
ಮಥುರಾ: ಮದುವೆಯಾಗಿ ಎರಡು ಮಕ್ಕಳಾದ ನಂತರ ತೊರೆದು ಹೋಗಿ ಸನ್ಯಾಸಿಯಾದ ವ್ಯಕ್ತಿಯನ್ನು ಆತ ವಾಪಸ್ ಬಂದಾಗ ಹೆಂಡ್ತಿ ಹಾಗೂ ಆತನ ಭಾಮೈದ ಸೇರಿ ಥಳಿಸಿದಂತಹ ಘಟನೆ ಉತ್ತರ ಪ್ರದೇಶ ಮಥುರಾದಲ್ಲಿ ನಡೆದಿದೆ. ಶನಿವಾರ ಮಥುರಾ ಜಿಲ್ಲೆಯ ರಾಯಾದ ಮಾಂಟ್ ರಸ್ತೆ ರೈಲ್ವೆ ಕ್ರಾಸಿಂಗ್ ಬಳಿ ಸಾಧುವಿನ ವೇಷದಲ್ಲಿದ್ದ ವ್ಯಕ್ತಿಗೆ ಆತನ ಪತ್ನಿ ಹಾಗೂ ಭಾವ ಇಟ್ಟಿಗೆ ಕಲ್ಲು ದೊಣ್ಣೆಗಳಿಂದ ಸರಿಯಾಗಿ ಬಾರಿಸಿದ್ದಾರೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶನಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಮುಚ್ಚಿದ ರೈಲ್ವೆ ಕ್ರಾಸಿಂಗ್ ಬಳಿಯ ರಾಯಾ-ಮಂಟ್ ರಸ್ತೆಯಲ್ಲಿ ತನ್ನ ಕಾರಿನಲ್ಲಿ ಕುಳಿತಿದ್ದ ಸಾಧುವಿಗೆ ಆತನ ಪತ್ನಿ ರಚನೇಶ್ ಹಾಗೂ ಆಕೆಯ ಸೋಧರ ರಾಕೇಶ್ ಥಳಿಸಿದ್ದಾರೆ ಎಂದು ನಾಗ್ಲಾ ಅಲಿಯಾ ಗ್ರಾಮದ ನಿವಾಸಿ ಹರಿನಂದ್ ಸರಸ್ವತಿ ಅಲಿಯಾಸ್ ಹರೀಶ್ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.
ರಚನೇಶ್ ಮತ್ತು ರಾಕೇಶ್ ಕಾರಿನ ಮುಂಭಾಗ ಹತ್ತಿ ಕಾರಿನ ಗಾಜನ್ನು ಒಡೆದು, ಇಟ್ಟಿಗೆ ಮತ್ತು ಕಲ್ಲುಗಳಿಂದ ಹಲ್ಲೆ ನಡೆಸಿದ್ದಾರೆ. ಕಾರಿನಿಂದ ಇಳಿದ ನಂತರ, ಅವರು ತನ್ನನ್ನು ಹಿಡಿದು, ಎಳೆದುಕೊಂಡು ಹೋಗಿ, ಹಲ್ಲೆ ನಡೆಸಿದ್ದರಿಂದ ಗಂಭೀರ ಗಾಯಗಳಾಗಿದೆ ಎಂದು ಹರೀಶ್ ಆರೋಪಿಸಿದ್ದಾರೆ. ಘಟನೆಯ ನಂತರ ಅಲ್ಲಿ ನೂರಾರು ಜನ ಸೇರಿದ್ದರು.
ಹರೀಶ್ ಅಲಿಯಾಸ್ ಹರಿನಂದ್ ಸರಸ್ವತಿ ಹಾಗೂ ಅವರ ಪತ್ನಿ ನಡುವೆ ಹಲವರು ವರ್ಷಗಳಿಂದ ಕೌಟುಂಬಿಕ ಕಲಹ ನಡೆಯುತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೇಸ್ ದಾಖಲಾಗಿತ್ತು. ಇದರ ನಡುವೆ ಈ ದಾಳಿಯಾಗಿದ್ದು, ಆರೋಪಿಗಳ ವಿರುದ್ಧ ಕ್ರಮ ಕೈಗೊಂಡು ತನಗೆ ಭದ್ರತೆ ಒದಗಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ಸ್ವೀಕರಿಸಲಾಗಿದ್ದು, ಅದರ ಆಧಾರದ ಮೇಲೆ ಸಂತ್ರಸ್ತೆಯ ಪತ್ನಿ ಮತ್ತು ಭಾವನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸ್ಟೇಷನ್ ಹೌಸ್ ಆಫೀಸರ್ ಇನ್ಸ್‌ಪೆಕ್ಟರ್ ಕರ್ಮವೀರ್ ಸಿಂಗ್ ತಿಳಿಸಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ.
ಘಟನೆಯ ವೀಡಿಯೋ ವೈರಲ್
ವೈರಲ್ ಆದ ವೀಡಿಯೋದಲ್ಲಿ ಮಹಿಳೆ, ಕಾವಿವಸ್ತ್ರ ಧರಿಸಿದ್ದ ತನ್ನ ಮಾಜಿ ಪತಿಯ ಕೂದಲನ್ನು ಹಿಡಿದು ಎಳೆದಾಡಿ ಆತನನ್ನು ರಸ್ತೆಯಲ್ಲಿ ಬೀಳಿಸಿ ಥಳಿಸುವುದನ್ನು ಕಾಣಬಹುದು. ಹೆಂಡತಿ ಅವನ ಕೂದಲು ಹಿಡಿದು ಹೊಡೆಯಲು ಪ್ರಾರಂಭಿಸಿದರೆ, ಆ ಮಹಿಳೆಯ ಸಹೋದರ ಇಬ್ಬರು ಸ್ನೇಹಿತರೊಂದಿಗೆ ಬಂದು, ಈ ಮಾಜಿ ಎಂಜಿನಿಯರ್ ಆಗಿದ್ದು, ಸಾಧುವಾಗಿ ಬದಲಾದ ಹರಿನಂದ್ ಸರಸ್ವತಿಗೆ ಪೊರಕೆಯಿಂದ ಪದೇ ಪದೇ ಹೊಡೆದಿದ್ದಾರೆ. ಒಟ್ಟು ನಾಲ್ವರು ಆ ಸಾಧುವಿನ ಮೇಲೆ ಹಲ್ಲೆ ಮಾಡಿದ್ದಾರೆ.
ಮತ್ತೊಂದು ವರದಿಯ ಪ್ರಕಾರ, ತನ್ನ ಪತಿ ತನ್ನ ಕುಟುಂಬವನ್ನು ದಾರಿ ತಪ್ಪಿಸಿ ಬೇರೆ ಮಹಿಳೆಯನ್ನು ಮದುವೆಯಾಗಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
2007ರಲ್ಲಿ ಮದುವೆಯಾಗಿದ್ದ ಜೋಡಿ
ನಾಗ್ಲಾ ಅಲಿಯಾ ನಿವಾಸಿ ಸೀತಾರಾಮ್ ಅವರ ಪುತ್ರ ಹರೀಶ್, ಫೆಬ್ರವರಿ 19, 2007 ರಂದು ಗೋಥಾ ಬಲದೇವ್ ಗ್ರಾಮದ ರಚನೇಶ್ ಶರ್ಮಾ ಅವರನ್ನು ಮದುವೆಯಾಗಿದ್ದಾರೆ. ಅವರಿಗೆ ಶಿವಂ (18) ಮತ್ತು ರಾಧೆ ಅಲಿಯಾಸ್ ಶಿವಾಂಗಿ (17) ಎಂಬ ಇಬ್ಬರು ಮಕ್ಕಳಿದ್ದಾರೆ. ತನ್ನ ಪತಿ ರವಿ ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಎಂದು ಮಹಿಳೆ ಹೇಳಿದ್ದಾರೆ. ಪತಿ ತನ್ನ ಕುಟುಂಬವನ್ನು ದಾರಿ ತಪ್ಪಿಸಿ ಪಂಜಾಬ್‌ನಲ್ಲಿ ಇನ್ನೊಬ್ಬ ಮಹಿಳೆಯನ್ನು ವಿವಾಹವಾಗಿದ್ದಾನೆ ಎಂದು ಆಕೆ ಆರೋಪಿಸಿದ್ದಾಳೆ. ಆತ ಹೈದರಾಬಾದ್‌ನಲ್ಲಿರುವ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದು, ಹಳ್ಳಿಯಲ್ಲಿರುವ ಅವರ ಪೂರ್ವಜರ ಮನೆಯನ್ನು ಮಾರಿದ್ದಾರೆ ಎಂದು ಮಹಿಳೆ ದೂರಿದ್ದಾಳೆ.
ಇದನ್ನೂ ಓದಿ: ಬೆಳಗಾವಿ: ಮಳೆ ನಿಲ್ಲಲು ಕಾಯುತ್ತಿದ್ದವರಿಗೆ ಕಾದಿದ್ದ ಜವರಾಯ: ಮನೆ ಗೋಡೆ ಕುಸಿದು ಪತ್ನಿ ಸಾವು, ಪತಿ ಜಸ್ಟ್ ಮಿಸ್
ಮತ್ತೊಂದು ಸ್ಥಳೀಯ ವರದಿಯ ಪ್ರಕಾರ, ಹರಿನಂದನ್ ತಾಯಿ ತಮ್ಮ ಸೊಸೆ ವಿರುದ್ಧ ಅರೋಪ ಮಾಡಿದ್ದಾರೆ, ಹರಿನಂದನ್ ತಾಯಿ ಮಾತನಾಡಿ, ಸೊಸೆ ರಚನೇಶ್ ಶರ್ಮಾ ಮಥುರಾ ನಗರದ ಸದರ್ ನಲ್ಲಿರುವ ಮನೆಯಲ್ಲಿ ವಾಸಿಸುತ್ತಿದ್ದಾರೆ, ಅದು ನನ್ನ ಪತಿ ಸೀತಾರಾಮ್ ಹೆಸರಿನಲ್ಲಿದೆ. ಮೂರು ವರ್ಷಗಳ ಹಿಂದೆ, ಅವರು ನಮ್ಮನ್ನು ಆ ಮನೆಯಿಂದ ಹೊಡೆದು ಹೊರಗೆಸೆದರು. ಮನೆ ಮತ್ತು ತೋಟವನ್ನು ಅವರ ಹೆಸರಿಗೆ ವರ್ಗಾಯಿಸಲು ಅವರು ನಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ. ಮನೆಯ ಹೊರಗೆ ದಿನಸಿ ಅಂಗಡಿ ಇತ್ತು, ಅದನ್ನು ಸಹ ಅವರು ತೆಗೆದುಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು : 50 ಅಡಿ ಆಳದ ಕಂದಕಕ್ಕೆ ಬಿದ್ದ ಕಾರು: ಅನುಮಾನ ಹುಟ್ಟಿಸಿದ ಅಪಘಾತ ಪ್ರಕರಣ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.