ಪತಿ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದರಿಂದ ಇನ್ನು ಮುಂದೆ ಆತನೊಂದಿಗೆ ಬದುಕಲು ಬಯಸುವುದಿಲ್ಲ ಎಂದು ಮಹಿಳೆ ನ್ಯಾಯಾಲಯಕ್ಕೆ ತಿಳಿಸಿದ್ದರು.
ಡೆಹ್ರಾಡೂನ್ (ಜೂನ್ 22, 2023): ಅಪರೂಪದ ಪ್ರಕರಣವೊಂದರಲ್ಲಿ ಗಂಡನನ್ನು ಬಿಟ್ಟು ಲಿವ್ ಇನ್ ಸಂಗಾತಿಯೊಂದಿಗೆ ವಾಸ ಮಾಡಲು ಉತ್ತರಾಖಂಡ ಹೈಕೋರ್ಟ್ ಅನುಮತಿ ನೀಡಿರುವ ಘಟನೆ ಇತ್ತೀಚೆಗೆ ನಡೆದಿದೆ. ಪತ್ನಿ ನಾಪತ್ತೆಯಾಗಿರುವ ಕುರಿತು ಡೆಹ್ರಾಡೂನ್‌ನ ಜಿಮ್ ಟ್ರೈನರ್ ಉತ್ತರಾಖಂಡ್ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ವೇಳೆ ಪತ್ನಿ ನ್ಯಾಯಾಲಯಕ್ಕೆ ಹಾಜರಾಗಿದ್ದು ಪತಿ, 10 ವರ್ಷದ ಮಗ ಹಾಗೂ 6 ವರ್ಷದ ಮಗಳನ್ನು ಬಿಟ್ಟಿರುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೆ, ಈಗ ತಾನು ಸಾಮಾಜಿಕ ಮಾಧ್ಯಮದಲ್ಲಿ ಭೇಟಿಯಾಗಿದ್ದ ಫರಿದಾಬಾದ್‌ನಲ್ಲಿರುವ ತನ್ನ ಲಿವ್ ಇನ್ ಸಂಗಾತಿಯೊಂದಿಗೆ ವಾಸಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ತನ್ನ ಪತಿ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದರಿಂದ ಇನ್ನು ಮುಂದೆ ಆತನೊಂದಿಗೆ ಬದುಕಲು ಬಯಸುವುದಿಲ್ಲ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಈ ಹಿನ್ನೆಲೆ, ಈ ಪ್ರಕರಣವನ್ನು ವಿಚಾರಣೆ ನಡೆಸಿದ ಉತ್ತರಾಖಂಡ್ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಪಂಕಜ್ ಪುರೋಹಿತ್ ಮತ್ತು ಮನೋಜ್ ತಿವಾರಿ ಅವರ ವಿಭಾಗೀಯ ಪೀಠವು ಮಹಿಳೆಗೆ ತಾನು ಪ್ರಸ್ತುತ ನಡೆಸುತ್ತಿರುವ ಜೀವನವನ್ನೇ ಮುಂದುವರಿಸಲು ಅವಕಾಶ ಮಾಡಿಕೊಟ್ಟಿದೆ. ಅಂದರೆ, ಲಿವ್ ಇನ್ ಪಾರ್ಟ್‌ನರ್ ಜತೆಗೆ ವಾಸ ಮಾಡಲು ಅನುಮತಿ ನೀಡಿದೆ.
ಇದನ್ನು ಓದಿ: ಮದುವೆಯಾಗಿದ್ದ ಹಂತಕ ಸಾನೆ, ಸರಸ್ವತಿ: ಮನೋಜ್ ಕೆಂಪು ಕಣ್ಣಿಂದಲೇ ಬಯಲಾಯ್ತು ಕೊಲೆ!
ಇನ್ನೊಂದೆಡೆ, ಸುಪ್ರೀಂ ಕೋರ್ಟ್ ವ್ಯಭಿಚಾರವನ್ನು ಅಪರಾಧವಲ್ಲ ಎಂದು ಪರಿಗಣಿಸಿದ್ದರೂ, ಅಂತಹ ತೀರ್ಪು ವಿವಾಹ ಸಂಸ್ಥೆಗೆ ಅಪಾಯಕಾರಿಯಾದ ಕಾರಣ ಸುಪ್ರೀಂ ಕೋರ್ಟ್‌ನಲ್ಲಿ ಉತ್ತರಾಖಂಡ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸುತ್ತೇವೆ ಎಂದು ಅರ್ಜಿದಾರರ ಪರ ವಕೀಲ ಅರುಣ್ ಕುಮಾರ್ ಶರ್ಮಾ ಹೇಳಿದರು. ಈ ದಂಪತಿ ಫೆಬ್ರವರಿ 2012 ರಲ್ಲಿ ವಿವಾಹವಾಗಿದ್ದರು. ಆದರೆ 37 ವರ್ಷದ ಮಹಿಳೆ ಫರಿದಾಬಾದ್‌ನಲ್ಲಿ ಒಬ್ಬ ವ್ಯಕ್ತಿಯೊಂದಿಗೆ ವಿವಾಹೇತರ ಸಂಬಂಧವನ್ನು ಬೆಳೆಸಿಕೊಂಡರು ಮತ್ತು ಆಗಸ್ಟ್ 7, 2022 ರಂದು ತನ್ನ ಕುಟುಂಬವನ್ನು ತೊರೆದರು ಎಂದು ತಿಳಿದುಬಂದಿದೆ. ನಂತರ ಅವರು ಫರಿದಾಬಾದ್‌ನಲ್ಲೇ ವಾಸಿಸಲು ಪ್ರಾರಂಭಿಸಿದರು, ಅಲ್ಲಿ ಅವರ ಪೋಷಕರು ಸಹ ವಾಸಿಸುತ್ತಿದ್ದಾರೆ. ಈ ಹಿನ್ನೆಲೆ ಗಂಡನ ಮನೆಗೆ ಹಿಂತಿರುಗಲು ನಿರಾಕರಿಸಿದರು ಎಂದೂ ತಿಳಿದುಬಂದಿದೆ.
45 ವರ್ಷದ ಜಿಮ್ ತರಬೇತುದಾರರು ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸಿದ್ದು, ತನ್ನ ಪತ್ನಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಮತ್ತುಫರಿದಾಬಾದ್ ವ್ಯಕ್ತಿಯ "ಅಕ್ರಮ ಬಂಧನ"ದಿಂದ "ಅವಳನ್ನು ಮುಕ್ತಗೊಳಿಸುವಂತೆ" ಡೆಹ್ರಾಡೂನ್ ಮತ್ತು ಫರಿದಾಬಾದ್‌ನ ಎಸ್‌ಎಸ್‌ಪಿಗಳಿಗೆ ನಿರ್ದೇಶನಗಳನ್ನು ನೀಡಬೇಕೆಂದು (ಪತಿ) ಕೋರಿದ್ದರು. ನಂತರ, ಮೇ 4 ರಂದು ಹೈಕೋರ್ಟ್ ಡೆಹ್ರಾಡೂನ್ ಮತ್ತು ಫರಿದಾಬಾದ್‌ನ ಪೊಲೀಸ್ ಮುಖ್ಯಸ್ಥರಿಗೆ ನ್ಯಾಯಾಲಯದಲ್ಲಿ ಮಹಿಳೆಯ (ಪತ್ನಿ) ಇರುವಿಕೆಯನ್ನು ಖಚಿತಪಡಿಸಿಕೊಳ್ಳಲು ನಿರ್ದೇಶಿಸಿತ್ತು. ಬಳಿಕ, ವಿಚಾರಣೆಗೆ ಹಾಜರಾಗಿದ್ದ ಮಹಿಳೆ ಫರಿದಾಬಾದ್‌ಗೆ ತನ್ನ ಸ್ವಂತ ಇಚ್ಛೆಯ ಮೇರೆಗೆ ಹೋಗಿರುವುದಾಗಿ ಉತ್ತರಾಖಂಡ ಹೈಕೋರ್ಟ್ ವಿಭಾಗೀಯ ಪೀಠದೆದುರು ಹೇಳಿಕೊಂಡಿದ್ದರು.
ಇದನ್ನೂ ಓದಿ: Delhi Shraddha Murder Case: ಮಹಿಳಾ ಹಕ್ಕು ಹೋರಾಟದ ಸೋಗು, ಗರ್ಲ್‌ಫ್ರೆಂಡನ್ನು 35 ಪೀಸ್ ಮಾಡಿದ ಪಾತಕಿ ಅಫ್ತಾಬ್
ಬಳಿಕ, ಹೈಕೋರ್ಟ್ ಗಂಡ ಹಾಗೂ ಮಕ್ಕಳನ್ನು ಬಿಟ್ಟು ಲಿವ್ ಇನ್ ಸಂಗಾತಿಯ ಜತೆಗೆ ವಾಸ ಮಾಡಲು ಅವಕಾಶ ಕೊಟ್ಟಿರುವುದು ಕುತೂಹಲ ಮೂಡಿಸದೆ. ಇನ್ನು, ಅರ್ಜಿದಾರ ವಕೀಲರು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಹೋಗೋದಾಗಿ ಹೇಳಿದ್ದು, ದೇಶದ ಸರ್ವೋಚ್ಛ ನ್ಯಾಯಾಲಯವು ಯಾವ ರೀತಿ ತೀರ್ಪು ನೀಡುತ್ತದೋ ಎಂಬುದನ್ನು ಕಾದು ನೋಡಬೇಕಾಗಿದೆ.
ಇದನ್ನೂ ಓದಿ: ಲಿವ್ ಇನ್ ಸಂಗಾತಿ ತುಂಡು ತುಂಡಾಗಿ ಕತ್ತರಿಸಿದ ಪಾಪಿಗೆ ಏಡ್ಸ್: ಆಕೆ ಮಗಳಿದ್ದಂತೆ, ಸೂಸೈಡ್ ಮಾಡ್ಕೊಂಡ್ಳು ಎಂದ!