
ಕಾಲ ಅದೆಷ್ಟೇ ಬದಲಾದರೂ, ಜನರು ಅದೆಷ್ಟೇ ವಿದ್ಯಾವಂತರಾದರೂ ತಮ್ಮ ಹಳೇ ಚಾಳಿ ಮಾತ್ರ ಬಿಡೋದಿಲ್ಲ. ಹಾಗಾಗಿಯೇ ಇವತ್ತಿಗೂ ಸಮಾಜದಲ್ಲಿ ಅದೆಷ್ಟೋ ಪಿಡುಗುಗಳು ಹಾಗೆಯೇ ಉಳಿದುಕೊಂಡಿವೆ. ಅದರಲ್ಲೊಂದು ವರದಕ್ಷಿಣೆ. ಜನರು ಅದೆಷ್ಟೇ ಶ್ರೀಮಂತರಾದರೂ, ಮದುವೆಯ ಸಂದರ್ಭದಲ್ಲಿ ವರದಕ್ಷಿಣೆ ಕೇಳೋದನ್ನು ಮಾತ್ರ ಬಿಡೋದಿಲ್ಲ. ಮನೆಯಲ್ಲಿ ಅದೆಷ್ಟೇ ಆಸ್ತಿ-ಪಾಸ್ತಿಯಿದ್ದರೂ ಹುಡುಗನ ಕಡೆಯವರು ವಧುವಿನ ಕಡೆಯಿಂದ ಸಿಗೋ ಚಿನ್ನ, ಬಂಗಲೆ, ಕಾರುಗಳು, ಇನ್ಯಾವುದೋ ವಸ್ತುವಿಗೆ ಡಿಮ್ಯಾಂಡ್ ಇಡ್ತಾರೆ. ಅನೇಕ ಸುಶಿಕ್ಷಿತ ಮತ್ತು ಪ್ರಭಾವಿ ಜನರು ಸಹ ವರದಕ್ಷಿಣೆ ಕೇಳಲು ಹಿಂಜರಿಯುವುದಿಲ್ಲ. ಹಾಗೆಯೇ ಇಲ್ಲೊಂದೆಡೆ ವಧುವಿನ ಕಡೆಯವರು ಕೇಳಿದ ವರದಕ್ಷಿಣೆ ಕೊಟ್ಟಿಲ್ಲವೆಂದು ವರ ಮದುವೆಯಾಗಿ ಕೇವಲ ಎರಡು ಗಂಟೆಯಲ್ಲಿ ಹುಡುಗಿಗೆ ತಲಾಖ್ ಕೊಟ್ಟಿದ್ದಾನೆ.
ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮದುವೆ (Marriage) ನಡೆದು ಕೇವಲ ಎರಡು ಗಂಟೆಗಳಾಗುವಷ್ಟರಲ್ಲೇ ಮದುಮಗ ತಾನು ಮದುವೆಯಾದ ಪತ್ನಿಗೆ ತ್ರಿವಳಿ ತಲಾಖ್ ನೀಡಿದ್ದಾನೆ, ಇದಕ್ಕೆ ಆತನ ಪೋಷಕರು (Parents) ಸಹ ಸಹಮತ ನೀಡಿದ್ದಾರೆ. ವರದಕ್ಷಿಣೆ (Dowry) ರೂಪದಲ್ಲಿ ತನಗೆ ಕಾರು ನೀಡಿಲ್ಲವೆಂದು ಕೋಪಗೊಂಡ ವರ ಈ ರೀತಿ ತಲಾಖ್ ನೀಡಿದ್ದು ತನ್ನ ಕುಟುಂಬಸ್ಥರೊಂದಿಗೆ ಮನೆಗೆ ವಾಪಸ್ಸಾಗಿದ್ದಾನೆ. ಸದ್ಯ ಆಗ್ರಾದ ಈ ವ್ಯಕ್ತಿಯ ಮೇಲೆ ಕೇಸು ದಾಖಲಾಗಿದೆ.
ಮದುವೆ ನಡೀತಿರುವಾಗ್ಲೇ ವರದಕ್ಷಿಣೆಗೆ ಬೇಡಿಕೆಯಿಟ್ಟ ವರ, ಸಿಟ್ಟಿಗೆದ್ದ ವಧುವಿನ ಕುಟುಂಬ ಮಾಡಿದ್ದೇನು ನೋಡಿ!
ಘಟನೆಯ ವಿವರ
ಉತ್ತರ ಪ್ರದೇಶದ ಆಗ್ರಾದಲ್ಲಿರುವ ಯುವಕ ತಾನು ಮದುವೆಯಾದ ಎರಡೇ ಗಂಟೆಯಲ್ಲಿ ವಧುವಿಗೆ ತಲಾಖ್ ನೀಡಿದ್ದಾನೆ. ಇದಕ್ಕೆ ಕಾರಣ ತಾನು ಇಟ್ಟ ಬೇಡಿಕೆಯನ್ನು ವಧುವಿನ (Bride) ಕಡೆಯವರು ಈಡೇರಿಸಲಿಲ್ಲ ಎಂಬುದಾಗಿದೆ. ವಧುವಿನ ಸಹೋದರ ಕಮ್ರಾನ್ ವಾಸಿ ತನ್ನ ಇಬ್ಬರು ಸಹೋದರಿಯರಾದ ಡಾಲಿ ಹಾಗೂ ಗೋರಿಗೆ ಆಗ್ರಾದ ಫತೇಹಾಬಾದ್ ರಸ್ತೆಯಲ್ಲಿರುವ ಮದುವೆ ಮಂಟಪದಲ್ಲಿ ಒಂದೇ ದಿನ ವಿವಾಹ ಮಾಡಿಸಿದ್ದರು. ನಿಕಾಹ್ ಕಾರ್ಯಕ್ರಮ ಮುಗಿದ ಬಳಿಕ ಗೋರಿ ಅತ್ತೆ ಮನೆಗೆ ತೆರಳಿದ್ದಾರೆ. ಆದರೆ ಡಾಲಿಯ ವರ ಮೊಹಮ್ಮದ್ ಆಸಿಫ್ ಮಾತ್ರ ವರದಕ್ಷಿಣೆ ರೂಪದಲ್ಲಿ ತನಗೆ ಕಾರು ಸಿಕ್ಕಿಲ್ಲವೆಂದು ಅಸಮಾಧಾನಗೊಂಡಿದ್ದಾನೆ. ಅಷ್ಟೇ ಅಲ್ಲ ಮದ್ವೆಯಾಗಿ ಎರಡು ಗಂಟೆಯೊಳಗೇ ಪತ್ನಿಗೆ ತಲಾಖ್ ನೀಡಿದ್ದಾನೆ.
ಡಾಲಿಯ ಗಂಡ ಆಸೀಫ್ ಮದುವೆಗೂ ಮುನ್ನ ಡಾಲಿಯ ಪೋಷಕರಲ್ಲಿ ವರದಕ್ಷಿಣೆಯಾಗಿ ಕಾರು ಕೊಡಿಸುವಂತೆ ಬೇಡಿಕೆ ಇಟ್ಟಿದ್ದ ಅದಕ್ಕೆ ವಧುವಿನ ಕಡೆಯವರ ಸಮ್ಮತಿಯೂ ಇತ್ತು ಆದರೆ ಇಬ್ಬರು ಮಕ್ಕಳ ಮದುವೆಯ ಜವಾಬ್ದಾರಿ ಪೋಷಕರ ಮೇಲೆ ಇದ್ದಿದ್ದರಿಂದ ಪೋಷಕರಿಗೆ ಕಾರು ಕೊಡಿಸುವುದು ಕಷ್ಟವಾಗಿದೆ. ಆದರೆ ಪೋಷಕರು ವರನ (Groom) ಕಡೆಯವರಲ್ಲಿ ಹೇಳಿಕೊಂಡಿರಲಿಲ್ಲ ಕೊನೆಗೆ ಮದುವೆ ನಡೆದ ಬಳಿಕ ವರನ ಕಡೆಯವರು ಕಾರು ಎಲ್ಲಿ ಎಂದು ಕೇಳಿದಾಗ ಹಣ ಹೊಂದಾಣಿಕೆ ಸ್ವಲ್ಪ ಕಷ್ಟವಾಯಿತು ಸ್ವಲ್ಪ ಸಮಯ ಕೊಡಿ ಕಾರು ಕೊಡಿಸುತ್ತೇವೆ ಎಂದು ಹೇಳಿದ್ದಾರೆ.
ವರದಕ್ಷಿಣೆಯಾಗಿ ಏರ್ ಕಂಡೀಷನರ್ ಕೊಡದ್ದಕ್ಕೆ ಸಿಟ್ಟು, ವಧುವನ್ನು ಮಂಟಪದಿಂದ ಕೆಳಕ್ಕೆ ತಳ್ಳಿದ ವರ!
ವರ ಮತ್ತು ಇತರ ಆರು ಮಂದಿ ವಿರುದ್ಧ ಎಫ್‌ಐಆರ್
ಇದರಿಂದ ವಧು ಕುಟುಂಬಸ್ಥರ ಮೇಲೆ ಆಸಿಫ್ ಕುಟುಂಬಸ್ಥರು ಕೋಪಗೊಂಡಿದ್ದಾರೆ. ಈ ಸ್ಥಳದಲ್ಲೇ ನಮಗೆ ಕಾರು ಬೇಕು ಇಲ್ಲವೇ ಐದು ಲಕ್ಷ ರೂಪಾಯಿ ಹಣ ನೀಡಿ ಎಂದು ಡಿಮ್ಯಾಂಡ್ ಮಾಡಿದ್ದಾರೆ. ಡಾಲಿ ಕುಟುಂಬಸ್ಥರು ಆ ಸಮಯದಲ್ಲಿ ಅಷ್ಟು ದೊಡ್ಡ ಮೊತ್ತದ ಹಣ ರೆಡಿ ಮಾಡಲು ತಯಾರಿರಲಿಲ್ಲ. ಇದಾದ ಬಳಿಕ ಆಸಿಫ್ ತಲಾಖ್ ನೀಡಿ ವಧುವನ್ನು ಅಲ್ಲೇ ಬಿಟ್ಟು ಮಂಟಪದಿಂದ ತೆರಳಿದ್ದಾನೆ.
ಕಮ್ರಾನ್ ವಾಸಿ ನೀಡಿದ ದೂರಿನ ಆಧಾರದ ಮೇಲೆ ಆಸಿಫ್ ಮತ್ತು ಇತರ ಆರು ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಮೂರು ಬಾರಿ ತಲಾಖ್ ಹೇಳುವ ಮೂಲಕ ಮಹಿಳೆಗೆ ವಿಚ್ಛೇದನ ನೀಡುವುದು ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಕಾಯಿದೆ, 2019 ರ ಅಡಿಯಲ್ಲಿ ಕ್ರಿಮಿನಲ್ ಅಪರಾಧವಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.