
ಪ್ರೀತಿಸಿದವರೆಲ್ಲರೂ ಸಿಗ್ತಾರೆ ಜೀವನಪೂರ್ತಿ ಜೊತೆಗಿರ್ತಾರೆ ಅಂತ ಹೇಳುವುದಕ್ಕೆ ಆಗುವುದಿಲ್ಲ. ಜೀವನದ ಪ್ರತಿಯೊಂದರಲ್ಲೂ ಆಧುನಿಕತೆ ತಂತ್ರಜ್ಞಾನ ಹಾಸು ಹೊಕ್ಕಾಗಿರುವ ಇಂದಿನ ಕಾಲಘಟ್ಟದಲ್ಲೇ ಪ್ರೀತಿಸಿ ಮದುವೆಯಾಗುವುದು ಬಹುತೇಕರಿಗೆ ಸುಲಭದ ಮಾತು ಅಲ್ಲವೇ ಅಲ್ಲ. ಪ್ರೇಮಿಗಳಿಗೆ ಅಂದು ಇಂದು ಪ್ರತಿ ಕಾಲದಲ್ಲೂ ವಿರೋಧವಿದೆ. ಕೆಲವೇ ಕೆಲವು ಅದೃಷ್ಟವಂತರಿಗಷ್ಟೇ ಯಾವುದೇ ಅಡೆತಡೆಗಳಿಲ್ಲದೇ, ಪೋಷಕರ ಮನವೊಲಿಸಿ ಬಹಳ ಸಂಭ್ರಮದಿಂದ ತಮ್ಮ ಪ್ರೇಮಿಗಳನ್ನು ಮದುವೆಯಾಗುವ ಅವಕಾಶ ಸಿಗುತ್ತದೆ. ಹೀಗಿರುವಾಗ ಸುಮಾರು 4 ರಿಂದ 5 ದಶಕಗಳ ಹಿಂದೆ ಪ್ರೇಮಿಸಿದ ಜೋಡಿಗಳ ಕತೆ ಹೇಗಿರಬಹುದು ಊಹಿಸಿಕೊಳ್ಳಿ, ಅ ಕಾಲಘಟ್ಟದಲ್ಲಿ ಬಹುತೇಕರ ಪ್ರೀತಿ ಪೋಷಕರ ಹಾಗೂ ಸಮುದಾಯದ ವಿರೋಧಕ್ಕೆ ಸಿಲುಕಿ ನೀರ ಮೇಲಿನ ಗುಳ್ಳೆಯಂತೆ ಆಗಿರೋದು ಸುಳ್ಳಲ್ಲ, ಪ್ರೀತಿಯನ್ನು ಪೋಷಕರ ಮುಂದೆ ಹೇಳಿಕೊಳ್ಳುವ ಧೈರ್ಯವಿಲ್ಲದೇ ಅನೇಕರು ತಮ್ಮ ಪ್ರೀತಿಯನ್ನು ಮನಸೊಳಗೆ ಸಮಾಧಿ ಮಾಡಿ ಪೋಷಕರು ತೋರಿದ ಹುಡುಗ/ಹುಡುಗಿಯ ಜೊತೆ ಮದುವೆ ಆಗಿದ್ದಾರೆ. ಆದರೆ ಈ ರೀತಿ ಯೌವ್ವನದಲ್ಲಿ ಮಾಡಿದ ಪ್ರೀತಿಗೆ ವೃದ್ಧಾಪ್ಯದಲ್ಲಿ ಮದುವೆಯ ಭಾಗ್ಯ ಸಿಕ್ಕಿದ್ರೆ ಹೇಗಿರಬಹುದು? ಹೌದು ಇಂತಹದೊಂದು ಘಟನೆ ನೆರೆಯ ರಾಜ್ಯ ಕೇರಳದಲ್ಲಿ ನಡೆದಿದೆ. ವಿಚಿತ್ರ ಎನಿಸಿದರು ಈ ಘಟನೆ ಸತ್ಯ. ಇವರ ಮದುವೆಯ ವಿಚಾರ ಈಗ ಟಾಕ್ ಆಫ್ ದಿ ಟೌನ್ ಆಗಿದ್ದು, ಸಾಮಾಜಿಕ ಜಾಲತಾಣಗಳ್ಲಿ ಚರ್ಚೆಯ ವಿಚಾರವಾಗಿದೆ. ಅನೇಕರು ಈ ನವಜೋಡಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.
ಹೀಗೆ ವೃದ್ಧಾಪ್ಯದಲ್ಲಿ ತಮ್ಮ ಪ್ರೀತಿಗೆ ಮದುವೆಯ ಮುದ್ರೆಯೊತ್ತಿದ್ದ ಜೋಡಿ 65 ವರ್ಷದ ಜಯಪ್ರಕಾಶ್ ಹಾಗೂ ರಶ್ಮಿ, ಜೀವನದಲ್ಲಿ ಎದುರಾಗಿದ್ದ ಕೆಲ ಅಡೆತಡೆಗಳು ಸಮಯ ಸಂದರ್ಭಕ್ಕೆ ಸಿಲುಕಿ ಇಬ್ಬರು ಬೇರೆ ಬೇರೆಯವರನ್ನು ಮದುವೆಯಾಗಿದ್ದರು. ರಶ್ಮಿಯವರು ಮೊದಲು ಮದುವೆಯಾದರೆ ಜಯಪ್ರಕಾಶ್ ಅವರು ವಿದೇಶಕ್ಕೆ ತೆರಳಿ ಕಾಲಾನಂತರದಲ್ಲಿ ಅವರೂ ಕೂಡ ಬೇರೆಯವರನ್ನು ಮದುವೆಯಾಗಿದ್ದರು. ಇಬ್ಬರು ತಮ್ಮ ಕುಟುಂಬವನ್ನು ಬೆಳೆಸಿದರು, ಇಬ್ಬರಿಗೂ ಮಕ್ಕಳಾಗಿ ಮಕ್ಕಳೂ ದೊಡ್ಡವರಾದರು. ಆದರೆ ರಶ್ಮಿಯವರ ಪತಿ 10 ವರ್ಷಗಳ ಹಿಂದೆ ತೀರಿಕೊಂಡಿದ್ದರೆ ಜಯಪ್ರಕಾಶ್ ಅವರ ಪತ್ನಿ 5 ವರ್ಷಗಳ ಹಿಂದೆ ತೀರಿಕೊಂಡಿದ್ದರು. ಆದರೆ ಇತ್ತೀಚೆಗೆ ರಶ್ಮಿಯವರನ್ನು ಶಾರ್ಟ್ ಮೂವಿಯೊಂದರಲ್ಲಿ ನೋಡಿದ ಜಯಪ್ರಕಾಶ್ ಅವರು ಕುಟುಂಬದವರ ಮೂಲಕ ಅವರನ್ನು ಮತ್ತೆ ಸಂಪರ್ಕಿಸಿದ್ದರು. ಇದರಿಂದ ಅವರ ಹಳೆಯ ಪ್ರೀತಿ ಮತ್ತೆ ಚಿಗುರಿತು. ಹಾಗೂ ಇವರ ಪ್ರೀತಿಗೆ ಅವರ ಮಕ್ಕಳು ಕೂಡ ಒಪ್ಪಿಗೆಯ ಮುದ್ರೆಯೊತ್ತಿದ್ದರು. ಪರಿಣಾಮ ಇಬ್ಬರು ತಮ್ಮ ಇಳಿವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಕುಟುಂಬದರು ಮಕ್ಕಳು ಮೊಮ್ಮಕ್ಕಳ ಸಮ್ಮುಖದಲ್ಲಿ ಅವರು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದು, ಇವರ ಈ ಮದುವೆ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ. ನೆಟ್ಟಿಗರು ಈ ಪ್ರೇಮಿಗಳಿಗೆ ಶುಭ ಹಾರೈಸಿದ್ದಾರೆ.
ಇದನ್ನೂ ಓದಿ: ವೃದ್ಧನ ನಿಸ್ವಾರ್ಥ ಸೇವೆ: ಪಂಜಾಬ್‌ನ ಬರ್ನಾಲಾ ರೈಲು ನಿಲ್ದಾಣ ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಪ್ರಯಾಣಿಕರು
ನೇಕರು ಇವರನ್ನು ಒಂದು ಮಾಡಿದ ಮಕ್ಕಳಿಗೆ ಧನ್ಯವಾದ ಹೇಳಿದ್ದಾರೆ. ಇದರಲ್ಲಿ ಮಕ್ಕಳ ಮನಸ್ಸು ದೊಡ್ಡದು ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ.ಹಾಗೆಯೇ ಜೀವನದಲ್ಲಿ ಸೆಕೆಂಡ್ ಛಾನ್ಸ್ ಇರುತ್ತದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಅದೇನೆ ಇರಲಿ ಬಹುತೇಕ ಕಡೆಗಳಲ್ಲಿ ಮಕ್ಕಳ ಪ್ರೀತಿಗೆ ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸುತ್ತಾರೆ. ಆದರೆ ಇಲ್ಲಿ ಮಕ್ಕಳೇ ಮುಂದೆ ನಿಂತು ಪೋಷಕರ ಪ್ರೀತಿಗೆ ವಿವಾಹದ ಮುದ್ರೆಯೊತ್ತಿದ್ದಾರೆ. ಬಹುತೇಕರ ಕುಟುಂಬಗಳಲ್ಲಿ ವೃದ್ಧಾಪ್ಯದ ಪ್ರೀತಿಯನ್ನು ಯಾರು ಒಪ್ಪಿಕೊಳ್ಳುವುದೇ ಇಲ್ಲ, ಬಹುತೇಕರು ಹೋಗೋ ಕಾಲದಲ್ಲಿ ಇದೆಲ್ಲಾ ಬೇಕಾ ಎಂದು ಕಾಮೆಂಟ್ ಮಾಡ್ತಾರೆ. ಆದರೆ ಮಕ್ಕಳು ದೊಡ್ಡವರಾಗಿ ತಮ್ಮ ತಮ್ಮ ಹಾದಿ ಹಿಡಿದ ನಂತರ ಬಹುತೇಕ ಏಕಾಂಗಿಗಳಾಗಿರುವ ಪೋಷಕರು ಒಂಟಿಯಾಗಿ ಬಿಡುತ್ತಾರೆ.ಕಷ್ಟಸುಖಗಳನ್ನು ಹಂಚಿಕೊಳ್ಳುವುದಕ್ಕೆ ಅವರಿಗೆ ಯಾರೂ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಒಂಟಿ ಜೀವಕ್ಕೊಂದು ಕಷ್ಟ ಕೇಳುವ ಜೀವ ಜತೆಗಿದ್ದರೆ ಚಂದ ಎಂಬ ಅಭಿಪ್ರಾಯ ಅನೇಕರದ್ದು. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಕಾಮೆಂಟ್ ಮಾಡಿ..
ಇದನ್ನೂ ಓದಿ: ರಷ್ಯನ್ ನಿರ್ಬಂಧ ಮಸೂದೆಗೆ ಟ್ರಂಪ್ ಅನುಮೋದನೆ: ರಷ್ಯಾದ ತೈಲ ಖರೀದಿ ಮಾಡ್ತಿರುವ ಭಾರತಕ್ಕೆ ಆಘಾತ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.