ಅಕ್ಕ ತಂಗಿಯರ ಜೊತೆ ಹುಟ್ಟಿದವರೇ ಇಂದು ಪುಣ್ಯವಂತರೂ ಏಕೆಂದರೆ ಒಡಹುಟ್ಟಿದ ಅಕ್ಕತಂಗಿಯರು ಮಾಡುವಷ್ಟು ಕಾಳಜಿ ಸಹೋದರನೋರ್ವನಿಗೆ ಮತ್ಯಾರೂ ಮಾಡಲ್ಲ. ತಪ್ಪು ಮಾಡಿದಾಗ ಎರಡೇಟು ಹಾಕುವ ಕಾಳಜಿ ಮಾಡುವುದರ ಜೊತೆ ಜೊತೆಗೆ ಕಾಲೆಳೆಯುವ ಅಕ್ಕ ತಂಗಿಯರ ದಿನ ನಿನ್ನೆಯಷ್ಟೇ ಮುಗಿದು ಹೋಯ್ತು. ಸ್ನೇಹಿತರ ದಿನದಂದೇ ಬರುವ ಈ ಸಹೋದರಿಯ ದಿನದ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ.
ಬಹುತೇಕ ಅಕ್ಕತಂಗಿಯರಿರುವ ಸಹೋದರರಿಗೆ ಇದರ ಅನುಭವ ಆಗಿರಬಹುದು. ಅಕ್ಕ ತಂಗಿಯರ ಕಾಳಜಿ ಹಾಗೂ ಕಪಿಚೇಷ್ಟೆ ಅದರಿಂದಾದ ಪರಿಣಾಮಗಳ ಬಗ್ಗೆ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿರುವುದನ್ನು ನೀವು ನೋಡಿರಬಹುದು, ಕೇಳಿರಬಹುದು, ಟಿವಿ ರಿಮೋಟ್‌ಗೆ , ಅಮ್ಮ ಮಾಡಿದ ತಿಂಡಿಯಲ್ಲಿ ಸಮಪಾಲಿಗೆ ಹಾಗೆಯೇ ಕೆಲಸದ ವಿಂಗಡೆಗೂ ಸಮಪಾಲಿಗೆ ಹೋರಾಡುವವರೇ ನಿಜವಾದ ಒಡಹುಟ್ಟಿದವರು. ಸಹೋದರರಿಗೆ ಈ ಸಹೋದರಿಯರೇ ಫಸ್ಟ್ ಕಾಂಪಿಟೀಟರ್.
ಪುಟಾಣಿ ಅಕ್ಕ ತಮ್ಮನ ಸೂಪರ್ ಮ್ಯಾಜಿಕ್: ವಿಡಿಯೋ ನೋಡಿದ್ರೆ ನಗೋದೆ ಇರಲ್ಲ..!
ಬರೀ ಇಷ್ಟೇ ಅಲ್ಲ, ಹೆಣ್ಣು ಮಕ್ಕಳೆಂದರೆ ತುಸು ಹೆಚ್ಚೆ ಪ್ರೀತಿ ತೋರುವ ಅಪ್ಪನಿಗೆ ದೂರು ಹೇಳಿ ಅಣ್ಣ ತಮ್ಮಂದಿರಿಗೆ (brothers) ಒದೆ ತಿನ್ನಿಸುವ ಅಕ್ಕ ತಂಗಿಯರೊಳಗೊಬ್ಬ ತಾಯಿಯೂ ಇರುತ್ತಾಳೆ. ಎಷ್ಟೇ ಜಗಳವಾಡಿದರೂ ಸ್ವಲ್ಪ ಹೊತ್ತಿನಲ್ಲಿ ಈ ಜಗಳ ಸರಿಯಾಗಿ ಮತ್ತೆ ಹೊಸ ಜಗಳವೊಂದು ಅಲ್ಲಿ ಶುರುವಾಗುತ್ತದೆ. ಮಗುವನ್ನು ಚಿವುಟುವುದು ನೀವೇ ತೊಟ್ಟಿಲು ತೂಗುವುದು ನೀವೇ ಎಂಬಂತೆ ದೂರು ಹೇಳಿದ ಬಳಿಕ ಅಪ್ಪನಿಂದ ಏಟು ತಿಂದ ತಮ್ಮ/ಅಣ್ಣನಿಗೆ ಅಕ್ಕನಾದವಳು ತಂಗಿಯಾದವಳು ಸಮಾಧಾನ ಮಾಡುತ್ತಾಳೆ. ಬರೀ ಇಷ್ಟೇ ಅಲ್ಲ ಅಕ್ಕತಂಗಿಯರು (Sisters) ಸಹೋದರರ ಬಾಳಲ್ಲಿ ಬಹಳ ಆಳವಾದ ಪ್ರಭಾವ ಬೀರುತ್ತಾರೆ.
ಮನೆಯಲ್ಲಿ ಹಿರಿಯಕ್ಕನಾಗಿ ಜನಿಸಿದರೆ ಮುಗಿದೇ ಹೋಯಿತು. ಆಕೆ ತಾಯಿಯ ಪ್ರತಿರೂಪ, ನೂರೆಂಟು ಜವಾಬ್ದಾರಿ (Responsibility) ಹೊತ್ತ ಅಕ್ಕ, ತನ್ನ ಕಿರಿಯ ಸಹೋದರರು ಕೀಟಲೆ ಮಾಡಲು ಶುರು ಮಾಡಿದರೆ ತಲೆ ಚಚ್ಚಿಕೊಳ್ಳುತ್ತಾಳೆ. ಕೈಗೆ ಸಿಗದ ಸಹೋದರರರ ಜುಟ್ಟು ಹಿಡಿದು ಬಾರಿಸುವ ಆಕೆ ಅವರು ಅತ್ತಾಗ ಸಮಾಧಾನ ಮಾಡುತ್ತಾಳೆ. ಇಂತಹ ಸಹೋದರಿಯರ ದಿನವನ್ನು ಪ್ರತಿವರ್ಷ ಆಗಸ್ಟ್ 6 ರಂದು ವಿಶೇಷವಾಗಿ ಆಗಸ್ಟ್ ತಿಂಗಳ ಮೊದಲ ಭಾನುವಾರ ಆಚರಿಸಲಾಗುತ್ತದೆ.
51 ವರ್ಷದಿಂದ ದೂರವಿದ್ದು ಮೊದಲ ಬಾರಿ ಭೇಟಿಯಾದ ಒಡಹುಟ್ಟಿದವರು !
ಈ ದಿನವನ್ನು ಯಾವುದೇ ಶರತ್ತುಗಳಿಲ್ಲದ ಪ್ರೀತಿ, ಸಹೋದರಿಯರು ನಮ್ಮ ಜೀವನದಲ್ಲಿ ತರುವ ಬದಲಾವಣೆ ಅನುಭವಗಳನ್ನು ಹಂಚಿಕೊಳ್ಳಲು ಆಚರಿಸಲಾಗುತ್ತದೆ. ಸಹೋದರಿಯರು ನಮ್ಮ ಪ್ರತಿಯೊಂದು ರಹಸ್ಯಗಳನ್ನು ನಮ್ಮ ಒಳ್ಳೆಯತನದ ಜೊತೆಗೆ ನಮ್ಮ ನೆಗೆಟಿವಿಟಿ ನಮ್ಮ ಸಂಪೂರ್ಣ ಹಣೆಬರಹವನ್ನು ತಿಳಿದಿರುವವರು. ಇದು ತಪ್ಪುಎಂದಾದರೆ ತಪ್ಪು ಎಂದೇ ಹೇಳುವ ಸಂಪೂರ್ಣ ಹಕ್ಕನ್ನು ಸಹೋದರಿಯರು ಹೊಂದಿರುತ್ತಾರೆ. ಅಲ್ಲದೇ ನಮ್ಮನ್ನು ಸರಿ ದಾರಿಗೆ ತರಲು ನೋಡುತ್ತಾರೆ. ಒಡಹುಟ್ಟಿದ ಸಹೋದರರ ಪಾಲಿಗೆ ಇವರು ಗುರುಗಳಿದ್ದಂತೆ. ನೀವು ಕೂಡ ಅಕ್ಕ ತಂಗಿಯರನ್ನು ಹೊಂದಿರುವ ಅದೃಷ್ಟವಂತರಾಗಿದ್ದರೆ ಇದೆಲ್ಲಾ ಅನುಭವ ನಿಮಗೂ ಆಗಿರುತ್ತದೆ. ಮತ್ತೇಕೆ ತಡ ನಿಮ್ಮ ಸಹೋದರಿಗೆ ದಿನ ವಿಳಂಬವಾಗಿಯಾದರೂ ಸಹೋದರಿಯರ ದಿನದ ಶುಭಾಶಯ ತಿಳಿಸಿ, ಅವರೊಂದಿಗೆ ನಿಮ್ಮ ಬಾಲ್ಯದ ದಿನಗಳನ್ನು ನೆನೆದು ಖುಷಿಪಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.