ಜೀವನವೇ ಸಾಕು ಅನಿಸ್ತಿದೆಯಾ? ಇದರಿಂದ ಹೊರಬರೋಕೆ ದಾರಿ ಇದೆ!

By Suvarna News  |  First Published Jan 30, 2020, 4:34 PM IST

ಬದುಕು ಎಂಜಾಯ್‌ಮೆಂಟ್ ಅಲ್ಲ ಅನಿಸಿದಾಗ, ಖುಷಿಯ ಕ್ಷಣಗಳು ದೂರವಾಗುತ್ತಿವೆ ಅನಿಸಿದಾಗ ಒಮ್ಮೆ ತಿರುಗಿ ನೊಡೋಣ. ಬದುಕನ್ನು ಪ್ರೀತಿಸುತ್ತಲೇ ಬದುಕಿನ ಜೊತೆಗೆ ನಡೆಯೋಣ. ಆಗ ಲೈಫು ಸಹನೀಯವಾಗುತ್ತದೆ.


ನೀಲಿಮಾ ಮಧ್ಯಮ ವರ್ಗದ ಹುಡುಗಿ. ಮೊದ ಮೊದಲ ಏನಾದ್ರೂ ಸಾಧಿಸಬೇಕು, ಲೈಫ್ ಅನ್ನು ಚಾಲೆಂಜಿಂಗ್ ಆಗಿ ತಗೋಬೇಕು, ಸಾಕಷ್ಟು ಸಾಧನೆ ಮಾಡಬೇಕು.. ಹೀಗೆ, ಡಿಗ್ರಿ ಮುಗಿಸಿ ಕೆಲಸಕ್ಕೆ ಸೇರಿದಾಗ ಏನೇನೋ ಕನಸುಗಳು. ಅದಕ್ಕಾಗಿ ರಾತ್ರಿ ಹಗಲೂ ಕಷ್ಟಪಟ್ಟಿದ್ದೂ ಆಯ್ತು, ಅವಳ ಪರ್ಸನಲ್ ಲೈಫ್‌ನ ಒಂದಿಷ್ಟು ಖುಷಿಗಳನ್ನು ತ್ಯಾಗ ಮಾಡಿದ್ದೂ ಆಯ್ತು. ಮೂರು ಹೊತ್ತೂ ಕೆಲಸ ಕೆಲಸ ಅಂತಿರ್ತೀಯಾ, ನಿನ್ನ ಬಗ್ಗೆಯೂ ಒಂಚೂರು ಕಾಳಜಿ ಮಾಡು ಅಂತ ಅಮ್ಮನಿಂದ ಬೈಯಿಸಿಕೊಳ್ತಿದ್ದಿದ್ದೂ ಕಾಮನ್ ಆಗಿತ್ತು. ಇದೆಲ್ಲ ಒಂದು ಹಂತದವರೆಗೆ. ಆಮೇಲೆ ನೀಲಿಮಾಗೆ ಮದುವೆ ಆಯ್ತು. ಆಮೇಲೂ ಸವಾಲುಗಳ ಜೊತೆಗೆ ಜೀಕೋದು ಮುಂದುವರಿಯಿತು. ಸ್ವಲ್ಪ ಸಮಯಕ್ಕೆ ಮಗು ಆಯ್ತು. ಅದಕ್ಕೆ ನಾಲ್ಕು ತಿಂಗಳಾಗುತ್ತಲೇ ಮತ್ತೆ ಕೆಲಸ, ಅವವೇ ಸವಾಲುಗಳು.. ಆದರೆ ಈಗ ನೀಲಿಮಾಗೆ ವಾಸ್ತವದ ಅರಿವಾಗಲು ಶುರುವಾಗಿದೆ. ನಾನು ಈವರೆಗೆ ಏನು ಸಕ್ಸಸ್ ಅಂದುಕೊಂಡಿದ್ದೀನೋ ಅದು ನಿಜವಾದ ಸಕ್ಸಸ್ ಅಲ್ಲ, ಆ ಸಾಧನೆ, ಛಲಗಳ ಹಿಂದೆ ಇದ್ದದ್ದು ಇತರರ ಕಣ್ಣಲ್ಲಿ ನಾನು ಗ್ರೇಟ್ ಅಂತ ಅನಿಸಿಕೊಳ್ಳಬೇಕು, ಜಗತ್ತೇ ನನ್ನ ಕಂಡು ಬೆರಗಾಗಬೇಕು ಎಂಬ ಭ್ರಮೆ ಅಷ್ಟೇ ಅಂತ. ಕ್ರಮೇಣ ನೀಲಿಮಾ ಕೆಲಸದಲ್ಲಿ ಆಸಕ್ತಿ ಕಡಿಮೆ ಆಗುತ್ತಿದೆ. ಛೇ, ಇಷ್ಟು ದಿನ ಲೈಫ್ ಅನ್ನು ಎನ್ ಜಾಯ್ ಮಾಡಲೇ ಇಲ್ಲವಲ್ಲ ಅನಿಸಲು ಶುರುವಾಗಿದೆ.

ಎಲ್ಲರೊಂದಿಗೆ ಬೆರೆಯಲು ಕಣ್ತುಂಬಾ ನಿದ್ರಿಸಿ

Tap to resize

Latest Videos

undefined

ಬರೀ ನಿಲೀಮಾ ಅಷ್ಟೇ ಅಲ್ಲ. ಇದು ನಮ್ಮಲ್ಲಿ ಹೆಚ್ಚಿನವರ ಕತೆ. ಒಂದು ಹಂತದವರೆಗೆ ಬಹಳ ಆಸಕ್ತಿ, ಛಲದಲ್ಲಿ ಕೆಲಸ ಮಾಡುತ್ತಿರುವವರು ಒಂದಲ್ಲ ಒಂದು ದಿನ ಈ ಫೀಲ್ ಗೆ ಒಳಗಾಗುತ್ತಾರೆ. ಆಮೇಲೆ ಕೆಲಸದಿಂದ ವಿಮುಖರಾಗಲು ತೊಡಗುತ್ತಾರೆ.

 

ಯಾಕೆ ಹೀಗಾಗುತ್ತೆ, ಇದರಿಂದ ಹೊರಬರೋದು ಹೇಗೆ?

ಮೊದಲನೇ ಕಾರಣ ಸ್ಪರ್ಧೆ. ಈ ಕಾಂಪಿಟೀಶನ್ ಅನ್ನೋದು ನಮ್ಮನ್ನು ನಮ್ಮ ಪಾಡಿಗೆ ಬಿಡಲ್ಲ, ನೆಮ್ಮದಿಯಾಗಿ ನಿದ್ದೆ ಮಾಡಲೂ ಬಿಡಲ್ಲ. ನಮ್ಮ ಕೆಲಸಕ್ಕಿಂತ ಬೇರೆಯವರ ಕೆಲಸದ ಬಗ್ಗೆಯೇ ಗಮನ. ಅವರೆಲ್ಲಿ ಮುಂದೆ ಹೋಗುತ್ತಾರೋ, ಅವರಿಗಿಂತ ನಾವು ಸಾಕಷ್ಟು ಮುಂದೆ ಹೋದರೆ ಅವರಿಗೆ ನಮ್ಮನ್ನು ಹಿಂದೆ ಹಾಕೋಕೆ ಕಷ್ಟ ಅಂದುಕೊಂಡು ಹಗಲಿರುಳೂ ಕೆಲಸದ ಹಿಂದೆ ಬೀಳುತ್ತೇವೆ. ಈ ಸ್ಪರ್ಧೆಗೆ ಕೊನೆಯೇ ಇಲ್ಲ. ಒಬ್ಬರಾದ ಮೇಲೊಬ್ಬರು ಪ್ರತಿಸ್ಪರ್ಧಿಗಳು ಸಿಕ್ಕುತ್ತಲೇ ಹೋಗುತ್ತಾರೆ. ಜಗತ್ತು ಗೆದ್ದೆತ್ತಿನ ಬಾಲ ಹಿಡಿದೇ ಹೋಗೋದು. ಒಮ್ಮೆ ನಮಗೆ ನಮ್ಮ ತಪ್ಪಿನ ಅರಿವಾಗುತ್ತದೆ. ಆದರೆ ಆ ಹೊತ್ತಿಗೆ ಬಹಳ ದೂರ ಬಂದಿರುತ್ತೇವೆ.
 

ನಾವು ಯಾವ ಕೆಲಸವನ್ನೂ ಸ್ಪರ್ಧಾತ್ಮಕವಾಗಿ ಮಾಡದೇ ನಮ್ಮ ಖುಷಿಗೆ ಅಂತ ಮಾಡೋಣ. ಇನ್ನೊಬ್ಬರು ಏನು ಬೇಕಾದರೂ ಮಾಡಲಿ, ನಮ್ಮ ಕೆಲಸ ನಮ್ಮದು ಅಂತ ಮುಂದುವರಿಯೋಣ. ಆಗ ಚಡಪಡಿಕೆ ಕಡಿಮೆ ಆಗುತ್ತೆ. ನಮಗೆ ನಮ್ಮದು ಅಂತ ಒಂದು ಜಾಗ ಸಿಗುತ್ತೆ. ಲೈಫ್ ಅನ್ನು ಎನ್ ಜಾಯ್ ಮಾಡುತ್ತಲೇ ಮುಂದುವರಿದರೆ ಅಷ್ಟು ಬೇಗ ದಣಿವಾಗಲ್ಲ.
 

ಎರಡನೇ ಕಾರಣ ನಮ್ಮ ಅಹಂ ಅಥವಾ ಇಗೋ. ಇದು ನಮ್ಮನ್ನು ಮೇಲಿಟ್ಟು ಉಳಿದವರನ್ನು ಕೀಳಾಗಿ ನೋಡುತ್ತಲೇ ಇರುತ್ತದೆ. ನಾವು ಮೇಲೆಯೇ ಇರಬೇಕು. ಉಳಿದವರು ಕೆಳಗೇ ಇರಬೇಕು ಅನ್ನೋದನ್ನು ಗಟ್ಟಿ ಮಾಡುತ್ತಲೇ ಹೋಗುತ್ತದೆ. ಇದು ನೆಮ್ಮದಿಗೆ ಮಾರಕ. ಇನ್ನೊಬ್ಬರ ಕಣ್ಣಲ್ಲಿ ನಾವು ಗ್ರೇಟ್ ಅನಿಸಿಕೊಳ್ಳೋದರಲ್ಲಿ ಯಾವ ಸಾರ್ಥಕತೆಯೂ ಇಲ್ಲ. ನಾವು ಮಾಡುವ ಕೆಲಸದಲ್ಲಿ ನಮಗೆ ತೃಪ್ತಿ ಸಿಕ್ಕರೆ ಖಂಡಿತಾ ಆ ಕೆಲಸದ ಗುಣಮಟ್ಟ ಚೆನ್ನಾಗಿಯೇ ಇರುತ್ತೆ.

 

ಮಕ್ಕಳಿಗಾಗಿ ಮೀಸಲಿಡುವ ಹಿರಿಜೀವಗಳ ಕೊನೆಗಾಲದಲ್ಲಿ ನಾವೆಷ್ಟುಆಸರೆಯಾಗುತ್ತೇವೆ?
 

ಮೂರನೇ ಕಾರಣ ನಮಗಿಷ್ಟ ಇಲ್ಲದ ಕೆಲಸ ಮಾಡೋದು. ನನಗೆ ಈ ಫೀಲ್ಡೇ ಇಷ್ಟ ಇರಲಿಲ್ಲ. ಹೆಚ್ಚು ದುಡ್ಡು ಸಿಗುತ್ತೆ ಅಂತ ಬಂದೆ, ಅಮ್ಮ ಅಪ್ಪನ ಬಲವಂತಕ್ಕೆ ಈ ಕೆಲಸಕ್ಕೆ ಸೇರಿದೆ ಅನ್ನುವವರು ಬಹಳ ಜನ ಇದ್ದಾರೆ. ಆದರೆ ಇದು ಪಲಾಯನ. ಒಂದು ಕುತೂಹಲ ಬೆಳೆಸಿಕೊಂಡರೆ ಇಷ್ಟ ಇಲ್ಲದ ವಿಷಯಗಳೂ ಇಷ್ಟ ಆಗುತ್ತವೆ. ಬದಲಾಗಿ ನಾವು ಕಲಿಕೆ, ಕುತೂಹಲದ ಕಿಟಕಿಗಳನ್ನು ಕ್ಲೋಸ್ ಮಾಡಿ ಕೂತರೆ ನಮಗೆ ಜಗತ್ತಿನ ಯಾವ ವಿಷಯಗಳೂ ಇಷ್ಟ ಆಗಲ್ಲ. ಅದೇ ಪ್ರತಿಯೊಂದರಲ್ಲೂ ಮಗುವಿನಂಥಾ ಕುತೂಹಲ ಬೆಳೆಸಿಕೊಂಡರೆ ಯಾವ ಫೀಲ್ಡೂ ಕಷ್ಟ ಅಲ್ಲ.
 

ಬದುಕು ಎಂಜಾಯ್‌ಮೆಂಟ್ ಅಲ್ಲ ಅನಿಸಿದಾಗ, ಖುಷಿಯ ಕ್ಷಣಗಳು ದೂರವಾಗುತ್ತಿವೆ ಅನಿಸಿದಾ ಒಮ್ಮೆ ತಿರುಗಿ ನೊಡೋಣ. ಬದುಕನ್ನು ಪ್ರೀತಿಸುತ್ತಲೇ ಬದುಕಿನ ಜೊತೆಗೆ ನಡೆಯೋಣ. ಆಗ ಲೈಫು ಸಹನೀಯವಾಗುತ್ತದೆ.

 

ಮಕ್ಕಳು ಅವರಿಗಿಷ್ಟವಾದ ಪುಸ್ತಕ ಓದಿಕೊಳ್ಳಲಿ, ನಿಮಗೇನು ಕಷ್ಟ?

click me!