
ಕುಟುಂಬ ಬೆಳೆಯಲೆಂದು ಮಗನಿಗೆ ಸುಂದರ ಹುಡುಗಿಯನ್ನು ನೋಡಿ ಮದುವೆ ಫಿಕ್ಸ್ ಮಾಡಿದ್ದಾರೆ. ಇನ್ನೇನು ನಾಳೆ ಮದುವೆ ಮಂಟಪದಲ್ಲಿ ಇಬ್ಬರ ಮದುವೆ ಮಾಡಬೇಕು ಎನ್ನುವಾಗ ವಧು ಮತ್ತು ವರ ಇಬ್ಬರೂ ಬೇರೆ ಯಾರನ್ನೋ ಮದುವೆ ಮಾಡಿಕೊಂಡಿದ್ದಾರೆ.
ಮನೆಯಲ್ಲಿ ಮಕ್ಕಳನ್ನು ಮದುವೆ ಮಾಡಬೇಕೆಂದು ಇಬ್ಬರು ಜೋಡಿಗೆ ಮದುವೆ ಫಿಕ್ಸ್ ಮಾಡಿದ್ದಾರೆ. ಹೆಣ್ಣು ನೋಡುವ ಶಾಸ್ತ್ರ, ನಿಶ್ಚಿತಾರ್ಥ, ಸಿಹಿ ಊಟ ಮಾಡುವುದು ಸೇರಿದಂತೆ ಮದುವೆ ಹಿಂದಿನ ದಿನದವರೆಗೂ ಎಲ್ಲವೂ ಸಾಮಾನ್ಯವಾಗಿತ್ತು. ಆದರೆ, ಮದುವೆ ಮಂಟಪದಲ್ಲಿ ನಡೆದು ಹೋಗಿದ್ದೇ ಬೇರೆ. ಮದುವೆ ಫಿಕ್ಸ್ ಆಗಿದ್ದ ವಧು ಮತ್ತು ವರ ಇಬ್ಬರೂ ಬೇರೆ ಯಾರನ್ನೋ ಮದುವೆ ಮಾಡಿಕೊಂಡಿದ್ದಾರೆ. ಇದೊಂದು ವಿಚಿತ್ರ ಪ್ರೇಮಕಥೆಯಾಗಿದೆ.
ಉತ್ತರ ಪ್ರದೇಶ ರಾಜ್ಯದ ಕಂಚೌಸಿ ಗ್ರಾಮದ ಒಬ್ಬ ಯುವಕನಿಗೆ ಘಾಟಂಪುರದ ಹುಡುಗಿಯ ಜೊತೆ ಮದುವೆ ನಿಶ್ಚಯ ಆಗಿತ್ತು. ಆದರೆ, ಈ ವಿಷಯ ಯುವಕನ ಪ್ರೇಯಸಿಗೆ ತಿಳಿದಾಗ, ಅವಳು ಬಿಹಾರದಿಂದ ಓಡಿ ಬಂದು ಯುವಕನ ಮನೆಯವರಿಗೆ ತಿಳಿಸಿದ್ದಾಳೆ. ಈ ನಿಮ್ಮ ಮಗ ತನ್ನೊಂದಿಗೆ ನೋಯ್ಡಾದಲ್ಲಿ ಹಲವು ವರ್ಷಗಳ ಕಾಲ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದಾನೆ. ಅವನನ್ನು ನನ್ನೊಂದಿಗೆ ಮದುವೆ ಮಾಡಿಕೊಡುವಂತೆ ಕೇಳಿಕೊಂಡಿದ್ದಾಳೆ. ಆದರೆ, ಯುವಕನ ಮನೆಯವರು ನಾಳೆಯೇ ಇವನಿಗೆ ಬೇರೊಂದು ಹುಡುಗಿ ಜೊತೆಗೆ ಮದುವೆ ನಿಶ್ಚಯವಾಗಿದೆ. ನಿನ್ನೊಂದಿಗೆ ಮದುವೆ ಮಾಡಿಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಆಗ ಬಿಹಾರದ ಯುವತಿ ನನ್ನನ್ನ ಪ್ರೀತಿಸಿದ ಹುಡುಗ ಬೇರೆಯವರ ಜೊತೆ ಮದುವೆಯಾಗಲು ನಾನು ಬಿಡಲ್ಲ. ನಾನು ಈ ಮೋಸಗಾರ ಪ್ರೇಮಿಯನ್ನ ಮದುವೆಯಾಗದೇ ಸುಮ್ಮನೆ ಬಿಡುವುದಿಲ್ಲವೆಂದು, ಹುಡುಗಿ ಪೊಲೀಸರಿಗೆ ದೂರು ನೀಡಿದಳು.
3 ವರ್ಷಗಳಿಂದ ಲಿವ್ ಇನ್ ರಿಲೇಷನ್‌ಶಿಪ್: ಬಿಹಾರದ ಈ ಹುಡುಗಿ ಮೇ 10 ರಂದು ಪೊಲೀಸರಿಗೆ ದೂರು ನೀಡಿ, ಯುವಕ ತನ್ನ ಜೊತೆ ನೋಯ್ಡಾದಲ್ಲಿ 3 ವರ್ಷಗಳಿಂದ ಲಿವ್ ಇನ್ ಸಂಬಂಧದಲ್ಲಿದ್ದ ಅಂತ ಹೇಳಿದಳು. ಒಮ್ಮೆ ಗರ್ಭಿಣಿ ಕೂಡ ಆಗಿದ್ದೆ, ಆದ್ರೆ ಯುವಕನ ಒತ್ತಾಯಕ್ಕೆ ಮಣಿದು ಗರ್ಭಪಾತ ಮಾಡಿಸಿಕೊಂಡೆ ಅಂತ ಹೇಳಿದಳು. ಪೊಲೀಸರು ಯುವಕ ಮತ್ತು ಆತನ ಮನೆಯವರನ್ನ ವಿಚಾರಿಸಿ, ಸೋಮವಾರ ಆರ್ಯ ಸಮಾಜದ ಮಂಟಪದಲ್ಲಿ ಇಬ್ಬರ ಮದುವೆ ಮಾಡಿಸಿದರು. ಬಿಹಾರ ಯುವತಿಯೊಂದಿಗೆ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದ ಯುವಕ-ಯುವತಿ ಹಲವು ವರ್ಷದಿಂದ ಪ್ರೀತಿ ಮಾಡುತ್ತಿದ್ದು, ಇವರಿಬ್ಬರ ಮದುವೆಯನ್ನು ಹುಡುಗನ ಮನೆಯವರ ಸಮ್ಮುಖದಲ್ಲಿ ಪೊಲೀಸರೇ ನೆರವೇರಿಸಿ ಕಳುಹಿಸಿದ್ದಾರೆ.
ಭಾವನ ತಮ್ಮನೊಂದಿಗೆ ಮದುವೆ: ಇನ್ನು ಭಾನುವಾರ ಮದುವೆ ಮಂಟಪದಲ್ಲಿ ವರನಿಗಾಗಿ ಕಾಯುತ್ತಿದ್ದ ಹುಡುಗಿ ಕನಸು ಭಗ್ನವಾಗಿತ್ತು. ಆದರೆ, ಅವಳಿಗೆ ಮದುವೆ ನಿಂತು ಹೋಗಿರುವುದು ಬೇರೆ ರೀತಿಯಲ್ಲಿ ಸಂತೋಷ ಕೊಟ್ಟಿತ್ತು. ಆ ಹುಡುಗಿಯನ್ನ ಅವಳ ಅಕ್ಕನ ಗಂಡನ ತಮ್ಮ (ಭಾವನ ತಮ್ಮ) ಜೊತೆ ಮದುವೆ ಮಾಡಲಾಯಿತು. ಮದುವೆಯಾಗುವ ವಧುವನ್ನು ಆಕೆಯ ಅಕ್ಕನ ಮೈದುನ ಮೊದಲಿನಿಂದಲೂ ಪ್ರೀತಿಸುತ್ತಿದ್ದನು. ಈ ಬಗ್ಗೆ ಹುಡುಗಿಯ ಮನೆಯಲ್ಲಿಯೂ ತಮ್ಮನ್ನು ಮದುವೆ ಮಾಡಿಕೊಡುವಂತೆ ಪ್ರಸ್ತಾಪವನ್ನೂ ಕೂಡ ಇಟ್ಟಿದ್ದನು. ಆದರೆ, ಹುಡುಗಿಯ ತಂದೆ ಇವರಿಬ್ಬರ ಮದುವೆಗೆ ಒಪ್ಪಿರಲಿಲ್ಲ. ಒಂದೇ ಮನೆಗೆ ಇಬ್ಬರು ಹೆಣ್ಣುಮಕ್ಕಳನ್ನ ಕೊಡಲು ಇಷ್ಟವಿಲ್ಲ ಎಂದು ಹೇಳಿದ್ದರು. ಇದೀಗ ನೋಡಿ, ವಿಧಿಯಾಟವೇ ಬೇರೆಯದ್ದೇ ಆಗಿತ್ತು. ಪ್ರೀತಿ ಮಾಡಿದ ಇಬ್ಬರೂ ಪ್ರೇಮಿಗಳು ಒಂದಾಗಿದ್ದಾರೆ.
ಒಟ್ಟಾರೆ ರಾಜ್ಯಗಳ ಗಡಿ ಮೀರಿ ಪ್ರೀತಿ ಮಾಡಿದ ಜೋಡಿ ಹಾಗೂ ಮನೆಯಲ್ಲಿ ಅಕ್ಕನ ಮೈದುನನ್ನೇ ಪ್ರೀತಿ ಮಾಡಿದ್ದ ಜೋಡಿ ಇಬ್ಬರೂ ಮದುವೆ ಮಾಡಿಕೊಂಡಿದ್ದಾರೆ. ಈ ವಿಚಿತ್ರ ಮದುವೆಯ ಸುದ್ದಿ ವೈರಲ್ ಆಗಿದ್ದು, ಯಾವುದೇ ಸಿನಿಮಾ ಕಥೆಗೂ ಕಮ್ಮಿಯಿಲ್ಲ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.