ನೀವು ಹೆಣ್ಣು ಹೆತ್ತವರಾಗಿದ್ದರೆ, ಸಾಮಾನ್ಯವಾಗಿ ಹೆಣ್ಣು ಮಕ್ಕಳನ್ನು ಕಾಡುವ ಡ್ಯಾಡಿ ಇಶ್ಯೂಸ್ ಬಗ್ಗೆ ತಿಳಿದಿರಲೇಬೇಕು. ಏನಿದು? ಕಾರಣವೇನು? ಪರಿಹಾರವೇನು?
ತಮ್ಮ ಹೆತ್ತವರೊಂದಿಗೆ (Parents) ವಿಶೇಷವಾಗಿ ತಂದೆಯೊಂದಿಗೆ (Father) ಕೆಲವು ಬಗೆಹರಿಸಲಾಗದ ಭಾವನಾತ್ಮಕ (Emotional) ಸಮಸ್ಯೆಗಳನ್ನು ಹೊಂದಿರುವ ಹೆಣ್ಣುಮಕ್ಕಳನ್ನು ನೀವು ನೋಡಿರಬಹುದು. ಸಂಬಂಧಗಳಲ್ಲಿ ಇತರರನ್ನು ನಂಬಲು ತೊಂದರೆ ಹೊಂದಿರುವ ಮಹಿಳೆಯರನ್ನು ವಿವರಿಸಲು ಹೆಚ್ಚಾಗಿ ಡ್ಯಾಡಿ ಇಶ್ಯೂಸ್ ಎಂಬ ಪದ ಬಳಸಲಾಗುತ್ತದೆ. ಸಾಮಾನ್ಯವಾಗಿ ವಯಸ್ಸಾದ ಪುರುಷರೊಂದಿಗೆ ಡೇಟಿಂಗ್ ಮಾಡುವ ಹೆಣ್ಣುಮಕ್ಕಳು, ಮತ್ತು ಅವರ ತಂದೆ ಅಥವಾ ತಂದೆ-ರೀತಿಯ ವ್ಯಕ್ತಿಗಳೊಂದಿಗೆ ಬಾಂಧವ್ಯದ ಸಮಸ್ಯೆಯನ್ನು ಹೊಂದಿರುವವರು ಇಂಥವರು. ಬಾಲ್ಯದಲ್ಲಿ ಮತ್ತು ಕೌಮಾರ್ಯದಲ್ಲಿ (Adolasence) ತಮ್ಮ ತಂದೆಯೊಂದಿಗೆ ಹೆಣ್ಣು ಮಕ್ಕಳು ಹೊಂದಿರುವ ಸಂಬಂಧವು ಪ್ರೌಢಾವಸ್ಥೆಯಲ್ಲಿ ಅವರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಜ್ಞರು ಅಧ್ಯಯನ ಮಾಡುತ್ತಿದ್ದಾರೆ. 'ಡ್ಯಾಡಿ ಸಮಸ್ಯೆಗಳು' ಎಂಬ ಪದದ ಮೂಲ ತಿಳಿದಿಲ್ಲ, ಆದರೂ ಇದರ ಹಿಂದಿನ ಪರಿಕಲ್ಪನೆಯು ಮನೋವಿಶ್ಲೇಷಣೆಯ (Psycho analysis) ಸಂಸ್ಥಾಪಕ ಸಿಗ್ಮಂಡ್ ಫ್ರಾಯ್ಡ್ (Sigmund Freud) ಅವರ ಸಂಕೀರ್ಣ ಪರಿಕಲ್ಪನೆಗಳಿಗೆ ಸಮೀಪವಾದುದು. ತಂದೆಯೊಂದಿಗಿನ ನಕಾರಾತ್ಮಕ ಸಂಬಂಧದಿಂದ ಇವು ಉದ್ಭವಿಸುತ್ತದೆ. ತಾಯಿಯೊಂದಿಗೆ ಮಗನ ಆಕರ್ಷಣೆಯ ಸಂಬಂಧ ಈಡಿಪಸ್ ಕಾಂಪ್ಲೆಕ್ಸ್ (Oedipus complex) ಹಾಗೂ ತಂದೆಯೊಂದಿಗೆ ಮಗಳ ಆಕರ್ಷಣೆಯ ಸಂಬಂಧ ಎಲೆಕ್ಟ್ರಾ ಕಾಂಪ್ಲೆಕ್ಸ್ (Electra complex). ಆಧುನಿಕ ಪರಿಭಾಷೆಯಲ್ಲಿ, ಡ್ಯಾಡಿ ಇಶ್ಯೂಸ್ (Daddy issues) ಸಾಮಾನ್ಯವಾಗಿ ಇದೇ ಕಲ್ಪನೆಯನ್ನು ಅನುಸರಿಸುತ್ತದೆ.
ಇದಕ್ಕೆ ಏನು ಕಾರಣ?
ಬಹಳಷ್ಟು ಅಂಶಗಳು ಮಕ್ಕಳಲ್ಲಿ 'ಅಪ್ಪನ ಸಮಸ್ಯೆ';ಗಳಿಗೆ ಕಾರಣವಾಗಬಹುದು. 'ಅಪ್ಪನ ಮಗಳು' ಎಂಬುದು ತಂದೆಯೊಂದಿಗೆ ಮಗಳ ಸಕಾರಾತ್ಮಕ ಬಂಧವನ್ನು ಸೂಚಿಸುತ್ತದೆ. ಇದರಲ್ಲಿ ಅವರು ಒಲವು ತೋರುತ್ತಾರೆ, ನೋಡಿಕೊಳ್ಳುತ್ತಾರೆ ಮತ್ತು ಕಾಳಜಿ ವಹಿಸುತ್ತಾರೆ. ತಂದೆ ಮತ್ತು ಮಗಳ ನಡುವಿನ ಬಾಂಧವ್ಯವು ಮಾನಸಿಕ, ಭಾವನಾತ್ಮಕ ಮತ್ತು ಲೈಂಗಿಕತೆಯಿಂದ ಕಲುಷಿತಗೊಂಡಾಗ 'ಅಪ್ಪನ ಸಮಸ್ಯೆಗಳು' ಉದ್ಭವಿಸಬಹುದು. ಹೆಣ್ಣುಮಗುವು ತಂದೆಯ ಪ್ರೀತಿಯನ್ನು ಪಡೆಯದಿದ್ದಾಗ, ನಿರ್ಲಕ್ಷ್ಯದಿಂದಿರುವ, ವಿಷಕಾರಿ ಸ್ವಭಾವದ ತಂದೆಯನ್ನು ಹೊಂದಿರುವಾಗ, ಮಕ್ಕಳಿಗೆ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗಬಹುದು.
ಪ್ರೌಢಾವಸ್ಥೆಯ ಮೇಲೆ ಪರಿಣಾಮ
ಪ್ರತಿ ಮಗುವಿನ ಜೀವನದಲ್ಲಿ, ತಂದೆಯ ವ್ಯಕ್ತಿತ್ವವು ಅತ್ಯಂತ ಮಹತ್ವದ್ದಾಗಿದೆ. ಪ್ರತಿ ಮಗುವೂ ತನ್ನ ತಾಯಿಯೊಂದಿಗೆ ಆಳವಾದ ಬಾಂಧವ್ಯವನ್ನು ಹೊಂದಿದೆ. ಆದರೆ ತಂದೆಯ ಜೊತೆಗಿನ ಸಂಬಂಧ ಅಗತ್ಯ. ಅವರು ಯಾವಾಗಲೂ ಜತೆಗೆ ಇರುತ್ತಾರೆ, ಅವರ ಅಗತ್ಯತೆಗಳನ್ನು ನೋಡಿಕೊಳ್ಳುತ್ತಾರೆ ಮತ್ತು ಪರಿಪೂರ್ಣ ಪುರುಷ ಮಾದರಿಯಾಗಿ ತಮ್ಮನ್ನು ತಾವು ಪ್ರದರ್ಶಿಸಿಕೊಳ್ಳುವುದು ಮಗುವಿನ ಬೆಳವಣಿಗೆಗೆ ಅತ್ಯಂತ ನಿರ್ಣಾಯಕವಾಗಿದೆ. ಆದರೆ ಮಗು ಜೀವನದಲ್ಲಿ ಈ ಎಲ್ಲಾ ವಿಷಯಗಳನ್ನು ತಪ್ಪಿಸಿಕೊಂಡಾಗ, ಪರಿಹರಿಸಲಾಗದ ಮಾನಸಿಕ ಸಮಸ್ಯೆಗಳು ಮತ್ತು ಭಾವನೆಗಳೊಂದಿಗೆ ಬೆಳೆಯುವ ಸಾಧ್ಯತೆಯಿದೆ. ಇದು ಅವರ ಸ್ವಾಭಿಮಾನ, ನೈತಿಕತೆ ಮತ್ತು ಆತ್ಮವಿಶ್ವಾಸದ ಮೇಲೆ ದೊಡ್ಡ ಏಟು ನೀಡಬಹುದು. ಅವರು ಪ್ರೌಢಾವಸ್ಥೆಗೆ ಪ್ರವೇಶಿಸಿದಾಗ ಹೆಚ್ಚು ತೀವ್ರವಾದ ಪರಿಣಾಮಗಳನ್ನು ಹೊಂದುವ ಸಾಧ್ಯತೆಯಿದೆ.
Parenting Tips: ಮಕ್ಕಳ ವಿಚಾರದಲ್ಲಿ ಮಾಡೋ ಈ ತಪ್ಪುಗಳು ಅವರ ಜೀವನಕ್ಕೆ ನೆಗೆಟಿವ್ ಆಗಬಹುದು!
ಸಂಬಂಧಗಳಲ್ಲಿ ಅಭದ್ರತೆ ಮತ್ತು ಅಸ್ಥಿರತೆ
ತಮ್ಮ ತಂದೆಯೊಂದಿಗೆ ತೊಂದರೆಗೊಳಗಾದ ಸಂಬಂಧದೊಂದಿಗೆ ಬೆಳೆಯುವ ಮಕ್ಕಳು ಇತರರೊಂದಿಗೆ ಬಾಂಧವ್ಯದ ಸಮಸ್ಯೆಗಳನ್ನು ಬೆಳೆಸಿಕೊಳ್ಳಬಹುದು. ಅವರ ಬಾಲ್ಯವು ಸಮಸ್ಯೆಗಳು, ಅಭದ್ರತೆ, ಅಪನಂಬಿಕೆಗಳಿಂದ ತುಂಬಿದ್ದರೆ, ಅವರು ಬೆಳೆದಾಗ ಅದೇ ಭಾವನೆಗಳನ್ನು ಹುಟ್ಟುಹಾಕುತ್ತಾರೆ ಮತ್ತು ವಯಸ್ಕರಾಗಿ ತಮ್ಮ ಸ್ವಂತ ಜೀವನವನ್ನು ಹಾಗೇ ಮುನ್ನಡೆಸುತ್ತಾರೆ. ಉದಾಹರಣೆಗೆ, ತಂದೆಯು ಅವರನ್ನು ಯಾವಾಗಲೂ ನಿಂದಿಸುತ್ತಿದ್ದರೆ, ಇವರು ಸಹ ಸುತ್ತಮುತ್ತಲಿನ ಎಲ್ಲರ ಜೊತೆಗೆ ಅಸುರಕ್ಷಿತತೆ ಮತ್ತು ಅಭದ್ರತೆಯ ಭಾವನೆ ಅನುವಿಸುತ್ತಾರೆ. ಇದು ಮತ್ತಷ್ಟು ಅಸ್ಥಿರ ಸಂಬಂಧಗಳು, ನಂಬಿಕೆಯ ಕೊರತೆಗಳಿಗೆ ಕಾರಣವಾಗುತ್ತದೆ.
ಕೆಲವೊಮ್ಮೆ, ಹದಿಹರೆಯದ ಹೆಣ್ಣುಮಕ್ಕಳು ತುಂಬಾ ವಯಸ್ಸಾದ ಪುರುಷರೊಂದಿಗೆ ಡೇಟಿಂಗ್ ಮಾಡಲು ಬಯಸುತ್ತಾರೆ- ಪರೋಕ್ಷವಾಗಿ ಅವರು ತಮ್ಮ ತಂದೆಯ ಜೊತೆಗಿದ್ದ ಸಂಬಂಧದ ಜೊತೆಗಿನ ಘರ್ಷಣೆಯನ್ನು ಮರುಸ್ಥಾಪಿಸಿಕೊಳ್ಳಬಯಸುತ್ತಿರುತ್ತಾರೆ. ಅಂದರೆ ತಂದೆಯ ಜೊತೆಗಿನ ಸಂಬಂಧವನ್ನು ನಿರಾಕರಿಸಲು ಅಥವಾ ಖಚಿತಪಡಿಸಲು ಯತ್ನಿಸುತ್ತಿರಬಹುದು.
ಭರವಸೆಯ ನಿರಂತರ ಅಗತ್ಯ
'ಅಪ್ಪನ ಸಮಸ್ಯೆಗಳೊಂದಿಗೆ ವ್ಯವಹರಿಸುವ ವ್ಯಕ್ತಿಯು ಸಾರ್ವಕಾಲಿಕ ಭಯದಲ್ಲಿರುತ್ತಾಳೆ. ಯಾರನ್ನೋ ಕಳೆದುಕೊಳ್ಳುವ ಭಯ, ಒಂಟಿತನ ಮತ್ತು ಪರಿತ್ಯಕ್ತತೆಯ ಭಾವನೆ. ಆದ್ದರಿಂದ ಇವರು ಸದಾ ಪ್ರೀತಿಯ ಹಸಿವು ಹೊಂದಿರುತ್ತಾರೆ. ಪ್ರಶಂಸೆಯನ್ನು ಬಯಸುತ್ತಾರೆ. ಇತರರ ಮೇಲೆ ಹೆಚ್ಚು ಅವಲಂಬಿತರಾಗುತ್ತಾರೆ. ನಿರಂತರವಾಗಿ ದೃಢೀಕರಣಗಳು ಮತ್ತು ಭರವಸೆಗಳನ್ನು ಹುಡುಕುತ್ತಾರೆ.
Parenting Tips : ಮಗುವಿನ ವರ್ತನೆಯ ಮೇಲೆ ಈ ವಿಷಯಗಳು ಪರಿಣಾಮ ಬೀಳಬಹುದು
ಗಂಡು ಮಕ್ಕಳಿಗೂ ಸಮಸ್ಯೆ ಇರುತ್ತದೆ
ಡ್ಯಾಡಿ ಇಶ್ಯೂಸ್ ಕೇವಲ ಹೆಣ್ಣು ಮಕ್ಕಳಿಗೆ ಇರುವುದಲ್ಲ. ಗಂಡು ಮಕ್ಕಳಿಗೂ ಈ ಸಮಸ್ಯೆಗಳು ಉಂಟಾಗಬಹುದು. ತಮ್ಮ ತಂದೆಯೊಂದಿಗೆ ವ್ಯವಹರಿಸಲು ಕಷ್ಟಪಡುವ ಯಾರಾದರೂ ಇಂತಹ ಸಂಕೀರ್ಣ ಭಾವನೆಗಳನ್ನು ಬೆಳೆಸಿಕೊಳ್ಳಬಹುದು. ತಂದೆ ಅಥವಾ ಪೋಷಕರು ಇವರನ್ನು ತುಂಬಾ ನಿಂದನೆ ಮಾಡುತ್ತಿದ್ದರೆ, ಇವರೂ ಸದಾ ಅಸುರಕ್ಷಿತರಾಗಿರುತ್ತಾರೆ. ಅಭದ್ರತೆಯ ಭಾವನೆ ಇರುವುದು ಖಚಿತ.
ಪರಿಹಾರವೇನು?
- ನಿಮ್ಮ ಯಾವುದೋ ವರ್ತನೆ, ನಿಮ್ಮ ಬಾಲ್ಯದ ಜೊತೆಗೆ, ನಿಮ್ಮ ಹೆತ್ತವರ ಜೊತೆಗಿನ ಸಂಬಂಧದ ಜೊತೆಗೆ ತಳುಕು ಹಾಕಿಕೊಂಡಿರಬಹುದು. ಅದನ್ನು ಗುರುತಿಸಿ, ಅದರಿಂದ ನಕಾರಾತ್ಮಕ ಪರಿಣಾಮವಾಗುತ್ತಿದ್ದರೆ, ಅದರಿಂದ ಹೊರಬರಲು ಪ್ರಯತ್ನಿಸಿ. ಕೌನ್ಸೆಲಿಂಗ್ (Counselling) ಪಡೆದುಕೊಳ್ಳಿ.
- ನಿಮ್ಮ ಮಕ್ಕಳು(Kids) ಜೀವನಪೂರ್ತಿ ಸಂಬಂಧಗಳ (Bonding) ಸಮಸ್ಯೆಯಿಂದ ಬಳಲಬಾರದು ಎಂದಿದ್ದರೆ, ನೀವು ನಿಮ್ಮ ಮಕ್ಕಳನ್ನು ಎಚ್ಚರಿಕೆಯಿಂದ, ಪ್ರೀತಿಯಿಂದ ಬೆಳೆಸಬೇಕು. ಪ್ರೀತಿ ಅತಿಯಾಗಬಾರದು. ಶಿಸ್ತೂ ಅತಿಯಾಗಬಾರದು. ಎರಡೂ ಹದವಾಗಿ ಇರಬೇಕು. ನಿಂದನೆ, ಕಟಕಿ, ಟೀಕೆ, ಒಂದು ಮಿತಿಯಲ್ಲಿರಲಿ. ಅವರ ಪ್ರಯತ್ನಗಳಿಗೆ ಮೆಚ್ಚುಗೆ ಸೂಚಿಸಿ. ನೀವು ಅವರನ್ನು ಪ್ರೀತಿಸುತ್ತಿರುವಿರಿ ಎಂಬ ಭರವಸೆ ಆಗಾಗ ವ್ಯಕ್ತಪಡಿಸಿ.