ಮದುವೆಯಾದ್ಮೇಲೆ ಜೀವನ ಮುಗಿತು ಅಂದುಕೊಂಡಿದ್ರೆ ಇಲ್ಲೊಂದು ಖುಷಿ ಸುದ್ದಿಯಿದೆ. ಮದುವೆ ತಲೆನೋವಿನ ಕೆಲಸ ಅಂದುಕೊಂಡಿದ್ರೆ ನಿಮ್ಮ ಆಲೋಚನೆ ಬದಲಿಸಿ. ವಿವಾಹಿತರು ಅವಿವಾಹಿತರಿಗಿಂತ ಹೆಚ್ಚು ಬದುಕ್ತಾರಂತೆ. ಅಧ್ಯಯನವೊಂದು ಈ ಬಗ್ಗೆ ಆಸಕ್ತಿದಾಯಕ ಮಾಹಿತಿ ನೀಡಿದೆ.
ಮದುವೆಯಾಗಿ ಜೀವನ ಹಾಳ್ಮಾಡಿಕೊಳ್ಳಬೇಡಿ. ಮದುವೆ ಒಂದು ಬಂಧನ ಅಂತಾ ಹೇಳೋರನ್ನು ನೀವು ಕೇಳಿರ್ತೀರಾ. ಮದುವೆಯಾದ ಕೆಲವರು ಗಂಟೆಗಟ್ಟಲೆ ಉಪದೇಶ ನೀಡ್ತಾರೆ. ಮದುವೆಯಾದ್ರೆ ಏನೆಲ್ಲ ಸಮಸ್ಯೆಯಾಗುತ್ತೆ ಅಂತಾ ಬುದ್ಧಿವಾದ ಹೇಳ್ತಾರೆ. ಆದ್ರೆ ಇದ್ಯಾವುದೂ ಎಲ್ಲರಿಗೂ ಆಗುವಂತಹ ಸಮಸ್ಯೆಯಲ್ಲ. ಕೆಲ ಮಂದಿಗೆ ಕುಟುಂಬದ ಜವಾಬ್ದಾರಿ ಹೊತ್ತುಕೊಳ್ಳೋದು ಇಷ್ಟವಾಗೋದಿಲ್ಲ. ಹಾಗಾಗಿ ಅವರು ಮದುವೆಯೇ ಬೇಡ ಎನ್ನುವ ತೀರ್ಮಾನಕ್ಕೆ ಬರ್ತಾರೆ. ಮದುವೆಯಾದವರು ಈ ಬಗ್ಗೆ ಹೇಳೋದನ್ನು ಕೇಳಿ, ಅವಿವಾಹಿತರಿಗೆ ಮದುವೆ ಬಗ್ಗೆಯೇ ಭಯ ಶುರುವಾಗುತ್ತದೆ. ಆದ್ರೆ ಮದುವೆ ಬಗ್ಗೆ ನಡೆದ ಅಧ್ಯಯನವೊಂದು ಮದುವೆ ಬಗ್ಗೆ ನಮ್ಮಲ್ಲಿದ್ದ ಕಲ್ಪನೆಯನ್ನು ಬದಲಿಸಿದೆ.
ಇತ್ತೀಚಿಗೆ ನಡೆದ ಅಧ್ಯಯನ (Study) ದಲ್ಲಿ ಮದುವೆ ದೀರ್ಘ ಮತ್ತು ಆರೋಗ್ಯ (Health) ಕರ ಜೀವನಕ್ಕೆ ಕಾರಣವೆಂದು ಉಲ್ಲೇಖಿಸಲಾಗಿದೆ. ಮದುವೆ (Marriage) ಯಾಗುವ ಮೂಲಕ ಒಬ್ಬ ವ್ಯಕ್ತಿಯು ಇತರರಿಗಿಂತ ಹೆಚ್ಚು ಕಾಲ ಬದುಕುತ್ತಾನೆ ಎಂಬ ವಿಷ್ಯ ಹೊರಬಿದ್ದಿದೆ. ನಾವಿಂದು ಮದುವೆಗೆ ಸಂಬಂಧಿಸಿದಂತೆ ಅಧ್ಯಯನದಲ್ಲಿ ಏನೆಲ್ಲ ಹೇಳಲಾಗಿದೆ ಎಂಬುದನ್ನು ನಿಮಗೆ ಹೇಳ್ತೇವೆ.
ಈ ರಾಶಿಯವರು ಮನೆಯ ಪಕ್ಕದಲ್ಲಿರುವ ವ್ಯಕ್ತಿಯನ್ನೇ ಮದುವೆಯಾಗ್ತಾರೆ!
ವಿವಾಹಿತೆಯರ ಮೇಲೆ ನಡೆದಿದೆ ಅಧ್ಯಯನ : ಗ್ಲೋಬಲ್ ಎಪಿಡೆಮಿಯಾಲಜಿಯಲ್ಲಿ ಅಧ್ಯಯನದ ವರದಿ ಪ್ರಕಟವಾಗಿದೆ. ವಿವಾಹಿತ ಮಹಿಳೆಯರು ಮತ್ತು ಅವಿವಾಹಿತ ಮಹಿಳೆಯರ ಸಾವಿನ ಅವಧಿಯನ್ನು ಇಲ್ಲಿ ಪತ್ತೆ ಮಾಡಲಾಗಿದೆ. ವಿವಾಹಿತ ಮಹಿಳೆಯರಲ್ಲಿ ಸಾವಿನ ಅಪಾಯವು ಎಂದಿಗೂ ಮದುವೆಯಾಗದ ಮಹಿಳೆಯರಿಗಿಂತ ಶೇಕಡಾ 35 ರಷ್ಟು ಕಡಿಮೆಯಾಗಿರುತ್ತದೆ ಎಂಬುದು ಕಂಡು ಬಂದಿದೆ. ಈ ಅಧ್ಯಯನದಲ್ಲಿ, 11,830 ಅಮೇರಿಕನ್ ಮಹಿಳಾ ದಾದಿಯರನ್ನು ಅಧ್ಯಯನಕ್ಕೆ ತೆಗೆದುಕೊಳ್ಳಲಾಗಿದೆ. ಇನ್ನು ವಿಚ್ಛೇದಿತ ಮಹಿಳೆಯರು ಕೂಡ ದೀರ್ಘಕಾಲ ಸಂಸಾರ ನಡೆಸಿದ ಮಹಿಳೆಯರಿಗಿಂತ ಬೇಗ ಸಾವನ್ನಪ್ಪುತ್ತಾರೆಂದು ವರದಿಯಲ್ಲಿ ಹೇಳಲಾಗಿದೆ. ವಿಚ್ಛೇದಿತ ಮಹಿಳೆಯರ ಸಾವಿನ ಅಪಾಯ, ವಿವಾಹಿತ ಮಹಿಳೆಯರಿಗಿಂತ ಶೇಕಡಾ 19 ರಷ್ಟು ಹೆಚ್ಚಾಗಿದೆ ಎಂದು ಈ ಅಧ್ಯಯನದಲ್ಲಿ ಬೆಳಕಿಗೆ ಬಂದಿದೆ.
ವಿವಾಹಿತ ಪುರುಷರ ಬಗ್ಗೆ ಅಧ್ಯಯನ ಏನು ಹೇಳುತ್ತೆ? : ಅಮೆರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿ ಪುರುಷರ ಜೀವಿತಾವಧಿ ಬಗ್ಗೆಯೂ ಅಧ್ಯಯನ ನಡೆಸಿದೆ. ಈ ಅಧ್ಯಯನದ ಪ್ರಕಾರ, ವಿವಾಹಿತ ಪುರುಷರು ಎಂದಿಗೂ ಮದುವೆಯಾಗದ ಪುರುಷರಿಗಿಂತ ಹೆಚ್ಚು ಮತ್ತು ಆರೋಗ್ಯಕರವಾಗಿ ಬದುಕುತ್ತಾರೆ ಎನ್ನಲಾಗಿದೆ. ಈ ಅಧ್ಯಯನದಲ್ಲಿ 45-84 ವರ್ಷ ವಯಸ್ಸಿನ 6800 ಅಮೇರಿಕನ್ ಪುರುಷರ ಅಧ್ಯಯನ ನಡೆಸಲಾಗಿದೆ. ವಿವಾಹಿತ ಪುರುಷರಿಗಿಂತ ಅವಿವಾಹಿತ ಪುರುಷರು ಸಾವನ್ನಪ್ಪುವ ಸಾಧ್ಯತೆ ಶೇಕಡಾ 2.2 ಪಟ್ಟು ಹೆಚ್ಚು ಎಂಬುದು ಇಲ್ಲಿ ಪತ್ತೆಯಾಗಿದೆ.
Parenting Tips: ಮಕ್ಕಳ ಕೆಟ್ಟ ವರ್ತನೆ ಸರಿಪಡಿಸೋದು ಹೇಗೆ?
ವಿವಾಹಿತರಲ್ಲಿ ಈ ರೋಗದ ಅಪಾಯ ಕಡಿಮೆ : ವಿವಾಹಿತರಿಗೆ ಹೃದ್ರೋಗ, ಖಿನ್ನತೆ, ಒಂಟಿತನ, ಬುದ್ಧಿಮಾಂದ್ಯತೆ, ಸಕ್ಕರೆ, ಚರ್ಮದ ಕ್ಯಾನ್ಸರ್ ಬರುವ ಅಪಾಯ ಬಹಳ ಕಡಿಮೆ ಎಂಬುದು ಪತ್ತೆಯಾಗಿದೆ. ವಿವಾಹಿತರು ತಮ್ಮ ಆರೋಗ್ಯದ ಬಗ್ಗೆ ಉತ್ತಮ ಜೀವನಶೈಲಿಯನ್ನು ಅನುಸರಿಸುಸುತ್ತಾರೆ. ಇದೇ ಅವರು ಆರೋಗ್ಯವಾಗಿರಲು ಕಾರಣ. ಅದೇ ಒಂಟಿ ವ್ಯಕ್ತಿಗಳು ಉತ್ತಮ ಜೀವನ ಶೈಲಿಯನ್ನು ಅನುಸರಿಸುವುದು ಕಡಿಮೆ ಎನ್ನುತ್ತದೆ ಅಧ್ಯಯನ.
ಮದುವೆಯ ಅನಾನುಕೂಲಗಳು : ಮದುವೆಯಾಗೋದ್ರಿಂದ ಈ ಎಲ್ಲ ಲಾಭವಿದೆ ನಿಜ. ಆದ್ರೆ ಮದುವೆ ಬಗ್ಗೆ ಸರಿಯಾದ ಅರ್ಥ ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ. ಮದುವೆ ಕೇವಲ ಒಂಟಿಯಿಂದ ಜಂಟಿಯಾಗುವುದು, ವಂಶಾಭಿವೃದ್ಧಿಗೆ ಮಾತ್ರ ಸೀಮಿತವೆಂದುಕೊಳ್ಳುವವರು ಹೆಚ್ಚು. ಇದು ವೃತ್ತಿ ಜೀವನವನ್ನು ಮತ್ತಷ್ಟು ಉತ್ತಮಗೊಳಿಸುವ, ಗಳಿಕೆಯನ್ನು ಹೆಚ್ಚಿಸುವ ಹಾಗೂ ಭಾವನಾತ್ಮಕವಾಗಿ, ದೈಹಿಕವಾಗಿ ಸದೃಢಗೊಳಿಸುವ ಶಕ್ತಿ ಹೊಂದಿದೆ. ಜನರು ಇದನ್ನು ಮರೆಯುತ್ತಾರೆ. ಸಂತೋಷ ಬಂದಾಗ ಅದನ್ನು ಸ್ವೀಕರಿಸುವ ಜನರು ಸವಾಲನ್ನು ಹೊಣೆ ಎಂದುಕೊಳ್ತಾರೆ. ಆಗ ದಾಂಪತ್ಯ ರುಚಿ ಕಳೆದುಕೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ತಮ್ಮ ಜೀವನವನ್ನು ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಇದ್ರಿಂದಾಗಿ ಅವರು ಮದುವೆಯಿಂದ ದೂರ ಓಡುತ್ತಾರೆ.