
ಮೀರತ್: ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಯುವತಿಯೋರ್ವಳು ತನ್ನ ಹೆಂಡ್ತಿಯನ್ನು ತನ್ನೊಂದಿಗೆ ಕಳುಹಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದಾಳೆ. ಪ್ರಿಯಾ (ಹೆಸರು ಬದಲಾಯಿಸಲಾಗಿದೆ) ಮದುವೆ ಕೆಲ ದಿನಗಳ ಹಿಂದೆ ಲೋನಿ ಪ್ರದೇಶದ ಯುವಕನೊಂದಿಗೆ ನಡೆದಿತ್ತು. ಮದುವೆಯಾದ ಮೂರನೇ ದಿನಕ್ಕೆ ಪ್ರಿಯಾ ತನ್ನ ಗೆಳತಿ ಸೌಂದರ್ಯ (ಹೆಸರು ಬದಲಾಯಿಸಲಾಗಿದೆ) ಜೊತೆ ಪರಾರಿಯಾಗಿದ್ದಳು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದಾಗ ಪ್ರಿಯಾ ಮತ್ತು ಸೌಂದರ್ಯ ಸಲಿಂಗಿ ಪ್ರೇಮಿಗಳು ಎಂಬ ವಿಷಯ ತಿಳಿದು ಬಂದಿದೆ.
ಪ್ರಿಯಾ ಮತ್ತು ಸೌಂದರ್ಯ ಪರಸ್ಪರ ಪ್ರೀತಿಸಿದ್ದು, ಕಳೆದ ಹಲವು ದಿನಗಳಿಂದ ರಿಲೇಶನ್‌ಶಿಪ್‌ನಲ್ಲಿದ್ದರು. ಕುಟುಂಬಸ್ಥರಿಗೆ ತಿಳಿಯದಂತೆ ನ್ಯಾಯಾಲಯದಲ್ಲಿ ಮದುವೆಯಾಗಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಪ್ರಿಯಾ ಕುಟುಂಬಸ್ಥರು ಆಕೆಯ ಮದುವೆಯನ್ನು ಲೋನಿ ಯುವಕನೊಂದಿಗೆ ಮಾಡಿದ್ದರು. ಮದುವೆ ಬಳಿಕ ಮೂರನೇ ದಿನ, ಸೌಂದರ್ಯಾ ಬಂದು ಪ್ರಿಯಾಳನ್ನು ಕರೆದುಕೊಂಡು ಹೋಗಿದ್ದಾರೆ.
ಇನ್ನು ದೂರು ದಾಖಲಾಗುತ್ತಿದ್ದಂತೆ ಪೊಲೀಸ್ ಠಾಣೆಗೆ ಆಗಮಿಸಿದ ಸೌಂದರ್ಯ ಮತ್ತು ಪ್ರಿಯಾ ತಮ್ಮ ಪ್ರೀತಿಯ ವಿಷಯವನ್ನು ಹೇಳಿಕೊಂಡಿದ್ದಾರೆ. ಇತ್ತ ಇದೇ ಸಮಯಕ್ಕೆ ಪೊಲೀಸರು ಇಬ್ಬರು ಯುವತಿಯರ ಪೋಷಕರು ಮತ್ತು ಪ್ರಿಯಾಳ ಗಂಡನ ಕುಟುಂಬಸ್ಥರನ್ನು ಕರೆಸಲಾಗಿತ್ತು. ಪ್ರಿಯಾ ಮತ್ತು ಸೌಂದರ್ಯಳ ಮಾತು ಕೇಳುತ್ತಿದ್ದಂತೆ ಕುಟುಂಬಸ್ಥರು ಮಕ್ಕಳೊಂದಿಗೆ ಸಂಬಂಧ ಕಳೆದುಕೊಳ್ಳುತ್ತೇವೆ ಎಂದು ಹೇಳಿ ಆಕ್ರೋಶ ಹೊರಹಾಕಿದ್ದಾರೆ.
ಪ್ರಿಯಾ ಮತ್ತು ಸೌಂದರ್ಯ ಇಬ್ಬರು ವಯಸ್ಕರಾಗಿದ್ದು, ಪೊಲೀಸ್ ಠಾಣೆಯಲ್ಲಿ ಹೇಳಿಕೆ ದಾಖಲಿಸಿ ಹೋಗಿದ್ದಾರೆ. ಪೊಲೀಸರ ಮುಂದೆ ಹೇಳಿಕೆ ದಾಖಲಿಸುವ ಮತ್ತು ಕುಟುಂಬಸ್ಥರೊಂದಿಗಿನ ವಾಗ್ವಾದದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಆದ್ರೆ ಈ ವಿಡಿಯೋಗಳು ಇದೇ ಘಟನೆಗೆ ಸಂಬಂಧಿಸಿದ್ದಾ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ.
ಇದನ್ನೂ ಓದಿ: ಐಸಿಯುನಲ್ಲಿದ್ದ ತಾಯಿಯನ್ನು ನೋಡಲು ಜೊಮ್ಯಾಟೊ ಡೆಲಿವರಿ ಬಾಯ್‌ಗೆ ₹4000 ವಿಮಾನ ಟಿಕೆಟ್ ಬುಕ್ ಮಾಡಿದ ಗ್ರಾಹಕ!
ಈ ಘಟನೆ ಬಗ್ಗೆ ಮೀರತ್ ಠಾಣೆಯ ಪೊಲೀಸರು ಮತ್ತು ಯುವತಿಯ ಪೋಷಕರು ಪ್ರತಿಕ್ರಿಯೆಗೆ ಹಿಂದೇಟು ಹಾಕಿದ್ದಾರೆ ಎಂದು ವರದಿಯಾಗುತ್ತಿದೆ. ಪೊಲೀಸ್ ಠಾಣೆಯಲ್ಲಿ ನನ್ನ ಹೆಂಡ್ತಿಯನ್ನು ನನ್ನೊಂದಿಗೆ ಕಳುಹಿಸುವಂತೆ ಯುವತಿ ಹೇಳುತ್ತಿರೋದನ್ನು ಕೇಳಬಹುದು. ಜುಲೈ 6ರಂದು ಪ್ರಿಯಾ ಮದುವೆ ನಡೆದಿತ್ತು.
ಇದನ್ನೂ ಓದಿ: ₹23,000 ಸಂಬಳಕ್ಕೆ ದಿನವಿಡೀ ದುಡಿದರೂ ಸಿಗದ ನೆಮ್ಮದಿ: ತಾಯಿಯ ಎದುರೇ ಉದ್ಯೋಗಿಯ 'ಪ್ರೊಫೆಷನಲಿಸಂ' ಪ್ರಶ್ನಿಸಿದ ಕಂಪನಿ ಸಿಇಒ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.