
ಅದೇನೆ ಇರಲಿ ಅಮ್ಮನಿಗೂ ಮಲತಾಯಿಗೂ ಅಜಗಜಾಂತರ ವ್ಯತ್ಯಾಸವಿದೆ. ಇದೇ ಕಾರಣಕ್ಕೆ 'ಮಲತಾಯಿ ಪ್ರೀತಿ ಮಣ್ಣಿನ ಪಾತ್ರೆಯಂತೆ' ಎಂಬ ಗಾದೆ ಮಾತೇ ಇದೆ. ಮಲತಾಯಿಯ ಪ್ರೀತಿ ನಿಜವಾದ ತಾಯಿಯ ಪ್ರೀತಿಯಂತೆ ಶಾಶ್ವತವಾಗಿರುವುದಿಲ್ಲ. ಮಣ್ಣಿನ ಪಾತ್ರೆ ಹೇಗೆ ಸುಲಭವಾಗಿ ಒಡೆಯುತ್ತದೆಯೋ, ಹಾಗೆಯೇ ಮಲತಾಯಿಯ ಪ್ರೀತಿ ಅಥವಾ ಕಾಳಜಿ ಕೂಡ ಅಷ್ಟೇ ಕ್ಷಣಿಕ ಎಂಬುದು ಈ ಗಾದೆಯ ಅರ್ಥ. ಕೆಲವರು ಹೆಂಡ್ತಿ ತೀರಿಕೊಂಡ ನಂತರ ಪುಟ್ಟ ಮಕ್ಕಳನ್ನು ನೋಡಿಕೊಳ್ಳುವುದಕ್ಕೆ ಆಗುವುದಿಲ್ಲ ಎಂದು ಮರು ಮದುವೆಯಾಗುತ್ತಾರೆ. ಇಂತಹ ಸಂದರ್ಭಗಳಲ್ಲಿ ಮಲತಾಯಿಯ ಕೈಗೆ ಸಿಗುವ ಮಕ್ಕಳು ಖುಷಿಗಿಂತ ನೋವನುಭವಿಸುವುದೇ ಹೆಚ್ಚು. ಹಾಗೆಯೇ ಇಲ್ಲೊಬ್ಬಳು ಪುಟಾಣಿ ಬಾಲೆ ಮಲತಾಯಿಯ ಕಿರುಕುಳದ ನಂತರ ತಾಯಿಯ ಸಮಾಧಿ ಬಳಿ ಗೋಳಿಡುತ್ತಾ ಅಳುತ್ತಿರುವ ದೃಶ್ಯವೊಂದು ಮೊಬೈಲ್‌ನಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರನ್ನು ಭಾವುಕರನ್ನಾಗಿಸಿದೆ. ವಿಡಿಯೋ ನೋಡಿದ ಅನೇಕರು ಹೇಗಾದರು ಮಾಡಿ ಆ ಮಗುವನ್ನು ಆ ಮಲತಾಯಿಯ ಕೈಯಿಂದ ರಕ್ಷಿಸುವಂತೆ ಕೇಳಿದ್ದಾರೆ.
ಅಂದಹಾಗೆ ಈ ಘಟನೆ ನಡೆದಿರುವುದು ಬಾಂಗ್ಲಾದೇಶದಲ್ಲಿ. ಇಲ್ಲಿನ ಕುಮಿಲ್ಲಾದ ಲಾಲ್‌ಮೈ ಉಪಜಿಲ್ಲಾದಲ್ಲಿ ಮಲತಾಯಿಯಿಂದ ದೌರ್ಜನ್ಯಕ್ಕೊಳಗಾದ ಬಾಲಕಿ ಸೀದಾ ಬಂದು ತಾಯಿಯ ಸಮಾಧಿ ಬಳಿ ಗೋಳಿಡುತ್ತಾ ಅಳುವುದಕ್ಕೆ ಶುರು ಮಾಡಿದ್ದಾಳೆ. ಈ ವೀಡಿಯೋ ನಂತರ ಶೀಘ್ರದಲ್ಲೇ ವೈರಲ್ ಆಗಿದ್ದು, ಅಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಿ ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ ಎಂದು ವರದಿಯಾಗಿದೆ. ಅಲ್ಲದೇ ಮಲತಾಯಿಯನ್ನು ಘಟನೆಗೆ ಸಂಬಂಧಿಸಿದಂತೆ ಬಂಧಿಸಿ ಬಳಿಕ ಆಕೆಯಿಂದ ಈ ರೀತಿ ಇನ್ನುಮುಂದೆ ಕೃತ್ಯ ನಡೆಯುವುದಿಲ್ಲ ಎಂದು ಮುಚ್ಚಳಿಕೆ ಬರೆಸಿಕೊಂಡು ಬಾಂಡ್‌ಗೆ ಸಹಿ ಹಾಕಿ ಬಿಡುಗಡೆ ಮಾಡಲಾಗಿದೆ ಎಂದು ವರದಿಯಾಗಿದೆ. ಇತ್ತ ಬಾಲಕಿಯನ್ನು ರಕ್ಷಿಸಿ ಉಪಜಿಲ್ಲಾ ಕಾರ್ಯನಿರ್ವಾಹಕ ಅಧಿಕಾರಿ ಕಚೇರಿಗೆ ತರಲಾಯ್ತು.
ಮಲತಾಯಿಯಿಂದ ಕಿರುಕುಳಕ್ಕೊಳಗಾದ ಬಾಲಕಿಯನ್ನು 12 ವರ್ಷದ ಶಮೀಮಾ ಅಖ್ತರ್ ಎಂದು ಗುರುತಿಸಲಾಗಿದ್ದು, ಉಪಜಿಲ್ಲಾದ ಪೋನ್ಕುಚಾ ವೆಸ್ಟ್ ಪಾರಾ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ. ಆಕೆಯ ತಾಯಿ ಸುಮಾರು ನಾಲ್ಕು ವರ್ಷಗಳ ಹಿಂದೆ ನಿಧನರಾಗಿದ್ದು, ಆಕೆಯ ತಂದೆ ಪತ್ನಿಯ ನಿಧನದ ನಂತರ ಮರು ಮದುವೆಯಾಗಿ ಪ್ರಸ್ತುತ ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದಾರೆ ಎಂದು ವರದಿಯಾಗಿದೆ. ಇತ್ತ ತಂದೆಯ ಅನುಪಸ್ಥಿತಿಯಲ್ಲಿ ಬಾಲಕಿ ಶಮೀಮಾ ತನ್ನ ಮಲತಾಯಿ ಆಯೇಷಾ ಅಖ್ತರ್ ಜೊತೆ ವಾಸಿಸುತ್ತಿದ್ದಳು. ಶಮೀಮಾಗೆ ಮಲತಾಯಿ ದೀರ್ಘಕಾಲದಿಂದ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದಳು ಎಂಬ ಆರೋಪಗಳು ಕೇಳಿಬಂದಿವೆ.
ಇದನ್ನೂ ಓದಿ: ಲವರ್ ಜೊತೆ ಸೇರಿ ಅಮ್ಮನನ್ನೇ ಕೊಂದು ಮನೆಯಲ್ಲೇ ಹೂತು ಹಾಕಿದ ಮಗಳು: ತಾಯಿಯ ಸ್ಕೂಟಿ ನೀಡಿತು ರೋಚಕ ಸುಳಿವು
ಬಾಲಕಿಯನ್ನು ಆಕೆಯ ಮಲತಾಯಿ ಆಗಾಗ್ಗೆ ಹೊಡೆಯುತ್ತಿದ್ದಳು. ಇತ್ತೀಚೆಗೆ, ಆಕೆಯನ್ನು ಮನೆಯೊಳಗೆ ಕಟ್ಟಿಹಾಕಿ ಸತತ ಎರಡು ದಿನಗಳ ಕಾಲ ಚಿತ್ರಹಿಂಸೆ ನೀಡಿದ್ದಳು. ಎಂದು ಆರೋಪಿಸಲಾಗಿದೆ. ಆಕೆಯ ತಂದೆಗೆ ಮಾಹಿತಿ ನೀಡಿದ್ದರೂ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಫೇಸ್‌ಬುಕ್‌ನಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಬಾಲಕಿ ತನ್ನ ತಾಯಿಯ ಸಮಾಧಿಯ ಬಳಿ ಕಣ್ಣೀರು ಹಾಕುತ್ತಿರುವುದನ್ನು ಕಾಣಬಹುದು. ತನ್ನ ತಾಯಿಯ ಸಮಾಧಿಯ ಬಳಿ ಅಳುತ್ತಾ ಬಾಲಕಿ ನೀನು ನನ್ನನ್ನು ಏಕೆ ನನ್ನೊಂದಿಗೆ ಕರೆದುಕೊಂಡು ಹೋಗಲಿಲ್ಲ? ಅಮ್ಮು, ನಾನು ಬರುತ್ತಿದ್ದೇನೆ. ಅಮ್ಮು, ಹೊರಗೆ ಬಾ. ನೀನು ನನ್ನನ್ನು ಕರೆದುಕೊಂಡು ಹೋಗಲು ಸಾಧ್ಯವಾಗಲಿಲ್ಲವೇ? ನೀನು ನನ್ನನ್ನು ಏಕೆ ಬಿಟ್ಟು ಹೋದೆ? ಅಮ್ಮಾ, ನನ್ನನ್ನು ನಿನ್ನೊಂದಿಗೆ ಕರೆದುಕೊಂಡು ಹೋಗು ಗೋಳಿಟ್ಟಿದ್ದಾಳೆ. ಈ ವೀಡಿಯೋ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ: 10ನೇ ಕ್ಲಾಸ್ ಕೂಡ ಓದಿಲ್ಲ, ಆದ್ರೂ ದಂತವೈದ್ಯ: 20 ವರ್ಷಗಳಿಂದ ಕ್ಲಿನಿಕ್ ನಡೆಸುತ್ತಿದ್ದ ನಕಲಿ ಡೆಂಟಿಸ್ಟ್ ಅರೆಸ್ಟ್
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.