
ಅಲಿಘರ್: ಮದುವೆಗೆ ದಿನಗಳಿರುವಾಗ ಮದುಮಗಳು ಪ್ರಿಯಕರನೊಂದಿಗೆ ಓಡಿ ಹೋದಂತಹ ಹಲವು ಘಟನೆಗಳನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಂದು ಕಡೆ ತದ್ವಿರುದ್ಧವಾದ ಘಟನೆಯೊಂದು ನಡೆದಿದೆ. ಮಗಳ ಮದುವೆಗೆ ಇನ್ನೇನು 10 ದಿನಗಳಿವೇ ಎನ್ನುವಾಗ ವಧುವಿನ ತಾಯಿಯೊಬ್ಬಳು ಭಾವಿ ಅಳಿಯನ ಜೊತೆ ಓಡಿ ಹೋದಂತಹ ವಿಲಕ್ಷಣವಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಇದರಿಂದ ಮಗಳು ಹಾಗೂ ಮನೆಯವರೆಲ್ಲರೂ ಆಘಾತಕ್ಕೊಳಗಾಗಿದ್ದಾರೆ. ಶಿವಾನಿ ಎಂಬ ಯುವತಿಯ ಮದುವೆಗೆ ಇನ್ನೇನು 10 ದಿನಗಳಿದ್ದವು. ಮದುವೆಯ ಆಮಂತ್ರಣ ಪತ್ರಿಕೆಯನ್ನು ಎಲ್ಲೆಡೆ ಹಂಚಿಯಾಗಿತ್ತು. ಆದರೆ ಅಷ್ಟರಲ್ಲಿಯೇ ವಧು ಶಿವಾನಿಯ ತಾಯಿ ಕುಟುಂಬದ ಮರ್ಯಾದೆ ಕಳೆಯುವ ಕೆಲಸ ಮಾಡಿದ್ದಾಳೆ. ತನ್ನ ಮಗಳಿಗೆ ಗಂಡನಾಗಬೇಕಿದ್ದ ಭಾವಿ ಅಳಿಯನ ಜೊತೆ ಆಕೆ ಓಡಿ ಹೋಗಿದ್ದಾಳೆ.
ಉತ್ತರ ಪ್ರದೇಶ ರಾಜ್ಯದ ಅಲಿಘರ್ ಜಿಲ್ಲೆಯ ಮದ್ರಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ತನ್ನ ತಾಯಿ ಅನಿತಾ ಆಕೆಯ ಭಾವಿ ಪತಿ(ಅಳಿಯ) ಜೊತೆ ಓಡಿ ಹೋಗಿದ್ದಾಳೆ. ಬರೀ ಓಡಿ ಹೋಗಿದ್ದು, ಮಾತ್ರವಲ್ಲ, ಮಗಳ ಮದುವೆಗೆಂದು ಇರಿಸಿದ್ದ ಹಣ ಹಾಗೂ ಜ್ಯುವೆಲ್ಲರಿಯನ್ನು ಸಹ ಆಕೆ ಮನೆಯಿಂದ ಎತ್ತಿಕೊಂಡು ಹೋಗಿದ್ದಾಳೆ ಎಂದು ವಧು ಶಿವಾನಿ ಅವಲೊತ್ತುಕೊಂಡಿದ್ದಾರೆ. ಮನೆಯಲ್ಲಿದ್ದ ಮೂರುವರೆ ಲಕ್ಷಕ್ಕಿಂತಲೂ ಅಧಿಕ ನಗದು ಹಾಗೂ 5 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಆಕೆ ಹೊತ್ತೊಯ್ದಿದ್ದಾಳೆ ಎಂದು ಶಿವಾನಿ ಹೇಳಿದ್ದಾರೆ.
ನಾನು ಏಪ್ರಿಲ್ 16 ರಂದು ರಾಹುಲ್ ಜೊತೆ ಮದುವೆಯಾಗಬೇಕಿತ್ತು, ಆದರೆ ನನ್ನ ತಾಯಿ ಭಾನುವಾರ ಅವನೊಂದಿಗೆ ಓಡಿಹೋದರು. ರಾಹುಲ್ ಮತ್ತು ನನ್ನ ತಾಯಿ ಕಳೆದ ಮೂರು ನಾಲ್ಕು ತಿಂಗಳಿನಿಂದ ಫೋನ್‌ನಲ್ಲಿ ಸಾಕಷ್ಟು ಮಾತನಾಡುತ್ತಿದ್ದರು. ನಮ್ಮ ಮನೆಯ ಅಲ್ಮಾರಾದಲ್ಲಿ ಮದುವೆಗೆಂದು ಇಟ್ಟ 3.5 ಲಕ್ಷ ರೂ. ನಗದು ಮತ್ತು 5 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಆಭರಣಗಳಿದ್ದವು. ಅವನು ಕೇಳಿದ್ದನ್ನೆಲ್ಲಾ ನನ್ನ ತಾಯಿ ಮಾಡಿದ್ದಾಳೆ. ಅವಳು ಮನೆಯಲ್ಲಿ 10 ರೂಪಾಯಿಯನ್ನು ಕೂಡ ಬಿಡಲಿಲ್ಲ. ನನ್ನ ತಾಯಿ ನಮ್ಮ ಎಲ್ಲಾ ಹಣವನ್ನು ತೆಗೆದುಕೊಂಡು ಆತನೊಂದಿಗೆ ಓಡಿ ಹೋಗಿದ್ದಾಳೆ ಎಂದು ಶಿವಾನಿ ಹೇಳಿದರು. ಏಪ್ರಿಲ್ 6 ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಅವಳು ಈಗ ಏನು ಬೇಕಾದರೂ ಮಾಡಬಹುದು, ನಮಗೆ ಅದು ಮುಖ್ಯವಲ್ಲ. ನಮಗೆ ಬೇಕಾಗಿರುವುದು ಹಣ ಮತ್ತು ಆಭರಣಗಳು ನಮಗೆ ಹಿಂತಿರುಗಬೇಕು ಎಂಬುದು ಎಂದು ಅವರು ಹೇಳಿದ್ದಾರೆ. ಶಿವಾನಿಯ ತಂದೆ ಜಿತೇಂದ್ರ ಕುಮಾರ್ ಬೆಂಗಳೂರಿನಲ್ಲಿ ವ್ಯವಹಾರ ನಡೆಸುತ್ತಿದ್ದು, ಪತ್ನಿ ಅನಿತಾ ತನ್ನ ಭಾವಿ ಅಳಿಯನೊಂದಿಗೆ ಗಂಟೆಗಟ್ಟಲೆ ಮಾತನಾಡುತ್ತಿದ್ದಾಳೆಂದು ಕೇಳಿದ್ದೆ, ಆದರೆ ಮದುವೆ ಶೀಘ್ರದಲ್ಲೇ ನಡೆಯಲಿರುವುದರಿಂದ ಏನನ್ನೂ ಹೇಳದಿರಲು ನಿರ್ಧರಿಸಿದ್ದಾಗಿ ಹೇಳಿದ್ದಾರೆ. ಈಗ ಅವರು ಹೆಂಡತಿ ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದಾರೆ.
ಭಾವಿ ಅಳಿಯ ರಾಹುಲ್ ನನ್ನ ಮಗಳೊಂದಿಗೆ ಮಾತನಾಡುತ್ತಿರಲಿಲ್ಲ, ಆದರೆ ನನ್ನ ಪತ್ನಿಯೊಂದಿಗೆ ನಿರಂತರ ಮಾತನಾಡುತ್ತಿದ್ದ. ನನ್ನ ವ್ಯವಹಾರ ನಡೆಸಲು ನಾನು ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ಕಳೆದ ಮೂರು ತಿಂಗಳಿನಿಂದ ಅವರು ದಿನಕ್ಕೆ 22 ಗಂಟೆಗಳ ಕಾಲ ಪರಸ್ಪರ ಮಾತನಾಡುತ್ತಿದ್ದರು ಎಂದು ನಾನು ಕೇಳಿದ್ದೆ. ನನಗೆ ಅನುಮಾನ ಬಂತು ಆದರೆ ಮದುವೆ ಹತ್ತಿರದಲ್ಲಿದ್ದ ಕಾರಣ ಏನನ್ನೂ ಹೇಳಲಿಲ್ಲ. ಆದರೆ ಅನಿತಾ ಏಪ್ರಿಲ್ 6 ರಂದು ಆ ವ್ಯಕ್ತಿಯೊಂದಿಗೆ ಹೊರಟು ಹೋಗಿದ್ದು, ನಮ್ಮ ಎಲ್ಲಾ ನಗದು ಮತ್ತು ಆಭರಣಗಳನ್ನು ತೆಗೆದುಕೊಂಡು ಹೋದಳು ಎಂದು ಆಕೆಯ ಪತಿ ಜಿತೇಂದ್ರ ಕುಮಾರ್ ಹೇಳಿದ್ದಾರೆ.
ನಾನು ಅನಿತಾಗೆ ಹಲವು ಬಾರಿ ಕರೆ ಮಾಡಿದೆ. ಆದರೆ ಅವಳು ತನ್ನ ಫೋನ್ ಅನ್ನು ಸ್ವಿಚ್ ಆಫ್ ಮಾಡಿದ್ದಳು. ನಾನು ಆ ವ್ಯಕ್ತಿಗೂ ಕರೆ ಮಾಡಿದೆ, ಆದರೆ ಅವನು ಆಕೆ ತನ್ನೊಂದಿಗೆ ಇಲ್ಲ ಎಂದು ನಿರಾಕರಿಸುತ್ತಲೇ ಇದ್ದನು. ಆದರೆ ಕೆಲವು ಗಂಟೆಗಳ ನಂತರ, ಅವನು ಅಂತಿಮವಾಗಿ ನಾನು ನನ್ನ ಹೆಂಡತಿಗೆ ಕಳೆದ 20 ವರ್ಷಗಳಿಂದ ತೊಂದರೆ ಕೊಡುತ್ತಿದ್ದೇನೆ ಹೀಗಾಗಿ ನಾನು ಆಕೆಯನ್ನು ಮರೆತುಬಿಡಬೇಕು ಎಂದು ಹೇಳಿದ. ಆ ನಂತರ ಅವರಿಬ್ಬರ ಫೋನ್‌ಗಳು ಸ್ವಿಚ್ ಆಫ್ ಆಗಿದ್ದವು ಎಂದು ಹೇಳಿದ್ದಾರೆ. ಕುಮಾರ್ ಅವರು ಪತ್ನಿ ನಾಪತ್ತೆಯಾದ ಬಗ್ಗೆ ದೂರು ದಾಖಲಿಸಿದ್ದಾರೆ. ಪೊಲೀಸರು ಶೀಘ್ರದಲ್ಲೇ ಅನಿತಾ ಮತ್ತು ರಾಹುಲ್ ಅವರನ್ನು ಪತ್ತೆಹಚ್ಚುತ್ತೇವೆ ಎಂದು ಹೇಳಿದ್ದಾರೆ ಎಂದು ಮಾಹಿತಿ ನೀಡಿದರು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾಣೆಯಾದ ವ್ಯಕ್ತಿಗಳ ಬಗ್ಗೆ ದೂರು ದಾಖಲಾಗಿದೆ. ನಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದೇವೆ. ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮದ್ರಾಕ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.