸು ಅವರು ಹತ್ತಿರ ಬಿಟ್ಟುಕೊಳ್ಳಲಿಲ್ಲ. ಜೊತೆಗಿದ್ದ ಸ್ನೇಹಿತರೆಲ್ಲಾ ಬರೀ ತಮ್ಮ ಕನಸುಗಳ ಬಗ್ಗೆ, ಮುಂದೆ ಸಾಧಿಸಬೇಕಾಗಿರೋದರ ಬಗ್ಗೆ, ಸ್ಟಾರ್ಟ್ ಅಪ್ ಕಟ್ಟುವ ಬಗ್ಗೆ ಮಾತಾಡ್ತಾ ಇದ್ರು. ಈ ಕಡೆ ಪವನ್ ಸಹ ಹೊಸ ಕಾಲೇಜಿನಲ್ಲಿ ಹೊಸ ಹೊಸ ಗೆಳೆಯರ ಜೊತೆಯಾದ. ಆದ್ರೆ ಇಲ್ಲಿ ಎಲ್ಲಾ ಉಲ್ಟಾ. ಪವನ್ ರೂಮ್ ಮೇಟ್ ಟಾಯ್ಲೆಟ್ಟಲ್ಲಿ ಕೂತು ಸಿಗರೇಟ್ ಹೊಡೀತಿದ್ದ. ರಾತ್ರಿ ಲೇಟಾಗಿ ಡ್ರಿಂಕ್ಸ್ ಮಾಡಿ ಬರ್ತಿದ್ದ. ಅವನನ್ನು ನೋಡಿ ಪವನ್ ಪ್ರಶ್ನೆ ಮಾಡ್ದ. ಯಾಕೆ ಹೀಗೆಲ್ಲಾ ಮಾಡ್ತಿದಿಯ ಅಂತ. ಅವನು ಪವನ್‌ಗೆ ಕುಡಿಯೋದ್ರಲ್ಲಿ ಇರೋ ಕಿಕ್ ನಿನಗೇನು ಗೊತ್ತು? ಸಿಗರೇಟ್ ಹೊಡಿದ್ರೆ ಓದೋ ಟೆನ್ಷನ್ ಎಲ್ಲಾ ಮರೆತು ಹೋಗುತ್ತೆ. ಬೇಕಾದ್ರೆ ನೀನೂ ಟ್ರೈ ಮಾಡು ಅಂತೆಲ್ಲಾ ಹೇಳಿ. ನಿಧಾನವಾಗಿ ಅವನೂ ದುಶ್ಚಟಗಳಿಗೆ ಬೀಳೋ ಹಾಗೆ ಮಾಡ್ದ. ಒಂದು ಕಡೆ ಪ್ರತೀ ಪರೀಕ್ಷೆಯಲ್ಲೂ ರೋಹನ್ ಅದ್ಬುತ ಮಾರ್ಕ್ಸ್ ತಗೊಂಡು, ತನ್ನ ಫ್ರೆಂಡ್ಸ್ ಜೊತೆ ಸಂಭ್ರಮಿಸ್ತಾ ಇದ್ರೆ, ಇತ್ತ ಪವನ್ ಹಲವು ಸಬ್ಜೆಕ್ಸ್ಟ್‌ನಲ್ಲಿ ಫೇಲ್ ಆಗಿ ಕುಡಿತದ ದಾಸನಾಗಿದ್ದ.
ಯಾವಾಗ್ ನೋಡಿದ್ರೂ ಬೆಸ್ಟೀ ಅಂತಾಳೆ, ಫ್ರೆಂಡ್ ಝೋನ್‌ನಿಂದ ಲವ್‌ಗೆ ಶಿಫ್ಟ್ ಆಗೋದ್ಹೇಗೆ ?
ರೋಹನ್‌ಗೆ ಸಿಕ್ಕಂತಹ ಒಳ್ಳೇ ಫ್ರೆಂಡ್ಸ್ ಪವನ್‌ಗೂ ಸಿಕ್ಕಿದ್ರೆ ಅವನೂ ಒಳ್ಳೇ ಸ್ಟೂಡೆಂಟ್ ಆಗಿರ್ತಿದ್ದ. ಪವನ್‌ಗೆ ಸಿಕ್ಕಿದಂತಹ ಫ್ರೆಂಡ್ಸ್ ಅಥವಾ ರೂಮ್ಮೇಟ್ ರೋಹನ್‌ಗೆ ಸಿಕ್ಕಿದ್ದಿದ್ರೆ ಅವನ ಲೈಫೂ ಹಾಳಾಗ್ತಿತ್ತೋ ಏನೋ.. ಮನಸ್ಸು ಧೃಢವಾಗಿದ್ರೆ ಯಾರೂ ಏನೂ ಮಾಡೋಕಾಗಲ್ಲ ಅನ್ನೋದು ಎಷ್ಟು ಸತ್ಯವೋ, ಫ್ರೆಂಡ್ಸ್ ಸರಿ ಇಲ್ಲ ಅಂದ್ರೆ ಲೈಫ್‌ನ ಟ್ರ್ಯಾಕ್ ರಾಂಗ್ ರೂಟಲ್ಲಿ ಹೋಗುತ್ತೆ ಅನ್ನೋದು ಸಹ ಅಷ್ಟೇ ಸತ್ಯ..!
ಅವನ ಜೊತೆಗೆ ಸೇರಬೇಡ ಅಂತ ಅಪ್ಪನೋ ಅಮ್ಮನೋ ಹೇಳಿದ್ರೆ ಅದರಲ್ಲಿ ನಿಮ್ಮ ಭವಿಷ್ಯದ ಬಗ್ಗೆ ಅವರಿಗಿರೋ ಕಾಳಜಿಯಿಂದ ಹೇಳಿರ್ತಾರೆ. ನಿಮ್ಮ ಫ್ರೆಂಡ್ ಯಾವುದೋ ಟೀ ಅಡ್ಡದಲ್ಲಿ ಸಿಗರೇಟ್ ಸೇದೋದನ್ನ ಅವರು ನೋಡಿರಬಹುದು, ಇನ್ನೆಲ್ಲೋ ಏನೋ ಕೆಟ್ಟ ಕೆಲಸ ಮಾಡೋದು ಅವರ ಗಮನಕ್ಕೆ ಬಂದಿರಬಹುದು. ಆ ಕಾರಣಕ್ಕೇ ಹೇಳಿರ್ತಾರೆ. ಮಗನ ಜೊತೆಗೆ ಒಳ್ಳೆಯ ಗೆಳೆಯರಿರಬೇಕು ಅನ್ನೋದು ಪ್ರತಿ ತಂದೆ ತಾಯಿಯ ಆಸೆ... ಯಾಕಂದ್ರೆ ಪ್ರತಿ ಪೋಷಕರಿಗೆ ಮಗನ ಜೀವನ ರೋಹನ್‌ನಂತೆ ಆಗಬೇಕು. ಪವನ್‌ನಂತೆ ಅಲ್ಲ.
ಸೋ.. ನಿಮ್ಮ ಗೆಳೆಯರ ಆಯ್ಕೆಯಲ್ಲಿ ಹುಷಾರಾಗಿರಿ. ಸಹವಾಸದಿಂದ ಸನ್ಯಾಸಿ ಕೆಟ್ಟ ಅನ್ನೋ ಹಾಗೆ ನಿಮ್ಮ ಜೀವನ ಆಗದಿರಲಿ. ಸ್ನೇಹ ಕನಸು ನನಸು ಮಾಡುವಂತಿರಲಿ... ಸ್ನೇಹ ಜೀವನ ನಾಶ ಮಾಡದೇ ಇರಲಿ... ಚೂಸ್ ಗುಡ್ ಪೀಪಲ್ ಆ್ಯಸ್ ಗುಡ್ ಫ್ರೆಂಡ್ಸ್...
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.