ರಕ್ತ ಬಿಸಿಯಾಗಿರುವಾಗ ಎಲ್ಲರನ್ನೂ ದೂರ ಮಾಡಿಕೊಳ್ಬೇಡ, ಹೆಣ ಹೊರೊಕೆ ಜನ ಬೇಕು ಅಂತಾ ಹಿರಿಯರು ಹೇಳೋದನ್ನು ನಾವು ಕೇಳಿರ್ತೇವೆ. ಸಂಬಂಧ ಯಾವುದೇ ಇರಲಿ, ನಮ್ಮ ಸುತ್ತ ಪ್ರೀತಿಯ ಜನರಿದ್ರೆ ಬಾಳು ಹಸನಾಗುತ್ತದೆ. ಕೊನೆಗಾಲದಲ್ಲಿ ಒಂಟಿತನ ಕಾಡಿದ್ರೆ ಅದನ್ನು ಹೋಗಲಾಡಿಸುವ ಉಪಾಯ ಕೂಡ ಗೊತ್ತಿರಬೇಕು.
ಮಕ್ಕಳಿಗೆ 25 ತುಂಬುತ್ತಿದ್ದಂತೆ ಪಾಲಕರ ಮದುವೆ ಒತ್ತಾಯ ಶುರುವಾಗುತ್ತದೆ. ವೃತ್ತಿಯನ್ನು ಆಗಷ್ಟೆ ಶುರು ಮಾಡಿರುವ ಮಕ್ಕಳು ಅದ್ರಲ್ಲಿ ಮುಂದುವರೆಯಲು ಬಯಸ್ತಾರೆ. ಮದುವೆಯಿಂದ ವೃತ್ತಿ ಜೀವನಕ್ಕೆ ಹೊಡೆತ ಬೀಳ್ಬಹುದು ಎಂಬ ಭಯ ಕೆಲವರಿಗಾದ್ರೆ ಮತ್ತೆ ಕೆಲವರು ಒಂದು ಹಂತಕ್ಕೆ ಬಂದ್ಮೆಲೆ ಮದುವೆ ಬಗ್ಗೆ ಆಲೋಚನೆ ಮಾಡಿದ್ರಾಯ್ತು ಎಂದು ಸುಮ್ಮನಾಗ್ತಾರೆ. ಇನ್ನು ಕೆಲವರು ಕೆಲಸದಲ್ಲಿ ಎಷ್ಟು ವ್ಯಸ್ತರಾಗಿರ್ತಾರೆ ಅಂದ್ರೆ ಅವರಿಗೆ ಮದುವೆ ಬಗ್ಗೆ ಆಲೋಚನೆ ಮಾಡಲೂ ಸಮಯವಿರೋದಿಲ್ಲ. ವೃತ್ತಿಯಲ್ಲಿ ಒಂದಾದ್ಮೇಲೆ ಒಂದು ಹಂತಕ್ಕೇರುವ ಅವರು ಸ್ನೇಹಿತರು, ಸಂಬಂಧಿಕರನ್ನು ದೂರವಿಟ್ಟಿರುತ್ತಾರೆ. ತಂದೆ – ತಾಯಿ ಕೂಡ ವೃತ್ತಿಗಿಂತ ಹೆಚ್ಚಲ್ಲ ಎನ್ನುವ ಅಭಿಪ್ರಾಯಕ್ಕೆ ಬಂದಿರುತ್ತಾರೆ.
ವೃತ್ತಿ (Career) ಬದುಕು, ಹಣ ಎಲ್ಲವೂ ಅತ್ಯಗತ್ಯ ನಿಜ. ಆದ್ರೆ ಅದ್ರ ಖುಷಿ ಹೆಚ್ಚಾಗುವುದು ನಮ್ಮವರು ನಮ್ಮ ಜೊತೆಗಿದ್ದಾಗ ಮಾತ್ರ. ಈ ಸತ್ಯ ಬಹುತೇಕರಿಗೆ 40 ವರ್ಷ ದಾಟಿದ ಮೇಲೆ ಅರಿವಾಗುತ್ತದೆ. ಈಗ ಮಹಿಳೆಯೊಬ್ಬಳಿಗೆ 50 ವರ್ಷ ದಾಟಿದ ಮೇಲೆ ಇದ್ರ ನೋವು ಕಾಡ್ತಿದೆ. ಆಕೆ ಸಮಸ್ಯೆ ಏನು, ತಜ್ಞರು (Experts) ಹೇಳೋದೇನು ಎಂಬುದನ್ನು ನಾವಿಂದು ಹೇಳ್ತೆವೆ.
RELATIONSHIP TIPS: ಇಂಥಾ ತಪ್ಪು ಮಾಡಿದ್ರೆ ಹೆಂಡ್ತಿ ದೂರ ಆಗೋದು ಖಂಡಿತ
50ನೇ ವಯಸ್ಸಿನಲ್ಲಿ ಕಾಡ್ತಿದೆ ಒಂಟಿತನ (Loneliness) : ಈ ಮಹಿಳೆ ಕೂಡ ಹಣ ಗಳಿಸುವಲ್ಲಿ ಹಾಗೂ ಜೀವನವನ್ನು ಎಂಜಾಯ್ ಮಾಡೋದ್ರಲ್ಲಿ ಎಷ್ಟು ತಲ್ಲೀನಳಾಗಿದ್ದಳೆಂದ್ರೆ ಆಕೆಗೆ ಮದುವೆ ಅಗತ್ಯ ಎನ್ನಿಸಲಿಲ್ಲ. ಈಗ ತಂದೆ – ತಾಯಿಯನ್ನು ಕಳೆದುಕೊಂಡಿರುವ ಈಕೆಗೆ ಒಂಟಿತನ ಕಾಡಲು ಶುರುವಾಗಿದೆ. ಸ್ನೇಹಿತರು, ಸಂಬಂಧಿಕರೆಲ್ಲ ಅವರ ಜೀವನದಲ್ಲಿ ಮುಂದೆ ಹೋಗಿದ್ದಾರೆ. ಮನೆ, ಮಕ್ಕಳು, ಕುಟುಂಬದಲ್ಲಿ ಬ್ಯುಸಿಯಾಗಿದ್ದಾರೆ. ನನಗೆ ಮಾತ್ರ ಯಾರೂ ಇಲ್ಲ ಎನ್ನುವ ನೋವು ನನ್ನನ್ನು ಸದಾ ಕಾಡ್ತಿದೆ. ಮದುವೆ ಮಾಡಿಕೊಳ್ಳದೆ ತಪ್ಪು ಮಾಡಿದ್ನಾ ಎಂಬ ಪ್ರಶ್ನೆ ಇದೆ ಎನ್ನುತ್ತಾಳೆ ಮಹಿಳೆ.
ತಜ್ಞರ ಸಲಹೆ : ಪ್ರತಿಯೊಬ್ಬ ವ್ಯಕ್ತಿಗೂ ಪ್ರೀತಿ, ಕಾಳಜಿ, ವಾತ್ಸಲ್ಯ ಮತ್ತು ಆತ್ಮೀಯತೆಯ ಅವಶ್ಯಕತೆಯಿದೆ. ಒಂಟಿತನ ಎಂಬುದು ಒಂದು ರೋಗ. ಮೊದಲು ಒಂಟಿತನದ ನೋವಿಗೆ ಕಾರಣವೇನು ಎಂಬುದನ್ನು ನೀವು ಅರಿಯಬೇಕು ಎನ್ನುತ್ತಾರೆ ತಜ್ಞರು. ಅವರ ಪ್ರಕಾರ, ಒಂಟಿ ತನಕ್ಕೆ ಮದುವೆ ಮದ್ದಲ್ಲ. ಮದುವೆಯಾದ ಅನೇಕರು ಈಗ್ಲೂ ಒಂಟಿತನ ಅನುಭವಿಸುತ್ತಿದ್ದಾರೆ. ಒಂಟಿತನ ಮನಸ್ಸಿನ ಭಾವನೆ. ಇದನ್ನು ಹೊಡೆದೋಡಿಸಿದ್ರೆ ನೀವು ಅನೇಕರನ್ನು ಆಪ್ತರನ್ನಾಗಿ ಮಾಡಿಕೊಳ್ಳಬಹುದು ಎನ್ನುತ್ತಾರೆ ತಜ್ಞರು.
ಸದಾ ಸಕ್ರಿಯವಾಗಿರಿ : ನಾನು ಒಂಟಿ, ನಾನು ಒಂಟಿ ಅಂತ ಕುಳಿತ್ರೆ ಅದು ಮನಸ್ಸನ್ನು ಮತ್ತಷ್ಟು ಘಾಸಿಗೊಳಿಸುತ್ತದೆ. ಮನೆಯಲ್ಲಿ ತಂದೆ – ತಾಯಿ ಕೂಡ ಇಲ್ಲವೆಂದಾಗ ಅವರ ಗೈರು ಕಾಡೋದು ಸಹಜ. ಇಂಥ ಸಂದರ್ಭದಲ್ಲಿ ನೀವು ಸಾಮಾಜಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳಿ ಎನ್ನುತ್ತಾರೆ ತಜ್ಞರು. ಅಲ್ಲಿ ನಿಮಗೆ ದಿನಕ್ಕೊಂದು ವ್ಯಕ್ತಿಯ ಪರಿಚಯವಾಗುತ್ತದೆ. ವಾತಾವರಣ ಹೊಸದೆನ್ನಿಸುತ್ತದೆ. ನೀವು ಬಯಸಿದ್ರೆ ಡಾನ್ಸ್ ಕ್ಲಾಸ್, ಸಂಗೀತದ ಕ್ಲಾಸ್, ಕ್ರೀಡಾ ಕ್ಲಬ್, ನಾಟಕದ ಕ್ಲಾಸ್ ಇಲ್ಲವೆ ಸಮಾಜ ಸೇವೆ ಮಾಡುವ ಸಂಘಗಳಿಗೆ ಸೇರಬಹುದು. ಆನ್ಲೈನ್ ನಲ್ಲಿ ನಿಮ್ಮ ಆಸಕ್ತಿ ವಿಷ್ಯವನ್ನು ಕಲಿಯಬಹುದು ಎನ್ನುತ್ತಾರೆ ತಜ್ಞರು.
ಇಂಥಾ ಅಭ್ಯಾಸಗಳಿಂದ್ಲೇ ಮದ್ವೆ ವಯಸ್ಸಾದ್ರೂ ನೀವಿನ್ನೂ ಸಿಂಗಲ್ ಆಗಿರೋದು
ಮದುವೆಯಾಗೋದಾದ್ರೆ ನೂರಾರು ಬಾರಿ ಆಲೋಚಿಸಿ : ಒಂಟಿತನ ಹೋಗಲಾಡಿಸಲು ಮದುವೆಯೇ ಒಳ್ಳೆಯ ಮಾರ್ಗವೆಂದು ನೀವು ಭಾವಿಸಿದ್ದರೆ, ಈ ವಯಸ್ಸಿನಲ್ಲಿ ಮದುವೆಯಾಗಲು ಬಯಸಿದ್ದರೆ ನೂರಾರು ಬಾರಿ ಆಲೋಚಿಸಿ ನಿರ್ಧಾರ ತೆಗೆದುಕೊಳ್ಳಿ ಎನ್ನುತ್ತಾರೆ ತಜ್ಞರು. ಯಾಕೆಂದ್ರೆ ಅವರ ಅಭ್ಯಾಸಗಳು ಭಿನ್ನವಾಗಿರುತ್ತವೆ. ಇಷ್ಟುದಿನ ಒಂಟಿಯಾಗಿದ್ದ ನೀವು ಅವರ ಜೊತೆ ಎಲ್ಲವನ್ನೂ ಹಂಚಿಕೊಳ್ಳುವುದು ಕಷ್ಟವಾಗಬಹುದು. ಸಂಗಾತಿ ಜೊತೆ ಹೊಂದಾಣಿಕೆ ಅನಿವಾರ್ಯವಾಗುತ್ತೆ. ಇದಕ್ಕೆ ಸಿದ್ಧ ಎಂದಾದ್ರೆ ಮದುವೆಗೆ ಮುಂದಾಗಿ ಎನ್ನುತ್ತಾರೆ ತಜ್ಞರು.