
ಬ್ರಿಟನ್‌ನಲ್ಲಿ ಅತೀ ವಿರಳ ಹಾಗೂ ಆಶ್ಚರ್ಯಕರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಒಂದೇ ತಾಯಿಯ ಗರ್ಭದಿಂದ ಏಕಕಾಲದಲ್ಲಿ ಜನಿಸಿದ ಇಬ್ಬರು ಅವಳಿ ಸಹೋದರಿಯರ ಡಿಎನ್ಎ (DNA) ಪರೀಕ್ಷೆ ನಡೆಸಿದಾಗ, ಅವರಿಬ್ಬರ ತಂದೆ ಬೇರೆ ಬೇರೆ ಎಂಬ ಅಘಾತಕಾರಿ ಸತ್ಯ ಬಯಲಾಗಿದೆ. ವೈದ್ಯಕೀಯ ಲೋಕದಲ್ಲಿ ಇದು ಅತ್ಯಂತ ಅಪರೂಪದ ಘಟನೆಯಾಗಿದೆ.
ಮಿಶೆಲ್ ಮತ್ತು ಲವಿನಿಯಾ ಆಸ್ಬೋರ್ನ್ ಎಂಬ ಈ ಅವಳಿ ಸಹೋದರಿಯರಿಗೆ ತಮ್ಮ ತಂದೆಯ ಗುರುತಿನ ಬಗ್ಗೆ ಬಹಳ ಕಾಲದಿಂದ ಅನುಮಾನವಿತ್ತು. ಮಿಶೆಲ್ ಅವರಿಗೆ ತಾನು ತಂದೆಯೆಂದು ನಂಬಿದ್ದ 'ಜೇಮ್ಸ್' ಎಂಬ ವ್ಯಕ್ತಿಗೂ ತನಗೂ ಯಾವುದೇ ಹೋಲಿಕೆ ಇಲ್ಲ ಎಂದು ಯಾವಾಗಲೂ ಅನಿಸುತ್ತಿತ್ತು. ಈ ಅನುಮಾನವನ್ನು ಬಗೆಹರಿಸಿಕೊಳ್ಳಲು ಮಿಶೆಲ್ ಮನೆಯಲ್ಲೇ ಮಾಡಬಹುದಾದ ಡಿಎನ್ಎ ಕಿಟ್ ತರಿಸಿಕೊಂಡರು.
ಪರೀಕ್ಷಾ ವರದಿ ಬಂದಾಗ ಜೇಮ್ಸ್ ಅವಳ ನಿಜವಾದ ತಂದೆಯಲ್ಲ ಎಂಬುದು ಸಾಬೀತಾಯಿತು. ನಂತರ ಲವಿನಿಯಾ ಕೂಡ ಪರೀಕ್ಷೆ ಮಾಡಿಸಿಕೊಂಡಾಗ ಮತ್ತೊಂದು ದೊಡ್ಡ ರಹಸ್ಯ ಬಯಲಾಯಿತು; ಅವರಿಬ್ಬರ ತಂದೆ ಕೂಡ ಒಬ್ಬರೇ ಆಗಿರಲಿಲ್ಲ, ಬದಲಾಗಿ ಇಬ್ಬರು ಬೇರೆ ಬೇರೆ ವ್ಯಕ್ತಿಗಳಾಗಿದ್ದರು.
ವಿಜ್ಞಾನದ ಜಗತ್ತಿನಲ್ಲಿ ಇದನ್ನು ಅತ್ಯಂತ ವಿರಳ ಎಂದು ಪರಿಗಣಿಸಲಾಗುತ್ತದೆ. ಇದು ಹೇಗೆ ಸಾಧ್ಯ ಎಂಬುದರ ವಿವರ ಇಲ್ಲಿದೆ.
ಈ ಪ್ರಕ್ರಿಯೆಯನ್ನು ವೈದ್ಯಕೀಯ ಭಾಷೆಯಲ್ಲಿ 'ಹೆಟೆರೊಪ್ಯಾಟರ್ನಲ್ ಸೂಪರ್ಫೆಕಂಡೇಶನ್' (Heteropaternal Superfecundation) ಎಂದು ಕರೆಯಲಾಗುತ್ತದೆ. ಮಹಿಳೆಯ ದೇಹದಲ್ಲಿ ಒಂದೇ ಮಾಸಿಕ ಚಕ್ರದ ಅವಧಿಯಲ್ಲಿ ಎರಡು ಅಂಡಾಣುಗಳು ಬಿಡುಗಡೆಯಾದಾಗ ಇದು ಸಂಭವಿಸುತ್ತದೆ (ಸಾಮಾನ್ಯವಾಗಿ ಒಂದು ಮಾಸಿಕ ಚಕ್ರದಲ್ಲಿ ಒಂದು ಅಂಡಾಣು ಬಿಡುಗಡೆಯಾಗುತ್ತದೆ). ಒಂದು ವೇಳೆ ಅಲ್ಪ ಕಾಲದ ಅಂತರದಲ್ಲಿ ಆ ಎರಡು ಅಂಡಾಣುಗಳು ಬೇರೆ ಬೇರೆ ಪುರುಷರ ವೀರ್ಯಾಣುಗಳೊಂದಿಗೆ ಫಲೀಕರಣಗೊಂಡರೆ (Fertilize), ಬೇರೆ ಬೇರೆ ತಂದೆಯುಳ್ಳ ಅವಳಿ ಮಕ್ಕಳು ಜನಿಸುತ್ತಾರೆ. ಇಡೀ ವಿಶ್ವದ ವೈದ್ಯಕೀಯ ಇತಿಹಾಸದಲ್ಲಿ ಈವರೆಗೆ ಇಂತಹ 20ಕ್ಕಿಂತಲೂ ಕಡಿಮೆ ಪ್ರಕರಣಗಳು ಮಾತ್ರ ದಾಖಲಾಗಿವೆ. ಬ್ರಿಟನ್‌ನಲ್ಲಿ ಕಾನೂನಾತ್ಮಕವಾಗಿ ಮತ್ತು ವೈಜ್ಞಾನಿಕವಾಗಿ ದಾಖಲಾದ ಇಂತಹ ಮೊದಲ ಪ್ರಕರಣ ಇದಾಗಿದೆ.
ಈ ಸಹೋದರಿಯರ ತಾಯಿ ಈ ಸತ್ಯವನ್ನು ಜೀವನಪರ್ಯಂತ ರಹಸ್ಯವಾಗಿಯೇ ಇಟ್ಟಿದ್ದರು. ವಿಷಾದದ ಸಂಗತಿಯೆಂದರೆ, 2022ರಲ್ಲಿ ಈ ಡಿಎನ್ಎ ವರದಿಗಳು ಅಂತಿಮವಾಗಿ ಸತ್ಯವನ್ನು ಹೊರಹಾಕಿದ ಸಮಯದಲ್ಲಿಯೇ ಅವರ ತಾಯಿ ನಿಧನರಾದರು. ಬಿಸಿಸಿ ರೇಡಿಯೋ 4ರ ಸರಣಿ 'ದ ಗಿಫ್ಟ್'ನಲ್ಲಿ ತಮ್ಮ ಅನುಭವ ಹಂಚಿಕೊಂಡ ಸಹೋದರಿಯರು, ಈಗ ತಮ್ಮ ನಿಜವಾದ ತಂದೆಯರನ್ನು ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ.
ಮಿಶೆಲ್ ಅವರ ನಿಜವಾದ ತಂದೆಯ ಹೆಸರು ಅಲೆಕ್ಸ್ (ಅವರ ತಾಯಿಯ ಸೋದರನ ಗೆಳೆಯ), ಹಾಗೂ ಲವಿನಿಯಾ ಅವರ ತಂದೆಯ ಹೆಸರು ಆರ್ಥರ್ ಎಂದು ತಿಳಿದುಬಂದಿದೆ.
ಹಲವು ವರ್ಷಗಳ ನಂತರ ತಮ್ಮ ನಿಜವಾದ ತಂದೆಯರನ್ನು ಭೇಟಿಯಾದ ಸಹೋದರಿಯರು ಈಗ ಸಂತೋಷವಾಗಿದ್ದಾರೆ. ಲವಿನಿಯಾ ಈಗ ಆಗಾಗ ತನ್ನ ತಂದೆ ಆರ್ಥರ್ ಅವರನ್ನು ಭೇಟಿ ಮಾಡುತ್ತಾರೆ. ಡಿಎನ್ಎ ವರದಿಯು ತಂದೆ ಬೇರೆ ಎಂಬ ಸತ್ಯವನ್ನು ಹೇಳಿರಬಹುದು, ಆದರೆ ಇಂದಿಗೂ ತಮ್ಮ ನಡುವಿನ ಪ್ರೀತಿ ಮತ್ತು ಸಂಬಂಧದಲ್ಲಿ ಯಾವುದೇ ಬದಲಾವಣೆಯಾಗಿಲ್ಲ, ನಾವು ಮೊದಲಿನಂತೆಯೇ ಅತ್ಯಂತ ಆಪ್ತವಾಗಿದ್ದೇವೆ ಎಂದು ಈ ಸಹೋದರಿಯರು ಹೇಳುತ್ತಾರೆ. ಈ ರೀತಿಯ ಹೆಚ್ಚಿನ ಪ್ರಕರಣಗಳು ಪತ್ತೆಯೇ ಆಗುವುದಿಲ್ಲ ಮತ್ತು ವೈದ್ಯಕೀಯ ದಾಖಲೆಗಳಲ್ಲಿ ದಾಖಲಾಗುವುದೂ ಇಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.