ಪೊಲೀಸ್‌ ಮಾಮನ ಕೈಗೆ ಸಿಕ್ಕೇಬಿಟ್ರು ತುಂಟ ಹುಡುಗೀರು

By Kannadaprabha NewsFirst Published Oct 31, 2019, 2:24 PM IST
Highlights

ಕಾಲೇಜಿನ ಹುಡುಗಿಯೊಬ್ಬಳು ತನ್ನ ಸ್ನೇಹಿತೆಯೊಂದಿಗೆ ಹೋಗುವಾಗ ಟ್ರಾಫಿಕ್ ಪೊಲೀಸರಿಗೆ ಸಿಕ್ಕಿ ಹಾಕ್ಕೊಂಡ ಪ್ರಸಂಗವನ್ನು ನವೀರಾಗಿ ವಿವರಿಸಿದ್ದು ಹೀಗೆ...

- ಸುಷ್ಮಾ ಸದಾಶಿವ್‌
ದ್ವಿತೀಯ ಎಂಸಿಜೆ, ವಿವೇಕಾನಂದ ಕಾಲೇಜು, ಪುತ್ತೂರು

ಹೆಲ್ಮಟ್‌ ಕಡ್ಡಾಯ ಎಂಬ ನೀತಿ ಇದ್ದರೂ ಅದನ್ನುಅನುಸರಿಸುವವರು ಕಡಿಮೆ. ಪೊಲೀಸರ ಭಯಕ್ಕೋ, ಸಿಕ್ಕಿ ಹಾಕಿಕೊಂಡರೆ ಫೈನ್‌ ಕಟ್ಟಬೇಕಾಗುತ್ತದೆ ಎಂಬ ಕಾರಣಕ್ಕೆ ಹೆಲ್ಮೆಟ್‌ ಹಾಕಿಕೊಂಡು ಸಂಚರಿಸುತ್ತೇವೆ. ನಾನು ಇದಕ್ಕೆ ಹೊರತಲ್ಲ. ಹೆಲ್ಮೆಟ್‌ ಹಾಕಿಕೊಂಡರೆ ಅದೇನೋ ಒಂದು ರೀತಿಯ ಕಿರಿಕಿರಿ. ಸ್ವಚ್ಛ ಗಾಳಿ ಅನುಭವಿಸಲಾಗುವುದಿಲ್ಲ, ಕೂದಲು ಹಾಳಾಗುತ್ತದೆ ಎಂಬ ಕಾರಣಕ್ಕೆ ನಾನು ಮತ್ತು ನನ್ನ ಗೆಳತಿ ಹೆಲ್ಮೆಟ್‌ ಹಾಕುವುದು ಕಡಿಮೆಯೆ.

ಒಂದು ದಿನ ಟ್ರಾಫಿಕ್‌ ಪೊಲೀಸ್‌ ಸಿಗಲಾರರು ಎಂಬ ಭಂಡ ಧೈರ್ಯದಲ್ಲಿ ಪೇಟೆಯ ಕಡೆಗೆ ಸಾಗಿದ್ದ ನಮಗೆ ಪೊಲೀಸ್‌ ಸಾಹೇಬರ ದರ್ಶನವಾಯ್ತು. ಅದರಲ್ಲೂ ನನ್ನ ಗೆಳತಿಗೆ ಆ ಪೊಲೀಸ್‌ ಮೇಲೆ ಕ್ರಶ್‌. ನಾವು ಬರುವುದನ್ನೆ ಕಾಯುತ್ತಿದ್ದ ಅವರು ಎಲ್ಲಾ ರೀತಿಯಲ್ಲೂ ನಮಗೆ ದಂಡ ಹಾಕುವ ಯೋಚನೆಯಲ್ಲಿದ್ದರು. ಅವರನ್ನು ಕಂಡದ್ದೇ ತಡ ನನ್ನ ಗೆಳತಿಯಂತೂ ಆತನನ್ನು ನೋಡಲೇಬೇಕೆಂದು ಹಠ ಹಿಡಿದಿದ್ದಳು. ನನಗೋ ಸಿಕ್ಕಿಹಾಕಿಕೊಂಡರೆ ಕಿಡ್ನಿ ಮಾರಿ ಫೈನ್‌ ಕಟ್ಟಬೇಕಷ್ಟೆ ಎಂಬ ಚಿಂತೆ. ಅಂತೂ ಅವಳಿಗೆ ಬೈಯುತ್ತಾ ಮೆಲ್ಲನೆ ಅಲ್ಲಿದ್ದ ಅಡ್ಡದಾರಿಯಲ್ಲಿ ಗಾಡಿಯನ್ನು ಸಾಗಿಸಿದೆ. ಆದರೆ ನಮ್ಮ ಪೊಲೀಸ್‌ ಸಾರ್‌ ನಮಗಿಂತ ಚಾಲಾಕಿ. ನಾವು ದಾರಿತಪ್ಪಿಸುತ್ತಿದ್ದೇವೆ ಎಂದು ಅರಿವಾದ ಕೂಡಲೇ ಗಾಡಿ ನಂಬರ್‌ ನೋಟ್‌ ಮಾಡಿಕೊಂಡಿದ್ದರು. ಅಂತೂ ಆ ದಿನ ಹೇಗೋ ತಪ್ಪಿಸಿಕೊಂಡೆವು. ಆದ್ರೆ ನಾವು ಮಾಡಿದ ತಪ್ಪಿಗೆ ಒಂದು ದಿನ ಸರಿಯಾಗಿ ತಗಲಾಕಿಕೊಂಡೆವು.

ಸುಮಾರು ಒಂದು ವಾರದ ನಂತರ ಎಲ್ಲಾ ನಿಯಮ ಅನುಸರಿಸಿಕೊಂಡು ಪುನಃ ಪೇಟೆಯ ಕಡೆಗೆ ನಮ್ಮ ಪಯಣ ಸಾಗಿತ್ತು. ಅದೇ ಪೊಲೀಸ್‌ ಸಾಹೇಬರು ಕಳೆದ ಬಾರಿ ನಾವು ತಪ್ಪಿಸಿಕೊಂಡ ರಸ್ತೆಯಲ್ಲೇ ನಿಂತಿದ್ದರು. ಈ ಬಾರಿ ಎಲ್ಲಾ ಡಾಕ್ಯುಮೆಂಟ್ಸ್‌ ಜೊತೆಗಿದ್ದ ಕಾರಣ ನಮಗೆ ಅಷ್ಟೊಂದು ಭಯವಿರಲಿಲ್ಲ. ಅವರು ನಮ್ಮನ್ನು ವಿಚಾರಿಸಲಿಕ್ಕಿಲ್ಲ ಎಂದೆನಿಸಿತು. ಆದರೆ ಅವರು ದಕ್ಷ ಪೊಲೀಸ್‌ ಅಧಿಕಾರಿ. ನಾವು ಬರುವುದನ್ನು ಕಂಡ ಕೂಡಲೇ ಗಾಡಿ ನಂಬರ್‌ ನೋಡಿ ನಿಲ್ಲಿಸಿಯೇ ಬಿಟ್ಟರು.

ಜೀನ್ಸ್ ಧರಿಸಿದ ಮಹಿಳೆಯರಿಗೆ ಡ್ರೈವಿಂಗ್ ಲೈಸೆನ್ಸ್‌ಗೆ ಅವಕಾಶವಿಲ್ಲ

‘ಕಳೆದ ಬಾರಿ ತಪ್ಪಿಸಿಕೊಂಡ ಹುಡುಗಿಯರು ನೀವೇ ಅಲ್ವಾ, ಏನ್‌ ನಂಗೆ ಗೊತ್ತಾಗಲ್ಲ ಅಂದುಕೊಂಡಿದ್ದೀರಾ, ನಡೀರಿ ಪೊಲೀಸ್‌ ಸ್ಟೇಷನ್‌ಗೆ’ ಎಂದು ಗದರಿಸಿದರು. ಮೊದಲೇ ಆ ಪೊಲೀಸ್‌ಗೆ ಲೈನ್‌ ಹಾಕುತ್ತಿದ್ದ ನನ್ನ ಗೆಳತಿ ಇನ್ನೆಲ್ಲಿ ಅವರ ಹಿಂದೆ ಹೋಗಿ ಬಿಡುತ್ತಾಳೋ ಅನ್ನೋ ಭಯ ನಂಗೆ. ನಾನು ದಿಕ್ಕು ತೋಚದಾಗಿ, ‘ಸಾರಿ ಸಾರ್‌, ಇನ್ನು ಮುಂದೆ ಹೀಗೆ ಮಾಡುವುದಿಲ್ಲ’ ಎಂದು ಗೋಗರೆಯುತ್ತಿದ್ದರೆ ಇವಳು ಅವರನ್ನು ಕಂಡು ಪಿಸು ನಗುತ್ತಿದ್ದಳು. ಬೆಕ್ಕಿಗೆ ಆಟ ಇಲಿಗೆ ಪ್ರಾಣ ಸಂಕಟ ಎಂಬಂತಾಗಿತ್ತು ನನ್ನ ಪಾಡು. ಅದಕ್ಕೆ ಸರಿಯಾಗಿ ಸ್ಟೇಷನ್‌ನ ಎದುರುಗಡೆ ‘ಪೊಲೀಸ್‌ ಠಾಣೆಗೆ ಸುಸ್ವಾಗತ’ ಎಂಬ ಬೋರ್ಡ್‌. ಅದನ್ನು ಕಂಡಕೂಡಲೇ ಬೆವರು ಇಳಿಯಲು ಪ್ರಾರಂಭಿಸಿತ್ತು.

ಸಿಎಂ ಜಗನ್ ಕಾರು ನಿಲ್ಲಿಸಿ ವಂಚನೆ ಪ್ರಕರಣ ದಾಖಲಿಸಿದ ಪೊಲೀಸ್

ಆವರೆಗೆ ಪೊಲೀಸ್‌ ಠಾಣೆಗೆ ಕಾಲಿಡದ ನಾನು, ‘ಅಯ್ಯೋ ದೇವರೆ, ಎಂತಹ ಪರಿಸ್ಥಿತಿ ತಂದಿಟ್ಟೆ ನನಗೆ’ ಎಂದು ಪರಿತಪಿಸುತ್ತಿದ್ದೆ. ನನ್ನ ಗೆಳತಿ ಮಾತ್ರ ತನಗೆ ಇದ್ಯಾವುದು ಅನ್ವಯಿಸುವುದಿಲ್ಲ ಎಂಬ ರೀತಿಯಲ್ಲಿ ಆತನನ್ನು ನೋಡುತ್ತಾ ಕುಳಿತಿದ್ದಳು. ಅದೆಷ್ಟೇ ವಿನಂತಿಸಿದರೂ ಆ ಪೊಲೀಸ್‌ ನಮ್ಮನ್ನು ಬಿಡದೇ, ‘ನಡೀರಿ ಸ್ಟೇಷನ್‌ಗೆ’ ಎನ್ನುತ್ತಿದ್ದರು. ಇನ್ನು ಇವಳೆಲ್ಲಿ ಗಾಡಿಯಿಂದ ಇಳಿಯುತ್ತಾಳೋ ಎಂಬ ದ್ವಂದ್ವದಲ್ಲಿದ್ದ ನಾನು ಪೊಲೀಸ್‌ ಮುಂದೆ ಹೋಗೋದನ್ನೇ ಕಾಯುತ್ತಿದ್ದೆ. ಅಂತೂ ನಮ್ಮ ಕೈಗೆ ರಶೀದಿ ಕೊಟ್ಟು ಬೈಯುತ್ತಾ ಮುಂದೆ ಸಾಗಿದಾಗಿ ಒಂದೇ ಓಟಕ್ಕೆ ಅಲ್ಲಿಂದ ಎಸ್ಕೇಪ್‌ ಆಗಿದ್ದೆ.

ನಾವಿಬ್ಬರು ಮೊದಲು ಮಾಡಿದ್ದು ತಪ್ಪೇ. ಆದರೆ ಎರಡನೆ ಬಾರಿ ಪರಿತಪಿಸಿದ್ದು ಮಾತ್ರ ವಿಪರ್ಯಾಸ. ಅಂದೇ ಕೊನೆ ಅದರ ನಂತರ ನಾನು ಪೇಟೆಯ ಕಡೆಗೆ ಸ್ಕೂಟಿಯಲ್ಲಿ ಹೋದದ್ದೂ ಇಲ್ಲ, ನಿಯಮ ಉಲ್ಲಂಘಿಸಿದ್ದೂ ಇಲ್ಲ.

click me!