
ಭೋಪಾಲ್ (ಸೆ.21) ವರ್ಷಗಳ ಕಾಲ ಪ್ರೀತಿಸಿದ ಜೋಡಿ ಬಳಿಕ ಕುಟುಂಬಸ್ಥರು, ಆಪ್ತರನ್ನು ಒಪ್ಪಿಸಿ ಮದುವೆಯಾಗಿದ್ದಾರೆ. ಮಕ್ಕಳ ಪ್ರೀತಿಗೆ ಪೋಷಕರು ಖುಷಿಯಿಂದ ಹರಸಿ ಮದುವೆ ಮಾಡಿದ್ದಾರೆ. ನವ ಜೋಡಿಯ ಸಂಸಾರ ಆರಂಭಗೊಂಡಿದೆ. ಮದುವೆಯಾಗಿ ಕೆಲ ತಿಂಗಳಲ್ಲೇ ಇವರ ಸಂಸಾರದಲ್ಲಿ ತಾಪತ್ರಯ ಶುರುವಾಗಿದೆ. ಜಗಳ, ವೈಮನಸ್ಸು ಹೆಚ್ಚಾಗತೊಡಗಿದೆ. ಮದುವೆಯಾದ ಎಂಟೇ ತಿಂಗಳಿಗೆ ಈ ನವ ಜೋಡಿ ವಿಚ್ಚೇದನಕ್ಕಾಗಿ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದೆ. ಇವರಿಬ್ಬರ ಸುಂದರ ಸಂಸಾರಕ್ಕೆ ಹುಳಿ ಹಿಂಡಿದ್ದು ಅತ್ತೆ ಮಾವ, ಸಂಬಂಧಿಕರು ಯಾರೂ ಅಲ್ಲ. ಇವರ ಮುದ್ದಿನ ಸಾಕು ಪ್ರಾಣಿಗಳಾದ ನಾಯಿ ಹಾಗೂ ಬೆಕ್ಕು.
ಮಧ್ಯಪ್ರದೇಶದಲ್ಲಿ ಭೋಪಾಲದಲ್ಲಿ ಈ ಘಟನೆ ನಡೆದಿದೆ. ಭೋಪಾಲದಲ್ಲಿ ವಾಸವಿರುವ ಈ ಜೋಡಿ ಇದೀಗ ಕೋರ್ಟ್ ಮೆಟ್ಟೆಲೇರಿದೆ. ಮದುವೆಯಾದ ಬಳಿಕ ಎಲ್ಲವೂ ಸರಿಯಾಗಿಯೇ ಇತ್ತು. ಇಬ್ಬರು ಪ್ರೀತಿಸಿ ಮದುವೆಯಾದ ಜೋಡಿ. ಹೀಗಾಗಿ ಪರಸ್ಪರ ಇಬ್ಬರಿಗೂ ತಮ್ಮ ಇಷ್ಟ, ಕಷ್ಟಗಳು ಎಲ್ಲವೂ ತಿಳಿದಿತ್ತು. ಆದರೆ ಸುಂದರ ಸಂಸಾರಕ್ಕೆ ನಾಯಿ, ಬೆಕ್ಕು ಮೀನು ಅಡ್ಡಿಯಾಗಿದೆ. ಇಬ್ಬರು ಪ್ರಾಣಿ ಪ್ರೇಮಿಗಳು. ಮದುವೆಗೂ ಮೊದಲೇ ಈತ ನಾಯಿ, ಮೊಲ ಹಾಗೂ ಅಕ್ವೇರಿಯಂ ಮೀನು ಸಾಕಿದ್ದ. ಇತ್ತ ಈಕೆ ಕೂಡ ಮದುವೆಗೂ ಮೊದಲೇ ಬೆಕ್ಕು ಸಾಕಿದ್ದಳು.
ಮದುವೆಗೂ ಮೊದಲೇ ಇಬ್ಬರಿಗೂ ತಮ್ಮ ಸಾಕು ಪ್ರಾಣಿಗಳ ಅರಿವಿತ್ತು. ಹೀಗಾಗಿ ಸಾಕು ಪ್ರಾಣಿಗಳನ್ನು ಇಬ್ಬರು ಚೆನ್ನಾಗಿ ನೋಡಿಕೊಳ್ಳುವ ಮಾತಾಗಿತ್ತು. ಮದುವೆಯಾಗಿ ಗಂಡನ ಮನೆಗೆ ಬರುವಾಗ ಈಕೆ ತನ್ನ ಉತ್ತರ ಪ್ರದೇಶದ ಮನೆಯಿಂದ ಸಾಕಿದ್ದ ಬೆಕ್ಕನ್ನೂ ಕರೆದುಕೊಂಡು ಬಂದಿದ್ದಳು.
ಪತ್ನಿ ಹೇಳುವ ಪ್ರಕಾರ, ತನ್ನ ಸಾಕು ಪ್ರಾಣಿ ಬೆಕ್ಕನ್ನು ಗಂಡನ ನಾಯಿ ಬೊಗಳಿ ಹೆದರಿಸುತ್ತಿದೆ. ಹಲವು ಬಾರಿ ದಾಳಿ ಮಾಡಲು ಬರುತ್ತಿದೆ. ಇದರಿಂದ ಬೆಕ್ಕು ಭಯಗೊಂಡಿದೆ. ಹಲವು ಬಾರಿ ಆಹಾರ ತಿನ್ನಲು ಭಯಪಡುತ್ತಿದೆ. ಇದು ನನಗೆ ತೀವ್ರ ಹಿಂಸೆಯಾಗಿದೆ. ಬೆಕ್ಕಿಗೆ ನೋವಾದರೂ ನನಗೂ ನೋವಾಗುತ್ತದೆ ಎಂದಿದ್ದಾಳೆ. ಇತ್ತ ಪತಿ, ಆರೋಪ ಎಂದರೆ, ಪತ್ನಿಯ ಬೆಕ್ಕು ಅಕ್ವೇರಿಯಂ ಫಿಶ್ ಟ್ಯಾಂಕ್ ಬಳಿ ಕಾದು ಕುಳಿತಿರುತ್ತದೆ. ಮೀನು ಹಿಡಿಯುವ ಪ್ರಯತ್ನ ಮಾಡಿದೆ. ಜೊತೆಗೆ ನಾಯಿ ಮೇಲೂ ದಾಳಿ ಮಾಡಲು ಮುಂದಾಗುತ್ತಿದೆ ಎಂದಿದ್ದಾರೆ.
ನಾಯಿ ಬೆಕ್ಕು, ಹಾಗೂ ಮೀನಿನಿಂದ ಇಬ್ಬರ ಜಗಳ ತಾರಕಕ್ಕೇರಿದೆ. ಇಷ್ಟೇ ಅಲ್ಲ ಪ್ರತಿ ದಿನ ಮನೆಯಲ್ಲಿ ರಂಪಾಟವಾಗುತ್ತಿತ್ತು. ಹೀಗೆ ಹೋದರೆ ಸಂಸಾರ ನಡೆಸಲು ಸಾಧ್ಯವಿಲ್ಲ ಎಂದು ಇಬ್ಬರು ಡಿವೋರ್ಸ್‌ಗೆ ಅರ್ಜಿ ಹಾಕಿದ್ದಾರೆ. ಮದುವೆಯಾಗಿ ಕೇವಲ 8 ತಿಂಗಳಿಗೆ ವಿಚ್ಚೇದನಕ್ಕೆ ಅರ್ಜಿ ಹಾಕಿದ್ದಾರೆ. ಇವರ ಅರ್ಜಿ ನೋಡಿದ ನ್ಯಾಯಾಧೀಶರು ಗಾಬರಿಯಾಗಿದ್ದಾರೆ. ಇವರ ಮದುವೆಯಾಗಿ ಕೇವಲ 8 ತಿಂಗಳು ಆಗಿದೆ. ಜೊತೆಗೆ ಇವರ ಆರೋಪಗಳು ಪಕ್ವವಿಲ್ಲದಂತಿದೆ. ಹೀಗಾಗಿ ಕೌನ್ಸಿಲಿಂಗ್ ಸೂಚಿಸಲಾಗಿದೆ. ಅಕ್ಟೋಬರ್‌ನಲ್ಲಿ ಮುಂದಿನ ವಿಚಾರಣೆ ನಡೆಯಲಿದೆ ಎಂದಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.