ಮಳೆ ಎಂದರೆ ಸಂಭ್ರಮ, ಮಳೆ ಎಂದರೆ ಇಳೆಗೆ ಕಳೆ ಎನ್ನುತ್ತಿದ್ದವರೆಲ್ಲ ಈಗ ಮಳೆಯನ್ನು ಶಪಿಸುತ್ತಿದ್ದಾರೆ. ಮಳೆ ಸಡಗರಕ್ಕಿಂತ ಹೆಚ್ಚು ಸಮಸ್ಯೆಗಳನ್ನೇ ತರುತ್ತಿದೆ. ಕಾಲ ಮುಗಿದರೂ ಹೋಗದೆ ಸುರಿವ ಮಳೆ ಬೇಡದ ಅಥಿತಿಯಾಗಿ ಬಿಟ್ಟಿದೆ. ಪ್ರತಿ ಮಳೆಗೂ ಚಂಡಮಾರುತ, ವಾಯುಭಾರ ಕುಸಿತ - ಹೀಗೇ ಏನೇನೋ ಕಾರಣ ಹೇಳುತ್ತೇವೆ. ಆದರೆ, ಈಗ ನಡೆವ ಬಹುತೇಕ ಪ್ರಕೃತಿ ವಿಕೋಪಗಳಿಗೆ ಮನುಷ್ಯನೇ ಕಾರಣ. ನಾವು ನಗರ ಕಟ್ಟಿಕೊಂಡ ರೀತಿ, ಪರಿಸರದ ಸಂಪನ್ಮೂಲಗಳನ್ನು ಬೇಕಾಬಿಟ್ಟಿ ಬಳಸುತ್ತಿರುವ ಸ್ವಾರ್ಥ, ಭೂಮಿಯನ್ನು ಅಗೆದು ಬಗೆದು ತೆಗೆದ ತಪ್ಪಿಗೆ ಇದೆಲ್ಲ ಆಗಬೇಕಾದ್ದೇ.
ಪುಂಗಿಯ ಸದ್ದಿಗೆ ಹಾವು ಹುತ್ತದಿಂದ ಹೊರಬಂದಂತೆ ಮಳೆ ಎಂದರೆ ಕವಿತೆಗಳು ಮನಸ್ಸಿನಾಳದಿಂದ ಚಿಮ್ಮುತ್ತಿದ್ದವು. ಮರದ ಚಿಗುರೆಲೆಗಳಂತೆ ಕನಸುಗಳು ಟಿಸಿಲೊಡೆಯುತ್ತಿದ್ದವು, ಪ್ರೇಮಿಗಳು ಪ್ರೀತಿಯ ಪಲ್ಲವಿಯಲ್ಲಿ ಕಳೆದು ಹೋಗುತ್ತಿದ್ದರು. ಮೊದಲ ಮಳೆ ಹೊರಡಿಸುವ ಮಣ್ಣಿನ ಗಂಧ ಮನಸ್ಸಿನ ಮುದಕ್ಕೆ ಕಾರಣವಾಗುತ್ತಿತ್ತು. ಬೇಸಿಗೆಯ ಬಿಸಿಲಲ್ಲಿ ಒಣಗಿ ಅಡುಗೆಮನೆಯ ಅಲ್ಮೇರಾದಲ್ಲಿ ಚಳದೂರಿಯಿಂದ ಕಟ್ಟಿಸಿಕಂಡು ತಿಂಗಳುಗಳ ಕಾಲ ಕುಳಿತ ಹಪ್ಪಳ, ಸಂಡಿಗೆ, ಮೆಣಸು ಮಳೆಗಾಲದ ತಂಪಿಗೆ ಮೈ ಬೆಚ್ಚಗಾಗಿಸಲು ಎಣ್ಣೆಗೆ ಜಿಗಿಯುತ್ತಿದ್ದವು. ಅಟ್ಟದಲ್ಲಿ ಆರಾಮಾಗಿ ಒರಗಿ ಪುಸ್ತಕ ಓದುವ ಸುಖ ಮಳೆಯಿಂದ ಹೆಚ್ಚುತ್ತಿತ್ತು.
ಬಾಲ್ಕನಿಯಲ್ಲಿ ನಿಂತು ಬೀಸುವ ಗಾಳಿಗೆ ತುಂತುರಾಗಿ ಮೈಗೆ ತಾಕುತ್ತಿದ್ದ ಮಳೆಯನ್ನು ಅನುಭವಿಸುತ್ತಾ ಪ್ರೇಮಗೀತೆಗಳನ್ನು ಕೇಳುವ ಮಜವೇ ಬೇರೆ ಇತ್ತು. ಮಕ್ಕಳ ಕಾಗದದ ದೋಣಿಗಳು ತೋಡಿನಲ್ಲಿ ತುಯ್ಯುತ್ತಾ ಓಡುತ್ತಿದ್ದವು. ಅಪರೂಪಕ್ಕೆ ಬೀಳುತ್ತಿದ್ದ ಆಲಿಕಲ್ಲುಗಳು ಬಾಲ್ಯದ ನೆನಪಿನ ಬುತ್ತಿಯಲ್ಲಿ ಬೆಚ್ಚಗೆ ಕುಳಿತುಕೊಳ್ಳಲು ಸಿದ್ದವಾಗೇ ಬೊಗಸೆ ತುಂಬುತ್ತಿದ್ದವು. ಅಜ್ಜಅಜ್ಜಿಯರಿಗೆ ನೆನಪನ್ನು ಮೆಲುಕು ಹಾಕಲು ಎಲ್ಲದರಂತೆ ಮಳೆಯೂ ಒಂದು ನೆವ. ಮಳೆಯೆಂದರೆ ಭೂಮಿಗೂ ಪುಳಕ, ಎಲ್ಲೆಡೆ ಹಸಿರನ್ನು ಧರಿಸಿ ಮೆರೆಯುತ್ತಿದ್ದಳು. ಮಳೆಯ ಹಾಡು, ಹಸೆ, ಕತೆ, ಚಿತ್ರಕತೆ- ಯಾವುದೂ ವ್ಯರ್ಥವಾದದ್ದಿಲ್ಲ, ಸೋತಿದ್ದಿಲ್ಲ.
undefined
Yes Its LOVE : ಅವ್ರನ್ನ ನೋಡ್ತಿದ್ದಂಗೆ ಹೀಗೆಲ್ಲಾ ಆಗ್ತಿದೆ ಅಂದ್ರೆ ನಿಮಗೆ LOVE ಆಗಿದೆ
ಮಳೆಯೆಂದರೆ ನಮಗೆಲ್ಲ ಎಷ್ಟು ಮಮಕಾರವೋ ಮಳೆಗೂ ನಾವೆಂದರೆ ಅದೇ ಮಮತೆ. ತನ್ನ ಕಾಲ ಆರಂಭವಾಗುತ್ತಿದ್ದಂತೇ ಗುಡುಗು ಮಿಂಚಿನ ಆರ್ಭಟ ಮಾಡುತ್ತಾ ಭರ್ಜರಿಯಾಗೇ ಇಳೆಗೆ ಇಳಿಯುತ್ತಿತ್ತು. ಮೊದಲ ಮಳೆಯನ್ನು ಸಂಭ್ರಮಿಸುವ ಜನ, ದನ, ಗಿಡ ಮರ, ಹಕ್ಕಿ, ಕೀಟ, ನೆಲ, ನದಿಗಳನ್ನು ನೋಡುವುದು ಮತ್ತೊಂದೇ ತೆರನಾದ ಸಂಭ್ರಮ.
ಆದರೆ ಈಗೀಗಿನ ಚಿತ್ರಣವೇ ಬೇರೆ. ಮಳೆ ಮೋಡಕಟ್ಟಿದರೆ ಸಾಕು, ಬೈದುಬಿಡಬೇಕೆನಿಸುತ್ತದೆ. ಗದ್ದೆಯಲ್ಲಿ ಹಾಳಾಗುವ ಬೆಳೆ, ತೋಟದಲ್ಲಿ ತೆಗೆದಷ್ಟೂ ಮುಗಿಯದ ಕಳೆ, ಒಣಗದೆ ಗೊಣಗುವ ಒದ್ದೆಬಟ್ಟೆಗಳು, ವರ್ಷವಿಡೀ ಹಿರಿಕಿರಿಯರನ್ನು ಕಾಡುವ ಶೀತ, ಕೆಮ್ಮು, ಜ್ವರ... ಮಾಡಿದಷ್ಟೂ ಮುಗಿದು ಹೋಗುವ ಕಷಾಯದ ಪುಡಿ. ಮುಗ್ಗಲು ವಾಸನೆ ತುಂಬಿಕೊಂಡ ಹಳ್ಳಿ ಮನೆಗಳು, ಯಾವಾಗ ಕುಸಿಯುತ್ತವೋ ಎಂದು ಹೆದರಿಸುವ ಪೇಟೆಯ ಕಟ್ಟಡಗಳು, ಮನೆಯಿಂದ ಹೊರಗೆ ಕಾಲಿಡುವುದನ್ನೇ ಕಾದು ಕಾದು ಸುಸ್ತಾದ ಮಕ್ಕಳು, ಸೂರ್ಯನ ಶಾಖವಿಲ್ಲದೆ ವಿಟಮಿನ್ ಡಿ ಕೊರತೆಯಿಂದ ಬಳಲುವ ಚರ್ಮ, ಪ್ರತಿ ತಿಂಗಳೂ ಮಳೆಯ ಕಾರಣಕ್ಕೆ ಮುಂದೋಡುವ ಪ್ರವಾಸದ ಕನಸು..
ವರ್ಷದ ಹಿಂದೆ ಮನೆಯ ಸದಸ್ಯರನ್ನೆಲ್ಲ ತಮ್ಮದೇ ಮನೆಯಲ್ಲಿ ಬಂಧಿಸಿ ಕರೋನಾ ಸತಾಯಿಸಿತ್ತು. ಈಗದರ ಗುತ್ತಿಗೆಯನ್ನು ಮಳೆಗೆ ಕೊಟ್ಟು ಹೋದಂತಿದೆ. ಹೀಗೆ 24/7 ಒಟ್ಟಾಗಿ ಕೂತು ಕೂತು ಮನಸ್ಸುಗಳು ದೂರಾಗುತ್ತಿವೆ. ಅವಕ್ಕೆ ಯೋಚಿಸಲು, ಕನಸು ಕಾಣಲು ಸ್ವಲ್ಪವೂ ಖಾಸಗಿತನ ಸಿಗುತ್ತಿಲ್ಲ.
Life Partner: ಇಷ್ಟವಿಲ್ಲದ ಸಂಗಾತಿ ಜೊತೆ ಏಗೋದ್ ಹೇಗೆ?
ಸುದ್ದಿ ವಾಹಿನಿಗಳ ತುಂಬಾ ಮಳೆಯ ಅವಾಂತರವೇ ಸುದ್ದಿ- ಮನೆ ಬಿದ್ದಿದ್ದು, ರಸ್ತೆಯೇ ಕೆರೆಯಾದದ್ದು, ಮನೆಯೊಳಗೆ ನಿಂತ ನೀರು, ಅಪಘಾತ, ಶಾಲೆಗಳಿಗೆ ರಜೆ. ಮಳೆಗೆ ಈಗ ಪ್ರೇಮ ಕವಿತೆಗಳು ಹುಟ್ಟುತ್ತಿಲ್ಲ, ಪ್ರೇಮಿಗಳಲ್ಲಿ ಪುಳಕ ಕಾಣುತ್ತಿಲ್ಲ. ಕನಸುಗಳು ಟಿಸಿಲೊಡೆಯುತ್ತಿಲ್ಲ, ಅಜ್ಜಅಜ್ಜಿಯರೂ ನೆನಪನ್ನು ಕೆದಕುವುದನ್ನು ಬಿಟ್ಟು ಮಳೆಗೆ ಬಯ್ಯುತ್ತಲೇ ಸಮಯ ತಳ್ಳುತ್ತಿದ್ದಾರೆ. ವರ್ಷಕ್ಕೊಮ್ಮೆ ಮನೆಗೆ ಬರುವ ನೆಂಟ ಇನ್ನು ಹೋಗೋಲ್ಲವೆಂದು ವರ್ಷವಿಡೀ ಝಾಂಡಾ ಹೂಡಿದರೆ ಯಾರಿಗೆ ತಾನೇ ಸಹ್ಯವಾದೀತು? ಆಡು ಮಾತಲ್ಲಿ ಹೇಳ್ತೀವಲ್ಲ- ಯಾವ್ ಯಾವ್ ಕಾಲಕ್ಕೆ ಏನ್ ಏನ್ ಆಗ್ಬೇಕೋ ಆಗ ಅದಾದ್ರೇ ಚೆನ್ನ...
ಹಿಂದೆಲ್ಲ ವರುಣ ದೇವನನ್ನು ಪೂಜಿಸಿ ಇಳೆಗೆ ಆಹ್ವಾನಿಸುತ್ತಿದ್ದೆವು. ಈಗದೇ ಕಕ್ಕುಲಾತಿಯಿಂದ ನಮ್ಮ ಮೇಲಿನ ಮುನಿಸು ತೊರೆಯಲು ಪ್ರಾರ್ಥಿಸೋಣ. ತಪ್ಪುಗಳನ್ನು ಅರ್ಥ ಮಾಡಿಕೊಂಡು ಇನ್ನಾದರೂ ಸರಿಯಾದ ರೀತಿಯಲ್ಲಿ ಭೂಮಿಯನ್ನು ನಡೆಸಿಕೊಳ್ಳೋಣ. ಮುಂದಿನ ತಲೆಮಾರುಗಳು ಅನ್ಯ ಗ್ರಹಕ್ಕೆ ತಪ್ಪಿಸಿಕೊಂಡು ಹೋಗುವ ಆತಂಕದಲ್ಲೇ ಜೀವನ ಕಳೆಯದಂತೆ ನಾವೇನು ಮಾಡಬಹುದೋ ಅತ್ತ ಗಮನ ಹರಿಸೋಣ.