ಬಂದೇ ಬಿಡ್ತು, ಪ್ರೀತಿಸಿ ಮದುವೆಯಾದರೆ ಕೈತುಂಬ ಇನ್ಶೂರೆನ್ಸ್‌ ಕಾಸು!

Published : Apr 18, 2025, 09:41 PM ISTUpdated : Apr 20, 2025, 08:31 AM IST
ಬಂದೇ ಬಿಡ್ತು, ಪ್ರೀತಿಸಿ ಮದುವೆಯಾದರೆ ಕೈತುಂಬ ಇನ್ಶೂರೆನ್ಸ್‌ ಕಾಸು!

ಸಾರಾಂಶ

ಅಯ್ಯೋ, ಪ್ರೀತಿಸಿ ಮದುವೆಯಾದೋರಿಗೂ ದುಡ್ಡು ಕೊಡೋರುಂಟೇ  ಎಂದು ಅಲವತ್ತುಕೊಳ್ಳಬೇಡಿ. ಈಗ ನಿಮ್ಮ ಪ್ರೀತಿಗೂ ಹಣಕಾಸಿನ ಭದ್ರತೆ ನೀಡುವವರು ಹುಟ್ಟಿಕೊಂಡಿದ್ದಾರೆ. ಆದರೆ, ಶರತ್ತುಗಳು ಅನ್ವಯಿಸುತ್ತವೆ! 

ಇಂದಿನ ಜಮಾನಾದಲ್ಲಿ ನಾವು ನೀವೆಲ್ಲ ಗಮನಿಸಿದಂತೆ, ಲವ್‌ ಹುಟ್ಟಿಕೊಳ್ಳೋದೋ ಸಾಯೋದೂ ಬಹಳ ಬೇಗ. ಕ್ರಶ್‌ ಆದಷ್ಟೇ ಸುಲಭ ಬ್ರೇಕಪ್‌ ಕೂಡ. ಡೇಟಿಂಗ್‌ ಮಾಡಿದಷ್ಟೇ ಸ್ಪೀಡಾಗಿ ಹಾರ್ಟ್‌ಬ್ರೇಕ್‌ಗಳೂ ಆಗ್ತಿರುತ್ತವೆ. ಇಂಥ ಜಮಾನಾದಲ್ಲಿ, ನೀನು ಐದು ವರ್ಷ ಪ್ರೀತಿಸಿ ಮದುವೆಯಾದರೆ ನಾವು ದುಡ್ಡು ಕೊಡ್ತೀವಿ ಅಂತ ಯಾರಾದರೂ ಹೇಳಿದರೆ, ಹುಚ್ಚ ಅಂತೀವಾ ಇಲ್ವಾ? ಆದರೆ ಅಂಥದೊಂದು ಸ್ಟಾರ್ಟಪ್‌ ಶುರುವಾಗಿದೆ. ನಂಬಿ, ಇದು ನಿಜ. ಇದ ರಿಲೇಶನ್‌ಶಿಪ್‌ ಇನ್ಶೂರೆನ್ಸ್.‌   

ಕ್ಷಣಿಕ ಡೇಟಿಂಗ್‌ಗಳು ಸಾಮಾನ್ಯವಾಗಿರುವ ಈ ಯುಗದಲ್ಲಿ, ʼಝಿಕಿಲವ್ʼ ಎಂಬ ಸ್ಟಾರ್ಪ್‌ ಕಂಪನಿ ಇಂಥದೊಂದು ವಿಮೆ ಶುರು ಮಾಡಿದೆ. ಇದನ್ನು ʼವಿಶ್ವದ ಮೊದಲ ಸಂಬಂಧ ವಿಮೆʼ ಎಂದು ಕರೆದಿದೆ. ಸೋಶಿಯಲ್‌ ಮೀಡಿಯಾಗಳಲ್ಲಿ ಇದರ ರೀಲ್ಸ್‌ಗಳು ಹರಿದಾಡುತ್ತಿವೆ. ಸಂಚಲನವನ್ನು ಸೃಷ್ಟಿಸಿವೆ. ದೀರ್ಘಾವಧಿ ಸಂಬಂಧ ಕಾಪಾಡಿಕೊಂಡವರಿಗೆ, ಹಲವು ವರ್ಷ ಲವ್‌ ಮಾಡಿ ಮದುವೆಯಾಗುವ ದಂಪತಿಗಳಿಗೆ ಹಣಕಾಸಿನ ಪ್ರೋತ್ಸಾಹ ನೀಡುತ್ತದೆ. ಅಂದರೆ ಸಂಬಂಧದ ಸ್ಥಿರತೆಯನ್ನು ಲಾಭದಾಯಕ ಹೂಡಿಕೆಯಾಗಿಯೂ ಮಾಡುತ್ತದೆ.

ಝಿಕಿಲವ್‌ನ ವಿಮಾ ಸ್ಕೀಮ್‌ನ ಸ್ವರೂಪ ಹೀಗಿದೆ- ಪ್ರೀತಿಸಿದ ಜೋಡಿ ಸತತ ಐದು ವರ್ಷಗಳ ಕಾಲ ಒಟ್ಟಿಗಿರಬೇಕು. ಅಷ್ಟು ಕಾಲ ವಾರ್ಷಿಕ ಪ್ರೀಮಿಯಂ ಅನ್ನು ಹೂಡಿಕೆ ಮಾಡಬೇಕು. ಅವರ ಸಂಬಂಧ ಮದುವೆಯಲ್ಲಿ ಕೊನೆಗೊಂಡರೆ, ಅವರು ತಮ್ಮ ಒಟ್ಟು ಹೂಡಿಕೆಯ ಹತ್ತು ಪಟ್ಟು ಪಡೆಯುತ್ತಾರೆ. ಅಂದರೆ ಪ್ರತಿವರ್ಷ ಇಪ್ಪತ್ತು ಸಾವಿರ ಒಂದು ಲಕ್ಷ ಹೂಡಿದವರು, ಐದನೇ ವರ್ಷದ ಕೊನೆಯಲ್ಲಿ ಮದುವೆಯಾದರೆ ಹತ್ತು ಲಕ್ಷ ಪಡೆಯುತ್ತಾರೆ. ಈ ಅವಧಿಯಲ್ಲಿ ಅವರು ಬೇರ್ಪಟ್ಟರೆ, ಅವರು ತಮ್ಮ ಸಂಪೂರ್ಣ ಹೂಡಿಕೆಯನ್ನು ಕಳೆದುಕೊಳ್ಳುತ್ತಾರೆ.

ಝಿಕಿಲವ್‌ನ ವಿಮಾ ಈ ಕೆಳಗಿನಿಂದ ಕಾರ್ಯ  ನಿರ್ವಹಿಸುತ್ತದೆ. ಝಿಕಿಲವ್‌ ವೆಬ್‌ಸೈಟ್ ಪ್ರಕಾರ, ಇನ್ಶೂರೆನ್ಸ್‌ ಪ್ರಕ್ರಿಯೆ ನಾಲ್ಕು ವಿಭಿನ್ನ ಹಂತಗಳಲ್ಲಿದೆ. ಮೊದಲನೆಯದಾಗಿ, ಭಾಗವಹಿಸುವವರು ತಮ್ಮ ಜೋಡಿಯನ್ನು ಕಂಡುಹಿಡಿಯಬೇಕು. ಒಮ್ಮೆ ಸಂಗಾತಿಗೆ ಬದ್ಧರಾದ ನಂತರ, ಈ ಜೋಡಿ ₹5,000 ರಿಂದ ₹1,00,000 ವರೆಗಿನ ವಾರ್ಷಿಕ ಪ್ರೀಮಿಯಂ ಪಾವತಿಗಳನ್ನು ಮಾಡಬಹುದು. ಈ ಮೊತ್ತವನ್ನು ಸಂಬಂಧದ ದೀರ್ಘಾಯುಷ್ಯದಲ್ಲಿ ಅವರ ವಿಶ್ವಾಸದಿಂದ ನಿರ್ಧರಿಸಲಾಗುತ್ತದೆ.

ಝಿಕಿಲವ್ ಪ್ರಕಾರ ಈ ಸಂಬಂಧ ಪೂರ್ಣ ಐದು ವರ್ಷಗಳ ಅವಧಿಗೆ ಉಳಿಯಬೇಕು. ಅದೇಕೆ ಐದು ವರ್ಷ? ಅಂದರೆ ಇದು ಆರಂಭಿಕ ಹನಿಮೂನ್‌ ಪೀರಿಯಡ್‌ ಅನ್ನು ಮೀರಿ ಪ್ರಗತಿ ಸಾಧಿಸಿದ ಅವಧಿ. ಝಿಕಿಲವ್‌ನ ವೆಬ್‌ಸೈಟ್‌ನಲ್ಲಿ ಹೇಳಿದಂತೆ ಇದು "ನಿಷ್ಠೆಯ ಪರೀಕ್ಷೆ"ಯಂತೆ ಕಾರ್ಯನಿರ್ವಹಿಸುತ್ತದೆ. ಐದು ವರ್ಷಗಳು ಮತ್ತು ನಂತರದ ಮದುವೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ಝಿಕಿಲವ್ ಹೂಡಿಕೆಯ ಮೇಲೆ ಭರವಸೆ ನೀಡಿದ ಹತ್ತು ಪಟ್ಟು ಲಾಭವನ್ನು ನೀಡುತ್ತದೆ. "ಮದುವೆ ವೆಚ್ಚಕ್ಕಾಗಿ ಕಿಡ್ನಿಯನ್ನು ಮಾರಾಟ ಮಾಡುವ ಅಗತ್ಯವಿಲ್ಲ. ನೀವು ಅಂಬಾನಿಗಳಂತೆ ಮದುವೆಯಾಗುವಂತೆ ನಾವು ನೋಡಿಕೊಳ್ಳುತ್ತೇವೆ" ಎಂದು ಕಂಪನಿಯು ವಿನೋದಪೂರ್ಣವಾಗಿ ಪ್ರಚಾರ ಮಾಡಿದೆ.

ZikiLove ಅಧಿಕೃತವಾಗಿ Instagram ಮೂಲಕ ತನ್ನ ವಿಶಿಷ್ಟ ಸೇವೆಯನ್ನು ಘೋಷಿಸಿದೆ. ಇದರ ಜಾಹೀರಾತಿನ ರೀಲುಗಳು ಸೋಶಿಯಲ್‌ ಮೀಡಿಯಾದಲ್ಲಿ ಕ್ರೇಜಿ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಕೆಲವು ಬಳಕೆದಾರರು ZikiLoveನ ಪರಿಕಲ್ಪನೆ ʼಕೂಲ್‌ʼ ಎಂದಿದ್ದಾರೆ. ಇದು ಏಕಸಂಗಾತಿ ನಿಷ್ಠೆಯನ್ನು ಪ್ರೋತ್ಸಾಹಿಸುವ ನವೀನ ವಿಧಾನ ಎಂದು ಶ್ಲಾಘಿಸಿದ್ದಾರೆ. ಇನ್ನು ಕೆಲವರು ಪ್ರಣಯ ಸಂಬಂಧದಿಂದಲೂ ಹಣ ಗಳಿಸುವುದು ಅನೈತಿಕ ಎಂದಿದ್ದಾರೆ.

"ನಾನು ಈಗಲೇ ಬುಕ್‌ ಮಾಡಲಿದ್ದೇನೆ" ಎಂದು ಕೆಲವರು ಉತ್ಸಾಹ ತೋರಿಸಿದ್ದಾರೆ. "ನಾನು ರೆಡಿ, ಆದರೆ ನನಗೆ ಸರಿಯಾದ ಹುಡುಗಿ ಸಿಕ್ಕಿಲ್ಲ" ಅಂತ ಕೆಲವರು. "ಬ್ರೇಕಪ್ ಆಗುವುದೆಂದರೆ ದೊಡ್ಡ ಹೊಡೆತ. ಅದರ ಮೇಲಿನಿಂದ ವಿಮೆ ಹಣವನ್ನು ಕಳೆದುಕೊಳ್ಳುವುದು ಸಹ? ಅಯ್ಯೋ ಅದು ಪ್ರೀಮಿಯಂ ಹೃದಯ ವಿದ್ರಾವಕ ಪ್ಯಾಕೇಜ್!" ಎಂದು ಒಬ್ಬರು ಟೀಕಿಸಿದ್ದಾರೆ. "ಓಹ್, ಈ ಯುಗದಲ್ಲಿ ಮುರಿಯದ ಉತ್ತಮ ಸಂಬಂಧ ಹುಡುಕಲು ಇದೊಂದೇ ಮಾರ್ಗ" ಎಂದು ಇನ್ನೊಬ್ಬರು.

ಶ್ರೀಮಂತರು ಬೆಳಗ್ಗೆ 5 ಗಂಟೆಗೆ ಏಳೋದ್ಯಾಕೆ? ಏನಿದರ ಸೀಕ್ರೆಟ್!

ಸಂಗಾತಿಗಳು ನಿಜಕ್ಕೂ ಪ್ರೀತಿಸುತ್ತಿದ್ದಾರೋ, ಮದುವೆಯಾಗುತ್ತಿದ್ದಾರೋ, ಅಥವಾ ನಾಟಕವಾಡುತ್ತಿದ್ದಾರೋ- ಎಲ್ಲವನ್ನೂ ತಿಳಿಯಲು ಝಿಕಿಲವ್ ಅದರದೇ ಆದ ವಿಧಾನ ಹಾಗೂ ನೆಟ್‌ವರ್ಕ್‌ ಹೊಂದಿದೆಯಂತೆ. ಹೀಗಾಗಿ ಐದು ವರ್ಷ ನೀವು ಡೇಟಿಂಗ್‌ ಹಾಗೂ ಮದುವೆಯ ನಾಟಕವಾಡಿ ಹಣ ಪಡೆದು ಪಾರಾಗುವಂತಿಲ್ಲ. "ನಿಜವಾದ ಪ್ರೀತಿಯನ್ನು ಕಂಡುಹಿಡಿಯುವುದು ಈಗ ಎಂದಿಗಿಂತ ಕಷ್ಟ. ಅದಕ್ಕಾಗಿಯೇ ನಾವು ಆರ್ಥಿಕ ಸುರಕ್ಷತಾ ಜಾಲವನ್ನು ರಚಿಸಿದ್ದೇವೆ" ಎಂದಿದೆ ಝಿಕಿಲವ್. ಈ ಸಂಸ್ಥೆ ಲಾಭ ಮಾಡುತ್ತದೆಯೋ, ದಿವಾಳಿಯಾಗುತ್ತದೆಯೋ ಕಾದು ನೋಡಬೇಕು. ವಾರಕ್ಕೊಮ್ಮೆ ಬ್ರೇಕಪ್‌ ಮಾಡಿಕೊಳ್ಳುವ ಯುವಜನತೆಯ ಈ ಕಾಲದಲ್ಲಿ, ಝಿಕಿಲವ್‌ ಬಹುಕೋಟಿ ಆದಾಯದ ಸಂಸ್ಥೆಯಾಗಿ ರಾರಾಜಿಸಲಿದೆ ಎಂದು ನಮ್ಮ ಸಿಕ್ಸ್ತ್‌ ಸೆನ್ಸ್‌ ಹೇಳ್ತಾ ಇದೆ. ನೀವೇನಂತೀರ?  

ಆನ್‌ಲೈನ್ ಪ್ರೀತಿ, ಕೊರಿಯಾ ಯುವಕನ ಮದ್ವೆಯಾಗಲು ಹೋದ ಹುಡುಗಿ ಅದೇ ಸ್ಪೀಡ್‌ಲ್ಲಿ ವಾಪಸ್


 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರೀಲ್ಸ್‌ ನೋಡಿ ನೋಡಿ, ಗಂಡ ಮಕ್ಕಳ ಬಿಟ್ಟು ಸೋಶಿಯಲ್ ಮೀಡಿಯಾ ಗೆಳೆಯನಿಗಾಗಿ ಬಸ್ ಹತ್ತಿದ ಮಹಿಳೆ
ಕುಬೇರನ ಸಂಪತ್ತು ತರುವ ಡಿಫರೆಂಟ್‌ ಹೆಸರು ನಿಮ್ಮ ಮಗನಿಗೂ ಇಡಬಹುದು!