ಫೆಬ್ರವರಿ 14ರಂದು ವ್ಯಾಲಂಟೈನ್ ಡೇ ಆಚರಣೆ ಮಾಡಲಾಗುತ್ತದೆ. ಇದ್ರ ತಯಾರಿಯಲ್ಲಿ ಯುವಜನತೆಯಿದೆ. 40 ವರ್ಷ ದಾಟಿದೋರು ವಯಸ್ಸಾಯ್ತು ಇನ್ನೆಲ್ಲ ಏನು ಅಂತಾ ಸುಮ್ಮನಿರ್ತಾರೆ. ನೀವು ಅವ್ರಲ್ಲಿ ಒಬ್ಬರಾಗಿದ್ರೆ ಈಗ್ಲೇ ಪ್ಲಾನ್ ಶುರು ಮಾಡಿ. ಪ್ರೀತಿಗೆ ವಯಸ್ಸಿಲ್ಲ ಎಂಬುದು ನೆನಪಿರಲಿ.
ಪ್ರೀತಿ ವಿಷ್ಯ ಬಂದಾಗ ನಾವು ಯುವಕರನ್ನು ಕಲ್ಪಿಸಿಕೊಳ್ತೇವೆ. ಯೌವನದಲ್ಲಿದ್ದಾಗ ಪ್ರೀತಿಯ ಬಗ್ಗೆ ಆಸಕ್ತಿ, ಉತ್ಸಾಹ ಹೆಚ್ಚಿರುತ್ತದೆ. ವ್ಯಾಲಂಟೈನ್ ಡೇಯಂತಹ ದಿನಗಳಲ್ಲಿ ಯುವ ಪ್ರೇಮಿಗಳು ಹಬ್ಬ ಆಚರಿಸ್ತಾರೆ. ಪರಸ್ಪರ ಉಡುಗೊರೆ ನೀಡಿ, ಔಟಿಂಗ್, ಪಾರ್ಟಿ ಅಂತಾ ಅಲ್ಲಿಲ್ಲಿ ಸುತ್ತಾಡಿ ಎಂಜಾಯ್ ಮಾಡ್ತಾರೆ. ಆದ್ರೆ ವಯಸ್ಸಾಗ್ತಿದ್ದಂತೆ ಇದ್ರಲ್ಲಿ ಉತ್ಸಾಹ ಕಡಿಮೆಯಾಗುತ್ತದೆ. ಪ್ರೀತಿಸಿ ಮದುವೆಯಾದ ದಂಪತಿಯಾಗಿದ್ರೂ ವಯಸ್ಸಾಗ್ತಿದ್ದಂತೆ ವ್ಯಾಲಂಟೈನ್ ಡೇ ಮರೆತು ಹೋಗಿರುತ್ತೆ.
ಪ್ರೇಮಿ (Lover) ಗಳ ದಿನವನ್ನು ಆಚರಿಸಿಲ್ಲವೆಂದ್ರೆ ಹಿರಿಯ ದಂಪತಿ ಮಧ್ಯೆ ಪ್ರೀತಿ ಇಲ್ಲವೆಂದಲ್ಲ. ಆದ್ರೆ ಪ್ರೀತಿಯನ್ನು ವ್ಯಕ್ತಪಡಿಸಲು ಅವರು ಮಹತ್ವ ನೀಡೋದಿಲ್ಲ. ಈ ವಯಸ್ಸಿನಲ್ಲಿ ಎಂತಾ ವ್ಯಾಲಂಟೈನ್ (Valentine) ಡೇ. ವಯಸ್ಸಾಯ್ತು ನಮಗೆ ಎನ್ನುವವರಿದ್ದಾರೆ. ಕುಟುಂಬ (Family) ಹಾಗೂ ಮಕ್ಕಳ ಪಾಲನೆಯಿಂದಾಗಿ ದಂಪತಿಗೆ ಸರಿಯಾದ ಸಮಯ ಸಿಗೋದಿಲ್ಲ. ಇದು ದಂಪತಿ ಮಧ್ಯೆ ಪ್ರಣಯ ಹಾಗೂ ಉತ್ಸಾಹವನ್ನು ಕಡಿಮೆ ಮಾಡುತ್ತದೆ. ಅನೇಕ ಬಾರಿ ಈ ನಿರುತ್ಸಾಹವೇ ದಾಂಪತ್ಯ ಮುರಿದು ಬೀಳಲು ಕಾರಣವಾಗುತ್ತದೆ. ವಯಸ್ಸು 40ರ ಗಡಿದಾಟುತ್ತಿದ್ದಂತೆ ಅನೇಕ ದಂಪತಿ ಒಂದೇ ಮನೆಯಲ್ಲಿ ವಾಸವಾಗಿದ್ರೂ ಬೇರೆ ಮಲಗಲು ಶುರು ಮಾಡ್ತಾರೆ. ಅಪ್ಪುಗೆ, ಮುತ್ತು ಎಲ್ಲವೂ ಇಲ್ಲಿ ಮಾಯವಾಗುತ್ತದೆ. ಆದ್ರೆ ದಾಂಪತ್ಯ ಜೀವಂತವಾಗಿರಲು ಮನಸ್ಸಿನಲ್ಲಿ ಪ್ರೀತಿಯಿದ್ರೆ ಸಾಲದು. ಅದನ್ನು ವ್ಯಕ್ತಪಡಿಸಬೇಕು. ಹಾಗೆಯೇ ಪ್ರೀತಿಗೆ ವಯಸ್ಸಿಲ್ಲ ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕು. 40ರ ನಂತ್ರವೂ ನೀವು ವ್ಯಾಲಂಟೈನ್ ಡೇ ಆಚರಣೆ ಆಡ್ಬಹುದು. ನಿಮ್ಮ ಸಂಗಾತಿಗೆ ಸರ್ಪ್ರೈಸ್ ನೀಡಿ ಅವರನ್ನು ಖುಷಿಗೊಳಿಸುವ ಮೂಲಕ ಮತ್ತೆ ದಾಂಪತ್ಯದಲ್ಲಿ ಸಿಹಿ ಕಾಣಬಹುದು.
VALENTINES DAY: ಈ 6 ಅದೃಷ್ಟಶಾಲಿ ರಾಶಿಗಳಿಗೆ ಸಿಗಲಿದೆ ನಿಜವಾದ ಪ್ರೀತಿ
ವಯಸ್ಸಾದ್ಮೇಲೆ ಹೀಗಿರಲಿ ನಿಮ್ಮ ವ್ಯಾಲಂಟೈನ್ ಡೇ :
ಒಂದು ಗುಲಾಬಿ (Rose) ಹೆಚ್ಚಿಸುತ್ತೆ ಪ್ರೀತಿ : ನಿಮ್ಮೆಲ್ಲ ಜವಾಬ್ದಾರಿ ನಿಮ್ಮ ಸ್ವಭಾವವನ್ನು ಬದಲಿಸಿರುತ್ತದೆ. ಯುವಕರಂತೆ ವ್ಯಾಲಂಟೈನ್ ಡೇ ಆಚರಿಸಲು ಸಾಧ್ಯವಿಲ್ಲ. ಹಾಗಂತ ಈ ದಿನವನ್ನು ನೀರಸವಾಗಿ ಕಳೆಯಬೇಕಾಗಿಲ್ಲ. ಸಂಗಾತಿಗೆ ಒಂದು ಗುಲಾಬಿ ಹೂ ನೀಡಿ ಅವರ ಮುಖದಲ್ಲಿ ಖುಷಿ ನೋಡಬಹುದು. ಸಂಬಂಧದಲ್ಲಿ ಮಾಧುರ್ಯ ಮತ್ತು ಪ್ರಣಯವನ್ನು ಕಾಪಾಡಿಕೊಳ್ಳಲು ಒಂದೇ ಒಂದು ಹೂವು ಸಾಕು.
ಉಡುಗೊರೆ (Gift) : ಗಿಫ್ಟ್ ಯಾರಿಗೆ ಇಷ್ಟವಿಲ್ಲ ಹೇಳಿ? ಅದ್ರಲ್ಲೂ ಪ್ರೀತಿಪಾತ್ರರು ನೀಡಿದ ಉಡುಗೊರೆ ಮತ್ತಷ್ಟು ವಿಶೇಷವಾಗಿರುತ್ತದೆ. ನೀವು ಹೆಚ್ಚು ದುಬಾರಿ ಗಿಫ್ಟ್ ನೀಡಬೇಕಾಗಿಲ್ಲ. ನಿಮ್ಮ ಬಜೆಟ್ ಗೆ ತಕ್ಕಂತೆ ಒಂದು ಡ್ರೆಸ್ ನೀಡಿದ್ರೂ ಸಾಕು. ಸಂಗಾತಿ ಇದ್ರಿಂದ ಅಚ್ಚರಿಗೊಳ್ಳುವ ಜೊತೆಗೆ ನಿಮಗೆ ಇನ್ನೊಂದಿಷ್ಟು ಹತ್ತಿರವಾಗ್ತಾರೆ.
ಸಂಗಾತಿ ಜೊತೆ ಸಮಯ ಕಳೆಯಿರಿ : ಸಮಯಕ್ಕಿಂತ ಮುಖ್ಯವಾದದ್ದು ಯಾವುದೂ ಇಲ್ಲ. ನೀವು ಪ್ರತಿ ದಿನ ನಿಮ್ಮ ಕೆಲಸದಲ್ಲಿ ಬ್ಯುಸಿಯಾಗಿರ್ತೀರಾ. ಆದ್ರೆ ವ್ಯಾಲಂಟೈನ್ ಡೇ ದಿನ ಸಂಗಾತಿಗೆ ಸಮಯ ನೀಡಿ. ಇಬ್ಬರೂ ಸೇರಿ ಅಡುಗೆ ಮಾಡೋದು ಇಲ್ಲ ಮನೆ ಕೆಲಸ ಮಾಡೋದು ಇಲ್ಲವೆ ಪಾರ್ಕ್ ಸೇರಿದಂತೆ ನಿಮ್ಮಿಬ್ಬರ ಇಷ್ಟದ ಸ್ಥಳಕ್ಕೆ ಹೋಗಿ ಬನ್ನಿ. ನೀವು ಮೊದಲು ಪ್ರಪೋಸ್ ಮಾಡಿದ ಅಥವಾ ಭೇಟಿಯಾದ ಸ್ಥಳವಿದ್ರೆ ಅಲ್ಲಿಗೆ ಹೋಗಿ ಹಳೆ ನೆನಪನ್ನು ಮೆಲಕು ಹಾಕ್ಬಹುದು.
Valentines Day: ನಿಜವಾದ ಪ್ರೀತಿನಾ, ಆಕರ್ಷಣೆನಾ ತಿಳಿದುಕೊಳ್ಳುವುದು ಹೇಗೆ ?
ಪ್ರೀತಿಯ ಮಾತು : ಯುವಕರು ಆರಾಮವಾಗಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸ್ತಾರೆ. ಆದ್ರೆ ವಯಸ್ಸಾದ ಜೋಡಿ ಮನಸ್ಸಿನ ಭಾವನೆಯನ್ನು ಹೊರ ಹಾಕುವುದಿಲ್ಲ. ಸಂಗಾತಿಗೆ ಐ ಲವ್ ಯು ಎನ್ನಲೂ ಅವರಿಗೆ ಮುಜುಗರ. ನೀವು ಹೇಳ್ದೆ ನಿಮ್ಮ ಭಾವನೆಯನ್ನು ಸಂಗಾತಿ ಅರಿಯೋದಿಲ್ಲ. ನಿಮ್ಮ ಪ್ರೀತಿ ವ್ಯಕ್ತಪಡಿಸಲು ವ್ಯಾಲಂಟೈನ್ ಡೇ ಒಳ್ಳೆಯ ಸಮಯ. ನೀವು ಸಂಗಾತಿಗೆ ಉಡುಗೊರೆ, ಹೂ ಯಾವುದನ್ನೂ ನೀಡದೆ, ಸಮಯ ನೀಡಲೂ ಆಗ್ತಿಲ್ಲ ಎಂದಾದ್ರೆ ಒಂದು ಬಾರಿ ನಿಮ್ಮ ಮನಸ್ಸಿನ ಭಾವನೆ ಹೊರಗೆ ಹಾಕಿ.