ಸ್ಕೂಲ್ ಗೆ ಹೋಗ್ತಿರುವ ಮಗು ಮನೆಗೆ ಬಂದು ನಾನು ನಾಳೆಯಿಂದ ಶಾಲೆಗೆ ಹೋಗಲ್ಲ ಅಂದ್ರೆ ಪಾಲಕರು ದಂಗಾಗ್ತಾರೆ. ಶಾಲೆ ಶಿಕ್ಷಣವನ್ನು ಮಕ್ಕಳು ಅರ್ಧಕ್ಕೆ ಬಿಡಲು ಅನೇಕ ಕಾರಣವಿದೆ. ಅದನ್ನು ತಿಳಿದ ನಂತ್ರ ಪಾಲಕರು ಮುಂದಿನ ಕ್ರಮಕೈಗೊಂಡ್ರೆ ಒಳ್ಳೆಯದು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ (Education) ಅನಿವಾರ್ಯ ಹಾಗೂ ಅತ್ಯಗತ್ಯ. ಪ್ರತಿ ದೇಶದಲ್ಲೂ ಮಕ್ಕಳನ್ನು ಶಾಲೆ (School) ಗೆ ಕಳುಹಿಸುವುದು ವಾಡಿಕೆ. ನಿಗದಿತ ವರ್ಷಕ್ಕೆ ಮಕ್ಕಳು ಶಾಲೆಗೆ ಹೋಗಲು ಶುರು ಮಾಡ್ತಾರೆ. ವರ್ಷಗಳು ಕಳೆದಂತೆ ಮಕ್ಕಳ ಓದಿ (Read) ನ ಹೊರೆ ಹೆಚ್ಚಾಗುತ್ತದೆ. ಅನೇಕ ಪ್ರಸಿದ್ಧ ವ್ಯಕ್ತಿಗಳು ಸರಿಯಾಗಿ ಶಾಲೆಗೆ ಹೋಗಿಲ್ಲ, ಶಾಲೆಗೆ ಹೋಗಿ ಓದಿದ್ರೆ ಮಾತ್ರ ಯಶಸ್ಸು ಸಿಗಲು ಸಾಧ್ಯವಿಲ್ಲ ಎಂದು ಕೆಲವರು ವಾದಿಸಬಹುದು. ಅನೇಕ ಮಹಾನ್ ವ್ಯಕ್ತಿಗಳ ಉದಾಹರಣೆ ನೀಡಬಹುದು. ಅದು ಏನೇ ಇರಲಿ, ನಮ್ಮಂತೆ ನಮ್ಮ ಮಕ್ಕಳಾಗ್ಬಾರದು, ಅವರು ಉನ್ನತ ಶಿಕ್ಷಣ ಪಡೆಯಬೇಕೆಂದು ಪಾಲಕರು ಬಯಸ್ತಾರೆ. ಅದೇ ಕಾರಣಕ್ಕೆ ಒತ್ತಾಯ ಪೂರ್ವಕವಾಗಿಯಾದ್ರೂ ಮಕ್ಕಳನ್ನು ಶಾಲೆಗೆ ಕಳುಹಿಸ್ತಾರೆ. ಆದ್ರೆ ಅನೇಕ ಮಕ್ಕಳು ಅರ್ಧದಲ್ಲಿಯೇ ಓದು ಬಿಡ್ತಾರೆ. ಅಮೆರಿಕದಲ್ಲಿ ಪ್ರತಿ ವರ್ಷ ಲಕ್ಷಾಂತರ ಮಕ್ಕಳು ಶಾಲೆ ಬಿಡ್ತಿದ್ದಾರೆ. ಆದರೆ ಭಾರತದಲ್ಲಿ ಈ ಪ್ರವೃತ್ತಿ ಸ್ವಲ್ಪ ಕಡಿಮೆಯಾಗಿದೆ. ಮಕ್ಕಳು ಶಾಲೆ ಬಿಟ್ಟರೆ ಅದು ಅವರ ಭವಿಷ್ಯ ಹಾಗೂ ಒಟ್ಟಾರೆ ಬೆಳವಣಿಗೆ ಮೇಲೆ ಪ್ರಭಾವ ಬೀರುತ್ತದೆ. ಮಕ್ಕಳು ಶಾಲೆ ಬಿಡ್ತೇನೆ ಎಂದಾಗ ಪಾಲಕರಿಗೆ ಕೋಪ ಬರುವುದು ಸಹಜ. ಮಕ್ಕಳು ಶಾಲೆ ಬಿಡಲು ಅನೇಕ ಕಾರಣವಿರುತ್ತದೆ. ಹಾಗಾಗಿ ಪಾಲಕರು ಮೊದಲು ಯಾವುದೇ ನಿರ್ಧಾರಕ್ಕೆ ಬರುವ ಮೊದಲು ಕಾರಣ ತಿಳಿಯಬೇಕು. ಇಂದು ನಾವು ಮಕ್ಕಳು ಯಾವ ಯಾವ ಕಾರಣಕ್ಕೆ ಶಾಲೆಯನ್ನು ಅರ್ಧಕ್ಕೆ ಬಿಡ್ತಾರೆ ಎಂಬುದನ್ನು ನೋಡೋಣ.
ಮಕ್ಕಳು ಶಾಲೆ ಬಿಡಲು ಕಾರಣಗಳು:
ಕೆಟ್ಟ ಚಟ : ಶಾಲೆಯಿಂದ ಹೊರಗುಳಿಯಲು ಸಾಮಾನ್ಯ ಕಾರಣವೆಂದರೆ ಕೆಟ್ಟ ಚಟ ಹಾಗೂ ದೌಜನ್ಯ. ಅನೇಕ ಬಾರಿ ಚಿಕ್ಕಂದಿನಿಂದಲೇ ಮದ್ಯ, ಡ್ರಗ್ಸ್, ಇಂಟರ್ ನೆಟ್, ಟಿವಿ ಚಟಕ್ಕೆ ಮಕ್ಕಳು ಸಿಕ್ಕಿ ಹಾಕಿಕೊಳ್ಳುತ್ತಾರೆ. ಇದರಿಂದಾಗಿ ಅವರಿಗೆ ಓದಲು ಮನಸ್ಸಾಗುವುದಿಲ್ಲ. ಶಾಲೆಗೆ ಹೋಗಲು ಇಚ್ಛಿಸುವುದಿಲ್ಲ. ಕೆಲವೊಮ್ಮೆ ಶಾಲೆಯಲ್ಲಿ ನಡೆದ ಕೆಲ ಘಟನೆಗಳು ಅವರ ಮನಸ್ಸಿನ ಮೇಲೆ ಪ್ರಭಾವ ಬೀರಿರುತ್ತದೆ. ಅದು ಅವರು ಶಾಲೆ ಬಿಡಲು ಪ್ರೇರೇಪಿಸುತ್ತದೆ.
ಇದನ್ನೂ ಓದಿ: Parents Tips: ಮಕ್ಕಳಿಗೆ ಹಣದ ಮೌಲ್ಯ ಕಲಿಸೋದು ಹೇಗೆ? ಯಾವಾಗ?
ವಿದ್ಯಾಭ್ಯಾಸದಲ್ಲಿ ಹಿಂದೆ : ಪ್ರತಿ ಮಗುವೂ ವಿದ್ಯಾಭ್ಯಾಸದಲ್ಲಿ ಮುಂದಿರುವುದಿಲ್ಲ. ಕೆಲ ಮಕ್ಕಳು ಬೇರೆ ಕ್ಷೇತ್ರದಲ್ಲಿ ಮುಂದಿರ್ತಾರೆ, ಓದಿನಲ್ಲಿ ಹಿಂದಿರ್ತಾರೆ. ಅಭ್ಯಾಸದಲ್ಲಿ ದುರ್ಬಲವಾಗಿರುವ ಮಕ್ಕಳು ಸಾಮಾನ್ಯವಾಗಿ ಶಾಲೆಗೆ ಹೋಗಲು ಕಷ್ಟಪಡುವುದಿಲ್ಲ. ವಿಶೇಷವಾಗಿ ಗಣಿತ ಮತ್ತು ಇಂಗ್ಲಿಷ್‌ನಲ್ಲಿ ಅನುತ್ತೀರ್ಣರಾದ ಅಥವಾ ದುರ್ಬಲವಾಗಿರುವ ಮಕ್ಕಳು ಶಾಲೆಯಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚು.
ಕುಟುಂಬದ ಆರ್ಥಿಕ ಸ್ಥಿತಿ : ಈ ವಿಷ್ಯ ಭಾರತದಲ್ಲಿ ಹೆಚ್ಚು ಕಂಡುಬರುತ್ತದೆ. ಆರ್ಥಿಕ ಸ್ಥಿತಿ ದುರ್ಬಲವಾಗಿರುವ ಅನೇಕ ಕುಟುಂಬಗಳಲ್ಲಿ ಮಕ್ಕಳು ಶಾಲೆಗೆ ಹೋಗುವ ಬದಲು ದುಡಿಮೆಗೆ ಹೋಗ್ತಿರುತ್ತಾರೆ.
ಪದೇ ಪದೇ ಕೆಡುವ ಆರೋಗ್ಯ : ಅನಾರೋಗ್ಯ ಕೂಡ ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತದೆ. ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುವ ಮಕ್ಕಳಿಗೆ ಶಿಕ್ಷಣದಲ್ಲಿ ಆಸಕ್ತಿ ಕಡಿಮೆಯಾಗುತ್ತದೆ.
ಇದನ್ನೂ ಓದಿ: ಮಕ್ಕಳ ಈ ಕೆಟ್ಟ ಅಭ್ಯಾಸ ಚಿಕ್ಕಂದಿನಲ್ಲೇ ಸರಿಪಡಿಸಿ, ದೊಡ್ಡವರಾದ ಮೇಲೆ ಸರಿ ಮಾಡೋಕಾಗಲ್ಲ !
ಬೇಸರ : ಕೆಲವು ಮಕ್ಕಳಿಗೆ ಶಾಲೆ ಬೇಸರ ತರಿಸುತ್ತದೆ. ಅವರಿಗೆ ಓದಲು ಮನಸ್ಸಿರುವುದಿಲ್ಲ. 9 ಮತ್ತು 10 ನೇ ತರಗತಿಗೆ ಬರುವವರೆಗೆ ಓದಿ ಓದಿ ಮಕ್ಕಳು ಸುಸ್ತಾಗಿರ್ತಾರೆ. ಓದು ಬೇಸರವೆನ್ನಿಸುತ್ತದೆ. ಹಾಗಾಗಿ ಶಾಲೆ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸ್ತಾರೆ. ಅವರು ಶಾಲೆಗೆ ತಡವಾಗಿ ಹೋಗ್ತಾರೆ. ಶಾಲೆಗೆ ಬಂಕ್ ಹಾಕ್ತಾರೆ. ಹೀಗೆ ನಿಧಾನವಾಗಿ ಶಾಲೆ ತೊರೆಯುವ ಮನಸ್ಸು ಮಾಡ್ತಾರೆ.
ಪಾಲಕರು ಮಗು ಯಾವ ಕಾರಣಕ್ಕೆ ಶಾಲೆ ತೊರೆಯುತ್ತಿದೆ ಎಂಬುದನ್ನು ತಿಳಿಯಬೇಕು. ನಂತ್ರ ಅವರನ್ನು ಮನವೊಲಿಸುವ ಪ್ರಯತ್ನ ನಡೆಸಬೇಕು. ಶಿಕ್ಷಣ ಮಕ್ಕಳಿಗೆ ಅಗತ್ಯ ಎಂಬುದನ್ನು ಅವರ ಅರಿವಿಗೆ ತರಬೇಕು.