ಮೂರು ದಿನಗಳ ಹಿಂದಷ್ಟೇ ಆನೆ ಹಿಂಡಿನಿಂದ ತಪ್ಪಿಸಿಕೊಂಡ ಮರಿಯಾನೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಹಳ ಪ್ರಯತ್ನ ಪಟ್ಟು ಮತ್ತೆ ತಾಯಿ ಮಡಿಲಿಗೆ ಸೇರಿಸಿದ್ದರು. ಹೀಗೆ ತಪ್ಪಿಸಿಕೊಂಡು ಹೋಗಿ ನಂತರ ಅಮ್ಮನ ಮಡಿಲು ಸೇರಿದ ಈ ಪುಟಾಣಿ ಮರಿಯಾನೆ ಅಮ್ಮನ ಮಡಿಲಿನಲ್ಲಿ ಮಲಗಿ ಸುಖವಾಗಿ ನಿದ್ರಿಸುತ್ತಿರುವ ಫೋಟೋ ಈಗ ವೈರಲ್ ಆಗಿದೆ.
ಮೂರು ದಿನಗಳ ಹಿಂದಷ್ಟೇ ಆನೆ ಹಿಂಡಿನಿಂದ ತಪ್ಪಿಸಿಕೊಂಡ ಮರಿಯಾನೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಹಳ ಪ್ರಯತ್ನ ಪಟ್ಟು ಮತ್ತೆ ತಾಯಿ ಮಡಿಲಿಗೆ ಸೇರಿಸಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದವು. ಈಗ ಹೀಗೆ ತಪ್ಪಿಸಿಕೊಂಡು ಹೋಗಿ ನಂತರ ಅಮ್ಮನ ಮಡಿಲು ಸೇರಿದ ಈ ಪುಟಾಣಿ ಮರಿಯಾನೆ ಅಮ್ಮನ ಮಡಿಲಿನಲ್ಲಿ ಮಲಗಿ ಸುಖವಾಗಿ ನಿದ್ರಿಸುತ್ತಿರುವ ಫೋಟೋವನ್ನು ಅರಣ್ಯ ಇಲಾಖೆ ಬಿಡುಗಡೆ ಮಾಡಿದ್ದು, ಈ ಅತೀ ಅಪರೂಪದ ರಮಣೀಯ ಚಿತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
ಅಮ್ಮನ ಮಡಿಲು ಸ್ವರ್ಗಕ್ಕಿಂತಲೂ ಮಿಗಿಲು ಎಂಬ ಮಾತಿದೆ. ಇದು ಮನುಷ್ಯರಿಗೆ ಮಾತ್ರವಲ್ಲ, ಪ್ರಾಣಿಗಳಿಗೂ ಅಮ್ಮನ ಮಡಿಲು ಬೆಚ್ಚನೆಯ ಆಹ್ಲಾದದ ಕಡಲು ಎಂಬುದಕ್ಕೆ ಈ ಫೋಟೋ ಸಾಕ್ಷಿಯಾಗಿದೆ. 3-4 ದಿನಗಳ ಹಿಂದೆ ಇದೇ ಆನೆಮರಿ ಹಿಂಡಿನಿಂದ ತಪ್ಪಿಸಿಕೊಂಡು ಒಂಟಿಯಾಗಿ ಆತಂಕದಿಂದ ಓಡಾಡುತ್ತಿತ್ತು. ಇದನ್ನು ಗಮನಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ತಜ್ಞರ ತಂಡ ಡ್ರೋನ್‌ನ ಸಹಾಯದಿಂದ ಆನೆಗಳ ಹಿಂಡು ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚಿ ಈ ಮರಿಯನ್ನು ಕರೆದುಕೊಂಡು ಹೋಗಿ ತಾಯಿಯ ಮಡಿಲಿಗೆ ಬಿಟ್ಟು ಬಂದಿದ್ದರು. ಅಲ್ಲದೇ ನಂತರ ಈ ತಾಯಿ ಆನೆ ಹಾಗೂ ಮರಿಯಾನೆಯ ಚಲನವಲನಗಳ ಪರಿಶೀಲನೆಯಲ್ಲಿ ತೊಡಗಿದ್ದರು. ಹೀಗಾಗಿ ಈ ಮುದ್ದಾದ ಅತೀ ಅಪರೂಪದ ಫೋಟೋ ಈಗ ಕ್ಯಾಮರಾದಲ್ಲಿ ಸೆರೆ ಆಗಿದೆ.
ಅಮ್ಮನಿಗಾಗಿ ಅಲೆದಾಡುತ್ತಿದ್ದ ಪುಟಾಣಿ ಮರಿಯಾನೆ: ಮತ್ತೆ ತಾಯಿ ಮಡಿಲು ಸೇರಿಸಿದ ಅರಣ್ಯ ಸಿಬ್ಬಂದಿ
ತಮಿಳುನಾಡಿನ ಅಣ್ಣಮಲೈ ಹುಲಿ ಸಂರಕ್ಷಿತಾರಣ್ಯ ವ್ಯಾಪ್ತಿಯಲ್ಲಿ ಬರುವ ಪೊಲ್ಲಾಚಿ ಎಂಬಲ್ಲಿ ಈ ಘಟನೆ ನಡೆದಿತ್ತು. ಆನೆಮರಿಯನ್ನು ತಾಯಿಯೊಂದಿಗೆ ಸೇರಿಸುವ ವೀಡಿಯೋವನ್ನು ಐಎಎಸ್ ಅಧಿಕಾರಿ, ಪರಿಸರ ಹವಾಮಾನ ಬದಲಾವಣೆ ಮತ್ತು ಅರಣ್ಯಗಳು, ತಮಿಳುನಾಡು ಸರ್ಕಾರ ಇದರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಪ್ರಿಯಾ ಸಾಹು ಅವರ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದರು. ಇದು ಉದ್ಯಮಿ ಆನಂದ್ ಮಹೀಂದ್ರ ಸೇರಿದಂತೆ ಸಾಕಷ್ಟು ಪ್ರಾಣಿಪ್ರಿಯರ ಗಮನವನ್ನು ಸೆಳೆದಿತ್ತು.
ಅದೇ ರೀತಿ ಈಗ ಅವರು ಈ ಪುಟ್ಟ ಮರಿಯಾನೆ ಅಮ್ಮನ ಮಡಿಲಲ್ಲಿ ಮಲಗಿ ನಿದ್ದೆಗೆ ಜಾರಿರುವ ಫೋಟೋವನ್ನು ತಮ್ಮ ಟ್ವಿಟ್ಟರ್ ಖಾತೆಯಿಂದ ಪೋಸ್ಟ್ ಮಾಡಿದ್ದಾರೆ. ಈ ಒಂದು ಫೋಟೋವೂ ಲಕ್ಷ ಪದಗಳಿಗೆ ಸಮಾನವಾಗಿದೆ. ತಾಯಿಯಿಂದ ದೂರಾಗಿ ರಕ್ಷಿಸಲ್ಪಟ್ಟ ಮರಿಯಾನೆ ಮತ್ತೆ ತನ್ನ ದೊಡ್ಡ ಹಿಂಡನ್ನು ಸೇರುವ ಮುನ್ನ ಅಮ್ಮನ ಸಾಂತ್ವಾನದ ತೋಳು ಸೇರಿ ಮಧ್ಯಾಹ್ನದ ಸುಖನಿದ್ದೆ ಮಾಡುತ್ತಿದೆ. ಅಣ್ಣಾಮಲೈನ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಎಲ್ಲೋ ಈ ಅಮ್ಮ ಮಗುವಿನ ಸುರಕ್ಷತೆಗಾಗಿ ಕಾವಲು ಕಾಯುತ್ತಿರುವ ಅರಣ್ಯ ಸಿಬ್ಬಂದಿ ಸೆರೆ ಹಿಡಿದ ದೃಶ್ಯ ಇದು ಎಂದು ಬರೆದುಕೊಂಡಿದ್ದಾರೆ ಸುಪ್ರಿಯಾ ಸಾಹು.
ಮಾನವೀಯತೆ ಮರೆತ ಮನುಜ..ತಾಯಿಯಿಂದ ಬೇರ್ಪಟ್ಟ ಮರಿಯಾನೆಗೆ ಕಲ್ಲೆಸೆದು ಹಿಂಸೆ
ಇದಕ್ಕೂ ಮೊದಲು ಆನೆಮರಿಯನ್ನು ರಕ್ಷಿಸಿದ್ದ ವೀಡಿಯೋವನ್ನು ಪೋಸ್ಟ್ ಮಾಡಿದ್ದ ಸುಪ್ರಿಯಾ ಸಾಹು ಅವರು, ತಮಿಳುನಾಡು ಅರಣ್ಯ ಇಲಾಖೆಯಲ್ಲಿ ವರ್ಷಾಂತ್ಯವು ಒಂದು ಹೃದಯ ಬೆಚ್ಚನೆಗೊಳಿಸುವ ಘಟನೆಗೆ ಸಾಕ್ಷಿಯಾಯ್ತು. ನಮ್ಮ ಅರಣ್ಯ ಇಲಾಖೆ ಸಿಬ್ಬಂದಿ ತಾಯಿಯಿಂದ ಹಾಗೂ ಆನೆ ಹಿಂಡಿನಿಂದ ಬೇರ್ಪಟ್ಟ ಆನೆಮರಿಯನ್ನು ಮರಳಿ ತಾಯಿಯ ಜೊತೆ ಸೇರಿಸಿದರು. ಅಣ್ಣಮಲೈ ಹುಲಿ ಸಂರಕ್ಷಿತಾರಣ್ಯ ವ್ಯಾಪ್ತಿಯಲ್ಲಿ ಬರುವ ಪೊಲ್ಲಾಚಿ ಈ ಅಪರೂಪದ ಘಟನೆಗೆ ಸಾಕ್ಷಿಯಾಯ್ತು. ಫೀಲ್ಡ್‌ನಲ್ಲಿದ್ದ ಅರಣ್ಯ ಸಿಬ್ಬಂದಿಯವರ ಕಣ್ಣಿಗೆ ಬಿದ್ದ ವೇಳೆ ಈ ಆನೆಮರಿ ತನ್ನ ತಾಯಿಗಾಗಿ ಹುಡುಕಾಟ ನಡೆಸುತ್ತಿತ್ತು.
ಮಡಿಕೇರಿ: ಕರುಳ ಬಳ್ಳಿಯ ತಾಯಿ ಜೊತೆ ಸೇರಿಸಿದ ಅರಣ್ಯ ಇಲಾಖೆ ಸಿಬ್ಬಂದಿ..!
ಈ ಹಿನ್ನೆಲೆಯಲ್ಲಿ ಈ ಪುಟ್ಟ ಆನೆ ಮರಿಯನ್ನು ತಾಯಿಯ ಜೊತೆ ಸೇರಿಸುವ ಸಲುವಾಗಿ ಡ್ರೋನ್ ಹಾಗೂ ನುರಿತ ಅರಣ್ಯ ವೀಕ್ಷಕರ ಸಹಾಯದಿಂದ ಆನೆಗಳಿದ್ದ ಹಿಂಡನ್ನು ಪತ್ತೆ ಮಾಡಿ. ಈ ಪುಟ್ಟ ಆನೆಯನ್ನು ಅದರ ತಾಯಿಯ ಜೊತೆ ಸೇರಿಸಲಾಯ್ತು. ಇದರ ಜೊತೆ ಅರಣ್ಯ ಇಲಾಖೆಯ ತಂಡ ಇದರ ವೀಕ್ಷಣೆಯಲ್ಲಿ ತೊಡಗಿದೆ. ಆನೆ ಮರಿಯನ್ನು ತಾಯಿಯ ಜೊತೆ ಸೇರಿಸಿದ ಮುಖ್ಯ ಅರಣ್ಯಾಧಿಕಾರಿ ರಾಮಸುಬ್ರಮಣಿಯನ್, ಭಾರ್ಗವ್ ತೇಜ್, ರೇಂಜ್ ಆಫೀಸರ್ ಮಣಿಕಂಠನ್ ಹಾಗೂ ಇಡೀ ತಂಡಕ್ಕೆ ಧನ್ಯವಾದಗಳು ಎಂದು ಬರೆದುಕೊಂಡು ಅರಣ್ಯ ತಂಡಕ್ಕೆ ಧನ್ಯವಾದ ತಿಳಿಸಿದ್ದರು.
ಈ ವೀಡಿಯೋ ನೋಡಿದ ಉದ್ಯಮಿ ಆನಂದ್ ಮಹೀಂದ್ರ ಈ ಬಗ್ಗೆ ಒಂದು ಡಾಕ್ಸುಮೆಂಟರಿ ಮಾಡುವಂತೆ ಸುಪ್ರಿಯಾ ಸಾಹು ಅವರಿಗೆ ಟ್ವಿಟ್ಟರ್‌ನಲ್ಲಿ ಮನವಿ ಮಾಡಿದ್ದರು.
When a picture is worth a million words ❤️ the rescued baby elephant after uniting with the mother takes an afternoon nap in her mother's comforting arms before moving again with the big herd. Picture taken by Forest field staff somewhere in Anamalai Tiger reserve who are keeping… https://t.co/EedfkKjLHj pic.twitter.com/ttqafSudyM
— Supriya Sahu IAS (@supriyasahuias)