
ಪ್ರಾಮಾಣಿಕತೆ, ನಿಷ್ಠೆಗೆ ಇನ್ನೊಂದು ಹೆಸರು ನಾಯಿ (Dog). ಮನೆಗೆ ಅಪರಿಚಿತರು ಬಂದಾಗ ಅಥವಾ ಬೇರೆ ಪ್ರಾಣಿಗಳನ್ನು ನೋಡಿದಾಗ ನಾಯಿ ಬೊಗಳೋದು ಸಾಮಾನ್ಯ. ಅದು ನಾಯಿ ಸ್ವಭಾವ ಕೂಡ ಹೌದು. ಅನೇಕ ಬಾರಿ ನಾಯಿ ನಮ್ಮನ್ನು ನೋಡಿ ಬೊಗಳುತ್ತೆ, ಅದೇ ಬೇರೆಯವರನ್ನು ನೋಡಿದ್ರೂ ಸುಮ್ಮನಿರುತ್ತೆ. ಅದಕ್ಕೆ ಕಾರಣ ಏನು ಅನ್ನೋದನ್ನು ನಾವಿಂದು ಹೇಳ್ತೇವೆ. ಪ್ರಾಣಿಗಳ ನಡವಳಿಕೆಯ ಹಿಂದೆ ಯಾವಾಗಲೂ ಒಂದು ಕಾರಣವಿರುತ್ತದೆ. ಅದನ್ನು ಅರ್ಥಮಾಡಿಕೊಂಡ್ರೆ ಪ್ರಾಣಿಗಳ ಜೊತೆ ಉತ್ತಮ ಸಂಬಂಧ ಬೆಳೆಸಬಹುದು. ಅವು ಅನಗತ್ಯವಾಗಿ ಬೊಗಳೋದನ್ನು ಅಥವಾ ಕಚ್ಚೋದನ್ನು ತಪ್ಪಿಸಿಕೊಳ್ಳಬಹುದು.
ನಾಯಿ ಬೊಗಳಲು ಕಾರಣ : ನಾಯಿಗಳು ಸ್ವಾಭಾವಿಕವಾಗಿ ಎಚ್ಚರಿಕೆಯ ಜೀವಿ. ಪರಿಚಯವಿಲ್ಲದ ಏನನ್ನಾದ್ರೂ ನೋಡಿದಾಗ ಅವು ಕೂಗುತ್ತವೆ. ಅಪರಿಚಿತರು ಎದುರಾದಾಗ ಅವು ಅನೇಕ ವಿಷ್ಯಗಳನ್ನು ಗಮನಿಸುತ್ತವೆ. ವಿಶಿಷ್ಟ ವಾಸನೆ, ಪರಿಚಯವಿಲ್ಲದ ದೇಹದ ಭಾಷೆ ಅಥವಾ ವಿಭಿನ್ನ ಧ್ವನಿಯನ್ನು ಅವು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತವೆ. ಕೆಲವು ನಾಯಿಗಳಿಗೆ, ಈ ಹೊಸ ಅನುಭವಗಳು ಸಂಭಾವ್ಯ ಬೆದರಿಕೆಯಂತೆ ಭಾಸವಾಗುತ್ತವೆ. ತಮ್ಮನ್ನು ಅಥವಾ ತಮ್ಮ ಪ್ರದೇಶವನ್ನು ರಕ್ಷಿಸಿಕೊಳ್ಳುಲು ಅವು ಬೊಗಳುತ್ತವೆ.
ನಾಯಿಗಳಿಗೆ 45 ಕೋಟಿ ಖರ್ಚು ಮಾಡಿ ಲಕ್ಷುರಿ ಲೈಫ್.. ಕೊನೆಗೆ ತನ್ನ ಆಸ್ತಿಯನ್ನೇ ಬರೆದುಕೊಟ್ಟ ಸ್ಟಾರ್ ಹೀರೋ ಇವರೇ?
ನಾಯಿ ಬೊಗಳಲು ಮನುಷ್ಯನ ಈ ವರ್ತನೆ ಕಾರಣ : ಅಚ್ಚರಿ ಎನ್ನಿಸಿದ್ರೂ ಮನುಷ್ಯನ ಕೆಲ ವರ್ತನೆ ನಾಯಿಗೆ ಭಯ ಹುಟ್ಟಿಸುತ್ತದೆ. ಅದು ರಕ್ಷಣೆಗಾಗಿ ಬೊಗಳಲು ಶುರು ಮಾಡುತ್ತದೆ. ಟೋಪಿ ಅಥವಾ ಸನ್ ಗ್ಲಾಸ್ ಸೇರಿದಂತೆ ಭಿನ್ನವಾಗಿ ಕಾಣಿಸುವ ವೇಷಗಳು, ನಿಮ್ಮ ಮುಖವನ್ನು ಮರೆಮಾಡುತ್ತಿದ್ದರೆ, ನಾಯಿಗಳಿಗೆ ನಿಮ್ಮ ಭಾವನೆ ಅರ್ಥ ಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಆಗ ಅವು ಬೊಗಳುತ್ತವೆ. ಅನೇಕ ಬಾರಿ ನಿಮ್ಮ ಆಳವಾದ, ದೊಡ್ಡ ಧ್ವನಿಗೆ ನಾಯಿ ಬೊಗಳುವ ಸಾಧ್ಯತೆ ಇರುತ್ತದೆ. ಧೂಮಪಾನದಂತಹ ಕೆಲಸವನ್ನು ನಾಯಿ ಮುಂದೆ ಮಾಡಿದ್ರೆ ಅವು ಆತಂಕಗೊಳ್ಳುತ್ತವೆ. ನಾಯಿ ಬೆರಳು ತೋರಿಸಿದಾಗ ಅಥವಾ ಕಣ್ಣಲ್ಲಿ ಕಣ್ಣಿಟ್ಟು ನೋಡಿದಾಗ ಕೂಡ ವಿಚಲಿತವಾಗುತ್ತದೆ. ಇದು ರಕ್ಷಣಾತ್ಮಕ ಬೊಗಳುವಿಕೆಗೆ ಪ್ರಚೋದಿಸುತ್ತದೆ.
ನಿಷ್ಠೆ ಮತ್ತು ರಕ್ಷಣೆ : ನಾಯಿಗಳು ತಮ್ಮ ಮಾಲೀಕರಿಗೆ ನಿಷ್ಠರಾಗಿರುತ್ತವೆ. ಅಪರಿಚಿತರು ಸಮೀಪಿಸಿದರೆ, ನಿಮ್ಮ ನಾಯಿ ನಿಮ್ಮನ್ನು ಮತ್ತು ನಿಮ್ಮ ಮನೆಯನ್ನು ಕಾಪಾಡುವ ಮಾರ್ಗವಾಗಿ ಬೊಗಳುತ್ತದೆ. ಈ ನಡವಳಿಕೆ ಅವುಗಳಲ್ಲಿ ಆಳವಾಗಿ ಬೇರೂರಿದೆ. ನಿಮ್ಮನ್ನು ಸುರಕ್ಷಿತವಾಗಿರಿಸುವುದು ತಮ್ಮ ಜವಾಬ್ದಾರಿ ಎಂದು ಭಾವಿಸುವ ಅವು ಬೊಗಳುತ್ತವೆ.
ನಿಮ್ಮ ಮನಸ್ಸು ಅರಿಯಬಲ್ಲವು : ನಾಯಿಗಳು ಮನುಷ್ಯನ ನಡವಳಿಕೆಯ ಸೂಕ್ಷ್ಮತೆಯನ್ನು ಗ್ರಹಿಸುತ್ತವೆ, ತಮ್ಮ ಮುಂದಿರುವ ವ್ಯಕ್ತಿ ವಿಶ್ವಾಸಾರ್ಹರೇ ಅಥವಾ ಇಲ್ಲವೇ ಎಂಬುದನ್ನು ಅವು ನಿರ್ಧರಿಸುತ್ತವೆ. ಜನರು ತಮ್ಮ ಮಾಲೀಕರನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದನ್ನು ಗಮನಿಸಿ, ಅದನ್ನು ನೆನಪಿಟ್ಟುಕೊಳ್ಳುತ್ತವೆ. ಮಾಲೀಕ ಮೇಲೆ ಹಗೆ ತೀರಿಸಿಕೊಳ್ಳಲು ಮುಂದಾದ್ರೆ ಅಥವಾ ಅಪ್ರಾಮಾಣಿಕರು ಎಂಬುದು ಅರಿವಿಗೆ ಬಂದ್ರೆ ಬೊಗಳಲು ಮತ್ತು ಕಚ್ಚಲು ಮುಂದಾಗುತ್ತವೆ.
ಹಿಂದಿನ ನೆನಪು : ಮನುಷ್ಯರಂತೆ ನಾಯಿಗಳು ಹಿಂದಿನ ಅನುಭವವನ್ನು ಮರೆಯುವುದಿಲ್ಲ. ನಾಯಿ ಒಂದೇ ರೀತಿಯ ವಾಸನೆ, ನೋಟ ಅಥವಾ ನಡವಳಿಕೆಯಂತಹ ಕೆಲವು ಗುಣಲಕ್ಷಣಗಳನ್ನು ಸದಾ ನೆನಪಿಟ್ಟುಕೊಂಡಿರುತ್ತದೆ. ಯಾವುದೇ ವ್ಯಕ್ತಿ ಈ ಹಿಂದೆ ನಾಯಿ ಜೊತೆ ನಕಾರಾತ್ಮಕವಾಗಿ ನಡೆದುಕೊಂಡಿದ್ದರೆ, ಅದನ್ನು ನೆನಪಿಟ್ಟುಕೊಳ್ಳುವ ನಾಯಿ, ಅವರನ್ನು ಕಂಡು ತಕ್ಷಣ ಬೊಗಳಲು ಶುರು ಮಾಡುತ್ತದೆ.
ಶ್ವಾನಗಳ ಜೀವ ಹಿಂಡುತ್ತಿದೆ ಪಾರೋ ವೈರಲ್ ಡಯೇರಿಯಾ ಸೋಂಕು: ಕೊಡಗಿನಲ್ಲಿ 50ಕ್ಕೂ ಹೆಚ್ಚು ನಾಯಿಗಳ ಸಾವು
ನಾಯಿ ಬೊಗಳೋದನ್ನು ತಡೆಯೋದು ಹೇಗೆ? : ನಾಯಿ ಮಾಲೀಕರಾಗಿದ್ದರೆ, ಚಿಕ್ಕ ವಯಸ್ಸಿನಿಂದಲೇ ನಿಮ್ಮ ಸಾಕುಪ್ರಾಣಿಗಳೊಂದಿಗೆ ಬೆರೆಯುವುದು ಮುಖ್ಯ. ಅವುಗಳಿಗೆ ವಿವಿಧ ಜನರು, ವಾಸನೆಗಳು ಮತ್ತು ಪರಿಸರಗಳಿಗೆ ಒಗ್ಗಿಕೊಳ್ಳಲು ಅವಕಾಶ ನೀಡಿ. ಹೊಸ ಸಂದರ್ಭದಲ್ಲಿ ಅವು ಆರಾಮದಾಯಕವಾಗಿರುತ್ತವೆ. ಅಪರಿಚಿತರ ಜೊತೆ ಶಾಂತವಾಗಿರಲು ನಾಯಿಗೆ ತರಬೇತಿ ನೀಡಿ. ಅವುಗಳ ಜೊತೆ ಉತ್ತಮವಾಗಿ ವರ್ತಿಸಿದ್ರೆ ಬೊಗಳುವಿಕೆ ಕಡಿಮೆ ಮಾಡಬಹುದು.
ನಾಯಿ ಜೊತೆ ಶಾಂತವಾಗಿ ವರ್ತಿಸಿ. ಅವುಗಳ ಜಾಗವನ್ನು ಗೌರವಿಸಿ. ಅವುಗಳ ಕಣ್ಣುಗಳನ್ನು ನೇರವಾಗಿ ದಿಟ್ಟಿಸಿ ನೋಡಬೇಡಿ, ಅವುಗಳತ್ತ ಬೆರಳು ತೋರಿಸಬೇಡಿ. ಅವುಗಳ ನಡವಳಿಕೆಯ ಹಿಂದಿನ ಕಾರಣಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ಸಕಾರಾತ್ಮಕ ಸಂಬಂಧ ಬೆಳೆಸಲು ಪ್ರಯತ್ನಿಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.