BusinessSuccess: ಹೈಸ್ಕೂಲ್‌ ಡ್ರಾಪ್‌ ಔಟ್‌ ಹುಡುಗ ಸೈಬರ್‌ ಭದ್ರತಾ ಕಂಪೆನಿ ಸ್ಥಾಪಿಸಿ ಬೆಳೆದ ರೋಚಕತೆ

By Suvarna News  |  First Published Jul 18, 2023, 11:52 AM IST

ತೃಷ್ಣೀತ್‌ ಅರೋರಾ, ಸೈಬರ್‌ ಭದ್ರತೆ ವಲಯದಲ್ಲಿ ಕಂಪೆನಿಯೊಂದನ್ನು ಸ್ಥಾಪಿಸುವ ಮೂಲಕ ಜಗತ್ತೇ ತಮ್ಮೆಡೆಗೆ ನೋಡುವಂತೆ ಮಾಡಿದ್ದಾರೆ. ಕೇವಲ 19ನೇ ವಯಸ್ಸಿಗೆ ಸೈಬರ್‌ ಭದ್ರತೆಗೆ ಸಂಬಂಧಿಸಿದ ಕಂಪೆನಿ ಸ್ಥಾಪಿಸಿದ್ದ ತೃಷ್ಣೀತ್‌, ಇಂದು ಫೋರ್ಬ್ಸ್‌ ಪಟ್ಟಿಗೂ ಸೇರ್ಪಡೆಯಾಗಿದ್ದಾರೆ. ಇದೀಗ, ನೂರು ಕೋಟಿಗೂ ಅಧಿಕ ವಹಿವಾಟು ನಡೆಸುತ್ತಿದೆ ಇವರ ಕಂಪೆನಿ.
 


ಹೈಸ್ಕೂಲ್‌ ನಿಂದ ಡ್ರಾಪ್‌ ಔಟ್‌ ಆದಾಗ ಈತನ ದುರಾದೃಷ್ಟಕ್ಕೆ ಎಲ್ಲರೂ ಮರುಗಿದವರೇ. ಸಾಂಪ್ರದಾಯಿಕ ಶಿಕ್ಷಣದಿಂದ ದೂರವಾದಾಗ ಪಾಲಕರು ಸೇರಿದಂತೆ ಸಮೀಪದವರು ಹತಾಶೆಗೆ ಒಳಗಾದಂತೆ ವರ್ತಿಸಿದ್ದರು.  ಆದರೆ, ಈತ ಮಾತ್ರ ನಿರುಮ್ಮುಳವಾಗಿ ತನ್ನ ಹಾದಿಯಲ್ಲಿ ತಾನು ಸಾಗಿದ್ದ. ಪರಿಣಾಮವಾಗಿ, ಸೈಬರ್ ಭದ್ರತೆ ಕ್ಷೇತ್ರದಲ್ಲಿ ಇಂದು ತನ್ನದೇ ಛಾಪು ಮೂಡಿಸಿರುವ ಟಿಎಸಿ ಸೆಕ್ಯೂರಿಟಿ ಕಂಪೆನಿಯನ್ನು ಸ್ಥಾಪಿಸಿದ. ಈತ, ಕೇವಲ 23ನೇ ವಯಸ್ಸಿನಲ್ಲೇ ಭಾರತದ ಯುವ ಉದ್ಯಮಿಗಳ ಸಾಲಿನಲ್ಲಿ ಪ್ರಮುಖವಾಗಿ ನಿಂತಿರುವ ತೃಷ್ಣೀತ್‌ ಅರೋರಾ. ಯುವ ಉದ್ಯಮಿ ಮಾತ್ರವಲ್ಲ, ಬಿಲಿಯನೇರ್‌ ಸಾಲಿಗೆ ಕೂಡ ಸೇರ್ಪಡೆಯಾಗುವ ಮೂಲಕ ಸುಭದ್ರ ಕಂಪೆನಿಯ ಮಾಲೀಕರಾಗಿ ಹೊರಹೊಮ್ಮಿದ್ದಾರೆ. ಅಷ್ಟಕ್ಕೂ ಇವರು ತಮ್ಮದೇ ಕಂಪೆನಿ ಸ್ಥಾಪಿಸಿದ್ದು ಕೇವಲ 19ನೇ ವಯಸ್ಸಿನಲ್ಲಿ. ಟಿಎಸಿ ಸೆಕ್ಯೂರಿಟಿ (TAC Security) ಸಂಸ್ಥೆ 5 ವರ್ಷಗಳಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌, ಸಿಬಿಐ (CBI), ಅಮುಲ್ (Amul) ನಂತಹ ಘಟಾನುಘಟಿ ಗ್ರಾಹಕರನ್ನು ಹೊಂದುವಂತಾಗಿರುವುದರಲ್ಲಿ ಇವರ ಶ್ರಮವೇ ಅಧಿಕ. ರಿಸ್ಕ್‌ ಮತ್ತು ವಲ್ನರಾಬಿಲಿಟಿ ಮ್ಯಾನೇಜ್‌ ಮೆಂಟ್‌ (Risk and Vulnerability Management) ಕ್ಷೇತ್ರದ ಜಾಗತಿಕ ಕಂಪೆನಿಯಾಗಿರುವ ಟಿಎಸಿ ಸೆಕ್ಯೂರಿಟಿ ಮೂಲಕ ಇವರು ಮಾಡಿರುವ ಸಾಧನೆ (Achievement) ಅನನ್ಯ.

ಫೋರ್ಬ್ಸ್‌ (Forbes) ನಲ್ಲಿ ಸ್ಥಾನ
ತೃಷ್ಣೀತ್‌ ಅರೋರಾ (Trishneeth Arora). ಇತ್ತೀಚೆಗೆ ಫೋರ್ಬ್ಸ್‌ ಬಿಡುಗಡೆ ಮಾಡಿರುವ 40 ವಯೋಮಾನದೊಳಗಿನ ಯುವ ಉದ್ಯಮಿಗಳ (Young Entrepreneur) ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಹೈಸ್ಕೂಲ್‌ ಡ್ರಾಪ್‌ ಔಟ್‌ (School Dropout) ಹುಡುಗ ಇಂದು ಯುವ ಉದ್ಯಮಿಯಾಗಿ ಸಾಧನೆಯ ಹಾದಿಯಲ್ಲಿ ಸಾಗಿದ್ದಾರೆ. ಟಿಎಸಿ ಸೆಕ್ಯೂರಿಟಿ ಕಂಪೆನಿ ಅತ್ಯಾಧುನಿಕ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಕ ದತ್ತಾಂಶ ಭದ್ರತೆ ನೀಡುತ್ತಿದೆ.  

Tap to resize

Latest Videos

ಇಂಥಾ ಗಂಡನ ಜೊತೆ ಜೀವನ ಮಾಡುವುದು ತುಂಬಾ ಕಷ್ಟ; ಸುಧಾಮೂರ್ತಿ ಹೀಗೆ ಹೇಳಿದ್ಯಾಕೆ?

ರಿಪೇರಿ ಕೆಲಸದಿಂದ ಅನುಭವ
ಹೈಸ್ಕೂಲ್‌ ಬಿಟ್ಟ ಬಳಿಕ ತೃಷ್ಣೀತ್‌ ಹತಾಶರಾಗಿ ಕೈ ಚೆಲ್ಲಿ ಕೂರಲಿಲ್ಲ. ಬದಲಿಗೆ, ತಮ್ಮಲ್ಲಿರುವ ಅದ್ಭುತ ಕೋಡಿಂಗ್‌ (Coding) ಮತ್ತು ಹ್ಯಾಕಿಂಗ್‌ (Hacking) ಜ್ಞಾನವನ್ನೇ ಬಳಸಿಕೊಂಡು ಸೈಬರ್‌ ಸೆಕ್ಯೂರಿಟಿಗೆ ಸಂಬಂಧಿಸಿದ ಸಂಸ್ಥೆ ಸ್ಥಾಪಿಸುವ ನಿರ್ಧಾರ ಮಾಡಿದರು. ಆದರೆ, ಅದಕ್ಕೂ ಮುನ್ನ ಕ್ಷೇತ್ರಕ್ಕೆ ಸಂಬಂಧಿಸಿದ ಇನ್ನಿತರ ಪ್ರಾಯೋಗಿಕ ಅನುಭವ ಬೇಕಲ್ಲ, ಅದಕ್ಕಾಗಿ ವಿವಿಧ ಕೆಲಸಗಳನ್ನು ಮಾಡಿದರು. ಇವರು ಮಾಡಿದ ಕೆಲಸಗಳು ಯಾವುವು ಗೊತ್ತೇ? ಇಂಜಿನಿಯರ್‌ ಪದವಿ ಪಡೆದವರು ಸಹ ಮಾಡಲು ಹಿಂದೇಟು ಹಾಕುವಂತಹ ಕೆಲಸಗಳು. ಅವು ಕಂಪ್ಯೂಟರ್‌ ರಿಪೇರಿ (Computer Repair), ಫಿಕ್ಸಿಂಗ್‌, ವೈರಸ್‌ ನಿವಾರಣೆ ಮುಂತಾದ ಕೆಲಸಗಳ ಮೂಲಕವೇ ತಿಂಗಳಿಗೆ ಸರಿಸುಮಾರು 60 ಸಾವಿರ ರೂಪಾಯಿ ದುಡಿದರು. ಆಗ ಇವರಲ್ಲಿ ಈ ಕ್ಷೇತ್ರಕ್ಕೆ ಎಷ್ಟು ಮಹತ್ವವಿದೆ ಎನ್ನುವುದು ಗಮನಕ್ಕೆ ಬಂತು. ಸ್ವಂತ ಸಂಸ್ಥೆ (Company) ಸ್ಥಾಪಿಸಲು ಧೈರ್ಯವೂ ಮೂಡಿತು. 

Warren Buffett: ಕಾಫಿ ರೇಟ್ ನೋಡಿ ದಂಗಾದ ಕೋಟ್ಯಧಿಪತಿಯ ಪತ್ನಿ!

ಸಿಬಿಐಗೂ ಇವರದ್ದೇ ರಕ್ಷಣೆ 
ಸೈಬರ್‌ (Cyber) ಭದ್ರತೆ ಇಂದಿನ ದಿನಗಳಲ್ಲಿ ಎಷ್ಟು ಪ್ರಮುಖವಾಗಿದೆ ಎನ್ನುವುದು ಎಲ್ಲರ ಅನುಭವಕ್ಕೂ ಬಂದಿದೆ. ಮೊಬೈಲ್‌, ಕಂಪ್ಯೂಟರ್‌ ಗಳ ಮೂಲಕ ಎಲ್ಲ ಕೆಲಸವನ್ನೂ ಮಾಡುವ ಇಂದಿನ ದಿನಗಳಲ್ಲಿ ಚೂರೇ ಚೂರು ಯಾಮಾರಿದರೂ ಮಾಹಿತಿ ಸೈಬರ್‌ ಕಳ್ಳರ ಪಾಲಾಗುತ್ತದೆ. ದೊಡ್ಡ ಮೊತ್ತದ ಹಣ ಲೂಟಿಯಾಗುತ್ತದೆ. ದತ್ತಾಂಶ (Data) ಸೋರಿಕೆಯಾಗುತ್ತದೆ. ನಮ್ಮನಿಮ್ಮಂಥ ಸಾಮಾನ್ಯರೇ ಇದರ ಬಗ್ಗೆ ತಲೆಕೆಡಿಸಿಕೊಳ್ಳುವಾಗ ದೊಡ್ಡ ದೊಡ್ಡ ಸಂಸ್ಥೆಗಳಿಗೆ ತಮ್ಮ ಮಾಹಿತಿ ರಕ್ಷಿಸಿಕೊಳ್ಳುವುದು ಅದೆಷ್ಟು ದೊಡ್ಡ ಸವಾಲಾಗಬಹುದು ಎಂದು ಯೋಚಿಸಿ. ಅಂಥ ಸಂಸ್ಥೆಗಳಿಗೆ ಸೈಬರ್‌ ಭದ್ರತೆ ನೀಡುವುದೇ ತೃಷ್ಣೀತ್‌ ನೇತೃತ್ವದ ಟಿಎಸಿ ಸೆಕ್ಯೂರಿಟಿಯ ಕೆಲಸ. ಈಗಾಗಲೇ ರಿಲಯನ್ಸ್‌, ಅಮುಲ್‌ ಅಷ್ಟೇ ಏಕೆ? ಕೇಂದ್ರೀಯ ತನಿಖಾ ದಳ-ಸಿಬಿಐ ಗೆ ಸಂಬಂಧಿಸಿದ ಸೈಬರ್‌ ರಕ್ಷಣೆಯನ್ನೂ ಈ ಸಂಸ್ಥೆ ನೀಡುತ್ತಿದೆ. ಗುಜರಾತ್‌, ಪಂಜಾಬ್‌ ರಾಜ್ಯಗಳ ಸರ್ಕಾರಕ್ಕೆ ಐಟಿ ಸಲಹೆಗಾರನಾಗಿಯೂ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಸದ್ಯ ಇದರ ಮೌಲ್ಯ 134 ಕೋಟಿ ರೂಪಾಯಿ. ತೃಷ್ಣೀತ್‌ ಸಾಧನೆ ತಂತ್ರಜ್ಞಾನದಲ್ಲಿ ಅಪಾರ ಆಸಕ್ತಿ ಹಾಗೂ ಚುರುಕುತನ ಇರುವ ಟೀನೇಜ್‌ (Teenage) ಮಂದಿಗೆ ಪ್ರೇರಣಾದಾಯಿ.

click me!