ಚೆನ್ನಾಗಿ ಓದಿಕೊಂಡು ಸಲೀಸಾಗಿ ಇಂಗ್ಲಿಷ್ ಮಾಡುವ ವ್ಯಕ್ತಿಯ ವಿಡಿಯೋವೊಂದು ನೆಟ್ಟಿಗರ ಹೃದಯ ಕರಗಿಸಿದೆ. ಈತ ಒಂದು ಕಾಲದಲ್ಲಿ ಮಾಲೀಕನಾಗಿದ್ದನಂತೆ, ಇಂದು ಭಿಕ್ಷುಕ!
ಹಲವು ಭಿಕ್ಷುಕರು ಲಕ್ಷಗಟ್ಟಲೆ ಸಂಪಾದಿಸಿ ಸುದ್ದಿಯಾಗಿದ್ದಾರೆ, ಮತ್ತೆ ಹಲವರು ಸೊನ್ನೆಯಿಂದ ಆರಂಭಿಸಿ ಉದ್ಯಮದಲ್ಲಿ ಯಶಸ್ವಿಯಾಗಿ ಹಲವರಿಗೆ ಆದರ್ಶವಾಗಿದ್ದಾರೆ. ಇಂಥವರ ನಡುವೆ ಎಲ್ಲವೂ ಇದ್ದು ಅದನ್ನು ಕಳೆದುಕೊಳ್ಳುವವರ ಕತೆಗಳು ಸುದ್ದಿಯಾಗುವುದಿಲ್ಲ.
ಆದರೆ, ಇನ್ಸ್ಟಾದಲ್ಲಿ ಹಂಚಿಕೊಂಡಿರುವ ವಿಡಿಯೋವೊಂದರಲ್ಲಿ ಮಾಲೀಕನಿಂದ ಭಿಕ್ಷುಕನಾಗಿರುವ ವ್ಯಕ್ತಿಯ ಕತೆ ನೆಟ್ಟಿಗರಲ್ಲಿ ಬೇಸರ ಮೂಡಿಸಿದೆ.
ಗಲೀಜಾದ ಬಟ್ಟೆ ಧರಿಸಿ, ಸಲೀಸಾಗಿ ಇಂಗ್ಲಿಷ್ ಮಾತನಾಡುವ ವ್ಯಕ್ತಿಗೆ ಆತನ ಬಗ್ಗೆ ಹೇಳುವಂತೆ ಕೇಳಲಾಗುತ್ತದೆ. ಆತ ತಾನು ಓದಿದ್ದು ಬಿಇ ಮೆಕ್ಯಾನಿಕಲ್ ಇಂಜಿನಿಯರಿಂಗ್ ಎನ್ನುತ್ತಾನೆ.
ಒಂದು ಕಾಲದಲ್ಲಿ ಪ್ರೊಪ್ರೈಟರ್ ಆಗಿದ್ದೆ, ಇಂದು ಬೆಗ್ಗರ್ ಆಗಿದೀನಿ. ನಾನೆಲ್ಲವನ್ನೂ ಕಳೆದುಕೊಂಡಿದ್ದೀನಿ. ಪ್ರತಿಯೊಬ್ಬರೂ ಮೋಸ ಮಾಡಿದ್ದಾರೆ ಎನ್ನುವ ಆತನ ಮಾತು ನೆಟ್ಟಿಗರ ಹೃದಯ ಕರಗಿಸಿದೆ. ಇವರದು ನೊಂದ ಜೀವ, ತುಂಬಾ ನಂಬಿದವರು ಮೋಸ ಮಾಡಿದಾಗ ಹೀಗಾಗುತ್ತದೆ ಎನ್ನುತ್ತಿದ್ದಾರೆ.
ನಿಮ್ಮ ಬಳಿ ಶಿಕ್ಷಣವಿದೆ, ಕೆಲಸವೇಕೆ ಮಾಡಬಾರದು ಎಂದಾಗ- 'ಇದೆ, ಆದ್ರೆ ನನ್ನಂಥವರು ಸಾಕಷ್ಟು ಜನರಿದ್ದಾರೆ- ಎಲ್ಲ ಖಿನ್ನತೆ, ಒತ್ತಡದಿಂದ ಬಳಲುತ್ತಿದ್ದಾರೆ. ಕುಟುಂಬಕ್ಕೆ ಹಣ ಬೇಕು, ಅವರು ಒತ್ತಡ ಹಾಕ್ತಾರೆ' ಎನ್ನುತ್ತಾರೆ. ಮುಂದುವರಿದು, 'ನಾನು ಕಂಪನಿಯ ಮಾಲೀಕನಾಗಿದ್ದೆ, ಈಗ ಇನ್ನೊಬ್ಬರೊಂದಿಗೆ ಕೆಲಸ ಮಾಡೋಕೆ ಸಿದ್ಧನಿಲ್ಲ' ಎನ್ನುತ್ತಾರೆ.
ಎಲ್ಲಿರ್ತೀರಾ ಅಂದಾಗ, ಬೀದೀಲಿ ಮಲ್ಕೋತೀನಿ, ಸಿಕ್ಕಿದ್ದು ತಿನ್ಕೋತೀನಿ ಅಂತಾರೆ ಇವ್ರು.
ಈ ವ್ಯಕ್ತಿ ಯಾರು, ಎಲ್ಲಿ ಸಿಕ್ಕರು ಯಾವ ವಿವರಗಳೂ ವಿಡಿಯೋದಲ್ಲಿಲ್ಲ. ಆದರೆ, ಈ ವ್ಯಕ್ತಿ ಖಿನ್ನತೆಯಲ್ಲಿರುವುದನ್ನು ನೆಟ್ಟಿಗರು ಗಮನಿಸಿದ್ದಾರೆ. ಚಿಕಿತ್ಸೆ ಸಿಕ್ಕರೆ ಈತ ಮತ್ತೆ ಕಂಪನಿಯ ಮಾಲೀಕರಾಗುತ್ತಾರೆ ಎನ್ನುತ್ತಿದ್ದಾರೆ.
ಹಲವರು ಆತನ ಪರಿಸ್ಥಿತಿ ಬಗ್ಗೆ, ಆತ ಅನುಭವಿಸಿರಬಹುದಾದ ವಂಚನೆ ಬಗ್ಗೆ ಖೇದ ವ್ಯಕ್ತಪಡಿಸಿದರೆ, ಮತ್ತೆ ಕೆಲವರು 'ಬದುಕಬೇಕೆನ್ನುವವರಿಗೆ ಹಲವು ದಾರಿಗಳಿವೆ, ಈಸಬೇಕು, ಇದ್ದು ಜೈಸಬೇಕು' ಎನ್ನುತ್ತಿದ್ದಾರೆ.