ಬೇರ್ಪಟ್ಟ ಆನೆ ಮರಿಯೊಂದನ್ನು ಅರಣ್ಯ ಸಿಬ್ಬಂದಿ ತಾಯಿ ಆನೆಯ ಜೊತೆ ಸೇರಿಸಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಮಹೀಂದ್ರಾ ಗ್ರೂಪ್‌ನ ಆನಂದ್ ಮಹೀಂದ್ರ ಕೂಡ ಆನೆಮರಿಯನ್ನು ತಾಯಿ ಜೊತೆ ಸೇರಿಸಿದ ಅರಣ್ಯ ಇಲಾಖೆ ಸಿಬ್ಬಂದಿಗೆ ಟ್ವಿಟ್ಟರ್‌ನಲ್ಲಿ ಧನ್ಯವಾದ ತಿಳಿಸಿದ್ದಾರೆ.
ಕಾಡಾನೆಗಳು ತಮ್ಮ ಮರಿಗಳ ಬಗ್ಗೆ ಬಹಳ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತವೆ. ಗುಂಪಿನಲ್ಲೊಂದು ಮರಿಯಾನೆ ಇದೆ ಎಂದಾದರೆ ಆ ಗುಂಪಿನ ಹಿರಿಯ ಆನೆಗಳು ಬಹಳಷ್ಟು ಜಾಗೃತವಾಗಿರುತ್ತವೆ. ಮರಿಗಳನ್ನು ದೂರ ಬಿಡದೇ ತಮ್ಮ ಗುಂಪಿನ ಮಧ್ಯದಲ್ಲಿ ಇರಿಸಿಕೊಂಡು ಸಾಗುತ್ತವೆ. ಆದರೂ ಕೆಲವೊಮ್ಮೆ ಮರಿಯಾನೆಗಳು ತಾಯಿಯಿಂದ ದುರಾದೃಷ್ಟವಶಾತ್ ಬೇರ್ಪಡುತ್ತವೆ. ಹೀಗೆ ಬೇರ್ಪಟ್ಟ ಆನೆ ಮರಿಯೊಂದನ್ನು ಅರಣ್ಯ ಸಿಬ್ಬಂದಿ ತಾಯಿ ಆನೆಯ ಜೊತೆ ಸೇರಿಸಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಮಹೀಂದ್ರಾ ಗ್ರೂಪ್‌ನ ಆನಂದ್ ಮಹೀಂದ್ರ ಕೂಡ ಆನೆಮರಿಯನ್ನು ತಾಯಿ ಜೊತೆ ಸೇರಿಸಿದ ಅರಣ್ಯ ಇಲಾಖೆ ಸಿಬ್ಬಂದಿಗೆ ಟ್ವಿಟ್ಟರ್‌ನಲ್ಲಿ ಧನ್ಯವಾದ ತಿಳಿಸಿದ್ದಾರೆ.
ಈ ವೀಡಿಯೋವನ್ನು ಐಎಎಸ್ ಅಧಿಕಾರಿ, ಪರಿಸರ ಹವಾಮಾನ ಬದಲಾವಣೆ ಮತ್ತು ಅರಣ್ಯಗಳು, ತಮಿಳುನಾಡು ಸರ್ಕಾರ ಇದರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಪ್ರಿಯಾ ಸಾಹು ಅವರ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ತಮಿಳುನಾಡು ಅರಣ್ಯ ಇಲಾಖೆಯಲ್ಲಿ ವರ್ಷಾಂತ್ಯವು ಒಂದು ಹೃದಯ ಬೆಚ್ಚನೆಗೊಳಿಸುವ ಘಟನೆಗೆ ಸಾಕ್ಷಿಯಾಯ್ತು. ನಮ್ಮ ಅರಣ್ಯ ಇಲಾಖೆ ಸಿಬ್ಬಂದಿ ತಾಯಿಯಿಂದ ಹಾಗೂ ಆನೆ ಹಿಂಡಿನಿಂದ ಬೇರ್ಪಟ್ಟ ಆನೆಮರಿಯನ್ನು ಮರಳಿ ತಾಯಿಯ ಜೊತೆ ಸೇರಿಸಿದರು. ಅಣ್ಣಮಲೈ ಹುಲಿ ಸಂರಕ್ಷಿತಾರಣ್ಯ ವ್ಯಾಪ್ತಿಯಲ್ಲಿ ಬರುವ ಪೊಲ್ಲಾಚಿ ಈ ಅಪರೂಪದ ಘಟನೆಗೆ ಸಾಕ್ಷಿಯಾಯ್ತು. ಫೀಲ್ಡ್‌ನಲ್ಲಿದ್ದ ಅರಣ್ಯ ಸಿಬ್ಬಂದಿಯವರ ಕಣ್ಣಿಗೆ ಬಿದ್ದ ವೇಳೆ ಈ ಆನೆಮರಿ ತನ್ನ ತಾಯಿಗಾಗಿ ಹುಡುಕಾಟ ನಡೆಸುತ್ತಿತ್ತು.
ಈ ಹಿನ್ನೆಲೆಯಲ್ಲಿ ಈ ಪುಟ್ಟ ಆನೆ ಮರಿಯನ್ನು ತಾಯಿಯ ಜೊತೆ ಸೇರಿಸುವ ಸಲುವಾಗಿ ಡ್ರೋನ್ ಹಾಗೂ ನುರಿತ ಅರಣ್ಯ ವೀಕ್ಷಕರ ಸಹಾಯದಿಂದ ಆನೆಗಳಿದ್ದ ಹಿಂಡನ್ನು ಪತ್ತೆ ಮಾಡಿ. ಈ ಪುಟ್ಟ ಆನೆಯನ್ನು ಅದರ ತಾಯಿಯ ಜೊತೆ ಸೇರಿಸಲಾಯ್ತು. ಇದರ ಜೊತೆ ಅರಣ್ಯ ಇಲಾಖೆಯ ತಂಡ ಇದರ ವೀಕ್ಷಣೆಯಲ್ಲಿ ತೊಡಗಿದೆ. ಆನೆ ಮರಿಯನ್ನು ತಾಯಿಯ ಜೊತೆ ಸೇರಿಸಿದ ಮುಖ್ಯ ಅರಣ್ಯಾಧಿಕಾರಿ ರಾಮಸುಬ್ರಮಣಿಯನ್, ಭಾರ್ಗವ್ ತೇಜ್, ರೇಂಜ್ ಆಫೀಸರ್ ಮಣಿಕಂಠನ್ ಹಾಗೂ ಇಡೀ ತಂಡಕ್ಕೆ ಧನ್ಯವಾದಗಳು ಎಂದು ಬರೆದುಕೊಂಡು ಅರಣ್ಯ ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ ಸುಪ್ರಿಯಾ ಸಾಹು. ಜೊತೆಗೆ ಮೂರು ವೀಡಿಯೋಗಳನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಆನೆ ಮರಿಯನ್ನು ತಾಯಿಯೊಂದಿಗೆ ಸೇರಿಸಲು ಹಗ್ಗ ಕಟ್ಟಿ ಕರೆದುಕೊಂಡು ಹೋಗುತ್ತಿರುವ ದೃಶ್ಯವಿದೆ. ತನ್ನ ಮುಂದೆ ಹೋಗುತ್ತಿರುವ ಜನರ ಹಿಂದೆ ಪುಟ್ಟ ಮರಿ ಏನು ಅರಿಯದೇ ಓಡುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.
ಸುಪ್ರಿಯಾ ಸಾಹು ಅವರ ಪೋಸ್ಟ್‌ಗೆ ಆನಂದ್ ಮಹೀಂದ್ರ ಅವರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದು ಸುಪ್ರಿಯಾ ಸಾಹು ಸೇರಿದಂತೆ ಅರಣ್ಯ ಇಲಾಖೆಗೆ ಧನ್ಯವಾದ ತಿಳಿಸಿದ್ದಾರೆ. ಕರುಣೆ ಮತ್ತು ತಂತ್ರಜ್ಞಾನವು ಮಾನವರು ಈ ಗ್ರಹದಲ್ಲಿ ಶಾಂತಿಯುತವಾಗಿ ಸಹಬಾಳ್ವೆ ನಡೆಸಲು ಸಹಾಯ ಮಾಡುವ ಪ್ರಬಲ ಸಂಯೋಜನೆಯಾಗಿದೆ ಎಂದು ನೀವು ಪ್ರದರ್ಶಿಸಿದ್ದೀರಿ. ಈ ಅದ್ಭುತ ಕಥೆಯಿಂದ ಕಿರುಚಿತ್ರವನ್ನು ಮಾಡಿ, ದಯವಿಟ್ಟು ಎಂದು ಬರೆದಿದ್ದಾರೆ. ನೆಟ್ಟಿಗರು ಕೂಡ ತಾಯಿಯಿಂದ ಬೇರಾದ ಪುಟ್ಟ ಆನೆಯನ್ನು ಮತ್ತೆ ತಾಯಿ ಜೊತೆ ಸೇರಿಸಿದ ಅರಣ್ಯ ಇಲಾಖೆ ಸಿಬ್ಬಂದಿಗೆ ಧನ್ಯವಾದ ತಿಳಿಸಿದ್ದಾರೆ. ಇದೊಂದು ಅದ್ಭುತ ಕೆಲಸ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ವನ್ಯಜೀವಿಗಳಿಗಾಗಿ ಮಾಡುತ್ತಿರುವ ಈ ಕಠಿಣ ಕೆಲಸ ನಿಜಕ್ಕೂ ಅದ್ಭುತ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
