ನಿದ್ರೆಯಷ್ಟು ಮನಸ್ಸಿಗೆ ಖುಷಿ, ನೆಮ್ಮದಿ ಕೊಡುವ ಸಂಗತಿ ಈ ಜಗತ್ತಿನಲ್ಲಿ ಇನ್ನೊಂದಿಲ್ಲ. ಒಂದು ರಾತ್ರಿ ನಿದ್ರೆ ಬಿಟ್ಟು ನೋಡಿ, ಮರುದಿನ ನಿಮ್ಮ ಮೈ, ಮನಸ್ಸು ಎರಡೂ ಜಡ್ಡು ಕಟ್ಟಿರುತ್ತದೆ. ನಿದ್ರೆ ಕಡಿಮೆಯಾದ್ರೆ ಆರೋಗ್ಯಕ್ಕೆ ಹಾನಿ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ,ನಿದ್ರೆ ಸಾಮಾಜಿಕ ಜೀವನದ ಮೇಲೂ ಪ್ರಭಾವ ಬೀರುತ್ತದೆ ಎಂಬುದು ನಿಮಗೆ ಗೊತ್ತಾ? ನಿದ್ರೆಯ ಕುರಿತು ಕೆಲವು ಅಧ್ಯಯನಗಳಲ್ಲಿ ಈ ಅಂಶ ಬೆಳಕಿಗೆ ಬಂದಿದೆ.ವಯಸ್ಕರು ದಿನಕ್ಕೆ ಕನಿಷ್ಠ 7-8 ಗಂಟೆ ನಿದ್ರೆ ಮಾಡುವುದು ಅತ್ಯಗತ್ಯ.ಇದರಿಂದ ಆರೋಗ್ಯಕ್ಕೆ ಹತ್ತಾರು ಲಾಭಗಳಿರುವುದು ಮಾತ್ರವಲ್ಲ,ಸಂಬಂಧಗಳನ್ನು ಭದ್ರಗೊಳಿಸುವ ಮೂಲಕ ನೆಮ್ಮದಿಯ ಸಾಮಾಜಿಕ ಜೀವನ ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ.ಅಂದರೆ ನಿದ್ರೆಯಿಂದ ನಾವು ಮಾನಸಿಕವಾಗಿ ಬಲಗೊಳ್ಳುತ್ತೇವೆ,ಪರಿಣಾಮ ಉತ್ತಮ ಸಾಮಾಜಿಕ ಸ್ಪಂದನೆ ತೋರಲು ಸಾಧ್ಯವಾಗುತ್ತದೆ.

ಪ್ರತಿಯೊಂದಕ್ಕೂ ಸಂಗಾತಿಯ ಸಮ್ಮತಿ ಬೇಕಾ?

ಏಕಾಂಗಿತನ ದೂರ: ‘ನೇಚರ್ ಕಮ್ಯೂನಿಕೇಷನ್ಸ್’ಎಂಬ ಜರ್ನಲ್‍ನಲ್ಲಿ ಪ್ರಕಟವಾದ ಅಧ್ಯಯನವೊಂದರ ಪ್ರಕಾರ ಏಕಾಂಗಿತನ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಗುಣಗಳು ನಿದ್ರಾಹೀನತೆಯೊಂದಿಗೆ ಸಂಬಂಧ ಹೊಂದಿವೆ. ಈ ವಿಚಾರಕ್ಕೆ ಸಂಬಂಧಿಸಿ ಸಂಶೋಧನಕಾರರು ಚೆನ್ನಾಗಿ ನಿದ್ರಿಸಿರುವ ವ್ಯಕ್ತಿಗಳ ಮಿದುಳನ್ನು ಸ್ಕ್ಯಾನ್ ಮಾಡಿದಾಗ ಉತ್ತಮವಾಗಿ ರೆಸ್ಟ್ ಮಾಡಿರುವ ಮಿದುಳು ಜನರೊಂದಿಗೆ ಬೆರೆಯಲು ಹಾಗೂ ಸಂವಹನ ನಡೆಸಲು ಹೆಚ್ಚು ಆಸಕ್ತಿ ಹೊಂದಿರುವುದು ಪತ್ತೆಯಾಗಿದೆ. ಅದೇ ನಿದ್ರಾಹೀನತೆಯಿಂದ ಬಳಲುತ್ತಿರುವ ವ್ಯಕ್ತಿಗಳ ಮಿದುಳನ್ನು ಸ್ಕ್ಯಾನ್ ಮಾಡಿದಾಗ ಸಾಮಾಜಿಕ ಜಿಗುಪ್ಸೆ ಹೊಂದಿರುವುದು ಕಂಡುಬಂದಿದೆ. ನೀವೇ ಬೇಕಾದರೆ ಗಮನಿಸಿ ನೋಡಿ,ರಾತ್ರಿ ಚೆನ್ನಾಗಿ ನಿದ್ರೆ ಆಗಿದ್ದರೆ ಬೆಳಗ್ಗೆ ಮನೆಮಂದಿಯೊಂದಿಗೆ ನಗುನಗುತ್ತ ಮಾತನಾಡಲು,ಬೆರೆಯಲು ಸಾಧ್ಯವಾಗುತ್ತದೆ. ಒಂದು ವೇಳೆ ನಿದ್ರೆ ಸರಿಯಾಗಿಲ್ಲವೆಂದ್ರೆ ಸಣ್ಣಪುಟ್ಟ ವಿಚಾರಗಳಿಗೂ ಕೋಪ ನೆತ್ತಿಗೇರುತ್ತದೆ,ಸುಖಾಸುಮ್ಮನೆ ಇನ್ನೊಬ್ಬರ ಮೇಲೆ ರೇಗಾಡುತ್ತೇವೆ.ಒಂಟಿಯಾಗಿರಲು ಬಯಸುತ್ತೇವೆ.ಅದೇ ನಿದ್ರೆ ಚೆನ್ನಾಗಿದ್ದರೆ ಎಲ್ಲರೊಂದಿಗೆ ಬೆರೆಯಬೇಕು,ಮಾತನಾಡಬೇಕು ಎಂಬ ಬಯಕೆ ಮೂಡುತ್ತದೆ.

ಸಾಮಾಜಿಕ ಅನುಭೂತಿ: ಇನ್ನೊಬ್ಬರ ಪರಿಸ್ಥಿತಿಯನ್ನು ಅರ್ಥೈಸಿಕೊಂಡು,ಅವರ ನೋವನ್ನು ಗ್ರಹಿಸಲು ಸಾಧ್ಯವಾಗುವ ಸಾಮಥ್ರ್ಯವೇ ಅನುಭೂತಿ.ನಿಮ್ಮ ದೇಹ ಮತ್ತು ಮನಸ್ಸಿಗೆ ನಿದ್ರೆ ಮೂಲಕ ಅಗತ್ಯ ಪ್ರಮಾಣದಲ್ಲಿ ವಿಶ್ರಾಂತಿ ಸಿಕ್ಕಿರುವಾಗ ಅಲ್ಲೊಂದು ಪ್ರಶಾಂತತೆ ನೆಲೆಸಿರುತ್ತದೆ. ಪರಿಣಾಮ ಕಷ್ಟದಲ್ಲಿರುವವರನ್ನು ಕಂಡ ತಕ್ಷಣ ನಿಮ್ಮ ಮನಸ್ಸು ಕರಗುತ್ತದೆ,ಸ್ಪಂದಿಸಲು ಮುಂದಾಗುತ್ತದೆ. ಸಮರ್ಪಕವಾಗಿ ನಿದ್ರಿಸದಿದ್ದಾಗ ಅನುಭೂತಿಗೆ ಸಂಬಂಧಿಸಿದ ಮಿದುಳಿನ ಭಾಗಗಳು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ ಎಂಬುದನ್ನು ಅನೇಕ ಅಧ್ಯಯನಗಳು ಸಾಬೀತುಪಡಿಸಿವೆ.

ನಿಮಗೆ ಸಂತೋಷವಾಗಿ ಇರೋಕೆ ಆಗ್ತಾ ಇಲ್ವಾ?

ಆಕ್ರಮಣಶೀಲತೆ ತಗ್ಗುತ್ತದೆ: ‘ಯುಎಸ್ ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್’ ನಡೆಸಿದ ಅಧ್ಯಯನದ ಪ್ರಕಾರ ನಿದ್ರೆ ಕಡಿಮೆಯಾದರೆ ಸಿಟ್ಟು ಹೆಚ್ಚಾಗುತ್ತದೆ. ಇದು ನಮ್ಮೆಲ್ಲರ ಅನುಭವಕ್ಕೆ ಬಂದಿರುತ್ತದೆ. ನಿದ್ರೆ ಸರಿಯಾಗಿರದ ದಿನ ಯಾರಾದರೂ ನಮ್ಮ ವಿರುದ್ಧ ಒಂದು ಮಾತನಾಡಿದರೆ ಸಾಕು,ಅವರ ಮೇಲೆರಗುವಷ್ಟು ಕೋಪ ಉಕ್ಕಿಬರುತ್ತದೆ. ಇಂಥ ಸಂದರ್ಭಗಳಲ್ಲಿ ಸಿಟ್ಟು ನಮ್ಮ ನಿಯಂತ್ರಣಕ್ಕೇ ಸಿಗುವುದಿಲ್ಲ.ಅದೇ ಸಮರ್ಪಕವಾಗಿ ನಿದ್ರೆ ಮಾಡಿದ್ದರೆ ಮನಸ್ಸು ಶಾಂತವಾಗಿರುವ ಜೊತೆಗೆ ಆಕ್ರಮಶೀಲ ಗುಣ ಕೂಡ ಕಡಿಮೆಯಾಗಿರುತ್ತದೆ.

ಗೊಂದಲ ಕಾಡದು: ನಿದ್ರೆ ಸರಿಯಾಗದಿದ್ದಾಗ ಮನಸ್ಸು ಗೊಂದಲದ ಗೂಡಾಗುತ್ತದೆ.ಇದಕ್ಕೆ ಕಾರಣ ಮಿದುಳಿಗೆ ಸಮರ್ಪಕವಾಗಿ ಯೋಚಿಸಲು ಸಾಧ್ಯವಾಗದಿರುವುದು.ಬಳಲಿಕೆಯ ಕಾರಣಕ್ಕೆ ಮಿದುಳಿನ ಯೋಚನಾ ಶಕ್ತಿ ತಗ್ಗುತ್ತದೆ. ಇದರಿಂದಾಗಿ ಸೂಕ್ತ ನಿರ್ಧಾರ ಕೈಗೊಳ್ಳಲು ಸಾಧ್ಯವಾಗದೆ ಗೊಂದಲ ಆವರಿಸಿಕೊಳ್ಳುತ್ತದೆ. ಇದೇ ಕಾರಣಕ್ಕೆ ಸುತ್ತಮುತ್ತಲಿರುವ ಜನರೊಂದಿಗೆ ಸರಿಯಾಗಿ ಬೆರೆಯಲು, ಮಾತನಾಡಲು ಸಾಧ್ಯವಾಗುವುದಿಲ್ಲ.ನಿದ್ರೆ ಸಮರ್ಪಕವಾಗಿದ್ದಾಗ ಮನಸ್ಸು ಸೂಕ್ತ ನಿರ್ಧಾರ ಕೈಗೊಳ್ಳುವ ಕಾರಣ ಗೊಂದಲಗಳು ಕಾಡುವುದಿಲ್ಲ. 

ಮಗುವಿನ ಬಗ್ಗೆ ನಿಮ್ಮಲ್ಲಿರುವ ಈ ತಪ್ಪುಕಲ್ಪನೆಗಳನ್ನು ತೊಡೆದು ಹಾಕಿ

ಉತ್ಸಾಹದ ಬುಗ್ಗೆ: ನಿದ್ರಾಹೀನತೆಯಿಂದ ಉತ್ಸಾಹ ತಗ್ಗುತ್ತದೆ.ಯಾವ ಕೆಲಸದಲ್ಲೂ ಆಸಕ್ತಿಯಿರುವುದಿಲ್ಲ.ನಿಮ್ಮನ್ನು ಜನರ ಮಧ್ಯೆ ಬಿಟ್ಟರೂ ಅವರೊಂದಿಗೆ ಬೇರೆಯುವ ಉತ್ಸಾಹ ನಿಮ್ಮಲ್ಲಿರುವುದಿಲ್ಲ.ನೀವು ಇನ್ನೊಬ್ಬರೊಂದಿಗೆ ಮಾತನಾಡುವ,ಗೆಳೆತನ ಮಾಡಿಕೊಳ್ಳುವ ಉತ್ಸಾಹ ತೋರಿದಾಗ ಆ ಕಡೆಯಿಂದಲೂ ಸಕಾರಾತ್ಮಕ ಸ್ಪಂದನೆ ದೊರೆಯುತ್ತದೆ. ಆದರೆ, ನಿಮಗೆ ಯಾರೊಂದಿಗೂ ಬೆರೆಯುವ ಮೂಡೇ ಇಲ್ಲದಿರುವಾಗ ಸಂಬಂಧ ಏರ್ಪಡುವುದಾದರೂ ಹೇಗೆ? ಅದೇ ರಾತ್ರಿ ಚೆನ್ನಾಗಿ ನಿದ್ರೆ ಮಾಡಿದರೆ ಬೆಳಗ್ಗೆ  ಮನಸ್ಸು ಉತ್ಸಾಹದ ಬುಗ್ಗೆಯಾಗಿರುತ್ತದೆ. ಪರಿಚಿತರು,ಅಪರಿಚಿತರು ಎಲ್ಲರೊಂದಿಗೂ ಖುಷಿ ಖುಷಿಯಿಂದ ಬೆರೆಯುತ್ತೀರಿ.